ರೆಸಲ್ಯೂಷನ್ ಮಾಡುವುದೆಂದರೆ… | ಓಶೋ ವ್ಯಾಖ್ಯಾನ

ರೆಸಲ್ಯೂಷನ್ ಗಳು ಜೈಲುಶಿಕ್ಷೆಯಂತೆ. ನಾಳೆಗಾಗಿ ನೀವು ಇವತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದರೆ ನೀವು ನಾಳೆಗಳನ್ನು ನಾಶ ಮಾಡುತ್ತಿದ್ದೀರಿ ಎಂದೇ ಅರ್ಥ… ~ ಓಶೋ ರಜನೀಶ್| ಕನ್ನಡಕ್ಕೆ: ಚಿದಂಬರ ನರೇಂದ್ರ

ತನಗೆ ಗೊತ್ತಿರುವ ಎಲ್ಲದರ ಸುತ್ತ
ಪಂಜರಗಳನ್ನು ಕಟ್ಟುತ್ತ ಹೋದ
ಸಣ್ಣ ಮನುಷ್ಯ.

ಆದರೆ, ಚಂದ್ರ ನೆಲಕ್ಕೆ ಹತ್ತಿರವಿರುವಾಗ
ಬಗ್ಗಿ ನಡೆಯುವ ನಿರ್ದಯಿ ಸಂತ,

ರಾತೋ ರಾತ್ರಿ
ಸುಂದರ ರೌಡಿ ಕೈದಿಗಳ ಕೈಗೆ
ಸೆರೆಮನೆಯ ಕೀಲೀ ಕೈ ಕೊಟ್ಟು
ಹೊರಟು ಹೋದ
ಸುಮ್ಮನೇ ಶಿಳ್ಳೆ ಹೊಡೆಯುತ್ತಾ.

ಹಾಫಿಜ್

********************

“ಭವಿಷ್ಯದ ಕುರಿತಾದ ಯಾವ ರೆಸಲ್ಯೂಷನ್ ಗಳನ್ನೂ ತೆಗೆದುಕೊಳ್ಳುವುದಿಲ್ಲವೆಂದು ನಾನು ನಿರ್ಧರಿಸಿದ್ದೇನೆ, ಏಕೆಂದರೆ ರೆಸಲ್ಯೂಷನ್ ಗಳ ಬೆನ್ನು ಹತ್ತುವುದೆಂದರೆ ನಮ್ಮ ಭವಿಷ್ಯವನ್ನು ನಾವೇ ನಿರ್ಬಂಧಿಸುವುದು”.

ಇದು ಮಾತ್ರ ನಮ್ಮ ಹೊಸವರ್ಷದ ರೆಸಲ್ಯೂಷನ್ ಆಗುವುದಕ್ಕೆ ಯೋಗ್ಯ. ಬೇರೆ ಎಲ್ಲ ರೆಸಲ್ಯೂಷನ್ ಗಳು ಜೈಲುಶಿಕ್ಷೆಯಂತೆ. ನಾಳೆಗಾಗಿ ನೀವು ಇವತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದರೆ ನೀವು ನಾಳೆಗಳನ್ನು ನಾಶ ಮಾಡುತ್ತಿದ್ದೀರಿ ಎಂದೇ ಅರ್ಥ.

ನಾಳೆಗೂ ತನ್ನದೇ ಆದ ಒಂದು ಅಸ್ತಿತ್ವವನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ. ಅದು ತನ್ನದೇ ಆದ ವೈಭವದೊಂದಿಗೆ ಬರಲಿ, ತನ್ನದೇ ಆದ ಉಡುಗೊರೆಗಳನ್ನು ತರಲಿ.

ರೆಸಲ್ಯೂಷನ್ ಎಂದರೆ ನೀವು ಕೇವಲ ಯಾವುದೋ ಒಂದಕ್ಕೆ ಅನುಮತಿ ನೀಡುತ್ತಿದ್ದೀರಿ, ಬಾಕಿ ಎಲ್ಲವನ್ನೂ ನಿರ್ಬಂಧಿಸುತ್ತಿದ್ದೀರಿ. ರೆಸಲ್ಯೂಷನ್ ಎಂದರೆ ನೀವು ಸೂರ್ಯನಿಗೆ ಪೂರ್ವದ ಬದಲಿಗೆ ಪಶ್ಚಿಮದಲ್ಲಿ ಉದಯಿಸಲು ಹೇಳುತ್ತಿದ್ದೀರಿ. ಅಕಸ್ಮಾತ್ ಅವನೇನಾದರೂ ಪೂರ್ವದಲ್ಲಿ ಉದಯಿಸಿಬಿಟ್ಟರೆ ಬಾಗಿಲು ತೆರೆಯುವುದಿಲ್ಲವೆಂದು ಕಟ್ಟಪ್ಟಣೆ ಮಾಡುತ್ತಿದ್ದೀರಿ, ಪಶ್ಚಿಮದ ಬಾಗಿಲನ್ನು ತೆರೆದುಕೊಂಡು ಕುಳಿತಿದ್ದೀರಿ.

