ಸೃಷ್ಟಿಸಲು ಸಾಧ್ಯವಾಗದವರು ಟೀಕಾಕಾರರಾಗುತ್ತಾರೆ. ಹಾಗಾಗಿ ಅವರ ಬಗ್ಗೆ ಚಿಂತೆ ಮಾಡಬೇಡಿ. ನಿರ್ಣಯಾತ್ಮಕವಾದದ್ದು ಯಾವುದೆಂದರೆ ನಿಮ್ಮ ಅಂತರಂಗದ ಭಾವ, ಒಳಗಿನ ಬೆಳಕು, ನಿಮ್ಮ ಒಳಗಿನ ಅತಃಕರಣ… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ
ಪೇಂಟಿಂಗ್ ತುಂಬಾ ಇಷ್ಟ ಪಡುತ್ತಿದ್ದ ಸೂಫಿ ಅನುಭಾವಿಯೊಬ್ಬನ ಬಗ್ಗೆ ಕೇಳಿದ್ದೆ. ಆದರೆ ಅವನ ಕಾಲದ ವಿಮರ್ಶಕರ್ಯಾರೂ ಅವನ ಪೇಂಟಿಂಗ್ ಗಳನ್ನು ಮೆಚ್ಚಿ ಮಾತನಾಡುತ್ತಿರಲಿಲ್ಲ. ಎಲ್ಲರೂ ಅವನ ವಿರುದ್ಧವಾಗಿದ್ದರು. ಅವನ ಪೇಂಟಿಂಗ್ ಗಳಲ್ಲಿ ಹಲವಾರು ತಪ್ಪುಗಳನ್ನ ಹುಡುಕುತ್ತಿದ್ದರು.
ಇಂಥ ವಿಮರ್ಶಕರಿಂದಾಗಿ ಸೂಫಿ ರೋಸಿ ಹೋಗಿದ್ದ. ಒಂದು ದಿನ ಅವನು ತನ್ನ ಪೇಂಟಿಂಗ್ ಗಳನ್ನೆಲ್ಲ ತನ್ನ ಮನೆಯ ಹೊರಗೆ ತೂಗು ಹಾಕಿದ ಮತ್ತು ಎಲ್ಲ ವಿಮರ್ಶಕರಿಗೆ ತಮ್ಮ ತಮ್ಮ ಬ್ರಶ್ ಮತ್ತು ಬಣ್ಣಗಳೊಂದಿಗೆ ಬಂದು ತಪ್ಪಾಗಿರುವ ಪೆಂಟಿಂಗ್ ಗಳನ್ನು ತಿದ್ದುವಂತೆ ಆಹ್ವಾನ ನೀಡಿದ.
ಒಬ್ಬನೇ ಒಬ್ಬ ವಿಮರ್ಶಕನೂ ಸೂಫಿಯ ಆಹ್ವಾನ ಸ್ವೀಕರಿಸಿ ಪೇಂಟಿಗ್ ತಿದ್ದಲು ಬರಲಿಲ್ಲ. ಟೀಕೆ ಮಾಡುವುದು ತುಂಬ ಸಸಾರ ಆದರೆ ತಿದ್ದುವುದು ಮಹಾ ಕಷ್ಟ. ಈ ಘಟನೆಯ ನಂತರ ಯಾವ ವಿಮರ್ಶಕರೂ ಸೂಫಿಯ ಪೇಂಟಿಂಗ್ ವಿಮರ್ಶೆ ಮಾಡುವ ಗೊಡವೆಗೆ ಹೋಗಲಿಲ್ಲ. ಸೂಫಿ ಮಾಡಿದ್ದು ಸರಿಯಾಗಿತ್ತು.
