ಬದುಕಿನಲ್ಲಿ ಎಚ್ಚರ ಮುಖ್ಯ : ಓಶೋ

ನಾವು ಬದುಕಿನಲ್ಲಿ ಸದಾ ಎಚ್ಚರವನ್ನು ಕಾಯ್ದುಕೊಳ್ಳಬೇಕು, ಯಾವುದೇ ಕ್ಷಣದಲ್ಲಿ ದೈವ ನಮ್ಮ ಭೇಟಿಗೆ ಬರಬಹುದು, ಎಚ್ಚರವಾಗಿರದಿದ್ದರೆ ನಾವು ಈ ಅಮೃತ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಯಾವ ಕೆಲಸ ಮಾಡಲಿ ನಾನು
ಈ ಬದುಕಿನಲ್ಲಿ?

ನಿಯಮಗಳನ್ನು ಮೀರುವ ಜನರಲ್ಲಿನ ಆಕರ್ಷಣೆಯನ್ನೂ,
ಕಲಾವಿದನ ಉನ್ಮಾದವನ್ನೂ
ತೀವ್ರ ಕಾಮಿಯನ್ನೂ
ಅಪಾರವಾಗಿ ಪ್ರೀತಿಸುವ
ಈ ಪವಿತ್ರ ಭೋಳೆ ಮುದುಕನನ್ನು
ಕೆಲಸಕ್ಕಿಟ್ಟುಕೊಳ್ಳುವ ಉದಾರಿಗಳು
ಯಾರಿದ್ದಾರೆ ಇಲ್ಲಿ?

ಬಹುಶಃ ನಾನು
ಕವಿಯಾಗಬಹುದೇನೋ,

ನನ್ನ ಸುಂದರ ಖಾಲಿ ಕಾಗದಗಳ ಮೇಲೆ
ಭಗವಂತ ಬಂದು ಕೂಡಲಿದ್ದಾನೆ,
ಬಹುಶಃ ಅದಕ್ಕೇ ಅನಿಸುತ್ತದೆ ಅವನು
ಇಷ್ಟು ಶುದ್ಧವಾಗಿಟ್ಟಿದ್ದಾನೆ ನನ್ನ ಪ್ರೇಮವನ್ನು.
ನೀವು ಆ ಪುಟಗಳನ್ನು ಕಾಣಲು ಬಂದಾಗ
ಆತ ಒದ್ದರೂ ಒದೆಯಬಹುದು ನಿಮ್ಮನ್ನ
ತನ್ನ ದಿವ್ಯ ಪಾದಗಳಿಂದ.

– ಹಾಫಿಜ್

*******************

ಜೀಸಸ್ ಯಾವಾಗಲೂ ಒಬ್ಬ ಶ್ರೀಮಂತ ಜಮೀನ್ದಾರನ ಕುರಿತಾದ ಘಟನೆಯನ್ನು ತನ್ನ ಶಿಷ್ಯರಿಗೆ ನೆನಪಿಸುತ್ತಿದ್ದ.

ಒಮ್ಮೆ ಜಮೀನ್ದಾರನಿಗೆ ಬಹಳ ದೂರದ ಊರಿಗೆ ಹೋಗಿಬರುವ ಪ್ರಸಂಗ ಎದುರಾಯಿತು. ಆತ ತನ್ನ ಕೆಲಸದಾಳುಗಳಿಗೆ ಎಚ್ಚರಿಕೆ ಕೊಟ್ಟ, “ನಾನು ಯಾವ ಕ್ಷಣದಲ್ಲಾದರೂ ಮನೆಗೆ ವಾಪಸ್ ಬರಬಹುದು. ನಾನು ಮನೆಗೆ ಬಂದಾಗ ನನ್ನನ್ನು ಸ್ವಾಗತ ಮಾಡಲು ನೀವೆಲ್ಲ ಸಿದ್ಧರಿರಬೇಕು.”

