ವೈರುಧ್ಯ ಯಾವಾಗಲೂ ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ; ಒಂದನ್ನು ನೀವು ಕ್ಯಾರಿ ಮಾಡುತ್ತೀರಾದರೆ, ಇನ್ನೊಂದು ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ. ನೀವು ಎರಡನ್ನೂ ಬಿಟ್ಟುಬಿಡಬೇಕು… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ದೇವನ ನಿರಾಕರಣೆಯೂ
ದೈವಿಕವಾಗಿರುತ್ತದೆ ಎಂಬ ಸತ್ಯ
ತುಂಬ ಜನರಿಗೆ ಗೊತ್ತಿಲ್ಲ.
” ನಿನ್ನ ತುಟಿಗೇನಾದರೂ
ಜೇನು ಮೆತ್ತಿಕೊಂಡಿದೆಯಾ”
ಎಂಬ ನನ್ನ ಪ್ರಶ್ನೆಗೆ
ಒಮ್ಮೆ ತುಟಿ ಸವರಿಕೊಂಡು
ಉತ್ತರಿಸಿದ ಆತ
“ಇಲ್ಲವಲ್ಲ”
ಈ ನಿರಾಕರಣೆಯೂ
ಒಂದು ಬಗೆಯ ‘ಜೇನು’
ಎನ್ನುವುದನ್ನ
‘ರುಚಿ’ ಬಲ್ಲವರೇ ಬಲ್ಲರು.
- ರೂಮಿ
“ನೀನು ಯಾರು?”
ಯಾರೋ ಒಬ್ಬರು ಬುದ್ಧನನ್ನು ಪ್ರಶ್ನೆ ಮಾಡಿದರು,
“ನಾನು ಯಾರು ಎಂದು ಹೇಳೋದು ಕಷ್ಟ”
ಬುದ್ಧ ನಕ್ಕ.
ಆದರೆ ಆ ಮನುಷ್ಯ ಒತ್ತಾಯ ಮಾಡತೊಡಗಿದ.
“ನೀನು ಏನೋ ಒಂದು ಆಗಿರಲೇ ಬೇಕು, ಏನೋ ಅರ್ಥಪೂರ್ಣವಾದದ್ದು. ಏನು ಹೇಳು”.
ಬುದ್ಧ ಉತ್ತರಿಸಿದ,
“ಏನು ಹೇಳುವುದೂ ಸಾಧ್ಯವಿಲ್ಲ. ಏನೇ ಉತ್ತರಕೊಟ್ಟರೂ ಅದು ಸುಳ್ಳಾಗಿರುತ್ತದೆ”.
ಆಗ ಆ ಮನುಷ್ಯ ತನ್ನ ಪ್ರಶ್ನೆಯನ್ನ ಇನ್ನೊಂದು ರೀತಿಯಲ್ಲಿ ಕೇಳಿದ,
“ನೀನು ಗಂಡೋ ಅಥವಾ ಹೆಣ್ಣೋ?”
“ಕಷ್ಟ ಹೇಳೋದು. ಒಮ್ಮೆ ನಾನು ಗಂಡಾಗಿದ್ದೆ. ಆಗ ನನ್ನ ಇಡೀ ಅಸ್ತಿತ್ವ ಹೆಣ್ಣಿನೆಡೆಗೆ ಆಕರ್ಷಿತವಾಗುತ್ತಿತ್ತು. ನಾನು ಗಂಡಾಗಿದ್ದಾಗ, ಹೆಣ್ಣು ನನ್ನ ಬುದ್ಧಿ-ಮನಸ್ಸನ್ನು (mind) ತುಂಬಿಕೊಂಡಿದ್ದಳು. ಆದರೆ ಯಾವಾಗ ನನ್ನ ಮೈಂಡ್ ನಿಂದ ಹೆಣ್ಣು ಮಾಯವಾದಳೋ ಆಗ ನನ್ನೊಳಗಿನ ಗಂಡು ಕೂಡ ಮಾಯವಾದ. ಈಗ ನಾನು ಏನೂ ಹೇಳಲಾರೆ. ಈಗ ನಾನು ಯಾರು ಎನ್ನುವುದನ್ನ ವ್ಯಾಖ್ಯಾನ ಮಾಡುವುದು ಕಷ್ಟ”.
ಬುದ್ಧ ಉತ್ತರಿಸಿದ.
ಯಾವಾಗ duality ಇರುವುದಿಲ್ಲವೋ ಆಗ ಏನು ಹೇಳುವುದೂ ಕಷ್ಟ. ನೀವು ವಿವೇಕಿಗಳು ಎಂದು ನಿಮಗೆ ಅನಿಸುತ್ತಿದೆಯಾದರೆ, ಅವಿವೇಕ ಇನ್ನೂ ನಿಮ್ಮೊಳಗೆ ಉಳಿದುಕೊಂಡಿದೆಯೆಂದು ಅರ್ಥ. ನೀವು ಆನಂದದಲ್ಲಿದ್ದೀರಿ ಎಂದು ನಿಮಗೆ ಅನಿಸುತ್ತಿದೆಯಾದರೆ, ನೀವು ಇನ್ನೂ ದುಗುಡದ ವಲಯದಲ್ಲಿದ್ದೀರಿ ಎನ್ನುವುದು ಸತ್ಯ. ನೀವು ಆರೋಗ್ಯಪೂರ್ಣರು ಎಂದು ನಿಮಗೆ ಅನಿಸುತ್ತಿದೆಯಾದರೆ, ಕಾಯಿಲೆಯ ಸಾಧ್ಯತೆ ಇನ್ನೂ ಇದೆ ಎಂದೇ ಅರ್ಥ.
