ಪಠಣದ ಮಾಧುರ್ಯ : ಓಶೋ ವ್ಯಾಖ್ಯಾನ

ಮಂತ್ರ ಎಂದರೆ ಅದು ಒಂದು ಸಾಂದ್ರಗೊಳಿಸಲಾಗಿರುವ ಅವಶ್ಯಕ ಪದ್ಯ. ಕೇವಲ ಒಮ್ಮೆ ಮಾತ್ರ ಓದುವುದರಿಂದ ಅದು ನಿಮಗೆ ದಕ್ಕದೇ ಹೋಗಬಹುದು. ಆ ಪದ್ಯ ಬೌದ್ಧಿಕವಾಗಿ ನಿಮಗೆ ಅರ್ಥವಾಗುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆ ಪದ್ಯದ ಮೇಲ್ಪದರದ ಅರ್ಥ ಸ್ಪಷವಾಗಿದೆ, ಆದರೆ ಸ್ಪಷ್ಟ ಅರ್ಥ ಆ ಪದ್ಯದ ನಿಜ ಅರ್ಥ ಅಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಕವಿತೆ
ಶುರುವಾಗೋದೇ ಹೀಗೆ
ಒಂದು ಮುತ್ತಿನಿಂದ ಇನ್ನೊಂದಕ್ಕೆ
ಇನ್ನೊಂದರಿಂದ ಮತ್ತೊಂದಕ್ಕೆ.

ಇದನ್ನ ಅನುವಾದ ಮಾಡೋದು ಕಷ್ಟ.

ಎಲ್ಲಿಂದಲೋ ಅವತರಿಸಿದ
ಸಾಲಿನ ಕೆಲ ಪದಗಳು
ಸಾಲು ಮುಗಿಯುವದರೊಳಗಾಗೇ
ಅಲ್ಲಿ ಇನ್ನೊಂದು
ಅವತಾರವನ್ನು ಹುಟ್ಟಿಸಿಬಿಟ್ಟಿರುತ್ತವೆ..

ಎಷ್ಟು ಬೇಗ !

ಅದೇನೋ ಹುಟ್ಟಿಸಲಿಕ್ಕೆ
ಇಷ್ಟು ಸಮಯ
ಬೇಕೇ ಬೇಕು ಅಂತಾರಲ್ಲ
ಅದೇನಾಯಿತು?

ಹೌದು,
ಕೆಲವೊಮ್ಮೆ ಕವಿತೆ
ಮುಗಿಯುವ ಮುನ್ನ
ಒಂದು ಕೊರಗನ್ನು
ಎದೆಯಲ್ಲಿ ಉಳಿಸಿಬಿಡುತ್ತದೆ.
ಆಗಲೇ ನಾನು ಹುಡುಕುತ್ತೇನೆ
ಕೆಸರು ಮೆತ್ತಿಕೊಂಡ
ಆ ಒಂದು ಪದವನ್ನ,
ಸ್ವಲ್ಪ ಅದರ ವಿಚಾರಣೆ ಆಗಬೇಕು
ಕೂಲಂಕುಷವಾಗಿ.

– ಹಾಫಿಜ್

*********************

ವಿಲಿಯಂ ಸ್ಯಾಮ್ಯುಯೆಲ್ ಬರೆಯುತ್ತಾರೆ…..

ಒಮ್ಮೆ ಚೈನಾದಲ್ಲಿ ನನಗೆ ಒಂದು ಸರಳ ಪದ್ಯವನ್ನು ಓದಲು ಕೊಟ್ಟು ಅದನ್ನು ವ್ಯಾಖ್ಯಾನ ಮಾಡಲು ಹೇಳಲಾಯಿತು. ನಾನು ಆ ಕೆಲಸವನ್ನು ಕೂಡಲೇ ಮಾಡಲು ತಯಾರಿದ್ದೆನಾದರೂ, ನನಗೆ ಆ ಪದ್ಯದ ಬಗ್ಗೆ ಯೋಚಿಸಲು 28 ದಿನಗಳ ಕಾಲಾವಕಾಶ ಇದೆ ಎಂದು ಸೂಚನೆ ಕೊಡಲಾಯಿತು. “ಅಷ್ಟು ದಿನ ಯಾಕೆ?” ನಾನು ಪಾಶ್ಚಾತ್ಯನೊಬ್ಬನ ಸಹಜ ಕುತೂಹಲದಲ್ಲಿ ಪ್ರಶ್ನೆ ಮಾಡಿದೆ.

