ಉಸಿರೆಂದರೆ ಬರೀ ಉಸಿರಲ್ಲ…

ನೀವು ಸುಮ್ಮನೇ ಉಸಿರಾಡುತ್ತಿರುವಿರಾದರೆ, ನಿಮಗೆ ಉಸಿರಿನೊಳಗಿನ ರಹಸ್ಯಗಳು ಎಂದೂ ಗೊತ್ತಾಗುವುದಿಲ್ಲ. ಮತ್ತು ನಿಮ್ಮ ಬಗೆಗಿನ ವಿಸ್ಮೃತಿ ನಿಮ್ಮನ್ನು ಆವರಿಸಿಕೊಂಡಿರುತ್ತದೆ. ಆಗ ನೀವು ಎಲ್ಲಕ್ಕೂ ದೇಹವೇ ಮೂಲ ಎಂದು ತಿಳಿದುಕೊಂಡಿರುತ್ತೀರಿ. ದೇಹದ ಹೊರತಾಗಿರುವ ಯಾವುದು ನಿಮ್ಮ ತಿಳುವಳಿಕೆಯ ಭಾಗವಾಗಿರುವುದಿಲ್ಲ… ~ ಓಶೋ ರಜನೀಶ್| ಚಿದಂಬರ ನರೇಂದ್ರ

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ
ಡಂಬವ ತೊಲಗಿಸಿ
ಡಿಂಭದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ||ಪಲ್ಲವಿ||

ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕೆ ಸೇದುವ
ಪಂಥದಾಳು ನೀನೇ ಕಂತುಜನಕನಲ್ಲಿ ಮಂತ್ರಿಯೆನಿಸಿ
ಸರ್ವಾಂತರ್ಯಾಮಿಯಾಗಿ ನಿಂತು ನಾನಾಬಗೆ ತಂತು ನಡೆಸುವ
ಹೊಂತಕಾರಿ ಗುಣವಂತ ಬಲಾಢ್ಯ ||೧||

ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸ ಮಂತರ
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ ತಪ್ಪಿಸಿ ಭವವ ಸಮೀಪದಿ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸು
ಕಪ್ಪುವರ್ಣನ ಕೂಡೊಪ್ಪಿಸಿ ಪಾಲಿಸು ||೨||

ಹತ್ತೇಳು ಎರಡಾಯತ ನಾಡಿಯೊಳು ಸುತ್ತಿಸುತ್ತುವ ಮಾರುತ
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದ ಎತ್ತ ಪೋಗಲೀಸದೆ
ಠಕ್ಕು ಮರುಳ, ಜೀವೋತ್ತಮನೆ ಸಮಚಿತ್ತ ಎನಗೆ ಕೊಡುತ್ತ ಉದ್ಧರಿಸೊ ||೩||

ಯೋಗಾಸನದೊಳಿಪ್ಪ ಯಂತ್ರೋದ್ಧಾರಕ ಭಾಗವತ ಜನರಪ್ಪ
ಯೋಗಿಗಳಿಗೀಶ ವ್ಯಾಸ ಯೋಗಿಗೊಲಿದ ನ್ಯಾಸ
ಶ್ರೀ ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸ
ಶ್ರೀ ಗುರು ವಿಜಯವಿಠಲನ ಪಾದಕೆ ಬಾಗಿದ ಭವದೂರ ಜಾಗರ ಮಾರುತಿ ||೪||

~ ವಿಜಯದಾಸರು


ಓಶೋ ಹೇಳುವಂತೆ;

ಉಸಿರಾಟದಲ್ಲಿ ಎರಡು ಭಾಗಗಳಿವೆ. ಮೊದಲನೇಯದು ಉಸಿರಾಟದ ಶರೀರ, ಅದು ಆಕ್ಸಿಜನ್, ನೈಟ್ರೋಜನ್ ಮುಂತಾದವುಗಳಿಂದ ಒಳಗೊಂಡಿರುವುದು. ಮತ್ತು ಎರಡನೇಯದು ಉಸಿರಾಟದ ಶಾರೀರ, ಸ್ಪಿರಿಟ್ , ಯಾವುದು ಜೀವಶಕ್ತಿ (vitality), ಸ್ವತಃ ದೇವರನ್ನು ಒಳಗೊಂಡಿದೆಯೋ ಅದು.