ವೈರುಧ್ಯ ಯಾವಾಗಲೂ ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ; ಒಂದನ್ನು ನೀವು ಕ್ಯಾರಿ ಮಾಡುತ್ತೀರಾದರೆ, ಇನ್ನೊಂದು ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ. ನೀವು ಎರಡನ್ನೂ ಬಿಟ್ಟುಬಿಡಬೇಕು. ಇದು ಸಾಧ್ಯವಾಗೋದು ಎರಡೂ ಸೇರಿದಾಗ ಮಾತ್ರ, ಒಂದಕ್ಕೊಂದು ಮುಖಾಮುಖಿಯಾದಾಗ ಮಾತ್ರ. ಹಾಗಾಗಿ ಎಲ್ಲ ಧರ್ಮಗಳ ಮೂಲಭೂತ ವಿಜ್ಞಾನ, ಹೇಗೆ ನಿಮ್ಮೊಳಗಿರುವ ಈ ವೈರುಧ್ಯಗಳನ್ನ ಪರಸ್ಪರ ಭೇಟಿ ಮಾಡಿಸಿ, ಅವುಗಳ ಕುರುಹೂ ಇಲ್ಲದಂತೆ ಅವನ್ನು ನಾಶ ಮಾಡುವುದು ಎನ್ನುವುದು. ಆಗ ನೀವು, ಈಗ ಇರುವಂತೆ ಇಲ್ಲವಾಗುತ್ತೀರಿ, ಮತ್ತು ಪೂರ್ಣ ಹೊಸದಾದ, ಯಾರು, ಏನು ಎನ್ನುವುದು ಗೊತ್ತಾಗದ, ಕಲ್ಪನೆಯನ್ನೂ ಮಾಡಿಕೊಳ್ಳಲಿಕ್ಕಾಗದ ಅಸ್ತಿತ್ವವೊಂದರ ಭಾಗವಾಗುತ್ತೀರಿ.
ಏನು ಎಂದು ಗುರುತಿಸಲಾಗದ ಆ ಹೊಸ ಅಸ್ತಿತ್ವವೇ ಬ್ರಹ್ಮ, ದೈವತ್ವ ಎಂದು ಕೂಡ ಕರೆಯಬಹುದು. ಬುದ್ಧ ಈ ಹೊಸ ಅಸ್ತಿತ್ವವನ್ನ ನಿರ್ವಾಣ ಎಂದು ಕರೆಯಲು ಬಯಸಿದ. ನಿರ್ವಾಣ ಎಂದರೆ ಸರಳವಾಗಿ, ಈಗ ಇರುವ ಎಲ್ಲದರ ಪರಿಸಮಾಪ್ತಿ, ಹಿಂದಿನ ಎಲ್ಲವನ್ನೂ ಕೊನೆಯಾಗಿಸುವುದು. ಮತ್ತು ಈ ಹೊಸ ಅಸ್ತಿತ್ವವನ್ನು ವಿವರಿಸಲು ಹಳೆಯ ಅನುಭವಗಳನ್ನ, ಜ್ಞಾನವನ್ನ ಬಳಸುವಂತಿಲ್ಲ. ಈ ಹೊಸದು ವ್ಯಾಖ್ಯಾನಕ್ಕೆ ಅತೀತವಾದದ್ದು. ತಾನು ಗಂಡೋ ಹೆಣ್ಣೋ ಎನ್ನುವುದೋ ಅವನಿಗೆ ಗೊತ್ತಾಗುವ ಸಾಧ್ಯತೆಯಿಲ್ಲ. ತಾನು ಸುಖಿಯೋ ದುಃಖಿಯೋ ಎನ್ನುವುದು ಕೂಡ ಅವನಿಗೆ ನಿಜವಾಗಿ ಗೊತ್ತಿಲ್ಲ. ಅವನೊಳಗೆ ಎರಡು ವೈರುಧ್ಯಗಳು ಇಲ್ಲವಾಗಿವೆ. ಎರಡು ಇಲ್ಲದಿರುವಾಗ ಒಂದು ಕೂಡ ಇಲ್ಲ.
ಅಜ್ಞಾನ ಮತ್ತು ಜ್ಞಾನೋದಯ ಕೂಡ ಈ duality ಯ ಭಾಗ. ನಮಗೆ ಬುದ್ಧ, ಜ್ಞಾನೋದಯದ ಮನುಷ್ಯನ ಹಾಗೆ ಕಾಣುತ್ತಾನೆ ಏಕೆಂದರೆ ಅಜ್ಞಾನ ನಮ್ಮನ್ನು ಸುತ್ತಿಕೊಂಡಿದೆ. ಆದರೆ ಬುದ್ಧ ಈ ಎಲ್ಲದರಿಂದ ಹೊರತಾಗಿದ್ದಾನೆ, ತಾನು ಜ್ಞಾನೋದಯ ಹೊಂದಿದವನು ಎನ್ನುವುದು ಅವನಿಗೆ ಗೊತ್ತಾಗುವ ಸಾಧ್ಯತೆ ಇಲ್ಲ, ಏಕೆಂದರೆ ಅವನು ಅಜ್ಞಾನದಿಂದ ಹೊರತಾಗಿದ್ದಾನೆ. Duality ಯಲ್ಲಿ ಆಲೋಚಿಸುವ ಸಾಧ್ಯತೆಯ ಸ್ಥಿತಿಯಿಂದ ನಿರ್ವಾಣದ ಸ್ಥಿತಿ ಮುಕ್ತವಾಗಿದೆ.