ಕೆಲಸಗಾರರು ತಮ್ಮ ಒಡೆಯನ ಎಚ್ಚರಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡರು. ಆ ದಿನಗಳಲ್ಲಿ ಅವರು ಹಗಲು ರಾತ್ರಿ ಅಲರ್ಟ್ ಆಗಿರುತ್ತಿದ್ದರು. ಯಾವುದೇ ಕ್ಷಣದಲ್ಲಿ ವಾಪಸ್ ಬರಬಹುದಾಗಿದ್ದ ಒಡೆಯನ ಸ್ವಾಗತಕ್ಕೆ ಅವರು ಸದಾ ಸಿದ್ಧರಾಗಿರುತ್ತಿದ್ದರು. ಕೆಲಸ ಮಾಡುವಾಗ, ಊಟಮಾಡುವಾಗ, ವಿಶ್ರಾಂತಿ ತೆಗೆದುಕೊಳ್ಳುವಾಗ ಅವರ ಮನಸ್ಸು ಸದಾ ತಮ್ಮ ಒಡೆಯನ ಆಗಮನವನ್ನೇ ಎದುರು ನೋಡುತ್ತಿತ್ತು.

ಜೀಸಸ್ ಏನು ಹೇಳಲು ಬಯಸುತ್ತಿದ್ದಾನೆಂದರೆ, ನಾವು ಬದುಕಿನಲ್ಲಿ ಸದಾ ಎಚ್ಚರವನ್ನು ಕಾಯ್ದುಕೊಳ್ಳಬೇಕು, ಯಾವುದೇ ಕ್ಷಣದಲ್ಲಿ ದೈವ ನಮ್ಮ ಭೇಟಿಗೆ ಬರಬಹುದು, ಎಚ್ಚರವಾಗಿರದಿದ್ದರೆ ನಾವು ಈ ಅಮೃತ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ದೈವ ಬಂದು ನಮ್ಮ ಬಾಗಿಲು ತಟ್ಟಿದ್ದಾಗ, ನಾವು ಗಾಢ ನಿದ್ದೆಯಲ್ಲಿದ್ದರೆ, ನಮ್ಮಿಂದ ಒಂದು ಮಹತ್ತರವಾದ ಅವಕಾಶ ತಪ್ಪಿ ಹೋಗುತ್ತದೆ. ಇಂಥ ಅವಕಾಶಕ್ಕಾಗಿ ನಾವು ಇನ್ನೂ ಎಷ್ಟು ದಿನ, ಎಷ್ಟು ವರ್ಷ, ಎಷ್ಟು ಜನ್ಮ ಕಾಯಬೇಕೋ ಗೊತ್ತಿಲ್ಲ. ಅತಿಥಿ ತಾನು ಬರುವ ಮುನ್ಸೂಚನೆಯನ್ನು ಯಾವತ್ತೂ ನೀಡುವುದಿಲ್ಲ. ಅವನು ಯಾವುದೇ ಕ್ಷಣ ನಿಮ್ಮ ಮನೆಯ ಬಾಗಿಲಲ್ಲಿ ಇರಬಹುದು. ನಾವು ಎಚ್ಚರವಾಗಿದ್ದರೆ ಮಾತ್ರ ಅವನನ್ನು ಎದುರುಗೊಳ್ಳುವುದು ಸಾಧ್ಯ.

ಸದಾ ಎಚ್ಚರದಲ್ಲಿರಬೇಕು ಎನ್ನುವುದಷ್ಟೇ ಜೀಸಸ್ ನ ಮಾತಿನ ತಿರುಳು.

ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ.

ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು

ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ.

ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.

ಸದಾ ಎಚ್ಚರದಲ್ಲಿದ್ದಾಗ ಮಾತ್ರ ನಮಗೆ ದೈವವನ್ನು ಸ್ವಾಗತಿಸುವುದು ಸಾಧ್ಯ, ಜ್ಞಾನೋದಯದ ಅಮೃತ ಗಳಿಗೆ ಹೇಳಿ ಕೇಳಿ ಬರುವಂಥದ್ದಲ್ಲ, ಅದು ಯಾವುದೇ ಕ್ಷಣದಲ್ಲಿ, ಯಾವುದೇ ರೂಪದಲ್ಲಿ, ಯಾವುದೇ ಸಂದರ್ಭದಲ್ಲಿ ಎದುರಾಗಿ ನಮ್ಮನ್ನು ತಟ್ಟಬಹುದು. ಅದನ್ನು ಸ್ವೀಕರಿಸಲು ಸದಾ ಸಿದ್ಧವಾಗಿರುವ ಕೆಲಸವನ್ನಷ್ಟೇ ನಾವು ಮಾಡಬೇಕಾಗಿರುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.