ಕ್ಷಣದಿಂದ ಕ್ಷಣಕ್ಕೆ ಬದುಕನ್ನು ಅದರ ಸಂಪೂರ್ಣತೆಯಲ್ಲಿ ಬದುಕುವುದು ನನ್ನ ಬೋಧನೆಯ ಸಾರ. ಯಾರಿಗೆ ಬದುಕಿನ ರಹಸ್ಯಗಳ ಪರಿಚಯವಾಗಿದೆಯೋ ಅವರಿಗೆ, ನೀವು ಏನೇ ಮಾಡಿದರೂ ಅದನ್ನು ಮೈದುಂಬಿ ಮಾಡಬೇಕು ಎನ್ನುವ ವಿಷಯದಲ್ಲಿ ಯಾವ ಗೊಂದಲವೂ ಇರುವುದಿಲ್ಲ…” ಅನ್ನುತ್ತಾನೆ ಜೆನ್ ಮಾಸ್ಟರ್ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ರಾಜ್ಯದ ದೊರೆಯೊಬ್ಬ ಝೆನ್ ಮಾಸ್ಟರ್ ನ ಭೇಟಿಗೆ ಬಂದ. ದೊರೆ ಬಂದಾಗ ಮಾಸ್ಟರ್ ನ ಆಶ್ರಮದ ಎದುರು ಇದ್ದ ಗಾರ್ಡನ್ ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಕಟ್ಟಿಗೆ ಕತ್ತರಿಸುತ್ತಿದ್ದ. “ನೀನು ಯಾರು ಎಂದು ಕೇಳಬಹುದೆ?” ದೊರೆ ಆ ವಯಸ್ಸಾದ ವ್ಯಕ್ತಿಯನ್ನು ಪ್ರಶ್ನೆ ಮಾಡಿದ.
“ನಾನು ಕಟ್ಟಿಗೆ ಕತ್ತರಿಸುವವನು , ಕಾಣಿಸಲ್ವಾ?” ಆ ಮುದುಕ ಸ್ವಲ್ಪ ಒರಟಾಗಿಯೇ ಉತ್ತರಿಸಿದ.
“ಅದು ನನಗೆ ಕಾಣಿಸ್ತಾ ಇದೆ, ನಾನು ನಿಮ್ಮ ಮಾಸ್ಟರ್ ನ ಭೇಟಿ ಮಾಡಬೇಕು ಎಲ್ಲಿ ಅವ? “ ದೊರೆ ಪ್ರಶ್ನೆ ಮಾಡಿದ.
“ನನ್ನ ಮಾಸ್ಟರ್? ನನಗ್ಯಾವ ಮಾಸ್ಟರ್ ಇಲ್ಲ” ಮತ್ತೆ ಮುದುಕ ತನ್ನ ಒರಟುತನ ಮುಂದುವರೆಸಿದ.
ಈ ವ್ಯಕ್ತಿ ಬಹುಶಃ ಹುಚ್ಚ ಇರಬಹುದು ಎಂದುಕೊಂಡ ದೊರೆ, ಮಾತು ಕೊನೆಮಾಡುವುದಕ್ಕೆ ಮತ್ತೆ ಪ್ರಶ್ನೆ ಮಾಡಿದ, “ಇದು ಝೆನ್ ಮಾನೆಸ್ಟ್ರಿ ಅಲ್ವಾ?”
“ಇರಬಹುದು” ವಯಸ್ಸಾದ ವ್ಯಕ್ತಿಯ ಉತ್ತರ.
ಅಲ್ಲಿಂದ ಹೊರಟ ದೊರೆ ಆಶ್ರಮದ ಒಳಗೆ ಸ್ವಲ್ಪ ಹೊತ್ತು ನಡೆದು, ಒಂದು ಪುಟ್ಟ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆಯೇ, ಅಲ್ಲಿ ತೇಜಸ್ಸಿನಿಂದ ಹೊಳೆಯುತ್ತಿದ್ದ ಒಬ್ಬ ವಯಸ್ಸಾದ ವ್ಯಕ್ತಿ ಝೆನ್ ಮುದ್ರೆಯಲ್ಲಿ ಕುಳಿತಿದ್ದ.
