“ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ ಗಳಿಂದ ಮುಕ್ತರಾಗುವುದು ಮನುಷ್ಯರಿಗೆ ಬಹಳ ಕಷ್ಟ ಆದ್ದರಿಂದ ಇವನ್ನೆಲ್ಲ ದೇವರೆಡೆಗೆ ಕೊಂಡೊಯ್ಯಬೇಕು” ಅನ್ನುತ್ತಾರೆ ರಾಮಕೃಷ್ಣ ಪರಮಹಂಸರು. | ಚಿದಂಬರ ನರೇಂದ್ರ
ಒಂದು ಸಣ್ಣ ಮನೆಯಲ್ಲಿ
ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.
ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ ಹಾಡು, ಕುಣಿತ
ಮತ್ತು ಕುಡಿತ.
ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.
“ಈ ಮೋಜು
ಮುಂದುವರೆಸಿದರೆ
ಮನೆ ಬಿಟ್ಟು ಹೋಗುತ್ತೇವೆ ನೋಡು.”
– ಹಾಫಿಜ್
*****************
ಒಂದು ದಿನ ನಟನೊಬ್ಬ ರಾಮಕೃಷ್ಣ ಪರಮಹಂಸರನ್ನ ಪ್ರಶ್ನೆ ಮಾಡಿದ.
“ಕಾಮ ಮತ್ತು ಬಯಕೆಯ ನಡುವಿನ ವ್ಯತ್ಯಾಸವೆನು?”
ಪರಮಹಂಸರು ಉತ್ತರಿಸಿದರು…….
ಕಾಮ ಮರದ ಬೇರು ಇದ್ದಹಾಗೆ ಮತ್ತು ಬಯಕೆಗಳು ಮರದ ರೆಂಬೆ ಕೊಂಬೆಗಳು.
ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ ಗಳಿಂದ ಮುಕ್ತರಾಗುವುದು ಮನುಷ್ಯರಿಗೆ ಬಹಳ ಕಷ್ಟ ಆದ್ದರಿಂದ ಇವನ್ನೆಲ್ಲ ದೇವರೆಡೆಗೆ ಕೊಂಡೊಯ್ಯಬೇಕು. ನಿಮ್ಮನ್ನು ಬಯಕೆಗಳು ಮತ್ತು ಲೋಭ ಕಾಡುತ್ತಿವೆಯೆಂದರೆ, ನೀವು ದೇವರ ಪ್ರೀತಿಯನ್ನು ನಿಮ್ಮ ಬಯಕೆಯನ್ನಾಗಿಸಿಕೊಳ್ಳಬೇಕು, ಮತ್ತು ದೇವರ ಪ್ರೀತಿಯನ್ನು ಶತಾಯುಗತಾಯ ಪಡೆಯಲು ನಿಮ್ಮ ಲೋಭವನ್ನು ಮೀಸಲಾಗಿಡಬೇಕು. ನೀವು ಅಹಂಕಾರಿಗಳಾಗಿದ್ದರೆ, ನಿಮ್ಮ ಅಹಂಕಾರ ನಾನು ದೇವರ ಸೇವಕ, ದೇವರ ಮಗ ಎನ್ನುವುದರ ಕುರಿತಾಗಿರಲಿ.
“ಮನುಷ್ಯ ತನ್ನನ್ನು ತಾನು ಪೂರ್ತಿಯಾಗಿ ಅರ್ಪಿಸಿಕೊಳ್ಳುವವರೆಗೆ ಭಗವಂತನನ್ನು ಕಾಣಲಾರ. ಮನುಷ್ಯನ ಮನಸ್ಸು ಹೆಣ್ಣು/ಗಂಡು, ಮಕ್ಕಳು, ಭೂಮಿ, ಬಂಗಾರ ಗಳಲ್ಲಿಯೇ ಮುಳುಗಿಹೋಗಿದೆ. ನಿನ್ನ ಉದಾಹರಣೆಯನ್ನೇ ತೊಗೆದುಕೋ, ನಿನಗೆ ಹಂಡತಿ ಮಕ್ಕಳಿದ್ದಾರೆ, ನೀನು ಥಿಯೇಟರ್ ನ ತುಂಬ ಪ್ರೀತಿಸುತ್ತಿ. ಈ ಎಲ್ಲ ವಿವಿಧ ವಹಿವಾಟುಗಳ ಕಾರಣವಾಗಿ ನಿನಗೆ ನಿನ್ನ ಮನಸ್ಸನ್ನ ದೇವರಲ್ಲಿ ಒಂದಾಗಿಸಲು ಸಾಧ್ಯವಾಗುತ್ತಿಲ್ಲ”.
