ಮೊದಲು ಮುಖ ತೊಳೆದುಕೊಳ್ಳಿ, ಒಂದು ಕಪ್ ಚಹಾ ಕುಡಿಯಿರಿ. ವಾಸ್ತವದಿಂದ ನೀವು ಬೇರೆ ಆಗಿಲ್ಲ, ಬೇರೆ ಆಗುವುದು ಸಾಧ್ಯವೇ ಇಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಝೆನ್ ಭಿಕ್ಕು ಬೊಕುಜು ನ ಕುರಿತಾದಂಥ ಒಂದು ಪುಟ್ಟ ಕತೆ ಇದೆ. ಒಂದು ಮುಂಜಾನೆ ಬೊಕುಜು ನಿದ್ದೆಯಿಂದ ಎದ್ದವನೇ ತನ್ನ ಪ್ರಧಾನ ಶಿಷ್ಯನನ್ನು ಕರೆದು ಹೇಳಿದ, “ ನನಗೊಂದು ಕನಸು ಬಿದ್ದಿತ್ತು, ಆ ಕನಸನ್ನು ನನಗಾಗಿ ವಿಶ್ಲೇಷಣೆ ಮಾಡುವೆಯಾ?”
“ಇರು ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ, ಮೊದಲು ನಿನ್ನ ಮುಖ ತೊಳೆದುಕೋ”. ಶಿಷ್ಯ ಉತ್ತರಿಸಿದ. ಶಿಷ್ಯ ಒಂದು ಕೊಡದ ತುಂಬ ನೀರು ತೆಗೆದುಕೊಂಡು ಬಂದು ಮಾಸ್ಟರ್ ಗೆ ಮುಖ ತೊಳೆಯಲು ಸಹಾಯ ಮಾಡಹತ್ತಿದ. ಅಷ್ಟರಲ್ಲಿ ಅಲ್ಲಿಗೆ ಬೊಕುಜು ನ ಇನ್ನೊಬ್ಬ ಶಿಷ್ಯ ಬಂದ. ಬೊಕುಜು ಅವನನ್ನೂ ಕರೆದು ಕೇಳಿದ, “ ನನಗೊಂದು ಕನಸು ಬಿದ್ದಿತ್ತು, ಆ ಕನಸನ್ನು ನನಗಾಗಿ ವಿಶ್ಲೇಷಣೆ ಮಾಡುವೆಯಾ?”
“ ಇರು ನಿನಗಾಗಿ ಒಂದು ಕಪ್ ಚಹಾ ತೆಗೆಗುಕೊಂಡು ಬರುತ್ತೇನೆ” ಎಂದು ಹೇಳಿ ಆ ಶಿಷ್ಯ ಬೊಕುಜುನಿಗಾಗಿ ಚಹಾ ಕೆಗೆದುಕೊಂಡು ಬಂದ. ತನ್ನ ಇಬ್ಬರ ಶಿಷ್ಯರ ವರ್ತನೆ ಕಂಡು ಬೊಕುಜು ಬಿದ್ದು ಬಿದ್ದು ನಕ್ಕ, “ಒಂದು ವೇಳೆ ನೀವಿಬ್ಬರೂ ನನಗಾಗಿ ಕನಸನ್ನು ವಿಶ್ಲೆಷಣೆ ಮಾಡಿದ್ದರೆ, ಸರಿಯಾಗಿ ಬಾರಿಸುತ್ತಿದ್ದೆ” ಬೊಕುಜು ನಗುತ್ತಲೇ ಹೇಳಿದ.
