ಶಿಷ್ಯ ಅಳುವುದು, ಬೋಧಿಧರ್ಮ ನಗುವುದು, ಲಿಂಜಿ ಸಿಟ್ಟಿಗೇಳುವುದು, ರಮಣರು ತರಕಾರಿ ಹೆಚ್ಚುತ್ತ ಕುಳಿತುಕೊಳ್ಳುವುದು, ಜೋಕ್ ಪುಸ್ತಕ ಓದುವುದು ಎಲ್ಲವೂ ಸಹಜ ಸ್ಥಿತಿಯ ಭಾಗಗಳೇ. ಈ ಕ್ರಿಯೆಗಳ ಹಿಂದೆ ಯಾವ ಕಾರಣಗಳೂ ಇಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.
ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.
ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.
ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.
~ ಲಾವೋತ್ಸೇ
*********************
ಒಮ್ಮೆ ಒಬ್ಬ ಅತ್ಯಂತ ಪ್ರಖ್ಯಾತನಾಗಿದ್ದ ಝೆನ್ ಮಾಸ್ಟರ್ ತೀರಿಕೊಂಡ. ಜ್ಞಾನೋದಯ ಆಗಿದ್ದ ಮಾಸ್ಟರ್ ನ ಪ್ರಧಾನ ಶಿಷ್ಯ , ಝೆನ್ ಮಾಸ್ಟರ್ ನ ಪಾರ್ಥಿವ ಶರೀರದ ಎದುರು ಕುಳಿತು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ಈ ದೃಶ್ಯ ನೋಡಿ ಸುತ್ತ ಮುತ್ತ ನೆರೆದಿದ್ದ ಜನರಿಗೆಲ್ಲ ಶಾಕ್ ಆಯಿತು. ಎನ್ಲೈಟನ್ ಮೆಂಟ್ ಹೊಂದಿದ ಪ್ರಧಾನ ಶಿಷ್ಯ ಹೀಗೆ ಅಳುವುದನ್ನ ನೋಡಿ ಅವರಿಗೆ ಮುಜುಗರ ಆಯಿತು. ನಿಜ ಹೇಳಬೇಕೆಂದರೆ ಈ ಶಿಷ್ಯನಿಂದಾಗಿಯೇ ಓಲ್ಡ್ ಮಾಸ್ಟರ್ ಪ್ರಸಿದ್ಧನಾಗಿದ್ದ. ಸದಾ ಮೌನಿಯಾಗಿ ತನ್ನ ಪಾಡಿಗೆ ತಾನು ಇದ್ದುಬಿಡುತ್ತಿದ್ದ ಓಲ್ಡ್ ಮಾಸ್ಟರ್ ನ ಎಲ್ಲರೂ ಈ ಎನ್ಲೈಟನ್ ಮೆಂಟ್ ಹೊಂದಿದ ಪ್ರಧಾನ ಶಿಷ್ಯನಿಂದಾಗಿಯೇ ಗುರುತಿಸುತ್ತಿದ್ದರು. ಶಿಷ್ಯನ ಮಾಂತ್ರಿಕ ವ್ಯಕ್ತಿತ್ವ, ಶ್ರೇಷ್ಠ ನಡೆ ನುಡಿ, ವಿದ್ವತ್ತು ಗಳಿಂದಾಗಿಯೇ ಓಲ್ಡ್ ಮಾಸ್ಟರ್ ಬಗ್ಗೆ ಜನರಲ್ಲಿ ಕುತೂಹಲ ಬೆಳೆದಿತ್ತು.
ಈಗ ನೋಡಿದರೆ ಎಲ್ಲವೂ ನಶ್ವರ ಎಂದು ಪಾಠ ಮಾಡುತ್ತಿದ್ದ ಇಂಥ ಜ್ಞಾನಿ ಶಿಷ್ಯ, ಗುರುವಿನ ದೇಹದ ಎದುರು ಅಳುತ್ತ ಕುಳಿತಿದ್ದಾನೆ. ಸುತ್ತ ಇದ್ದ ಜನ ಶಿಷ್ಯನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು, “ದಯಮಾಡಿ ಅಳುವುದನ್ನ ನಿಲ್ಲಿಸು. ಬಹುತೇಕ ಜನರಿಗೆ ನೀನು ಜ್ಞಾನೋದಯಕ್ಕೆ ಒಳಗಾದವ ಎನ್ನುವುದು ಗೊತ್ತು, ಅವರಿಗೆ ನಿನ್ನ ವರ್ತನೆಯಿಂದ ಭ್ರಮನಿರಸನವಾಗಬಹುದು, ನಿನ್ನ ಮಾಸ್ಟರ್ ಬಗ್ಗೆ ಕೂಡ ಸಂಶಯ ಉಂಟಾಗಬಹುದು. ನೀವಿಬ್ಬರೂ ನಕಲೀ ಝೆನ್ ಮಾಸ್ಟರ್ ಗಳು ಎಂದು ಜನ ಆಡಿಕೊಳ್ಳಬಹುದು”.
