ಪ್ರೀತಿಸುವುದು ಎಂದರೆ… : ಓಶೋ ವ್ಯಾಖ್ಯಾನ

ಪ್ರೀತಿಯ ಪ್ರಾಥಮಿಕ ಬೇಡಿಕೆ ಎಂದರೆ, “ಇನ್ನೊಬ್ಬ ವ್ಯಕ್ತಿಯನ್ನು ಅವರು ಇರುವ ಹಾಗೆ ಸ್ವೀಕರಿಸುವುದು”… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಅಸೂಯೆ ತುಂಬ ಸಂಕೀರ್ಣವಾದದ್ದು. ಅದು ತನ್ನೊಳಗೆ ಸಾಕಷ್ಟು ಸಂಗತಿಗಳನ್ನು ಒಳಗೊಂಡಿದೆ, ಹೇಡಿತನ ಅವುಗಳಲ್ಲಿ ಒಂದು, ಅಹಂಕಾರ ಇನ್ನೊಂದು, ಎಲ್ಲವನ್ನೂ ತಾನೇ ಹೊಂದಬೇಕು ಎನ್ನುವ ಏಕಸ್ವಾಮ್ಯದ ಬಯಕೆ, ತೀವ್ರಬಗೆಯ ಸ್ಪರ್ಧಾ ಮನೋಭಾವ ಮತ್ತು ತನ್ನ ಕಳಪೆ ಗುಣಮಟ್ಟದ ಕುರಿತು ಆಳವಾದ ಭಯ ಹೀಗೆ ಹಲವಾರು.

ನೀವು ಒಬ್ಬ ವ್ಯಕ್ತಿಯನ್ನ ಪ್ರೀತಿಸುತ್ತಿದ್ದೀರಿ – ಕೊನೆಪಕ್ಷ ಪ್ರೀತಿಸುತ್ತಿದ್ದೇನೆ ಎಂದು ಅಂದುಕೊಂಡಿರುವಿರಿ…… ನೀವು ನಿಜವಾಗಿಯೂ ಆ ವ್ಯಕ್ತಿಯನ್ನು ಪ್ರೀತಮಸುತ್ತಿದ್ದರೆ, ಆ ವ್ಯಕ್ತಿಯ ಕುರಿತಾದ ಅಸೂಯೆ ನಿಮಗೆ ಅಸಾಧ್ಯ. ಆ ವ್ಯಕ್ತಿ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದಾನೆ ಎನ್ನುವುದು ನಿಮಗೆ ಗೊತ್ತಾದರೂ ನಿಮ್ಮ ಪ್ರೀತಿಯಲ್ಲಿ ಯಾವ ವ್ಯತ್ಯಾಸವಾಗುವುದಿಲ್ಲ. ನಿಮ್ಮೊಳಗೆ ಅಸೂಯೆ ಹುಟ್ಟುವುದಿಲ್ಲ ಬದಲಾಗಿ, ನಿಮಗೆ ಇನ್ನೂ ಹೆಚ್ಚು ಖುಶಿಯಾಗುತ್ತದೆ, ನಿಮ್ಮ ಪ್ರೇಮಿಯನ್ನು ಖುಶಿಯಾಗಿಡುತ್ತಿರುವ ಆ ಇನ್ನೊಬ್ಬ ವ್ಯಕ್ತಿಯನ್ನು ಕೃತಜ್ಞತಾ ಭಾವದಿಂದ ನೋಡುತ್ತೀರಿ, ಆ ವ್ಯಕ್ತಿಯ ಬಗ್ಗೆ ನಿಮ್ಮೊಳಗೆ ಆತ್ಮೀಯ ಭಾವ ಬೆಳೆಯುತ್ತದೆ.

