ನಮ್ಮ ಸಾಧಾರಣ ಬದುಕಿನಲ್ಲಿ ಯಾವ ಅಪಾಯವೂ ಇಲ್ಲದಿರುವಾಗ ನಾವು ಮೊದಲು ನೂರು ವಿಚಾರ ಮಾಡಿ ಆಮೇಲೆ ಕ್ರಿಯೆಗೆ ಇಳಿಯುತ್ತೇವೆ. ಅಪಾಯದ ಸ್ಥಿತಿಯಲ್ಲಿ ಈ ಪ್ರಕ್ರಿಯೆ ಸಂಪೂರ್ಣ ತದ್ವಿರುದ್ಧ, ಮೊದಲು ಕ್ರಿಯೆ ನಂತರ ಥಿಂಕಿಂಗ್… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
Live dangerously ಎನ್ನುತ್ತಾನೆ ನಿಷೆ.
ಯಾಕೆ ಹೀಗೆ ಹೇಳುತ್ತಾನೆ ನಿಷೆ? ಏಕೆಂದರೆ ಅಪಾಯದಲ್ಲಿರುವಾಗ ನೀವು no mind ಸ್ಥಿತಿಗೆ ತಳ್ಳಲ್ಪಡುತ್ತೀರಿ. ಆಗ ಯಾವುದನ್ನೂ ನೀವು ಯೋಚಿಸುವುದಿಲ್ಲ, ಸಹಜ ಸ್ವಾಭಾವಿಕ ಕ್ರಿಯೆಗೆ ಮುಂದಾಗುತ್ತೀರಿ.
ನೀವು ದಾರಿಯಲ್ಲಿ ಹೋಗುತ್ತಿರುವಾಗ ನಿಮಗೆ ಒಂದು ಹಾವು ಎದುರಾಗುತ್ತದೆ. ನೀವು ಥಟ್ಟನೆ ದೂರ ಜಿಗಿಯುತ್ತೀರಿ. ಅದು ವಿಷದ ಹಾವೋ ಅಲ್ಲವೋ ಎಂದು ನೀವು ಯೋಚನೆ ಮಾಡುತ್ತ ಕೂಡುವುದಿಲ್ಲ. ಅಲ್ಲಿ ತರ್ಕ ಮಾಡುತ್ತ ಕೂಡಲು ಅವಕಾಶವಿಲ್ಲ, ನೀವು ನಿಮ್ಮ ಮೈಂಡ್ ಜೊತೆ ವಾದ ಮಾಡುತ್ತ ಕೂರುವುದಿಲ್ಲ. ಹಾವುಗಳು ವಿಷಕಾರಿ ಅವು ಕಚ್ಚುತ್ತವೆ, ಕಚ್ಚಿದರೆ ನಾವು ಸಾಯುತ್ತೇವೆ ಎನ್ನುವ ವಿಷಯ ಕೂಡ ನಿಮ್ಮ ವಿಚಾರಸರಣಿಯಲ್ಲಿ ಇಲ್ಲ. ನೀವು ಹೀಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಚಾರ ಮಾಡುತ್ತ ಕುಳಿತರೆ ಅದು ನಿಮ್ಮ ಪ್ರಾಣಕ್ಕೆ ಎರವಾಗಬಹುದು. ಆಗ ನೀವು ತರ್ಕಕ್ಕೆ ಮುಂದಾಗುವುದಿಲ್ಲ, ಥಟ್ಟನೆ ಕ್ರಿಯೆಗೆ ಇಳಿದು ದೂರ ಜಿಗಿದು ನಿಲ್ಲುತ್ತೀರಿ. ಜಿಗಿದು ನಿಂತ ಮೇಲೆ ನೀವು ಆಲೋಚನೆ ಮಾಡಲು ಶುರು ಮಾಡುತ್ತೀರಿ. ಮೊದಲು ಕ್ರಿಯೆ ನಂತರ ಥಿಂಕಿಂಗ್.
