ಬಯಕೆಯನ್ನು ಸ್ಟಾಪ್ ಮಾಡುವುದು ಸಾಧ್ಯವಿಲ್ಲ, ಬಯಕೆಯನ್ನ ಕೇವಲ ಅರ್ಥ ಮಾಡಿಕೊಳ್ಳಬಹುದು. ಬಯಕೆಯನ್ನು ಅರ್ಥಮಾಡಿಕೊಂಡರೆ ಸಾಕು ಅದು ನಿಂತು ಹೋಗುತ್ತದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಹುಡುಕಾಟ ನಿಲ್ಲಿಸಿದ ದಿನ …… ನಾನು ಹುಡುಕಾಟ ನಿಲ್ಲಿಸಿದ ದಿನ ಎಂದು ಹೇಳುವುದು ತಪ್ಪಾದೀತು, ಹುಡುಕಾಟ ನಿಂತ ದಿನ …. ಎಂದು ಹೇಳುವುದು ಸರಿ. ಇನ್ನೊಮ್ಮೆ ಗಮನಿಸಿ, ಹುಡುಕಾಟ ನಿಂತ ದಿನ …. ಎಂದು ಹೇಳುವುದು ಸರಿ. ಏಕೆಂದರೆ ನಾನು ಹುಡುಕಾಟ ನಿಲ್ಲಿಸಿದ ದಿನ ಎಂದಾಗ ಅಲ್ಲಿ ಮತ್ತೆ ‘ನಾನು’ ಇದ್ದೇನೆ. ಆಗ ನಿಲ್ಲಿಸುವುದು ನನ್ನ ಪ್ರಯತ್ನ ವಾಗುತ್ತದೆ, ಹುಡುಕಾಟ ನಿಲ್ಲಿಸುವುದು ನನ್ನ ಬಯಕೆಯಾಗುತ್ತದೆ, ಮತ್ತು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಬಯಕೆಯೊಂದು ನನ್ನೊಳಗೆ ಉಳಿದುಕೊಂಡುಬಿಡುತ್ತದೆ.
ಬಯಕೆಯನ್ನು ಸ್ಟಾಪ್ ಮಾಡುವುದು ಸಾಧ್ಯವಿಲ್ಲ, ಬಯಕೆಯನ್ನ ಕೇವಲ ಅರ್ಥ ಮಾಡಿಕೊಳ್ಳಬಹುದು. ಬಯಕೆಯನ್ನು ಅರ್ಥಮಾಡಿಕೊಂಡರೆ ಸಾಕು ಅದು ನಿಂತು ಹೋಗುತ್ತದೆ. ನೆನಪಿರಲಿ ಬಯಸುವುದನ್ನ ನಿಲ್ಲಿಸುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ, ಮತ್ತು ಸತ್ಯ ನಮಗೆ ದಕ್ಕುವುದು ಬಯಕೆಗಳು ಸ್ಟಾಪ್ ಆದಾಗ ಮಾತ್ರ.
ಇದು ದ್ವಂದ್ವ, ಏನು ಮಾಡುವುದು? ಬಯಕೆಯಂತೂ ಇದೆ ಮತ್ತು ಬುದ್ಧರು ಹೇಳುತ್ತಾರೆ ಬಯಕೆಗಳನ್ನು ನಿಲ್ಲಿಸಬೇಕೆಂದು ಹಾಗು ಮುಂದಿನ ಉಸಿರಿನಲ್ಲಿಯೇ ಅವರು ಮುಂದುವರೆದು ಹೇಳುತ್ತಾರೆ, ಬಯಕೆಗಳನ್ನು ನಿಲ್ಲಿಸುವುದು ಸಾಧ್ಯವಿಲ್ಲವೆಂದು. ಹಾಗಾದರೆ ಏನು ಮಾಡುವುದು? ಈಗ ಜನ ದ್ವಂದ್ವದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಖಂಡಿತವಾಗಿಯೂ ಬಯಕೆಗಳನ್ನು ಹೊಂದಿದ್ದಾರೆ. ನೀವು ಹೇಳುತ್ತಿದ್ದೀರಿ ಬಯಕೆಗಳನ್ನು ಹೊಂದುವುದನ್ನ ನಿಲ್ಲಿಸಬೇಕೆಂದು, ಅದೂ ಸರಿ. ಮತ್ತೆ ನೀವು ಹೇಳುತ್ತೀರಿ ಬಯಕೆಗಳನ್ನು ಸ್ಟಾಪ್ ಮಾಡುವುದು ಸಾಧ್ಯವಿಲ್ಲವೆಂದು. ಹಾಗಾದರೆ ಏನು ಮಾಡಬೇಕು?
ಬಯಕೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ ಸಾಕು. ಬಯಕೆಯ ವ್ಯರ್ಥತೆಯನ್ನು ಪೂರ್ತಿಯಾಗಿ ತಿಳಿದುಕೊಂಡರೆ ಸಾಕು. ಬಯಕೆಯ ಜೊತೆ ನೇರ ಅನುಸಂಧಾನ ಮಾಡಬೇಕು, ತುರ್ತಾಗಿ ಆ ಬಯಕೆಯನ್ನು ಬಗೆದು ಅದರ ಪ್ರತಿಯೊಂದು ಆಯಾಮವನ್ನು ಸೂಕ್ಷ್ಮವಾಗಿ ಗಮನಿಸಬೇಕು, ಆಗ ನಿಮಗೆ ಬಯಕೆಯ ಮಿಥ್ಯತೆ, ಅದರ ಇಲ್ಲದಿರುವಿಕೆ ಅರ್ಥವಾಗುತ್ತದೆ. ಅರ್ಥವಾದ ಕ್ಷಣದಲ್ಲಿಯೇ ಬಯಕೆ ತಾನೇ ತಾನಾಗಿ ಕಳಚಿ ಬೀಳುತ್ತದೆ. ನೀವು ಕಳಚುವ ಪ್ರಯತ್ನ ಮಾಡುವ ಹಾಗಿಲ್ಲ, ಅದನ್ನ ಅರ್ಥ ಮಾಡಿಕೊಂಡರೆ ಸಾಕು, ಅದು ತಾನೇ ತಾನಾಗಿ ಕಳಚಿ ಬೀಳುತ್ತದೆ.
ಮುಲ್ಲಾ ನಸ್ರುದ್ದೀನ್ ಮೇಲಿಂದ ಮೇಲೆ ತನ್ನ ಕತ್ತೆಯನ್ನ ಕಳೆದುಕೊಳ್ಳುತ್ತಿದ್ದ. ಒಮ್ಮೆ ಹೀಗೆ ತನ್ನ ಕಳೆದುಕೊಂಡ ಕತ್ತೆಯನ್ನ ಹುಡುಕುತ್ತ ಮುಲ್ಲಾ ಹಾಡುತ್ತ, ಕುಣಿಯುತ್ತ ಭಗವಂತನಿಗೆ ಧನ್ಯವಾದ ಹೇಳುತ್ತ ಒಂದು ಊರಿನ ರಸ್ತೆಯ ಮೂಲಕ ಹಾಯ್ದು ಹೋಗುತ್ತಿದ್ದ.
ಮುಲ್ಲಾ ಇಷ್ಟು ಖುಶಿಯಾಗಿದ್ದನ್ನ ಕಂಡ ಒಬ್ಬ ದಾರಿಹೋಕ ಪ್ರಶ್ನೆ ಮಾಡಿದ.
“ ಯಾಕೆ ನಸ್ರುದ್ದೀನ್ ಇಷ್ಟು ಖುಶಿಯಾಗಿದ್ದೀಯ ? ಯಾರೋ ಹೇಳಿದರು ನಿನ್ನ ನೆಚ್ಚಿನ ಕತ್ತೆ ಕಾಣೆಯಾಗಿದೆಯೆಂದು, ಆದರೂ ನೀನು ಖುಶಿಯಾಗಿದ್ದೀಯಲ್ಲ, ಕತ್ತೆ ಸಿಕ್ತಾ? “
“ ಇನ್ನೂ ಸಿಕ್ಕಿಲ್ಲ ಗೆಳೆಯ ಆದರೆ ಖುಶಿಯ ವಿಷಯ ಏನು ಗೊತ್ತಾ, ಆ ಕತ್ತೆ ಕಳೆದು ಹೋದಾಗ ಅದೃಷ್ಟವಶಾತ್ ನಾನು ಆ ಕತ್ತೆಯ ಮೇಲೆ ಕೂತಿರಲಿಲ್ಲ, ಹಾಗೇನಾದರೂ ಕೂತಿದ್ದರೆ ನಾನೂ ಕಳೆದು ಹೋಗಿ ಬಿಡುತ್ತಿದ್ದೆ “
ಮುಲ್ಲಾ ತನ್ನ ಖುಶಿಯ ಕಾರಣ ವಿವರಿಸಿದ.

