ಅವನು ಆ ಕ್ಷಣದಲ್ಲಿ ಜೀವಿಸುತ್ತಿದ್ದ. ಆ ಕ್ಷಣದಲ್ಲಿ ಅವನು ಏನು ಆನಂದಿಸುತ್ತಿದ್ದನೋ ಅದೇ ಅವನ ಕೊನೆಯ ಸಂದೇಶವಾಗಿತ್ತು ಏಕೆಂದರೆ ಆ ಕ್ಷಣವೇ ಅವನ ಇಡೀ ಬದುಕಾಗಿತ್ತು. ಹೀಗೆ ಬದುಕಿದ ಮನುಷ್ಯನ ಒಳಗೆ ಬದುಕಿನ ಕುರಿತಾಗಿ ಯಾವ ವಿಷಾದ ಇರುವುದು ಸಾಧ್ಯ? ಅವನಲ್ಲಿ ಉಳಿದಿರುವುದು ಕೇವಲ ಕೃತಜ್ಞತೆ, ಒಂದು ಮುಗುಳ್ನಗು ಮಾತ್ರ… ~ ಓಶೋ ರಜನೀಶ್। ಕನ್ನಡಕ್ಕೆ: ಚಿದಂಬರ ನರೇಂದ್ರ
ವಿದಾಯ,
ನಾನೂ ದಾಟುತ್ತಿದ್ದೆನೆ ಎಲ್ಲ ದಾಟುವಂತೆ,
ಹುಲ್ಲಿನ ಮೇಲೆ ನಿಂತ ಇಬ್ಬನಿಯಂತೆ.
–ಬಂಝಾನ್
ಶರತ್ಕಾಲದಲ್ಲಿ ಹುಲ್ಲು ಮತ್ತು ಗಿಡ ಮರಗಳ ಎಲೆ ಮೇಲೆ ನಿಂತ ಇಬ್ಬನಿ, ಸೂರ್ಯ ಪ್ರಖರನಾಗುತ್ತಿದ್ದಂತೆಯೇ ಆವಿಯಾಗುತ್ತದೆ. ಜಪಾನಿ ಕಾವ್ಯದಲ್ಲಿ ‘ಇಬ್ಬನಿ’ ಯನ್ನ ಬದುಕಿನ ಕ್ಷಣಿಕತೆಗೆ ಸಶಕ್ತ ರೂಪಕವಾಗಿ ಬಳಸಲಾಗುತ್ತದೆ. ಜಪಾನಿ ಮತ್ತು ಬೌದ್ಧ ಸಾಹಿತ್ಯದಲ್ಲಿ ಜಗತ್ತನ್ನು ಬಹುತೇಕ ‘ಇಬ್ಬನಿಯ ವಿಶ್ವ’ ಎಂದೇ ಬಣ್ಣಿಸಲಾಗುತ್ತದೆ.
ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಇನ್ನೇನು ಯಾವ ಕ್ಷಣದಲ್ಲಾದರೂ ಸಾವು ಅವನನ್ನು ಆವರಿಸಿಕೊಳ್ಳುವದರಲ್ಲಿತ್ತು. ಮಾಸ್ಟರ್ ಸುತ್ತ ಅವನ ಸಮಸ್ತ ಶಿಷ್ಯಗಣ ಸೇರಿಕೊಂಡಿತ್ತು. ಒಬ್ಬ ಶಿಷ್ಯ, ಮಾಸ್ಟರ್ ನ ಪ್ರಶ್ನೆ ಮಾಡಿದ, “ಮಾಸ್ಟರ್, ನೀವು ನಮ್ಮನ್ನ ಬಿಟ್ಟು ಹೋಗುತ್ತಿದ್ದೀರಿ, ನಮಗೆ ನಿಮ್ಮ ಕೊನೆಯ ಸಂದೇಶ ಏನು?”.
ಮಾಸ್ಟರ್ ಮುಗುಳ್ನಗುತ್ತ ಕಣ್ಣು ತೆರೆದು ಉತ್ತರಿಸಿದ, “ಮಾಳಿಗೆ ಮೇಲೆ ಓಡಾಡುತ್ತಿರುವ ಅಳಿಲಿನ ಧ್ವನಿ ನಿಮಗೆ ಕೇಳಿಸುತ್ತಿದೆಯಾ?”
ಮಾತು ಮುಗಿಯುತ್ತಿದ್ದಂತೆಯೇ, ಮಾಸ್ಟರ್ ಕಣ್ಣುಗಳು ಮುಚ್ಚಿಕೊಂಡವು, ಅವನು ತೀರಿಕೊಂಡುಬಿಟ್ಟ. ಶಿಷ್ಯರಿಗೆ ಮಾಸ್ಟರ್ ಇದೆಂಥ ಕೊನೆಯ ಸಂದೇಶ ಹೇಳಿ ತೀರಿಕೊಂಡ ಎಂದು ಆಶ್ಚರ್ಯವಾಯಿತು. “ಮಾಳಿಗೆ ಮೇಲೆ ಓಡಾಡುತ್ತಿರುವ ಅಳಿಲಿನ ಧ್ವನಿ ನಿಮಗೆ ಕೇಳಿಸುತ್ತಿದೆಯಾ?” ಇದೆಂಥ ಕೊನೆಯ ಸಂದೇಶ?