“ಹನ್ನೆರಡು ಬಾರಿ ಓದುವುದೆಂದರೆ ಒಂದು ಬಾರಿ ಓದಿದಂತೆ. ಓದಿ, ಮತ್ತೆ ಓದಿ, ಮತ್ತೆ ಮತ್ತೆ ಓದಿ” ಎಂದು ನನಗೆ ಉತ್ತರಿಸಲಾಯಿತು.

ನಾನು ಅವರು ಹೇಳಿದ ಹಾಗೆ ಮತ್ತೆ ಮತ್ತೆ ಓದಲು ಶುರು ಮಾಡಿದೆ, ಹನ್ನೆರಡು ಬಾರಿ ಓದಿದೆ. ಆಗ ಆ ಪದ್ಯದ ಮಾಧುರ್ಯದ ಏನೋ ಒಂದು ಎಳೆ ನನಗೆ ಕೇಳಿಸಲು ಶುರುವಾಯಿತು. ಮೊದಲ ಓದಿನಲ್ಲಿ ಇರದ ಆ ಮೆಲೊಡಿ ಹನ್ನೆರಡನೇ ಬಾರಿ ಓದಿದಾಗ ಕೇಳಿಸಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಆಮೇಲೆ ಮತ್ತೆ ಆ ಪದ್ಯವನ್ನು ನಾನು ಹಲವಾರು ಬಾರಿ ಓದಿದೆ. ಈಗ ನನಗೆ ಗೊತ್ತಾಗಿದೆ ಜನ ಬೈಬಲ್ ನ ಸಾಲುಗಳನ್ನಾಗಲಿ ಅಥವಾ ಬೇರೆ ಇನ್ನಾವುದೇ ಪವಿತ್ರ ಗ್ರಂಥದ ಸಾಲುಗಳನ್ನಾಗಲಿ ಯಾಕೆ ಮತ್ತೆ ಓದುತ್ತಾರೆ ಎನ್ನುವುದು. ಮತ್ತೆ ಮತ್ತೆ ಓದುತ್ತ ಹೋದಂತೆ ಆ ಸಾಲಿನ ಹೊಸ ಮಹತ್ವ ಥಟ್ಟನೇ ಹೊಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಂತ್ರಗಳನ್ನು ಮತ್ತೆ ಮತ್ತೆ ಪಠಿಸುವುದರಲ್ಲಿ ಇರುವ ರಹಸ್ಯವೂ ಇದೇ. ಮಂತ್ರ ಎಂದರೆ ಅದು ಒಂದು ಸಾಂದ್ರಗೊಳಿಸಲಾಗಿರುವ ಅವಶ್ಯಕ ಪದ್ಯ. ಕೇವಲ ಒಮ್ಮೆ ಮಾತ್ರ ಓದುವುದರಿಂದ ಅದು ನಿಮಗೆ ದಕ್ಕದೇ ಹೋಗಬಹುದು. ಆ ಪದ್ಯ ಬೌದ್ಧಿಕವಾಗಿ ನಿಮಗೆ ಅರ್ಥವಾಗುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆ ಪದ್ಯದ ಮೇಲ್ಪದರದ ಅರ್ಥ ಸ್ಪಷವಾಗಿದೆ, ಆದರೆ ಸ್ಪಷ್ಟ ಅರ್ಥ ಆ ಪದ್ಯದ ನಿಜ ಅರ್ಥ ಅಲ್ಲ. ಭಾಷಾಪ್ರೌಢಿಮೆ ಇದ್ದಾಗ ಹೊರಗಿನ ಅರ್ಥ ಮೊದಲ ಬಾರಿ ಓದಿದಾಗಲೇ ಗೊತ್ತಾಗಿಬಿಡುತ್ತದೆ ಆದರೆ ಅಡಗಿಕೊಂಡಿರುವ ಅರ್ಥಕ್ಕೆ ನೀವು ಕಾಯಬೇಕಾಗುತ್ತದೆ. ಮತ್ತೆ ಮತ್ತೆ ನೀವು ಆ ಪದ್ಯದೊಡನೆ ಆಳವಾದ ಪ್ರೀತಿಯಲ್ಲಿ ಬಿದ್ದಾಗ ಮಾತ್ರ ಪದ್ಯದ ರಹಸ್ಯಗಳು ಅನಾವರಣಗೊಳ್ಳಲು ಆರಂಭಿಸುತ್ತವೆ. ಕೆಲವೊಮ್ಮೆ ನಿಮ್ಮ ಸುಪ್ತ ಪ್ರಜ್ಞೆಯೊಳಗಿಂದಲೇ ಪದ್ಯದ ರಹಸ್ಯ ಹೊರಹೊಮ್ಮುತ್ತದೆ. ಪದ್ಯದ ಮಾಧುರ್ಯ ನಿಮ್ಮ ಅನುಭವಕ್ಕೆ ಬರಲು ಶುರುವಾಗುತ್ತದೆ. ಪದ್ಯದ ನಿಜವಾದ ಅರ್ಥವೇ ಈ ಮಾಧುರ್ಯ, ನೀವು ಪದ್ಯದ ಸಾಲುಗಳನ್ನ ಮೊದಲ ಓದಿನಲ್ಲಿ ಭಂಜಿಸಿ ಕಂಡುಕೊಂಡ ಅರ್ಥ ಬರಿ ತೋರಿಕೆಯದ್ದು. ಪದ್ಯದೊಳಗಿನ ಮಾಧುರ್ಯವನ್ನು ಕೇಳಿಸಿಕೊಳ್ಳುವುದು ಒಂದು ಅದೃಷ್ಟದ ವಿಷಯ. ಕೆಲವರಿಗೆ ಸಾಧ್ಯವಾದದ್ದು ಬೇರೆ ಕೆಲವರಿಗೆ ಸಾಧ್ಯವಾಗದೇ ಹೋಗಬಹುದು.