“ನಾನು ಏನು ಮಾಡಲಿ? ಕಣ್ಣೀರು ತಾನೇ ತಾನಾಗಿ ಕಣ್ಣಿಂದ ಹರಿದು ಬರುತ್ತಿವೆ. ಅವನ್ನು ತಡೆಯುವುದಾದರೂ ಹೇಗೆ. ಏನನ್ನೂ ಮಾಡಬೇಡ, ಯಾವುದನ್ನೂ ತಡೆಯ ಬೇಡ ಅಂತ ನನ್ನ ಮಾಸ್ಟರ್ ಹೇಳುತ್ತಿದ್ದ. ನಾನು ಅವನ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದೆ. ನಾನು ನಗು ಬಂದಾಗ ನಗುತ್ತೇನೆ, ಅಳು ಬಂದಾಗ ಅಳುತ್ತೇನೆ. ನಾನು ಯಾವುದಕ್ಕೂ ಪ್ರಯತ್ನ ಮಾಡುವುದಿಲ್ಲ ಹಾಗೆಯೇ ಯಾವುದನ್ನೂ ತಡೆಯಲು ಹೋಗುವುದಿಲ್ಲ. ನನ್ನೊಳಗೆ ಪ್ರಯತ್ನ ಮಾಡುವವ, ಪ್ರಿವೆಂಟ್ ಮಾಡುವವ ಇಬ್ಬರೂ ಇಲ್ಲ”. ಶಿಷ್ಯ ಉತ್ತರಿಸಿದ.
ಇದು ಅತ್ಯಂತ ಸಹಜ ಸ್ಥಿತಿ. ಇಲ್ಲಿ ಯಾವ ಪ್ರಯತ್ನಗಳಿಲ್ಲ, ಯಾವ ತೋರಿಕೆಗಳಿಲ್ಲ, ಯಾವ ಜಡ್ಜ್ ಮೆಂಟ್ ಗಳಿಲ್ಲ, ಯಾವ ಕಟ್ಟು ಪಾಡುಗಳಿಲ್ಲ, ಸಂಪ್ರದಾಯಗಳಿಲ್ಲ, ನಿರೀಕ್ಷೆಗಳಿಲ್ಲ, ಭರವಸೆಗಳಿಲ್ಲ. ಇದೊಂದು ಅತ್ಯಂತ ಅಸಾಧಾರಣವಾದ ಸಾಧಾರಣ ಸ್ಥಿತಿ. ಈ ಶಿಷ್ಯ ಅಳುವುದು, ಬೋಧಿಧರ್ಮ ನಗುವುದು, ಲಿಂಜಿ ಸಿಟ್ಟಿಗೇಳುವುದು, ರಮಣರು ತರಕಾರಿ ಹೆಚ್ಚುತ್ತ ಕುಳಿತುಕೊಳ್ಳುವುದು, ಜೋಕ್ ಪುಸ್ತಕ ಓದುವುದು ಎಲ್ಲವೂ ಸಹಜ ಸ್ಥಿತಿಯ ಭಾಗಗಳೇ. ಈ ಕ್ರಿಯೆಗಳ ಹಿಂದೆ ಯಾವ ಕಾರಣಗಳೂ ಇಲ್ಲ. ನೆನಪುಮಾಡಿಕೊಳ್ಳಿ ಕಾರಣ ಇಲ್ಲದೇ, ಯಾರ ಒತ್ತಾಯ, ನಿರೀಕ್ಷೆಗಳಿಲ್ಲದೇ ನೀವು ಕೆಲ ಸಂಗತಿಗಳನ್ನು ಮಾಡುತ್ತೀರಿ. ಅಂಥ ಸಂಗತಿಗಳು ಮಾತ್ರ ನಿಮ್ಮ ಪರಮ ಆನಂದಕ್ಕೆ ಕಾರಣವಾಗುವಂಥವು.