ರೆಸಲ್ಯೂಷನ್ ಎಂದರೆ ಏನು? ರೆಸಲ್ಯೂಷನ್ ಒಂದು ಸಂಘರ್ಷ, ಒಂದು ಅಹಂ. ರೆಸಲ್ಯೂಷನ್ ಏನು ಹೇಳುತ್ತದೆಯೆಂದರೆ “ನಾನು ಸಹಜವಾಗಿ ಬದುಕುವುದಿಲ್ಲ”. ಮತ್ತು ಸಹಜವಾಗಿ ಬದುಕಲು ನೀವು ನಿರ್ಬಂಧಗಳನ್ನು ಹಾಕಿಕೊಳುತ್ತಿದ್ದೀರಿ ಎಂದರೆ ನೀವು ಬದುಕಿನ ನಿರಾಕರಣೆಯನ್ನು ಪ್ಲಾನ್ ಮಾಡುತ್ತಿದ್ದೀರಿ. ನೀವು ಕೇವಲ ತೋರಿಕೆಯ ಬದುಕನ್ನು ಬದುಕುತ್ತಿದ್ದೀರಿ.

ಆದ್ದರಿಂದ ಈ ಹೊಸವರ್ಷಕ್ಕೆ ಕೇವಲ ಒಂದು ಒಂದು ರೆಸಲ್ಯೂಷನ್ ಮಾಡಿ : “ಈ ವರ್ಷ ನಾನು ಯಾವ ರೆಸಲ್ಯೂಷನ್ ಕೂಡ ಮಾಡುವುದಿಲ್ಲ”. ಎಲ್ಲ ರೆಸಲ್ಯೂಷನ್ ಗಳನ್ನ ಡ್ರಾಪ್ ಮಾಡಿ. ಬದುಕನ್ನ ಸಜವಾಗಿರಲು, ಸ್ವಾಭಾವಿಕವಾಗಿರಲು ಬಿಡಿ. ಇರುವ ಒಂದೇ ಗೋಲ್ಡನ್ ರೂಲ್ ಎಂದರೆ, “ಯಾವ ಗೋಲ್ಡನ್ ರೂಲ್ ಗಳೂ ಇಲ್ಲ” ಎನ್ನುವುದು.

ಒಮ್ಮೆ, ಹಣ್ಣು ಹಣ್ಣು ಮುದುಕ, 99 ವರ್ಷ ವಯಸ್ಸಿನ ವಯೋವೃದ್ಧ ನಸ್ರುದ್ದೀನ್ ನನ್ನು ಪತ್ರಿಕೆಯ ಯುವ ವರದಿಗಾರನೊಬ್ಬ ಸಂದರ್ಶನ ಮಾಡಿ, ನಸ್ರುದ್ದೀನ್ ನ ಬದುಕು, ಸಾಧನೆಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡ. ಸಂದರ್ಶನ ಮುಗಿಸಿ ಬಿಳ್ಕೊಡುವಾಗ ವರದಿಗಾರ, ನಸ್ರುದ್ದೀನ್ ಗೆ ಶುಭಾಶಯ ಹೇಳಿದ.

“ ದೇವರು ಮನಸ್ಸು ಮಾಡಿದರೆ ಮುಂದಿನ ವರ್ಷ ನಿನಗೆ ನೂರು ತುಂಬುತ್ತದೆ ಮತ್ತೆ ನಿನ್ನ ಸಂದರ್ಶನ ಮಾಡಲು ಬರುತ್ತೇನೆ “

“ ದೇವರು ದೊಡ್ಡವನಿದ್ದಾನೆ ಯೋಚಿಸ ಬೇಡ, ಖಂಡಿತ ನಿನಗೇನೂ ಆಗುವುದಿಲ್ಲ. ಮುಂದಿನ ವರ್ಷ ನನ್ನ ನೂರನೇ ಹುಟ್ಟು ಹಬ್ಬಕ್ಕೆ ನೀನು ಬಂದೇ ಬರುತ್ತೀಯ “

ನಸ್ರುದ್ದೀನ್ ನಗುತ್ತ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.