ಆದರೆ ನಮ್ಮ ಸಾಧಾರಣ ಬದುಕಿನಲ್ಲಿ ಯಾವ ಅಪಾಯವೂ ಇಲ್ಲದಿರುವಾಗ ನಾವು ಮೊದಲು ನೂರು ವಿಚಾರ ಮಾಡಿ ಆಮೇಲೆ ಕ್ರಿಯೆಗೆ ಇಳಿಯುತ್ತೇವೆ. ಅಪಾಯದ ಸ್ಥಿತಿಯಲ್ಲಿ ಈ ಪ್ರಕ್ರಿಯೆ ಸಂಪೂರ್ಣ ತದ್ವಿರುದ್ಧ, ಮೊದಲು ಕ್ರಿಯೆ ನಂತರ ಥಿಂಕಿಂಗ್. ಯಾವ ಯೋಚನೆಯಿಲ್ಲದೆ ನೀವು ಕ್ರಿಯೆಗೆ ಮುಂದಾಗುವುದು ನಿಮ್ಮನ್ನ ನೋ ಮೈಂಡ್ ಸ್ಥಿತಿಗೆ ತಳ್ಳುತ್ತದೆ. ಇಂಥ ಸ್ಥಿಯಲ್ಲಿಯೇ ನಿಮ್ಮಿಂದ ಅಪರೂಪಗಳು ಸಂಭವಿಸುತ್ತವೆ. ಒತ್ತಡದಲ್ಲಿರುವಾಗಲೇ, ಯೋಚಿಸಲು ಸಮಯ ಇಲ್ಲದಿರುವಾಗಲೇ ನಿಮ್ಮಿಂದ ಬಹು ಮುಖ್ಯ ಕಾರ್ಯಗಳು ಪೂರ್ತಿಗೊಳ್ಳುವುದನ್ನ ನೀವು ನೆನಪು ಮಾಡಿಕೊಳ್ಳಬಹುದು. ಆದ್ದರಿಂದಲೇ ಅಪಾಯ ಎನ್ನುವುದು ಫ್ಯಾಸಿನೇಟಿಂಗ್.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ತನ್ನ ಶಿಷ್ಯನೊಂದಿಗೆ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ಹೀಗೆ ಪ್ರಯಾಣ ಮಾಡುವಾಗ ಮಾಸ್ಟರ್ ತನ್ನ ಬದುಕಿನ ಅನುಭವಗಳನ್ನು , ಅವುಗಳ ನಡುವಿನ ಪರಸ್ಪರ ಸಂಬಂಧಗಳನ್ನೂ, ಮತ್ತು ಹೇಗೆ ಎಲ್ಲ ಬದುಕುಗಳೂ ಒಂದೇ ಎನ್ನುವುದನ್ನ ತನ್ನ ಶಿಷ್ಯನಿಗೆ ತಿಳಿ ಹೇಳುತ್ತಿದ್ದ. ಶಿಷ್ಯ ಅತ್ಯಂತ ಶಿಸ್ತಿನಿಂದ ಮಾಸ್ಟರ್ ನ ಮಾತುಗಳನ್ನು ಆಲಿಸುತ್ತಿದ್ದ.
“ ಮಾಸ್ಟರ್ ನಿಮ್ಮ ಮಾತಿನ ಅರ್ಥ ಈ ಬದುಕಿನಲ್ಲಿ ಎಲ್ಲವೂ ಒಂದೇ “ ಎಂದು ಅಲ್ಲವೇ? ಶಿಷ್ಯ ಕೇಳಿದ.
“ ಹೌದು, ನೀನು ನನ್ನ ಮಾತುಗಳನ್ನ ಸರಿಯಾಗಿ ಅರ್ಥೈಸಿಕೊಂಡಿರುವಿ” ಸನ್ಯಾಸಿ ಮುಗುಳ್ನಗುತ್ತ ಪ್ರಯಾಣ ಮುಂದುವರೆಸಿದ.
ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ, ಒಂದು ಭಯಂಕರ ಹುಲಿ ಅವರ ದಾರಿಗೆದುರಾಯಿತು.
ಶಿಷ್ಯ, ಶಾಂತ ಚಿತ್ತದಿಂದ ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. “ ಮಾಸ್ಟರ್, ನೋಡಿ ನೀವು ಹೇಳಿದ್ದು ನಿಜ, ಆ ಹುಲಿ ಬೇರೆ ಅಲ್ಲ ನಾನು ಬೇರೆ ಅಲ್ಲ “
ಹೀಗೆ ಹೇಳುತ್ತ ಶಿಷ್ಯ ತಿರುಗಿ ನೋಡಿದರೆ, ಮಾಸ್ಟರ್ ನಾಪತ್ತೆ. ತಲೆ ಎತ್ತಿ ನೋಡಿದರೆ ಮಾಸ್ಟರ್ ಮರದ ಟೊಂಗೆಯೊಂದರ ಮೇಲೆ ಆಗಲೇ ಹತ್ತಿ ಕುಳಿತಿದ್ದಾನೆ.
“ ಯಾಕೆ ಮಾಸ್ಟರ್? ಯಾಕೆ ಭಯ? ನಾವು ಬೇರೆ ಅಲ್ಲ ಈ ಹುಲಿ ಬೇರೆಯಲ್ಲ. ಹಾಗಿದ್ದ ಮೇಲೆ ನಮಗೆ ನಾವೇ ಹೆದರುವುದಾದರೂ ಹೇಗೆ?
ಶಿಷ್ಯ, ಮಾಸ್ಟರ್ ನನ್ನು ಪ್ರಶ್ನೆ ಮಾಡಿದ.
“ ಹೌದು, ನೀನು ಹೇಳೋದು ನಿಜ. ಈ ಸತ್ಯ ನನಗೆ ಗೊತ್ತು, ನಿನಗೆ ಗೊತ್ತು ಆದರೆ ಆ ಹುಲಿಗೆ ಗೊತ್ತಿಲ್ಲ. ಬೇಗ ಬೇಗ ಮರ ಹತ್ತು “ ಮಾಸ್ಟರ್ ಕೂಗಿಕೊಂಡ.

