ಹುಡುಗ ಉತ್ಸುಕನಾಗಿ ರಮಣರು ಹೂಂ ಎನ್ನುವುದನ್ನೇ ಎದುರು ನೋಡುತ್ತಿದ್ದ. ರಮಣರ ಹೂಂ ಎಂದೊಡನೆ ಹುಡುಗ ದೋಸೆ ತಿನ್ನಲು ಶುರು ಮಾಡಿದ. ಅವನ ಗಮನವೆಲ್ಲ ರಮಣರ ಮೇಲೆಯೇ ಇತ್ತು. ರಮಣರು ಇನ್ನೊಮ್ಮೆ ಹೂಂ ಎನ್ನುವ ಮೊದಲು ಹುಡುಗ ದೋಸೆ ತಿಂದು ಮುಗಿಸಲು ಕಾತುರನಾಗಿದ್ದ… ~ ಸಂಗ್ರಹ ಮತ್ತು ನಿರೂಪಣೆ : ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಪುಟ್ಟ ಹುಡುಗನೊಳಗೆ ಧ್ಯಾನ ಎಂದರೇನು ಎನ್ನುವ ಪ್ರಶ್ನೆ ಹುಟ್ಟಿಕೊಂಡಿತು. ಆತ ತನ್ನ ತಂದೆ ತಾಯಿಯರನ್ನ ಉತ್ತರಕ್ಕಾಗಿ ಕಾಡತೊಡಗಿದ. ಆದರೆ ಪುಟ್ಟ ಮಗುವಿಗೆ ಅರ್ಥ ಆಗುವಂತೆ ಸರಳವಾಗಿ ಧ್ಯಾನ ಎಂದರೇನು ಎನ್ನುವುದನ್ನ ವಿವರಿಸುವಲ್ಲಿ ಅವರು ಅಸಮರ್ಥರಾಗಿದ್ದರು.
ಒಮ್ಮೆ ಆ ಕುಟುಂಬ ಭಗವಾನ್ ರಮಣ ಮಹರ್ಷಿಗಳ ದರ್ಶನಕ್ಕೆ ತಿರುವಣ್ಣಮಲೈ ಗೆ ಬಂದಿತು. ರಮಣರನ್ನು ನೋಡುತ್ತಲೇ ಆ ಹುಡುಗ ತನ್ನ ಪ್ರಶ್ನೆಯನ್ನ ರಮಣರ ಮುಂದಿಟ್ಟ. ರಮಣರು ನಸುನಗುತ್ತಲೇ ತಮ್ಮ ಶಿಷ್ಯರಿಗೆ ಹುಡುಗನಿಗಾಗಿ ದೋಸೆ ತರಲು ಹೇಳಿದರು. ಶಿಷ್ಯ, ಹುಡುಗನ ಎದುರು ಬಾಳೆ ಎಲೆಯಲ್ಲಿ ದೋಸೆ ತಂದು ಇಟ್ಟ. ರಮಣರು ತನ್ನನ್ನೇ ನೋಡುತ್ತ ಕುಳಿತಿದ್ದ ಹುಡುಗನಿಗೆ ಹೇಳಿದರು……..
“ ನೋಡು ಮಗು ನಾನು ‘ಹೂಂ’ ಎಂದು ಹೇಳಿದೊಡನೆ ನೀನು ದೋಸೆ ತಿನ್ನಲು ಶುರು ಮಾಡು. ನಂತರ ನಾನು ಇನ್ನೊಮ್ಮೆ •ಹೂಂ’ ಎಂದು ಹೇಳುತ್ತೇನೆ ಆಗ ದೋಸೆ ಯ ಒಂದು ಚೂರು ಎಲೆಯ ಮೇಲೆ ಉಳಿದಿರಬಾರದು”
ಹುಡುಗ ರಮಣರ ಮಾತಿಗೆ ತಲೆಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ. ಸುತ್ತ ಕುಳಿತವರು ಕುತೂಹಲದಿಂದ ಹುಡುಗನನ್ನು ನೋಡುತ್ತಿದ್ದರು. ಹುಡುಗ ಕೂಡ ಉತ್ಸುಕನಾಗಿ ರಮಣರು ಹೂಂ ಎನ್ನುವುದನ್ನೇ ಎದುರು ನೋಡುತ್ತಿದ್ದ. ರಮಣರ ಹೂಂ ಎಂದೊಡನೆ ಹುಡುಗ ದೋಸೆ ತಿನ್ನಲು ಶುರು ಮಾಡಿದ. ಅವನ ಗಮನವೆಲ್ಲ ರಮಣರ ಮೇಲೆಯೇ ಇತ್ತು. ರಮಣರು ಇನ್ನೊಮ್ಮೆ ಹೂಂ ಎನ್ನುವ ಮೊದಲು ಹುಡುಗ ದೋಸೆ ತಿಂದು ಮುಗಿಸಲು ಕಾತುರನಾಗಿದ್ದ.
