ಯಾವ ದೇಶವೂ ಪೂರ್ತಿಯಾಗಿ ಅಧ್ಯಾತ್ಮಿಕ ವಿಕಸನವನ್ನು ಸಾಧಿಸಿಕೊಂಡಿರುವುದಿಲ್ಲ, ಕೆಲವು ವ್ಯಕ್ತಿಗಳು ವಿಕಸಿತರಾಗಿರುತ್ತಾರೆ ಅಷ್ಟೇ, ಇದು ಎಲ್ಲ ದೇಶಗಳ, ಎಲ್ಲ ಜನಾಂಗಗಳ ವಿಷಯದಲ್ಲೂ ಅನ್ವಯವಾಗುವಂಥದು. ಅಧ್ಯಾತ್ಮ ದೇಶಗಳ ವಾತಾವರಣ, ರಾಜಕಾರಣ ಯಾವುದಕ್ಕೂ ಸಂಬಂಧಿಸಿದ್ದಲ್ಲ... ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಾರತೀಯರು ತಾವು ಅಧ್ಯಾತ್ಮಿಕ ಜಗತ್ತಿನ ಕೇಂದ್ರದಲ್ಲಿದ್ದೇವೆ ಎಂದು ಭಾವಿಸುತ್ತಾರೆ, ತಾವು ಅಧ್ಯಾತ್ಮಿಕವಾಗಿ ಅತ್ಯಂತ ಹೆಚ್ಚು ವಿಕಸನಗೊಂಡವರು ಎಂದು ತಿಳಿದುಕೊಂಡಿದ್ದಾರೆ. ಇದೆಲ್ಲ ಅಪ್ಪಟ ಮೂರ್ಖತನ. ಯಾವ ದೇಶ, ಯಾವ ಜನಾಂಗವೂ ಅಧ್ಯಾತ್ಮಿಕವಾಗಿ ವಿಕಸನಗೊಂಡಿಲ್ಲ.
ಅಧ್ಯಾತ್ಮಿಕತೆ ವೈಯಕ್ತಿಕವಾಗಿ ಸಂಭವಿಸುವಂಥದು, ಇಡೀ ದೇಶ, ಇಡೀ ಜನಾಂಗಕ್ಕೆ ಸಂಬಂಧಿಸಿದ್ದಲ್ಲ. ಹೌದು ಭಾರತದ ಬುದ್ಧ ಅತ್ಯಂತ ಪರಿಪೂರ್ಣವಾಗಿ ವಿಕಸನಗೊಂಡ ಅಧ್ಯಾತ್ಮ ಜೀವಿ, ಹಾಗೆಯೇ ಜೀಸಸ್, ಹಾಗೆಯೇ ಮಹಾವೀರ, ಮೊಹಮ್ಮದ್ ಕೂಡ. ಝರಾತೃಷ್ಟ ಸಹ ವಿಕಸನಗೊಂಡ ಅಧ್ಯಾತ್ಮ ಜೀವಿಯೇ. ಈ ಎಲ್ಲರೂ ವೈಯಕ್ತಿಕವಾಗಿ ಅಧ್ಯಾತ್ಮಿಕ ಪರಿಪೂರ್ಣತೆಯನ್ನ ತಲುಪಿದವರು.
ಬುದ್ಧ ಭಾರತದಲ್ಲಿ ಹುಟ್ಟಿದ ಮಾತ್ರಕ್ಕೆ, ವೇದ ಉಪನಿಷತ್ತುಗಳು ಭಾರತದಲ್ಲಿ ರಚನೆಗೊಂಡಿರುವ ಕಾರಣಕ್ಕೆ ಇಡೀ ಭಾರತ ಅಧ್ಯಾತ್ಮಮಯ ಆಗುವುದಿಲ್ಲ. ಅಧ್ಯಾತ್ಮ ಜೀವಿಗಳು ಎಲ್ಲ ದೇಶಗಳಲ್ಲಿಯೂ, ಎಲ್ಲ ಜನಾಂಗಳಲ್ಲಿಯೂ, ಎಲ್ಲ ಶತಮಾನಗಳಲ್ಲಿಯೂ ಹುಟ್ಟಿದ್ದಾರೆ. ಅಧ್ಯಾತ್ಮ ಯಾವುದೇ ದೇಶದ, ಜನಾಂಗದ, ಜಾತಿಯ ಸೊತ್ತಲ್ಲ.
