ಅಸಾಧಾರಣವಾದದ್ದು ತನ್ನನ್ನು ತಾನು ನೋಡಿಕೊಳ್ಳುತ್ತದೆ, ಹಾಗೆಯೇ ನಿಮ್ಮನ್ನೂ ಕೂಡಿಕೊಳ್ಳುತ್ತದೆ… | ಚಿದಂಬರ ನರೇಂದ್ರ
ನೀರಿನ ಮೇಲೆ ಅಥವಾ
ತೆಳು ಗಾಳಿಯ ಮೇಲೆ ನಡೆಯುವುದು
ಪವಾಡ ಎನ್ನುತ್ತಾರೆ ಜನ.
ಆದರೆ ನನ್ನ ಪ್ರಕಾರ ನಿಜದ ಪವಾಡ,
ನೀರಿನ ಮೇಲೆ
ಗಾಳಿಯ ಮೇಲೆ ನಡೆಯುವುದಲ್ಲ,
ಬದಲಾಗಿ ನೆಲದ ಮೇಲೆ ಕಾಲೂರಿ
ಹೆಜ್ಜೆ ಹಾಕುವುದು.
ಪ್ರತೀದಿನ ನಮಗೆ ಎದುರಾಗುವ
ಪವಾಡಗಳನ್ನು ಗುರುತಿಸುವುದು
ಸಾಧ್ಯವಾದರೆ,
ನೀಲಿ ಆಕಾಶ, ಬೆಳ್ಳಿ ಮೋಡಗಳು
ಹಸಿರು ಕಾಡುಗಳು ಮತ್ತು
ಪುಟ್ಟ ಮಗುವಿನ
ಕುತೂಹಲಭರಿತ ಕಪ್ಪು ಕಣ್ಣುಗಳಿಂತ
ಹೆಚ್ಚಿನ ಬೆರಗು ಸಾಧ್ಯಮಾಡುವ
ಪವಾಡವಿದೆಯೆ ಇನ್ನೊಂದು?
Thich Nhat Hanh
ವಿಲಿಯಂ ಮಾರ್ಟಿನ್ ತಮ್ಮ ಪುಸ್ತಕ The Parent’s Tao Te Ching ಮಕ್ಕಳಿಗೆ ಏನನ್ನ ಕಲಿಸಬೇಕು, ಯಾವುದನ್ನ ಕಲಿಸಬಾರದು ಎನ್ನುವುದರ ಬಗ್ಗೆ ಚರ್ಚಿಸುತ್ತಾರೆ…..
ಅಸಾಧಾರಣ ಬದುಕಿಗಾಗಿ ತುಡಿಯುವುದನ್ನ, ಪ್ರಯತ್ನಿಸುವುದನ್ಮ ನಿಮ್ಮ ಮಕ್ಕಳಿಗೆ ಹೇಳಿಕೊಡಬೇಡಿ.
ಇಂಥ ತುಡಿತಗಳನ್ನ ಎಲ್ಲರೂ ಮೆಚ್ಚುತ್ತಾರೆ, ಗೌರವಿಸುತ್ತಾರೆಯಾದರೂ ಇದು ಅಪ್ಪಟ ಮೂರ್ಖತನದ ಹಾದಿ.
ಬದಲಾಗಿ ಅವರಿಗೆ ಸಾಧಾರಣ ಬದುಕಿನಲ್ಲಿಯ ಬೆರಗುಗಳನ್ನ, ಚೆಲುವನ್ನ ಗಮನಿಸುವುದನ್ನ ತೋರಿಸಿ.
ಅವರಿಗೆ ಟೊಮ್ಯಾಟೋ, ಸೇಬು, ಪೇರಲ ಹಣ್ಣುಗಳ ರುಚಿ ನೋಡುವುದರಲ್ಲಿ ಇರುವ ಸಂತೋಷವನ್ನು ಹೇಳಿಕೊಡಿ.