ಉಸಿರಾಟದ ಪ್ರಕ್ರಿಯೆ ನಿಮ್ಮ ದೇಹದ ಹಾಗೆ – ಅಲ್ಲಿ ನೀವು ಇದ್ದೀರಿ ಮತ್ತು ನಿಮ್ಮ ದೇಹದ ಆಳದಲ್ಲಿ ಅಡಗಿಕೊಂಡಿರುವ ಪ್ರಜ್ಞೆಯ ಹಾಗೆ. ನಿಮ್ಮ ದೇಹ ಒಂದು ಪ್ರೊಟೆಕ್ಷನ್, ಒಂದು ವಾಹಕ. ದೇಹ, ಕಣ್ಣಿಗೆ ಕಾಣಿಸದಿರುವ ನಿಮ್ಮನ್ನು ಸಾಗಿಸುತ್ತಿರುವ ಕಾಣುವ ವಾಹಕ. ಮತ್ತು ಪ್ರತಿ ಉಸಿರು ಕೂಡ ಥೇಟ್ ಇದೇ ಥರ. ಉಸಿರು ಕೇವಲ ಹೊರಗಿನ ಪದರ, ಅದರೊಳಗೆ ಅಡಗಿಕೊಂಡಿರುವುದು ಜೀವಶಕ್ತಿ.

ಉಸಿರಾಟ ಎಂದರೆ ಗಾಳಿಯನ್ನು ಒಳಗೆ ಎಳೆದುಕೊಳ್ಳುವುದು ಮತ್ತು ಹೊರಗೆ ಹಾಕುವುದು ಎಂದು ತಿಳಿದುಕೊಂಡು ನೀವು ಸುಮ್ಮನೇ ಉಸಿರಾಡುತ್ತಿರುವಿರಾದರೆ, ನಿಮಗೆ ಉಸಿರಿನೊಳಗಿನ ರಹಸ್ಯಗಳು ಎಂದೂ ಗೊತ್ತಾಗುವುದಿಲ್ಲ. ಮತ್ತು ನಿಮ್ಮ ಬಗೆಗಿನ ವಿಸ್ಮೃತಿ ನಿಮ್ಮನ್ನು ಆವರಿಸಿಕೊಂಡಿರುತ್ತದೆ. ಆಗ ನೀವು ಎಲ್ಲಕ್ಕೂ ದೇಹವೇ ಮೂಲ ಎಂದು ತಿಳಿದುಕೊಂಡಿರುತ್ತೀರಿ. ದೇಹದ ಹೊರತಾಗಿರುವ ಯಾವುದು ನಿಮ್ಮ ತಿಳುವಳಿಕೆಯ ಭಾಗವಾಗಿರುವುದಿಲ್ಲ. ಯಾವುದು ದೇಹದ ಒಳಗಿದ್ದೂ ದೇಹದಿಂದ ಹೊರತಾಗಿದೆಯೋ ಅದು ನಿಮ್ಮ ಅದೃಷ್ಟಕ್ಕೆ ದಕ್ಕುವುದಿಲ್ಲ. ಯಾವುದು ದೇಹದ ಒಳಗೆಯೇ ಇದೆಯೋ ಯಾವುದನ್ನು ತಡೆಯುವುದು ದೇಹಕ್ಕೆ ಸಾಧ್ಯವಿಲ್ಲವೋ , ಯಾವುದು ದೇಹಕ್ಕೆ ಸೀಮಿತವಲ್ಲವೋ, ಯಾವುದು ದೇಹವನ್ನು ಮೀರಿದ್ದೋ ಅದು ನಿಮ್ಮ ಗ್ರಹಿಕೆಯ ಭಾಗವಾಗಿರುವುದಿಲ್ಲ.

ಪ್ರತಿ ಉಸಿರನಲ್ಲೂ ಬದುಕು ತನ್ನನ್ನು ತಾನು ಮತ್ತೆ ಮತ್ತೆ ಹುಡುಕಿಕೊಳ್ಳುತ್ತಿರುತ್ತದೆ.

