ಪ್ರೇಮ ಒಂದು ಬಿಗಿ ಹಗ್ಗ… : ಓಶೋ ವ್ಯಾಖ್ಯಾನ

ಪ್ರೇಮ ಕೇವಲ ಒಂದು ವಿದ್ಯಮಾನವಲ್ಲ ಅದು ಎರಡು ಸಂಗತಿಗಳಿಂದ ಕಟ್ಟಲ್ಪಟ್ಟದ್ದು. ಪ್ರೇಮ ಎನ್ನುವುದು ಎರಡು ಧ್ರುವಗಳ ನಡುವೆ ಬಿಗಿಯಾಗಿ ಎಳೆಯಲ್ಪಟ್ಟಿರುವ ಹಗ್ಗದ ಹಾಗೆ. ಈ ಎರಡು ಧ್ರುವಗಳನ್ನೂ ತಿಳಿದುಕೊಳ್ಳುವುದು ಬಹಳ ಅವಶ್ಯಕ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಮ್ಮ ಆರ್ದ್ರ ಪ್ರೇಮದೊಳಗಿರುವ
ಕೆಲ ಅಪರೂಪದ ಕ್ಷಣಗಳನ್ನು ಕಂಡು,
ಸ್ವರ್ಗಕ್ಕೂ ಹೊಟ್ಟೆಕಿಚ್ಚಾಗುತ್ತದಂತೆ.

ಭೂಮಿಯ ಮೇಲೆ ನಾವು ಮಾಡುವ
ಪ್ರೇಮದ ರೀತಿ ಅಷ್ಟು ಅನನ್ಯ.

ಮನುಷ್ಯನ ನೋವನ್ನು ಅರಿಯುವ ಎದೆಗಳಿಗಾಗಿ
ತಮ್ಮ ಬದುಕನ್ನೇ ಮಾರಲು ಸಿದ್ಧರಾಗಿರುವ
ಕೆಲ ದೇವರುಗಳಿದ್ದಾರಂತೆ
ಸ್ವರ್ಗದಲ್ಲಿ.

ಅವರಿಗೆ ಚೆನ್ನಾಗಿ ಗೊತ್ತು
ನಮ್ಮ ನೋವುಗಳು ಒಂದು ದಿನ ನಮ್ಮನ್ನು
ಹೆಚ್ಚು ಎತ್ತರಕ್ಕೆ ಕರೆದೊಯ್ಯುತ್ತವೆ
ಅವರಿಗಿಂತಲೂ.

  • ಹಾಫಿಜ್

ಪ್ರೇಮ ಈ ಎರಡೂ ಹೌದು. ಅದು ಶ್ರೀಮಂತವೂ ಹೌದು, ಅದು ಯಾತನಾಮಯವೂ ಹೌದು. ಪ್ರೇಮ ಸಂಕಟವೂ ಹೌದು, ಭಾವಪರವಶತೆಯೂ ಹೌದು – ಏಕೆಂದರೆ ಪ್ರೇಮ, ಭೂಮಿ ಮತ್ತು ಆಕಾಶಗಳ ಕೂಡುವಿಕೆ, ಜ್ಞಾತ, ಅಜ್ಞಾತಗಳ ಮತ್ತು ಗೋಚರ, ಅಗೋಚರಗಳ ಒಂದಾಗುವಿಕೆ. ಪ್ರೇಮ ಎನ್ನುವುದು ವಸ್ತು ಪ್ರಪಂಚ ಮತ್ತು ಪ್ರಜ್ಞಾ ಪ್ರಪಂಚಗಳನ್ನು ಬೇರ್ಪಡಿಸುವ ಸಂಗತಿ. ಆಳ ಮತ್ತು ಎತ್ತರಗಳ ನಡುವಿನ ಗಡಿರೇಖೆ.

ಪ್ರೇಮದ ಬೇರುಗಳು ಇರುವುದು ಭೂಮಿಯೊಳಗೆ, ಇದು ಯಾತನೆಯ ಕಾರಣವಾದರೆ, ಪ್ರೇಮದ ರೆಂಬೆ ಕೊಂಬೆಗಳು ಇರುವುದು ಆಕಾಶದಲ್ಲಿ ಅದು ಪ್ರೇಮದ ಭಾವಪರವಶತೆ.

ಪ್ರೇಮ ಕೇವಲ ಒಂದು ವಿದ್ಯಮಾನವಲ್ಲ ಅದು ಎರಡು ಸಂಗತಿಗಳಿಂದ ಕಟ್ಟಲ್ಪಟ್ಟದ್ದು. ಪ್ರೇಮ ಎನ್ನುವುದು ಎರಡು ಧ್ರುವಗಳ ನಡುವೆ ಬಿಗಿಯಾಗಿ ಎಳೆಯಲ್ಪಟ್ಟಿರುವ ಹಗ್ಗದ ಹಾಗೆ. ಈ ಎರಡು ಧ್ರುವಗಳನ್ನೂ ತಿಳಿದುಕೊಳ್ಳುವುದು ಬಹಳ ಅವಶ್ಯಕ. ಒಂದು ಧ್ರುವ ಸೆಕ್ಸ್ ಆದರೆ, ಇನ್ನೊಂದು ಧ್ರುವ ಪ್ರಾರ್ಥನೆ. ಪ್ರೇಮ ಎನ್ನುವುದು ಸೆಕ್ಸ್ ಮತ್ತು ಪ್ರಾರ್ಥನೆಗಳ ನಡುವೆ ಸ್ಟ್ರೆಚ್ ಆಗಿರುವ ಹಗ್ಗ ; ಪ್ರೇಮದ ಒಂದು ಭಾಗ ಸೆಕ್ಸ್ ಆದರೆ ಇನ್ನೊಂದು ಪ್ರಾರ್ಥನೆ.

ಸೆಕ್ಸ್ ಪ್ರಪಂಚ ಲೌಕಿಕ ಜಗತ್ತಿನ ಎಲ್ಲ ಸುಖ ದುಃಖಗಳಿಗೆ ಕಾರಣವಾದರೆ, ಪ್ರಾರ್ಥನೆಯ ಜಗತ್ತು ಆನಂದದ ಹೊರತಾಗಿ ಬೇರೆ ಯಾವುದನ್ನೂ ಸಾಧ್ಯಮಾಡುವುದಿಲ್ಲ.

ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.

ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.

ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.

“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತುಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.

ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”

ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.


(Source: osho; Discourse Series: The Book of Wisdom)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.