ಸುತ್ತಲಿನ ಪ್ರಾಣಿಗಳು, ಮನುಷ್ಯರು ಸತ್ತಾಗ ಹೇಗೆ ಅಳಬೇಕೆನ್ನುವುದನ್ನ ಮನಗಾಣಿಸಿ.
ನಮ್ಮ ಕೈ ಏನನ್ನಾದರೂ ಮುಟ್ಟುವುದರಲ್ಲಿ ಇರುವ ಸುಖವನ್ನು ತೋರಿಸಿಕೊಡಿ.
ಸಾಧಾರಣವಾದದ್ದನ್ನ ಜೀವಂತಗೊಳಿಸಿಕೊಳ್ಳುವುದನ್ನ ಕಲಿಸಿಕೊಡಿ.
ಇಷ್ಟು ಮಾಡಿ ಸಾಕು, ಅಸಾಧಾರಣವಾದದ್ದು ತನ್ನನ್ನು ತಾನು ನೋಡಿಕೊಳ್ಳುತ್ತದೆ, ಹಾಗೆಯೇ ನಿಮ್ಮನ್ನೂ ಕೂಡಿಕೊಳ್ಳುತ್ತದೆ.
ಝೆನ್ ಮಾಸ್ಟರ್ ತಾಜಿಯ ಬದುಕಿನ ಘಟನೆಯೊಂದು ಹೀಗಿದೆ……
ಝೆನ್ ಮಾಸ್ಟರ್ ತಾಜಿ ಸಾವಿನ ಹಾಸಿಗೆಯಲ್ಲಿದ್ದ. ಮಾಸ್ಟರ್ ತಾಜಿಗೆ ಟೋಕಿಯೋದ ಮಾರ್ಕೇಟ್ ನಲ್ಲಿ ಸಿಗುವ ಒಂದು ವಿಶೇಷ ಕೇಕ್ ಎಂದರೆ ತುಂಬಾ ಪ್ರೀತಿ ಎನ್ನುವುದು ಅವನ ಶಿಷ್ಯರಿಗೆ ಗೊತ್ತಿತ್ತು .
ಶಿಷ್ಯರು ಟೋಕಿಯೋದ ಅಂಗಡಿಗಳನ್ನೆಲ್ಲ ಹುಡುಕಾಡಿ ತಾಜಿ ಗಾಗಿ ಆ ವಿಶೇಷ ಕೇಕ್ ಕೊಂಡು ತಂದರು.
ಮಾಸ್ಟರ್ ತಾಜಿ ತುಂಬ ಖುಶಿಯಿಂದ ಶಿಷ್ಯರು ತಂದ ಕೇಕ್ ತಿಂದ. ಅವನು ಕೇಕ್ ತಿಂದಾದ ಮೇಲೆ ಮಾಸ್ಟರ್ ಗೆ , ಅವರಿಗಾಗಿ ಒಂದು ಕೊನೆಯ ವಾಕ್ಯ ಹೇಳುವಂತೆ ಶಿಷ್ಯರು ವಿನಂತಿ ಮಾಡಿದರು.
ಮಾಸ್ಟರ್ ತಾಜಿ, ತುಟಿಗೆ ಅಂಟಿಕೊಂಡಿದ್ದ ಕೇಕ್ ನ್ನು ನಾಲಿಗೆಯಿಂದ ನೆಕ್ಕುತ್ತಾ ಗಂಟಲು ಸರಿ ಮಾಡಿಕೊಂಡ
“ ಬುದ್ಧನ ಪ್ರಕಾರ……. ಕ್ಷಮಿಸಿ ಕ್ಷಮಿಸಿ….ನೀವು ತಂದ ಕೇಕ್ ತುಂಬ ಚೆನ್ನಾಗಿತ್ತು “
ಮಾತು ಮುಗಿಸುತ್ತ ಮಾಸ್ಟರ್ ತಾಜಿ ನೆಲಕ್ಕೊರಗಿ ತೀರಿಕೊಂಡ.