ಕೆಲವು ದೇಶಗಳಲ್ಲಿ ಅಧ್ಯಾತ್ಮದ ಕುರಿತಾದ ಅಹಂ ಇದೆ ಮತ್ತು ಇದಕ್ಕೆ ಕಾರಣಗಳೂ ಇದ್ದಾವೆ. ಭಾರತಕ್ಕೆ ತನ್ನ ಆರ್ಥಿಕ ದುಸ್ಥಿಯ ಬಗ್ಗೆ ಅತೀ ಹೆಚ್ಚು ಕೀಳರಿಮೆ. ಈ ಕೀಳರಿಮೆಯನ್ನ ಹೋಗಲಾಡಿಸಿಕೊಳ್ಳಲು ಅದು ಅಧ್ಯಾತ್ಮವನ್ನು ಪರ್ಯಾಯವೆಂಬಂತೆ ಬಳಸಿಕೊಳ್ಳುತ್ತದೆ. ಪಶ್ಚಿಮದ ದೇಶಗಳು ವಸ್ತುಮಯ ಜಗತ್ತಿನಲ್ಲಿ ವಿಶೇಷ ಪ್ರಗತಿಯನ್ನ ಸಾಧಿಸಿರುವಂಥವು. ಭೌತಿಕವಾಗಿ ಶ್ರೀಮಂತ ದೇಶಗಳು, ವಿಜ್ಞಾನದಲ್ಲಿ, ಬದುಕಿನಲ್ಲಿ ಔನತ್ಯವನ್ನು ಹೊಂದಿರುವಂಥವು, ಸಮೃದ್ಧ ಬದುಕಿನ ಶೈಲಿಯನ್ನ ರೂಢಿಸಿಕೊಂಡಿರುವಂಥವು. ಇಂಥ ದೇಶಗಳಿಗೆ ಹೋಲಿಕೆ ಮಾಡಿಕೊಂಡು ಭಾರತ ಕೀಳರಿಮೆಯನ್ನು ಬೆಳೆಸಿಕೊಂಡಿದೆ. ಇದನ್ನ ಸರಿದೂಗಿಸುವುದು ಹೇಗೆ? ಆಗ ಕೇಂದ್ರಕ್ಕೆ ಬರುವುದೇ ಈ ಅಧ್ಯಾತ್ಮ. ಅವರು ಭೌತಿಕವಾಗಿ ಪ್ರಗತಿಯನ್ನು ಸಾಧಿಸಿದ್ದಾರೆಯಾದರೆ ನಾವು ಅಧ್ಯಾತ್ಮಿಕವಾಗಿ ಮುಂದುವರೆದಿದ್ದೇವೆ ಎನ್ನುವ ಒಣ ಸಾಂತ್ವನ.
ಯಾವ ದೇಶವೂ ಪೂರ್ತಿಯಾಗಿ ಅಧ್ಯಾತ್ಮಿಕ ವಿಕಸನವನ್ನು ಸಾಧಿಸಿಕೊಂಡಿರುವುದಿಲ್ಲ, ಕೆಲವು ವ್ಯಕ್ತಿಗಳು ವಿಕಸಿತರಾಗಿರುತ್ತಾರೆ ಅಷ್ಟೇ, ಇದು ಎಲ್ಲ ದೇಶಗಳ, ಎಲ್ಲ ಜನಾಂಗಗಳ ವಿಷಯದಲ್ಲೂ ಅನ್ವಯವಾಗುವಂಥದು. ಅಧ್ಯಾತ್ಮ ದೇಶಗಳ ವಾತಾವರಣ, ರಾಜಕಾರಣ ಯಾವುದಕ್ಕೂ ಸಂಬಂಧಿಸಿದ್ದಲ್ಲ.
ಭಾರತಿಯರನ್ನು ಪಾಕಿಸ್ತಾನದ ಬಗ್ಗೆ ಕೇಳಿನೋಡಿ, ಕೆಲವೇ ಕೆಲವು ವರ್ಷಗಳ ಹಿಂದೆ ಅದು ಭಾರತದ ಭಾಗವಾಗಿತ್ತು ಆಗ ಅದು ಅಧ್ಯಾತ್ಮಿಕವಾಗಿ ಬಹಳ ಮುಂದುವರೆದಿತ್ತು ಆದರೆ ಈಗ ಅದು ಬೇರೆ ದೇಶ, ಆ ದೇಶದ ರಾಜಕಾರಣ ಬೇರೆ ಹಾಗಾಗಿ ಅದು ಎಲ್ಲ ರೀತಿಯಿಂದಲೂ ಅತ್ಯಂತ ದುರ್ಬಲ ದೇಶ, ಕೆಟ್ಟ ದೇಶ.
ಅಧ್ಯಾತ್ಮಿಕ ಮನುಷ್ಯರಿಗೆ ದೇಶಗಳ, ಜನಾಂಗಗಳ ಗಡಿ ಇಲ್ಲ, ಅವರು ಎಲ್ಲ ದೇಶಗಳಿಗೂ, ಎಲ್ಲ ಜನಾಂಗಗಳಿಗೂ ಸೇರಿದವರು, ಅವರಿಗೆ ಜಗತ್ತು ಒಂದು, ಈ ಭೂಮಿ ಒಂದು.
ಒಮ್ಮೆ ನಸ್ರುದ್ದೀನ್ ಹಳ್ಳಿಗೆ ಬಂದಿದ್ದ ವಿದೇಶಿ ಪ್ರವಾಸಿ ಪ್ರಶ್ನೆ ಮಾಡಿದ,
“ಈ ಹಳ್ಳಿಯಲ್ಲಿ ಯಾರಾದರೂ ದೊಡ್ಡ ಮನುಷ್ಯರು ಹುಟ್ಟಿದ್ದಾರೆಯೇ? “
“ಇಲ್ಲ, ನಮ್ಮ ಹಳ್ಳಿಯಲ್ಲಿ ಯಾವ ದೊಡ್ಡ ಮನುಷ್ಯರೂ ಹುಟ್ಟಿಲ್ಲ, ಇಲ್ಲ ಎಲ್ಲ ಪುಟ್ಟ ಮಕ್ಕಳೇ ಹುಟ್ಟಿದ್ದು”
ನಸ್ರುದ್ದೀನ್ ಉತ್ತರಿಸಿದ.
Source: Osho – A sudden clash of thunder