ಒಬ್ಬ ಯುವ ಸನ್ಯಾಸಿಗೆ ಹೂ, ಗಿಡ ಮರ ಬಳ್ಳಿಗಳ ಬಗ್ಗೆ ತೀವ್ರ ಪ್ರೀತಿ, ಆದ್ದರಿಂದ ಅವನಿಗೆ ಝೆನ್ ದೇವಸ್ಥಾನದ ಗಾರ್ಡನ್ ನ ಜವಾಬ್ದಾರಿ ವಹಿಸಲಾಗಿತ್ತು. ಈ ದೇವಸ್ಥಾನದ ಪಕ್ಕದಲ್ಲಿಯೇ ಇನ್ನೊಂದು ಪುಟ್ಟ ಝೆನ್ ಆಶ್ರಮವಿತ್ತು. ಅಲ್ಲಿ ವಯಸ್ಸಾದ ಝೆನ್ ಮಾಸ್ಟರ್ ಒಬ್ಬರು ವಾಸ ಮಾಡುತ್ತಿದ್ದರು.
ಒಂದು ದಿನ ದೇವಸ್ಥಾನಕ್ಕೆ ವಿಶೇಷ ಅತಿಥಿಗಳು ಬರುವ ಕಾರ್ಯಕ್ರಮವಿದ್ದುದರಿಂದ, ಯುವ ಸನ್ಯಾಸಿ ಗಾರ್ಡನ್ ಬಗ್ಗೆ ವಿಶೇಷ ಕಾಳಜಿ ವಹಿಸಿದ. ಗಾರ್ಡನ್ ನ ಕಸಗುಡಿಸಿ ಸ್ವಚ್ಛ ಮಾಡಿದ. ಬಾಡಿಹೋಗಿದ್ದ ಹೂಗಳನ್ನು ಕಿತ್ತಿದ. ಬಳ್ಳಿಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡಿದ. ಶರತ್ಕಾಲದ ಎಲೆಗಳನ್ನು ನೆಲದ ಮೇಲೆ ನೀಟಾಗಿ ಹಾಸಿದ. ಸನ್ಯಾಸಿಯ ಈ ಕಾಳಜಿಯನ್ನು ಗೋಡೆಯಾಚೆ ನಿಂತಿದ್ದ ವೃದ್ಧ ಝೆನ್ ಮಾಸ್ಟರ್ ಗಮನಿಸುತ್ತಿದ್ದ.
ತನ್ನ ಕೆಲಸ ಮುಗಿದ ಮೇಲೆ ಸನ್ಯಾಸಿ ಒಮ್ಮೆ ಹಿಂತಿರುಗಿ ನೋಡಿ ತೃಪ್ತಿಯಿಂದ ಕಣ್ಣರಳಿಸಿದ.
“ ಎಷ್ಟು ಸುಂದರವಾಗಿ ಕಾಣಸ್ತಾ ಇದೆಯಲ್ಲ ಗಾರ್ಡನ್” ಗೋಡೆಯಾಚೆ ನಿಂತಿದ್ದ ಮಾಸ್ಟರ್ ನ ಅಭಿಪ್ರಾಯ ಕೇಳಿದ. “ ಹೌದು ಬಹಳ ಚಂದ, ಆದರೆ ಏನೋ ಕೊರತೆ ಅನಿಸ್ತಾ ಇದೆ. ಗೋಡೆಯಾಚೆ ನನ್ನ ಎತ್ತಿಕೋ, ನಾನು ಸರಿ ಮಾಡ್ತೀನಿ” ಎಂದ ಮಾಸ್ಟರ್. ಸನ್ಯಾಸಿ, ಮಾಸ್ಟರ್ ನ ಎತ್ತಿ, ಗಾರ್ಡನ್ ಒಳಗೆ ಇಳಿಸಿಕೊಂಡ.
ನಿಧಾನವಾಗಿ ಗಾರ್ಡನ್ ಒಳಗೆ ಬಂದ ಮಾಸ್ಟರ್ ನೇರವಾಗಿ ಗಾರ್ಡನ್ ನ ನಟ್ಟ ನಡುವೆ ಇದ್ದ ಮರದ ಬಳಿ ಬಂದು, ಅದರ ಟೊಂಗೆಯೊಂದನ್ನು ಜಗ್ಗಿ ಹಿಡಿದು ಜೋರಾಗಿ ಅಲ್ಲಾಡಿಸಿದ. ಹಣ್ಣಾದ ಎಲೆಗಳೆಲ್ಲ ನೆಲದ ಮೇಲೆ ಬಿದ್ದವು. “ ಹಾಂ, ಈಗ ಸರಿಯಾಯಿತು” ಎನ್ನುತ್ತ ಮಾಸ್ಟರ್ ಗೋಡೆ ಜಿಗಿದು ತನ್ನ ಆಶ್ರಮಕ್ಕೆ ಹೊರಟುಬಿಟ್ಟ.