ಆದರೆ ಇಂತಹದು ಕೇವಲ ನಿಜದ ಪ್ರೀತಿಗೆ ಮಾತ್ರ ಸಂಬಂಧಿಸಿದ್ದು, ಬಹಳ ಅಪರೂಪದ ಜಾತಿಯದು. ಬಹುತೇಕ ಪ್ರೀತಿಯ ಹೆಸರಲ್ಲಿ ಇರುವುದು ಒಂದು ಐಡಿಯಾ ಮಾತ್ರ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೀರಿ ಎಂದರೆ ನೀವು ಆ ವ್ಯಕ್ತಿಯ ಮೇಲೆ ಹಕ್ಕು ಸಾಧಿಸಲು ಬಯಸುತ್ತಿದ್ದೀರಿ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೀರಿ ಎಂದರೆ, ಆ ವ್ಯಕ್ತಿಗೆ ಬೇರೆ ಯಾರನ್ನೂ ಪ್ರೀತಿಸುವ ಅವಕಾಶವಿಲ್ಲ. ಅವರು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂದರೆ ನಿಮ್ಮನ್ನು ಅವಮಾನ ಮಾಡುತ್ತಿದ್ದಾರೆ, ನೀವು ಕಳಪೆ ಎಂದು ಪ್ರೂವ್ ಮಾಡುತ್ತಿದ್ದಾರೆ, ಪ್ರೀತಿಸಲು ನಿಮಗಿಂತ ಇನ್ನೂ ಹೆಚ್ಚು ಒಳ್ಳೆಯ ವ್ಯಕ್ತಿಗಳಿದ್ದಾರೆ ಎಂದು ಸಾಬೀತು ಮಾಡುತ್ತಿದ್ದಾರೆ. ಇದು ನಿಮ್ಮ ಅಹಂನ ಘಾಸಿ ಮಾಡುತ್ತದೆ, ನಿಮ್ಮ ಪೊಸೆಸ್ಸಿವ್ ನೆಸ್ ನ ಚುಚ್ಚುತ್ತದೆ, ಏಕಸ್ವಾಮ್ಯತೆಯ ನಿಮ್ಮ ಐಡಿಯಾಕ್ಕೆ ಧಕ್ಕೆ ತರುತ್ತದೆ.

ಇಬ್ಬರು ವ್ಯಕ್ತಿಗಳು ನಿಜವಾಗಿಯೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದರೆ, ಅವರು ಯಾವುದೇ ಕಾರಣಕ್ಕಾಗಿ ಒಬ್ಬರಮೇಲೊಬ್ಬರು ಹಗೆತನ ಬೆಳೆಸಿಕೊಳ್ಳುತ್ತಾರೆ ಎನ್ನುವುದನ್ನ, ಯಾವುದೇ ಕಾರಣಕ್ಕಾಗಿ ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುತ್ತಾರೆ ಎನ್ನುವುದನ್ನ, ಯಾವುದೇ ಕಾರಣಕ್ಕಾಗಿ ಇನ್ನೊಬ್ಬರ ಕ್ರಿಯೆಗಳಿಗೆ ಅಡ್ಡಿಯಾಗುತ್ತಾರೆ ಎನ್ನುವುದನ್ನ ನನಗೆ ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ.

ಪ್ರೀತಿಯ ಪ್ರಾಥಮಿಕ ಬೇಡಿಕೆ ಎಂದರೆ, “ಇನ್ನೊಬ್ಬ ವ್ಯಕ್ತಿಯನ್ನು ಅವರು ಇರುವ ಹಾಗೆ ಸ್ವೀಕರಿಸುವುದು”. ಮತ್ತು ಪ್ರೀತಿ ಯಾವತ್ತು ಇನೊಬ್ಬರನ್ನು ತಮ್ಮ ಅವರ ಬಗ್ಗೆಯ ಗ್ರಹಿಕೆಗೆ ಅನುಗುಣವಾಗಿ ಬದಲಾಯಿಸಬಯಸುವುದಿಲ್ಲ. ಆಗ ನೀವು ಇನ್ನೊಬ್ಬರ ಗುಣ ಸ್ವಭಾವಗಳನ್ನು ಟ್ರಿಮ್ ಮಾಡಿ ನಿಮ್ಮವರನ್ನಾಗಿಸಿಕೊಳ್ಳಲು ಬಯಸುವುದಿಲ್ಲ. ಆದರೆ ಬಹುತೇಕ ಜಗತ್ತಿನಲ್ಲಿ ನಡೆಯುತ್ತಿರುವುದು ಈ ಬಗೆಯ ಮ್ಯಾನುಪ್ಯುಲೇಷನ್.

