ಯಾವುದೇ ಭಯವಿಲ್ಲದೆ ಅಜ್ಞಾತವನ್ನು ಪ್ರವೇಶ ಮಾಡಲು ಜನರಿಗೆ ಸಹಾಯ ಮಾಡಲು ಈ ವಿಧಾನಗಳು ಸೃಷ್ಟಿಮಾಡಿಕೊಳ್ಳಲಾಗಿದೆ. ಈ ವಿಧಾನಗಳಲ್ಲಿ ಇರುವ ಎಲ್ಲವೂ ಮಿಥ್ಯೆಯೇ. ಹಾಗೆಂದೇ ಎಷ್ಟೊಂದು ವಿಧಾನಗಳು ಹುಟ್ಚಿಕೊಂಡಿವೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಾರಿಪುತ್ತನಿಗೆ ಜ್ಞಾನೋದಯ ಆದಾಗ, ಅವನು ಸತ್ಯದ ಅತ್ಯಂತಿಕ ಗುರಿಯನ್ನ ತಲುಪಿದಾಗ, ಹಿಂತಿರುಗಿ ನೋಡುತ್ತಾನೆ. ಅಲ್ಲಿ ಅವನಿಗೆ ಆಶ್ಚರ್ಯ ಕಾದಿರುತ್ತದೆ. ಅವನನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದ ವ್ಯವಸ್ಥೆ ಸಂಪೂರ್ಣವಾಗಿ ಕಾಣೆಯಾಗಿದೆ. ಇಷ್ಟು ದಿನ ಅವನು ಕಲಿತದ್ದು ಯಾವುದೂ ಅವನ ಜೊತೆ ಇಲ್ಲ. ಅವ ಬುದ್ಧನಿಗೆ ಕೇಳುತ್ತಾನೆ, “ನನಗೆ ಕಲಿಸಲಾದ ಸಂಪೂರ್ಣ ವ್ಯವಸ್ಥೆಯೇ ಮಾಯವಾಗಿದೆಯಲ್ಲ?”
“ಸುಮ್ಮನಿರು, ಕಲಿತದ್ದು ಮಾಯವಾಗಿರುವ ವಿಷಯ ಬೇರೆ ಯಾರಿಗೂ ಹೇಳಬೇಡ. ಹೌದು ಮಾಯವಾಗಿದೆ, ಮಾಯವಾಗಲೇಬೇಕಿತ್ತು, ಏಕೆಂದರೆ ಅದು ಯಾವತ್ತೂ ನಿನ್ನ ಜೊತೆ ಇರಲಿಲ್ಲ. ಅದು ನಿನ್ನ ಜೊತೆ ಇದೆ ಎಂದು ನಿನ್ನ ನಂಬಿಸಲಾಗಿತ್ತು. ಈ ಸುಳ್ಳು ಊರುಗೋಲಿನ ಸಹಾಯದಿಂದ ನೀನು ಇಲ್ಲಿಯವರೆಗೆ ಬರಲು ಸಾಧ್ಯವಾಗಿರುವುದು ಮಾತ್ರ ನಿಜ. ಇಲ್ಲಿಯವರೆಗೆ ತಲುಪದ ಯಾರ ಜೊತೆಗೂ ಈ ವಿಷಯದ ಕುರಿತು ಮಾತನಾಡಬೇಡ, ಏಕೆಂದರೆ ತಾವು ತಲುಪುವ ಜಾಗದಲ್ಲಿ ಬುದ್ಧಿಗೆ (knowledge) ಜಾಗ ಇಲ್ಲ ಎನ್ನುವುದು ಅವರಿಗೆ ಗೊತ್ತಾದರೆ, ಅವರು ಈಗಲೇ ಬುದ್ಧಿಯ ಕೈ ಬಿಟ್ಟುಬಿಡುತ್ತಾರೆ. ಯಾವ ಸಹಾಯವೂ ಇಲ್ಲದೆ ಅಜ್ಞಾತದಲ್ಲಿ ಪ್ರವೇಶ ಮಾಡುವುದು ಅವರಿಗೆ ಸಾಧ್ಯವಿಲ್ಲ, ಒಬ್ಬರೇ ಅಂತೂ ಸಾಧ್ಯವೇ ಇಲ್ಲ.”
ಬುದ್ಧ ಸಾರಿಪುತ್ತನಿಗೆ ತಿಳಿ ಹೇಳಿದ.