ಹುಡುಗ ಖುಷಿಯಿಂದ ದೋಸೆ ತಿನ್ನುತ್ತಿದ್ದ . ದೋಸೆಯ ತುಣುಕುಗಳನ್ನು ಹರಿದುಕೊಂಡು ಬಾಯಲ್ಲಿ ಇಟ್ಟುಕೊಳ್ಳುತ್ತಿದ್ದ ಹುಡುಗನ ಗಮನವೆಲ್ಲ ರಮಣರ ಮೇಲೆಯೇ ಇತ್ತು. ಎಲೆಯಲ್ಲಿ ದೋಸೆ ತೀರುತ್ತ ಬಂದು ಕೊನೆಗೆ ದೋಸೆಯ ಒಂದು ತುಣುಕು ಮಾತ್ರ ಉಳಿದಿತ್ತು.
ಹುಡುಗ ಕಾತುರತೆಯಿಂದ ರಮಣರ ಎರಡನೇಯ ಸೂಚನೆಗಾಗಿ ಕಾಯುತ್ತಿದ್ದ. ರಮಣರು ಎರಡನೇಯ ಬಾರಿ ಹೂಂ ಎನ್ನುತ್ತಿದ್ದಂತೆಯೇ ಹುಡುಗ ಎಲೆಯ ಮೇಲಿದ್ದ ದೋಸೆಯ ತುಣುಕನ್ನ ಬಾಯಿಗೆ ಹಾಕಿಕೊಂಡುಬಿಟ್ಟ.
“ನಿನ್ನ ಗಮನವೆಲ್ಲ ಎಲ್ಲಿತ್ತು, ದೋಸೆಯ ಮೇಲಾ ಅಥವಾ ನನ್ನ ಮೇಲಾ?” ರಮಣರು ಹುಡುಗನನ್ನು ಪ್ರಶ್ನೆ ಮಾಡಿದರು.
“ಎರಡರ ಮೇಲೂ” ಹುಡುಗ ಉತ್ತರಿಸಿದ.
“ಹೌದು ನನ್ನ ಮೇಲೆ ಗಮನ ಇಟ್ಟುಕೊಂಡೇ ನೀನು ದೋಸೆ ತಿನ್ನುವುದರಲ್ಲಿ ಮಗ್ನನಾಗಿದ್ದೆ. ಬೇರೆ ಯಾವುದೂ ನಿನ್ನನ್ನು ವಿಚಲಿತಗೊಳಿಸಲಿಲ್ಲ. ಹೀಗೆಯೇ ಪ್ರತಿದಿನ ನೀನು ನಿನ್ನ ಕೆಲಸದಲ್ಲಿ ಮಗ್ನನಾಗಿರುವಾಗ ಹಿನ್ನೆಲೆಯಲ್ಲಿ ನಿನ್ನ ಮನಸ್ಸು ಮತ್ತು ವಿಚಾರಗಳು ದೈವದ ಮೇಲೆ ಸ್ಥಿರವಾಗಿರಬೇಕು. ಇದೇ ಧ್ಯಾನ”. ರಮಣರು ಹುಡುಗನಿಗೆ ತಿಳಿ ಹೇಳಿದರು.
ಎರಡು ‘ಹೂಂ’ ಸೂಚನೆಗಳು ಹುಟ್ಟು ಮತ್ತು ಸಾವು ಇದ್ದ ಹಾಗೆ. ಈ ಎರಡು ಘಟನೆಗಳ ನಡುವೆ ನಾವು ದೈವವನ್ನು ನೆನೆಯುತ್ತ ನಮ್ಮ ನಿತ್ಯಕೆಲಸಗಳಲ್ಲಿ ಮಗ್ನರಾಗಬೇಕು. ಇದು ಧ್ಯಾನ.