ಆದರೆ ಮಾಸ್ಟರ್ ನ ಆ ಸಂದೇಶ, ಅವನ ಇಡೀ ಬದುಕಿನ ಸಾರವಾಗಿತ್ತು, ಆಯಾ ಕ್ಷಣಗಳಲ್ಲಿ ಬದುಕುವುದು. ಆ ಕ್ಷಣದಲ್ಲಿ ಮಾಸ್ಟರ್, ಮಾಳಿಗೆ ಮೇಲೆ ಓಡಾಡುತ್ತಿದ್ದ ಜೋಡಿ ಅಳಿಲುಗಳ ಸದ್ದನ್ನು ಆಲಿಸುತ್ತಿದ್ದ. ಇಂಥ ಆನಂದದ ಗಳಿಗೆಯಲ್ಲಿ ಯಾಕೆ ಮಾಸ್ಟರ್ ಗೆ ಸಾವಿನ ಬಗ್ಗೆ ಭಯ, ಯಾಕೆ ಕೊನೆಯ ಸಂದೇಶದ ಗೊಡವೆ? ಅವನು ಆ ಕ್ಷಣದಲ್ಲಿ ಜೀವಿಸುತ್ತಿದ್ದ. ಆ ಕ್ಷಣದಲ್ಲಿ ಅವನು ಏನು ಆನಂದಿಸುತ್ತಿದ್ದನೋ ಅದೇ ಅವನ ಕೊನೆಯ ಸಂದೇಶವಾಗಿತ್ತು ಏಕೆಂದರೆ ಆ ಕ್ಷಣವೇ ಅವನ ಇಡೀ ಬದುಕಾಗಿತ್ತು.
ಹೀಗೆ ಬದುಕಿದ ಮನುಷ್ಯನ ಒಳಗೆ ಬದುಕಿನ ಕುರಿತಾಗಿ ಯಾವ ವಿಷಾದ ಇರುವುದು ಸಾಧ್ಯ? ಅವನಲ್ಲಿ ಉಳಿದಿರುವುದು ಕೇವಲ ಕೃತಜ್ಞತೆ, ಒಂದು ಮುಗುಳ್ನಗು ಮಾತ್ರ. ಇದಕ್ಕಿಂತ ಪ್ರಾಮಾಣಿಕ ಕೊನೆಯ ಸಂದೇಶ ಬೇರೆ ಯಾವುದು ಸಾಧ್ಯ? ಒಂದು ಮುಗುಳ್ನಗು ಸಾಕು. ಮತ್ತು ಸಾವಿನ ಬಾಗಿಲಲ್ಲಿ ನಿಂತಾಗಲೂ ಮುಗುಳ್ನಗು ಸಾಧ್ಯವಾಗೋದು, ಯಾರ ಹಿಂದೆ ಬದುಕದೇ ಇರುವ ಕ್ಷಣಗಳು ಸಾಲುಗಟ್ಟಿ ನಿಂತು, “what about me?” ಎಂದು ಕೇಳುತ್ತಿಲ್ಲವೋ ಅವರಿಗೆ ಮಾತ್ರ ಸಾಧ್ಯ.
ಯಾರ ಬದುಕಿನಲ್ಲಿ ಅಪೂರ್ಣ ಕ್ಷಣಗಳು ಇಲ್ಲವೋ, ಯಾರ ಬದುಕಿನಲ್ಲಿ ಪ್ರತೀ ಕ್ಷಣವನ್ನು ಸಂಪೂರ್ಣವಾಗಿ ಬದುಕಲಾಗಿದೆಯೋ, ಅವರ ಬಳಿ ಮೌನ ಮತ್ತು ಮುಗುಳ್ನಗುವಿನ ಹೊರತಾಗಿ ಬೇರೆ ಏನು ಇರುವುದು ಸಾಧ್ಯ? ಪ್ರತೀ ಕ್ಷಣವನ್ನೂ ಪೂರ್ಣವಾಗಿ ಬದುಕಲಾಗಿದೆಯೆಂದರೆ, ಭವಿಷ್ಯದ ಕುರಿತಾಗಿ ಅವರಲ್ಲಿ ಯಾವ ಬಯಕೆಗಳೂ ಇಲ್ಲ. ಅಪೂರ್ಣ ಕ್ಷಣಗಳು ಮಾತ್ರ ಭವಿಷ್ಯವನ್ನು ಎದುರು ನೋಡುತ್ತವೆ, ನಾಳೆಗಾಗಿ ಕಾಯುತ್ತವೆ. ನಿನ್ನೆ ಪೂರ್ಣವಾಗಿದೆ ಎಂದ ಮೇಲೆ ನಾಳೆ ಯಾಕೆ ಬೇಕು? Then this moment is all.

