ಯಾರ ಬಳಿ ಇದೆಯೋ ಅವರಿಗೆ ಇನ್ನಷ್ಟು ಕೊಡಲಾಗುತ್ತದೆ, ಯಾರ ಬಳಿ ಇಲ್ಲವೋ ಅವರಿಂದ ಇರುವುದನ್ನೂ ಕಿತ್ತುಕೊಳ್ಳಲಾಗುತ್ತದೆ ಎಂದರೆ ಇದು ಒಂದು ಅನ್ಯಾಯದ ಹೇಳಿಕೆ ಎಂದು ಅನಿಸಬಹುದು. ಆದರೆ ಹಾಗಲ್ಲ, ಜೀಸಸ್ ನ ಈ ಹೇಳಿಕೆಯಲ್ಲಿ ಯಾವ ಅನ್ಯಾಯವೂ ಇಲ್ಲ. ಇದು ಬದುಕಿನ ಒಂದು ನೇರ ನಿಯಮ… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ
ಜೀಸಸ್ ನ ಒಂದು ಅತ್ಯಂತ ಪ್ರಸಿದ್ದ ಹೇಳಿಕೆ ಇದೆ, “ಯಾರ ಬಳಿ ಇದೆಯೋ ಅವರಿಗೆ ಇನ್ನಷ್ಟನ್ನು ಕೊಡಲಾಗುತ್ತದೆ, ಯಾರ ಬಳಿ ಇಲ್ಲವೋ ಅವರಿಂದ ಇರುವುದನ್ನೂ ಕಸಿದುಕೊಳ್ಳಲಾಗುತ್ತದೆ”.
ಇದು ಒಂದು ದಿಟ್ಟ ಹೇಳಿಕೆ. ಯಾರ ಬಳಿ ಇದೆಯೋ ಅವರಿಗೆ ಇನ್ನಷ್ಟು ಕೊಡಲಾಗುತ್ತದೆ, ಯಾರ ಬಳಿ ಇಲ್ಲವೋ ಅವರಿಂದ ಇರುವುದನ್ನೂ ಕಿತ್ತುಕೊಳ್ಳಲಾಗುತ್ತದೆ ಎಂದರೆ ಇದು ಒಂದು ಅನ್ಯಾಯದ ಹೇಳಿಕೆ ಎಂದು ಅನಿಸಬಹುದು. ಆದರೆ ಹಾಗಲ್ಲ, ಜೀಸಸ್ ನ ಈ ಹೇಳಿಕೆಯಲ್ಲಿ ಯಾವ ಅನ್ಯಾಯವೂ ಇಲ್ಲ. ಇದು ಬದುಕಿನ ಒಂದು ನೇರ ನಿಯಮ. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಎಲ್ಲವೂ ಈ ನಿಯಮದ ಪ್ರಕಾರವೇ.
ನೀವು ಖುಶಿಯಾಗಿದ್ದರೆ ಇನ್ನಷ್ಟು ಖುಶಿ ನಿಮ್ಮ ಪಾಲಾಗುತ್ತದೆ. ನೀವು ಮುಕ್ತವಾಗಿ ಹೃದಯದ ಆಳದಿಂದ ನಗಬಲ್ಲಿರಾದರೆ, ನಿಮ್ಮ ನಗುವಿಗೆ ಇನ್ನಷ್ಟು ಆಯಾಮಗಳು ಸೇರಿಕೊಳ್ಳುವವು. ನೀವು ನೃತ್ಯ ಮಾಡಬಲ್ಲಿರಾದರೆ, ಹೆಚ್ಚು ಹೆಚ್ಚು ರಿದಂ ನಿಮ್ಮ ನೃತ್ಯವನ್ನು ಕೂಡಿಕೊಳ್ಳುವುದು. ನೀವು ಖುಷಿಯಿಂದ ಹಾಡಬಲ್ಲಿರಾದರೆ, ಇಡೀ ಆಕಾಶ ನಿಮ್ಮ ಜೊತೆ ಹಾಡಲು ಶುರುಮಾಡುತ್ತದೆ, ಪರ್ವತ ಶ್ರೇಣಿಗಳು ನಿಮ್ಮ ಜೊತೆ ಹಾಡತೊಡಗುತ್ತವೆ, ಸೂರ್ಯ ಚಂದ್ರ ನಕ್ಷತ್ರಗಳು ನಿಮ್ಮ ಜೊತೆ ದನಿಗೂಡಿಸುತ್ತವೆ. ಮತ್ತು ನೀವು ದುಃಖದಿಂದ ಅಳತೊಡಗಿದಾಗ ಅಶಾಂತಿಯನ್ನು ಅನುಭವಿಸತೊಡಗಿದಾಗ ಎಲ್ಲ ದಿಕ್ಕುಗಳಿಂದ ಅಶಾಂತಿ ನಿಮ್ಮತ್ತ ಹರಿದು ಬರುವುದು.
ನೀವು ಏನಾಗಿರುವಿರೋ ಅದೇ ನಿಮ್ಮತ್ತ ಆಕರ್ಷಿತವಾಗುತ್ತದೆ. ಇದು ಬದುಕಿನ ನಿಚ್ಚಳ ನಿಯಮ. ನೀವು ಏನಾಗಿರುವಿರೋ ಅದೇ ನಿಮ್ಮತ್ತ ಹರಿದು ಬರುವುದು. ಆದ್ದರಿಂದ ಖುಶಿಯಾಗಿರುವ ಮನುಷ್ಯನ ಹತ್ತಿರವೇ ಹೆಚ್ಚು ಹೆಚ್ಚು ಖುಶಿ ಸೇರಿಕೊಳ್ಳುತ್ತದೆ. ಶಾಂತ ಮನುಷ್ಯನೇ ಹೆಚ್ಚು ಶಾಂತಿಯನ್ನ ಹೊಂದುತ್ತಾನೆ. ಹಾಗೆಯೇ ಅಶಾಂತ ಮನುಷ್ಯ ಹೆಚ್ಚು ಹೆಚ್ಚು ದುಗುಡಕ್ಕೊಳಗಾಗುತ್ತಾನೆ.
ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.
ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ ಕಸಿದುಕೊಳ್ಳಲಾಗುವುದು.
ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಬಂದು ಸೇರುವುದು.
ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.