ಕನಸಿಗೆ ಏನು ವಿಶ್ಲೇಷಣೆ ಇರುವುದು ಸಾಧ್ಯ? “ನಿದ್ದೆಯಲ್ಲಿದ್ದಾಗ ಒಂದು ಕನಸು ನೋಡಿದ್ದೀಯಾ ಆದರೆ ಈಗ ನಿನಗೆ ಎಚ್ಚರವಾಗಿದೆ. ಕನಸಿನ ಸರ್ಕಸ್ಸಿನಿಂದ ಹೊರಗೆ ಬಾ.” ಬೊಕುಜನ ಪ್ರಶ್ನೆಗೆ ಇಬ್ಬರು ಶಿಷ್ಯರ ಉತ್ತರವೂ ಸರಿಯಾಗಿತ್ತು. ಬೊಕುಜು ತನ್ನ ಇಬ್ಬರು ಶಿಷ್ಯರನ್ನು ಪರೀಕ್ಷೆ ಮಾಡಲು ಈ ಪ್ರಶ್ನೆ ಕೇಳಿದ್ದ. ಇದು ಅವರಿಬ್ಬರ ಪರೀಕ್ಷಾ ಸಮಯವಾಗಿತ್ತು.
ಒಬ್ಬ ಶಿಷ್ಯ ಕೈ ಕಾಲು ಮುಖ ತೊಳೆದುಕೊಳ್ಳಲು ನೀರು ತೆಗೆದುಕೊಂಡು ಬಂದ. “ ಕನಸು ಮುಗಿದು ಹೋಗಿದೆ, ಈಗ ಅದರಿಂದ ಹೊರಗೆ ಬಾ. ಇನ್ನು ಯಾವ ವಿಶ್ಲೇಷಣೆ ಆ ಕನಸಿಗೆ? ಸತ್ಯವನ್ನ ಬೇಕಾದರೆ ವಿಶ್ಲೇಷಣೆ ಮಾಡಬಹುದು ಆದರೆ ಕನಸನ್ನ? ಮಿಥ್ಯೆಯನ್ನ ಹೇಗೆ ವಿಶ್ಲೇಷಣೆ ಮಾಡುವುದು? ಯಾವುದು ನಡೆದೇ ಇಲ್ಲವೋ ಅದರ ಕುರಿತಾಗಿ ವಿಚಾರ ಮಾಡಬಹುದೆ? ಅದು ಕನಸು ಅಂತ ನಿನಗೆ ಗೊತ್ತಾಯ್ತಲ್ಲಾ ಇಷ್ಟು ಸಾಕು. ಈಗ ನಿನ್ನ ಮುಖ ತೊಳೆದುಕೋ. ಈಗ ನೀನು ಕನಸಿನ ಲೋಕದಿಂದ ಹೊರಗೆ ಬಂದಿದ್ದೀಯಾ ಫ್ರೆಶ್ ಆಗು”.
ಇನ್ನೊಬ್ಬ ಶಿಷ್ಯನೂ ಬೊಕುಜು ಗಾಗಿ ಚಹಾ ತೆಗೆದುಕೊಂಡು ಬಂದು ಸರಿಯಾಗಿ ಉತ್ತರಿಸಿದ. “ನೀನು ಮುಖ ತೊಳೆದುಕೊಂಡ ಮೇಲೂ ಸ್ವಲ್ಪ ನಿದ್ದೆ ಇನ್ನೂ ಉಳಿದುಕೊಂಡಿದೆ ಅನಿಸುತ್ತದೆ. ಮೊದಲು ಒಂದು ಕಪ್ ಚಹಾ ಕುಡಿ. ಪೂರ್ಣ ಎಚ್ಚರವಾಗುತ್ತದೆ”.
ನಾನು ನಿಮಗೆ ಇದನ್ನೇ ಹೇಳುತ್ತಿದ್ದೇನೆ, “ಮೊದಲು ಮುಖ ತೊಳೆದುಕೊಳ್ಳಿ, ಒಂದು ಕಪ್ ಚಹಾ ಕುಡಿಯಿರಿ. ವಾಸ್ತವದಿಂದ ನೀವು ಬೇರೆ ಆಗಿಲ್ಲ, ಬೇರೆ ಆಗುವುದು ಸಾಧ್ಯವೇ ಇಲ್ಲ.
ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”
ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.
“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .
“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.
“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .
“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ” ಉತ್ತರಿಸಿದ ನಸ್ರುದ್ದೀನ