ಸೃಷ್ಟಿಸಲು ಸಾಧ್ಯವಾಗದವರು ಟೀಕಾಕಾರರಾಗುತ್ತಾರೆ. ಹಾಗಾಗಿ ಅವರ ಬಗ್ಗೆ ಚಿಂತೆ ಮಾಡಬೇಡಿ. ನಿರ್ಣಯಾತ್ಮಕವಾದದ್ದು ಯಾವುದೆಂದರೆ ನಿಮ್ಮ ಅಂತರಂಗದ ಭಾವ, ಒಳಗಿನ ಬೆಳಕು, ನಿಮ್ಮ ಒಳಗಿನ ಅತಃಕರಣ. ಸಂಗೀತ ನಿಮ್ಮೊಳಗೆ ಪ್ರೇಮಪೂರ್ಣ ಭಾವವೊಂದನ್ನು ಹುಟ್ಟುಹಾಕುತ್ತಿದೆಯೆಂದರೆ, ಅದು ನಿಮ್ಮೊಳಗೆ ಸಂತೋಷವನ್ನೂ ಹುಟ್ಟಿಸುತ್ತದೆ, ನಿಮ್ಮ ಅಹಂ ನ ಮಟ್ಟ ಹಾಕುತ್ತದೆ. ಆಗ ಅದು ನಿಮ್ಮ ಮತ್ತು ದೇವರ ನಡುವೆ ಸೇತುವೆಯಾಗುತ್ತದೆ. ಕಲೆ ಸಾಧ್ಯ ಮಾಡುವಂಥ ಪ್ರಾರ್ಥನೆ ಹಾಗು ಧ್ಯಾನ ಇನ್ನೊಂದಿಲ್ಲ.
ಪೇಂಟಿಂಗ್, ಸಂಗೀತ, ಶಿಲ್ಪಕಲೆ, ನೃತ್ಯ, ಕತ್ತಿವರಸೆ, ಬಿಲ್ಲುಗಾರಿಕೆ, ಕಲೆ ಯಾವುದೇ ಇರಬಹುದು, ಅದು ನಿಮ್ಮ ಇರುವಿಕೆಯನ್ನ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆಯೆಂದರೆ, ಅದು ಪ್ರಾರ್ಥನೆ ಮಾಡುವ, ಧ್ಯಾನ ಮಾಡುವ ಅತ್ಯಂತ ಉತ್ತಮ ವಿಧಾನ. ಆಗ ನಿಮಗೆ ಬೇರೆ ಯಾವ ಧ್ಯಾನ ಬೇಕಿಲ್ಲ, ಇದೇ ನಿಮ್ಮ ಧ್ಯಾನ. ಇಂಥ ಕಲೆ ನಿಮ್ಮನ್ನು ನಿಧಾನವಾಗಿ ದೇವರಿಗೆ ಹತ್ತಿರವಾಗಿಸುತ್ತದೆ. ನನ್ನ ಮಾನದಂಡ ಇದು, ಯಾವುದು ನಿಮ್ಮನ್ನು ದೇವರಿಗೆ ಹತ್ತಿರವಾಗಿಸುತ್ತದೆಯೋ ಡ ಅದು ನಿಜವಾದ ಕಲೆ, ಅದು ಅಸಲಿ ಕಲೆ.
ಒಬ್ಬ ಝೆನ್ ವಿದ್ಯಾರ್ಥಿಗೆ ಮಾರ್ಶಲ್ ಆರ್ಟ್ ನ ಹುಚ್ಚು. ಝೆನ್ ಜೊತೆಜೊತೆಗೆ ಯುದ್ಧಕಲೆಯನ್ನೂ ಅಭ್ಯಾಸ ಮಾಡುತ್ತಿದ್ದ.
ಒಮ್ಮೆ ಅವನಿಗೆ ತನ್ನ ಯುದ್ಧಕಲೆಯನ್ನು ಬಳಸಿ ಗುರುವಿನ ಸಾಮರ್ಥ್ಯ ಪರೀಕ್ಷಿಸುವ ಮನಸ್ಸಾಯಿತು.
ಗುರು ವಿಶ್ರಾಂತಿಯಲ್ಲಿದ್ದಾಗ ಅಚಾನಕ್ ಆಗಿ ಈಟಿಯಿಂದ ಗುರುವಿನ ಮೇಲೆ ಆಕ್ರಮಣ ಮಾಡಿದ.
ಗುರು ಕ್ಷಣಾರ್ಧದಲ್ಲಿ ತನ್ನ ಜಪಮಣಿ ಬಳಸಿ ಈಟಿಯ ದಿಕ್ಕನ್ನೇ ಬದಲಾಯಿಸಿದ. ಶಿಷ್ಯನಿಗೆ ಆಶ್ಚರ್ಯವಾಯಿತು.
ಗುರು ಉತ್ತರಿಸಿದ
“ ಹುಡುಗಾ, ನಿನ್ನ ಯುದ್ಧತಂತ್ರ ಇನ್ನೂ ಪಕ್ವವಾಗಿಲ್ಲ, ಈಟಿಗಿಂತಲೂ ಮೊದಲು ನಿನ್ನ mind move ಆಗಿದ್ದನ್ನ ನಾನು ಕ್ಷಣಾರ್ಧದಲ್ಲಿ ಗಮನಿಸಿದೆ”