ಯೋಗ ಪದ್ಧತಿ ಈ ವಿಧಾನವನ್ನು ಪ್ರಾಣಾಯಾಮ ಎಂದು ಕರೆಯುತ್ತದೆ. ಪ್ರಾಣಾಯಾಮ ಎನ್ನುವ ಪದದ ಅರ್ಥವೇ ಬದುಕಿನ ವಿಸ್ತರಣೆ. ಪ್ರತಿ ಉಸಿರಿನೊಂದಿಗೆ ಬದುಕನ್ನು ಅನಂತಕ್ಕೆ ವಿಸ್ತರಿಸಿಕೊಳ್ಳಬೇಕು.

ಉಸಿರಾಟದ ತಿರುಳನ್ನ ಗುರುತಿಸಿಕೊಳ್ಳುವ ತನ್ನ ವಿಧಾನವನ್ನ ಬುದ್ಧ ಆನಪಾನ-ಸತಿ ಯೋಗ ಎಂದು ಗುರುತಿಸಿದ. ಇದು ಒಳಗೆ ಬರುವ, ಹೊರಗೆ ಹೋಗುವ ಉಸಿರಿನ ವಿಜ್ಞಾನ, ಇದನ್ನು ಬಿಟ್ಟು ಬೇರೆ ಯಾವ ಯೋಗದ ಅವಶ್ಯಕತೆ ಇಲ್ಲವೆಂದು ಬುದ್ಧ ಹೇಳುತ್ತಾನೆ. ನಿಮ್ಮ ಉಸಿರಾಟವನ್ನು ನೀವು ಆಳವಾಗಿ ಗಮನಿಸುವಿರಾದರೆ, ಮತ್ತು ಉಸಿರಿನೊಳಗೆ ಅಡಗಿರುವ ಎಲ್ಲವೂ ಅನಾವರಣಗೊಳ್ಳುವ ಹಾಗೆ ನೀವು ಧ್ಯಾನಶೀಲರಾಗಿ ಉಸಿರಾಟಕ್ಕೆ ಸಾಕ್ಷಿಯಾಗುವಿರಾದರೆ, ಬದುಕಿನ ಎಲ್ಲ ಸತ್ಯಗಳೂ ನಿಮ್ಮ ಅನುಭವಕ್ಕೆ ಬರುತ್ತವೆ.

ಸರಳ ಅನಿಸಬಹುದು ಆದರೆ ಬಹಳ ಕಠಿಣ.

ಬುದ್ಧ ತನ್ನ ಭಿಕ್ಕುಗಳಿಗೆ ಹೇಳಿದ ಮಾತು ಏನೆಂದರೆ, ಕುಳಿತಿರುವಾಗ, ನಡೆದಾಡುವಾಗ, ನಿಂತಿರುವಾಗ, ನೀವು ಏನೇ ಮಾಡುವಾಗ ಕೂಡ ಆನಪಾನ ಸತಿಯನ್ನ ಪಾಲಿಸುತ್ತಿರಿ, ಉಸಿರು ಒಳಗೆ ಬರುತ್ತಿರುವುದನ್ನ, ಹೊರಗೆ ಗೋಗುವುದನ್ನ ನಿಮ್ಮ ಪ್ರಜ್ಞೆ ಗಮನ ಇಟ್ಟು ಗುರುತಿಸುತ್ತಿರಲಿ. ನಿಮ್ಮ ಉಸಿರಾಟಕ್ಕೆ ಆಳವಾಗಿ ಗಮನವಿಟ್ಟು ಸಾಕ್ಷಿಯಾಗಿರಿ, ಮುಂದೊಂದು ದಿನ ಉಸಿರಿನ ಪ್ರತಿ ಹೊಡೆತಕ್ಕೆ ನಿಮ್ಮೊಳಗಿನ ಗರ್ಭ ಗುಡಿಯ ಬಾಗಿಲು ತೆರೆಯುತ್ತ ಹೋಗುವುದು.



ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.

ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.

ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.

ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.

ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.

“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.

“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ? “ ಮೊದಲ ಶಿಷ್ಯ ಕೇಳಿದ.

“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.

“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.