ಹೌದು ಹಲವಾರು ಬಾರಿ ಹೀಗಾಗುತ್ತದೆ. ಇದು ನನ್ನ ಅನುಭವವೂ ಹೌದು. ಜನ ನನ್ನ ಹತ್ತಿರ ಬಂದು ಹೇಳುತ್ತಾರೆ, “ಈಗ ಧ್ಯಾನ ತುಂಬ ಆಳವಾಗುತ್ತಿದೆ, ನಮಗೆ ಈಗ ಭಯವಾಗುತ್ತಿದೆ” ಎಂದು. ಸಾವು ಹತ್ತಿರವಾದಾಗ ಸಾವಿನ ಭಯದಂಥ ಆತ್ಯಂತಿಕದ ಅನುಭವ, ಖಂಡಿತ ಆಗುತ್ತದೆ. ಧ್ಯಾನದ ಶಿಖರವೂ ಸಾವಿನ ಥರದ ಅನುಭವವನ್ನೇ ಕೊಡುತ್ತದೆ.
ಆಗ ನಾನು ಅವರಿಗೆ ಹೇಳುತ್ತೇನೆ, “ಭಯಬೇಡ, ನಾನು ನಿಮ್ಮ ಜೊತೆ ಇರುತ್ತೇನೆ” ಎಂದು, ಅವರಿಗೆ ಸಮಾಧಾನವಾಗುತ್ತದೆ. ನಾನು ಅವರ ಜೊತೆ ಇರುವುದು ಅಸಾಧ್ಯ, ಯಾರಿಗೂ ಅವರ ಜೊತೆ ಇರುವುದು ಸಾಧ್ಯವಾಗುವುದಿಲ್ಲ. ನಾನು ಹೇಳಿದ್ದು ಸುಳ್ಳು. ನೀವು ಒಬ್ಬಂಟಿಯಾಗಿಯೇ ಆತ್ಯಂತಿಕವನ್ನು ಪ್ರವೇಶ ಮಾಡಬೇಕು, ಯಾರಿಗೂ ನಿಮ್ಮ ಜೊತೆ ಇರುವುದು ಸಾಧ್ಯವಾಗುವುದಿಲ್ಲ, ಯಾವ ಊರುಗೋಲೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಈ ಜಾಗ ಸಂಪೂರ್ಣವಾಗಿ ಒಬ್ಬಂಟಿತನದ್ದು. ಆದರೆ ನಾನು, ಹೆದರಬೇಡಿ, ಮುನ್ನಡೆಯಿರಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದಾಗ, ಅವರು ಧೈರ್ಯದಿಂದ ಮುಂದೆ ಹೆಜ್ಜೆ ಹಾಕುತ್ತಾರೆ.
“ಇಲ್ಲ ಈ ಅಜ್ಞಾತವನ್ನು ನೀವು ಒಂಟಿಯಾಗಿಯೇ ಪ್ರವೇಶ ಮಾಡಬೇಕು, ಅಲ್ಲಿ ನಿಮಗೆ ಸಹಾಯ ಮಾಡುವುವವರೂ ಯಾರೂ ಇರುವುದಿಲ್ಲ” ಎಂದು ನಾನು ಹೇಳಿಬಿಟ್ಟರೆ, ಅವರು ಈಗಲೇ ತಮ್ಮ ಪ್ರಯಾಣವನ್ನು ಕೊನೆಗೊಳಿಸಿಬಿಡುತ್ತಾರೆ. ಆ ಜಾಗ ಹತ್ತಿರವಾದಂತೆಲ್ಲ ಖಂಡಿತವಾಗಿಯೂ ಭಯದ ಅನುಭವವಾಗುತ್ತದೆ. ಅವರು ಬೀಳುತ್ತಿರುವ ಪ್ರಪಾತಕ್ಕೆ ತಳವೇ ಇಲ್ಲ ನಿಜ, ಹಾಗೆಂದು ಮೊದಲೇ ಹೇಳಿದರೆ ಅವರು ಭಯಪಟ್ಟು ಹಿಂದೆ ಸರಿದು ಬಿಡುತ್ತಾರೆ, ನಾನು ಅವರಿಗೆ ಆ ಪ್ರಪಾತಕ್ಕೆ ಬೀಳಲು ಸಹಾಯ ಮಾಡಬೇಕು. ಆದ್ದರಿಂದಲೇ ನಾನು ಅವರಿಗೆ ಹೇಳೋದು ಹೆದರಬೇಡಿ, ಧುಮುಕಿ, ನಾನಿದ್ದೇನೆ ನಿಮ್ಮ ಜೊತೆ ಎಂದು. ನನ್ನ ಭರವಸೆ ಅವರಲ್ಲಿ ಧೈರ್ಯ ತುಂಬುತ್ತದೆ. ಅವರು ಧ್ಯಾನದ ಪ್ರಪಾತಕ್ಕೆ ಧುಮುಕುತ್ತಾರೆ. ಆಮೇಲೆಯಷ್ಟೇ ಅವರಿಗೆ ಗೊತ್ತಾಗುತ್ತದೆ, ತಮ್ಮ ಜೊತೆ ಯಾರೂ ಇಲ್ಲವೆಂದು. ಅಷ್ಟೊತ್ತಿಗಾಗಲೇ ಕಾಲ ಮೀರಿ ಹೋಗಿರುತ್ತದೆ. ಅವರಿಗೆ ಹಿಂತಿರುಗಿ ಬರುವ ಅವಕಾಶವೇ ಇರುವುದಿಲ್ಲ. ಇದು ಒಂದು ತಂತ್ರ.