ಆದ್ದರಿಂದಲೇ ನಾವು ಪೌರ್ವಾತ್ಯರು ಧಮ್ಮಪದವನ್ನೇ ಆಗಲಿ, ಭಗವದ್ ಗೀತೆಯನ್ನೇ ಆಗಲಿ ಮಂತ್ರದಂತೆ ಪಠಿಸುತ್ತೇವೆ. ಪ್ರತಿದಿನ ಮುಂಜಾನೆ ಮಧ್ಯಾಹ್ನ, ಸಂಜೆ, ರಾತ್ರಿ ಈ ಸಾಲುಗಳನ್ನ ಮತ್ತೆ ಮತ್ತೆ ಹೇಳುತ್ತಲೇ ಇರುತ್ತೇವೆ. ಎಷ್ಟು ಬಾರಿ ಪಠಿಸುತ್ತಿದ್ದೇವೆ ಎನ್ನುವುದರ ಲೆಕ್ಕವನ್ನೂ ನಾವು ಇಡುವುದಿಲ್ಲ. ಲೆಕ್ಕ ಇಟ್ಟರೆ ಪ್ರಯೋಜನವಾದರೂ ಏನು? ಪ್ರತೀ ಪಠಣದೊಂದಿಗೆ ಏನೋ ಒಂದು ನಮ್ಮೊಳಗೆ ಪ್ರವೇಶ ಮಾಡುತ್ತದೆ, ನಮ್ಮೊಳಗೆ groove ಒಂದನ್ನು ಸೃಷ್ಟಿ ಮಾಡುತ್ತ ಹೋಗುತ್ತದೆ. ಒಮ್ಮೆ ಯಾವಾಗಲೋ ಥಟ್ಟನೇ ಆ groove ಪದ್ಯದ ತಿರುಳನ್ನು ಒಡೆದು ಆ ಪದ್ಯದೊಳಗಿನ ಮಾಧುರ್ಯವನ್ನು ಹೊರಗೆ ತಂದು ನಮಗೆ ಕೇಳಿಸುವಂತೆ ಮಾಡುತ್ತದೆ. ಇದು ನಿಜವಾದ ಪದ್ಯದ ಅರ್ಥ. ಇದನ್ನ ಅರ್ಥಮಾಡಿಕೊಳ್ಳಲಿಕ್ಕಾಗದು ಕೇವಲ ಕೇಳಿಸಿಕೊಳ್ಳಬಹುದು, ಕೇವಲ ಅನುಭವಿಸಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.