ತಾವು ಪ್ರೇಮಿಗಳು ಎಂದು ತಿಳಿದುಕೊಂಡಿರುವ ಬಹುತೇಕರು, ಇನ್ನೊಬ್ಬರ ಮೇಲೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಸೂಕ್ಷ್ಮವಾಗಿ ದಬ್ಬಾಳಿಕೆ ಮಾಡುತ್ತ ಅವರನ್ನು ತಮ್ಮ ಅವರ ಕುರಿತಾದ ಇಮೇಜ್ ಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅವರು ಇನ್ನೊಬ್ಬರನ್ನು ಸೂತ್ರದ ಬೊಂಬೆಯ ಹಾಗೆ ತಮ್ಮ ಇಚ್ಛೆಗೆ ಅನುಗುಣವಾಗಿ ಕುಣಿಸಬಯಸುತ್ತಾರೆ. ಅದೇ ಕಾಲಕ್ಕೆ ಆ ಇನ್ನೊಬ್ಬರು ಕೂಡ ನಿಮ್ಮನ್ನು ತಮ್ಮ ಬಯಕೆಗನುಗುಣವಾಗಿ ಆಡಿಸಲು ಬಯಸುತ್ತಿದ್ದಾರೆ. ಸೂತ್ರದ ದಾರಗಳು ಒಂದಕ್ಕೊಂದು ಅಡ್ಡಿಯಾಗಿಯಾಗುತ್ತ ಅಲ್ಲೊಂದು ಸಿಕ್ಕು ಏರ್ಪಟ್ಟಿದೆ. ಈ ಸಿಕ್ಕು ಕಾರಣವಾಗಿಯೇ ದುಗುಡ, ಸಂಕಟ ಎಲ್ಲ.

ಉದಾಹರಣೆಗೆ ಲಿಯೋ ಟಾಲ್ಸ್ಟೊಯ್ ನ ತೆಗೆದುಕೊಳ್ಳಿ, ಸಂಸಾರ ಜೀವನದಲ್ಲಿ ಅಪಾರ ಶೋಷಣೆಗೆ ಒಳಗಾದವನು ತನ್ನ ದಗುಡಗಳಿಗೆ ಪರಿಹಾರವೆಂಬಂತೆ ಪ್ರೇಮದ ಕುರಿತಾದ ಮಹಾ ಮಹಾ ಕೃತಿಗಳನ್ನು ಕಟ್ಟಿಕೊಟ್ಟ.

ಪ್ರೀತಿ, ಸ್ವಾತಂತ್ರ್ಯಕ್ಕೆ ಅನುವು ಮಾಡಿ ಕೊಡುತ್ತದೆ.
ಪ್ರೀತಿ, ವ್ಯಕ್ತಿಯ ಸ್ವಂತ ಬಯಕೆಗಳನ್ನು ಪೋಷಿಸುತ್ತ, ಅವು ಅರಳಲು, ಅವುಗಳ ಮೂಲಕ ಆ ವ್ಯಕ್ತಿ ಆನಂದವನ್ನು ಹೊಂದಲು ಅವಕಾಶ ಮಾಡಿಕೊಡುತ್ತದೆ.
ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವಿರಾದರೆ, ಅವರ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರ ಅಂತರಂಗದ ಅಸ್ತಿತ್ವವನ್ನು ಅವರ ಒಪ್ಪಿಗೆ ಇಲ್ಲದೆ ಆಕ್ರಮಿಸಿಕೊಳ್ಳಲು ಬಯಸುವುದಿಲ್ಲ. ಅವರು ಹಕ್ಕಿಯಂತೆ ಹಾರುವುದನ್ನ ಆನಂದಿಸುತ್ತ, ಆ ಹಾರುವಿಕೆಯಲ್ಲಿ ನಿಮ್ಮ ಸ್ವಾತಂತ್ರ್ಯದ ಎಳೆಗಳನ್ನು ಕಾಣಬಯಸುತ್ತೀರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.