ಈ ಎಲ್ಲ ವ್ಯವಸ್ಥೆಗಳೂ ಸಹಾಯ ಮಾಡಲು ಇರುವ ತಂತ್ರಗಳಷ್ಟೇ : ಹಲವಾರು ಸಂಶಯಗಳಿಂದ ತುಂಬಿಕೊಂಡಿರುವ ಜನರಿಗೆ ಸಹಾಯ ಮಾಡಲು, ವಿಶ್ವಾಸರಹಿತರಾಗಿರುವ ಜನರನ್ನು ಮುನ್ನಡೆಸಲು, ಆತ್ಮ ವಿಶ್ವಾಸವನ್ನು ಕಳೆದುಕೊಂಡಿರುವ ಜನರಲ್ಲಿ ಭರವಸೆ ತುಂಬಲು. ಯಾವುದೇ ಭಯವಿಲ್ಲದೆ ಅಜ್ಞಾತವನ್ನು ಪ್ರವೇಶ ಮಾಡಲು ಜನರಿಗೆ ಸಹಾಯ ಮಾಡಲು ಈ ವಿಧಾನಗಳು ಸೃಷ್ಟಿಮಾಡಿಕೊಳ್ಳಲಾಗಿದೆ. ಈ ವಿಧಾನಗಳಲ್ಲಿ ಇರುವ ಎಲ್ಲವೂ ಮಿಥ್ಯೆಯೇ. ಹಾಗೆಂದೇ ಎಷ್ಟೊಂದು ವಿಧಾನಗಳು ಹುಟ್ಚಿಕೊಂಡಿವೆ. ಮಹಾವೀರ ತನ್ನ ಹಿಂಬಾಲಕರಿಗೆ ಮನದಟ್ಟಾಗುವಂಥ ವಿಧಾನವನ್ನು ಕಟ್ಟಿಕೊಂಡಿದ್ದಾನೆ. ಅದು ಕೂಡ ಮಿಥ್ಯೆಯ ದಾರಿಯೇ, ಆದರೆ ಎಷ್ಟೋ ಜನ ಈ ಮಿಥ್ಯಾಪಥದ ಮೂಲಕ ಹಾಯ್ದು ಹೋಗಿಯೇ ಸತ್ಯದ ಆತ್ಯಂತಿಕವನ್ನು ತಲುಪಿಕೊಂಡಿದ್ದಾರೆ. ಅಲ್ಲಿ ತಲುಪಿದ ಮೇಲಷ್ಟೇ ಅವರಿಗೆ ಗೊತ್ತಾಗುತ್ತದೆ ತಾವು ದಾಟಿ ಬಂದ ಹಾದಿ ಸುಳ್ಳಿನದು ಎಂದು. ಆದರೆ ಅಷ್ಟೊತ್ತಿಗಾಗಲೇ ಈ ತಂತ್ರ ತನ್ನ ಕೆಲಸ ಮಾಡಿಬಿಟ್ಟಿರುತ್ತದೆ.
ಬುದ್ಧ ಸತ್ಯವನ್ನು ಹೇಗೆ ವ್ಯಾಖ್ಯಾನ ಮಾಡುತ್ತಾನೆಂದರೆ, “that which works” ಎಂದು. ಮಿಥ್ಯೆ ಕೆಲಸ ಮಾಡುತ್ತದೆಯಾದರೆ ಅದು ಸತ್ಯವೇ. ಮತ್ತು ಸತ್ಯ which doesn’t work ನ ಮಿಥ್ಯೆಯೆಂದೇ ತಿಳಿಯಬೇಕು.