“ಎಲ್ಲಿಯವರೆಗೆ ನೀನು ಭೋಗದಲ್ಲಿ ಮುಳುಗಿರುತ್ತೀಯೋ ಅಲ್ಲಿಯವರೆಗೆ ನೀನು ಯೋಗದಿಂದ ದೂರವಾಗಿರುತ್ತೀ. ಮುಂದುವರೆದು ಭೋಗ ಸಂಕಟಗಳಿಗೆ ಕಾರಣವಾಗುತ್ತದೆ. ಭಾಗವತದಲ್ಲಿ ಹೇಳಿದ ಹಾಗೆ ಅವಧೂತನೊಬ್ಬ ಗರುಡ ಪಕ್ಷಿಯನ್ನ ತನ್ನ ಇಪ್ಪತ್ನಾಲ್ಕು ಗುರುಗಳಲ್ಲಿ ಒಂದು ಎಂದು ಸ್ವೀಕರಿಸಿದನಂತೆ. ಆ ಗರುಡ ಪಕ್ಷಿ ತನ್ನ ಕೊಕ್ಕಿನಲ್ಲಿ ಒಂದು ಮೀನು ಹಿಡಿದುಕೊಂಡಿತ್ತಂತೆ. ಆ ಮೀನು, ಹಕ್ಕಿಯ ಕೊಕ್ಕಿನಲ್ಲಿ ಇರುವರೆಗೂ ಹಕ್ಕಿಯ ಸುತ್ತ ಸಾವಿರಾರು ಕಾಗೆಗಳು ಕಾವ್ ಕಾವ್ ಎನ್ನುತ್ತ ಹಾರಾಡುತ್ತಿದ್ದವು. ಗರುಡ ಹೋದಲ್ಲೆಲ್ಲ ಕಾಗೆಗಳು ಹಿಂಬಾಲಿಸುತ್ತಿದ್ದವು. ಗರುಡ ಹಕ್ಕಿಯ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿದ್ದ ಕ್ಷಣದಲ್ಲಿಯೇ ಎಲ್ಲ ಕಾಗೆಗಳು, ಗರುಡ ಪಕ್ಷಿಯನ್ನ ಬಿಟ್ಟು ಮೀನು ಬಿದ್ದ ಕಡೆ ಹಾರಿ ಹೋದವು.”
“ಮೀನು ಭೋಗದ ಒಂದು ಸಂಗತಿ. ಕಾಗೆಗಳು ಚಿಂತೆ ಮತ್ತು ಆತಂಕಗಳು ಇದ್ದ ಹಾಗೆ. ಎಲ್ಲಿ ಭೋಗವಿದೆಯೋ ಅಲ್ಲಿ ಚಿಂತೆ ಮತ್ತು ಆತಂಕಗಳಿರುವುದು ಸರ್ವೇ ಸಾಮಾನ್ಯ. ನಿಮಗೆ ಶಾಂತಿ ಸಮಾಧಾನ ಬೇಕಾದರೆ ನೀವು ಭೋಗ ಜೀವನದಿಂದ ಹೊರತಾಗಲೇ ಬೇಕು.
ಒಮ್ಮೆ ಒಬ್ಬ ಸಾಧಕ, ಸೂಫಿ ಅನುಭಾವಿ ಶೇಖ್ ಫರೀದ್ ನ ಬಳಿ ಬಂದು ಕೇಳಿಕೊಂಡ,
“ ನನ್ನನ್ನು ಕಟ್ಟಿಹಾಕಿರುವ ಬಂಧನಗಳಿಂದ, ಸಿದ್ಧಾಂತಗಳಿಂದ, ಪೂರ್ವಾಗ್ರಹಗಳಿಂದ ಬಿಡಿಸಿಕೊಳ್ಳುವುದು ಹೇಗೆ? “
ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಫರೀದ್ ಓಡಿ ಹೋಗಿ ಹತ್ತಿರದ ಕಂಬವೊಂದನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂಗತೊಡಗಿದ,
“ ಯಾರಾದರೂ ನನ್ನನ್ನ ಈ ಕಂಬದಿಂದ ಬಿಡಿಸಿ “
ಫರೀದ್ ನ ಕೂಗಾಟ ಕೇಳುತ್ತಿದ್ದಂತೆಯೇ ಸುತ್ತ ಮುತ್ತಲಿನ ಜನ ಅಲ್ಲಿ ಬಂದು ಸೇರಿದರು. ಅವರಲ್ಲಿ ಹಿರಿಯ ಮನುಷ್ಯನೊಬ್ಬ ಫರೀದ್ ನ ಗದರಿಸಿದ.
“ ಫರೀದ್, ನಿನಗೆ ಹುಚ್ಚು ಹಿಡಿದಿದೆಯಾ? ಕಂಬ ಹಿಡಿದುಕೊಂಡಿರೋದು ನೀನು, ನಿನ್ನ ಕಂಬ ಹಿಡಿದುಕೊಂಡಿಲ್ಲ, ಸುಮ್ಮನೇ ತರಲೆ ಮಾಡಬೇಡ”
“ ತರಲೆ ಮಾಡುತ್ತಿರೋದು ನಾನಲ್ಲ, ಆ ಮನುಷ್ಯ” ಫರೀದ್ ಪ್ರಶ್ನೆ ಕೇಳಿದ ಸಾಧಕನತ್ತ ಕೈ ಚಾಚಿ ತೋರಿಸಿದ.
ಫರೀದ್ ನ ಮಾತು ಕೇಳುತ್ತಿದ್ದಂತೆಯೇ ಸಾಧಕನಿಗೆ ನಾಚಿಕೆಯಾಯಿತು. ಆತ ಓಡಿ ಬಂದು ಫರೀದ್ ನ ಪಾದ ಮುಟ್ಟಿ ಕ್ಷಮೆ ಕೇಳಿದ.