“ಏನಾಗುತ್ತಿದೆ ಇಲ್ಲಿ? ನಿಮಗೆ ಅವಳಿ ಸೋದರ ಇದ್ದಾನೆಯೇ?” ದೊರೆ ಆಶ್ಚರ್ಯದಿಂದ ಪ್ರಶ್ನೆ ಮಾಡಿದ.
“ಇರಬಹುದು” ಮತ್ತೆ ಒಂದೇ ವಾಕ್ಯದ ಉತ್ತರ.
“ಆಶ್ರಮದ ಗೇಟ್ ನಲ್ಲಿ ಕಟ್ಟಿಗೆ ಒಡೆಯುತ್ತಿರೋದು ಯಾರು?” ರಾಜನ ಪ್ರಶ್ನೆ.
“ಯಾರು ಅಲ್ಲಿ ಕಟ್ಟಿಗೆ ಒಡೆಯುತ್ತಿದ್ದಾನೆಯೋ ಅವನು ಕಟ್ಟಿಗೆ ಒಡೆಯುವವ. ಅವನ ಬಗ್ಗೆ ಇಲ್ಲಿ ಯಾಕೆ ಮಾತು? ನನ್ನ ಜೊತೆ ಮಾತಾಡು, ನಾನು ಝೆನ್ ಮಾಸ್ಟರ್” ಉತ್ತರ ಥಟ್ ಅಂತ ಬಂತು.
ರಾಜನ ಮುಖದಲ್ಲಿನ ಗೊಂದಲ ಕಂಡು, ಮಾಸ್ಟರ್ ತಾನೇ ಮಾತು ಮುಂದುವರೆಸಿದ, “ಆಶ್ಚರ್ಯ ಬೇಡ, ಕಟ್ಟಿಗೆ ಒಡೆಯುವಾಗ ನಾನು ಒಬ್ಬ ಪರಿಪೂರ್ಣ ಕಟ್ಟಿಗೆ ಒಡೆಯುವವ, ನನ್ನ ಬೇರೆಯಾಗಿ ಗುರುತಿಸುವುದು ಸಾಧ್ಯವೇ ಇಲ್ಲ. ಝೆನ್ ಪಾಠ ಮಾಡುವಾಗ ನಾನು ಝೆನ್ ಮಾಸ್ಟರ್, ಆಗ ನನ್ನ ಮುಖದಲ್ಲಿ ಕಟ್ಟಿಗೆ ಒಡೆಯುವವನ ಯಾವ ಕಳೆಯೂ ಇರುವುದಿಲ್ಲ. ಪೂರ್ತಿಯಾಗಿ ನಾನು ಒಬ್ಬ ಝೆನ್ ಮಾಸ್ಟರ್. ಮುಂದಿನಬಾರಿ ನೀನು ಬಂದಾಗ ಸರೋವರದಲ್ಲಿ ಮೀನು ಹಿಡಿಯುತ್ತ ಕುಳಿತಿರುವ ಒಬ್ಬ ಪರಿಪೂರ್ಣ ಮೀನುಗಾರ ನಿನ್ನ ಕಣ್ಣಿಗೆ ಬೀಳಬಹುದು. ನಾನು ಏನೇ ಮಾಡಿದರೂ ಅದರಲ್ಲಿ ಪೂರ್ತಿಯಾಗಿ ಒಂದಾಗಿಬಿಡುತ್ತೇನೆ. ನೀನು ನನ್ನ ಆ ಅವತಾರ ಬಿಟ್ಟು ಬೇರೆ ಯಾವ ಗುರುತಿನಲ್ಲೂ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ”.
ಕ್ಷಣದಿಂದ ಕ್ಷಣಕ್ಕೆ ಬದುಕನ್ನು ಅದರ ಸಂಪೂರ್ಣತೆಯಲ್ಲಿ ಬದುಕುವುದು ನನ್ನ ಬೋಧನೆಯ ಸಾರ. ಯಾರಿಗೆ ಬದುಕಿನ ರಹಸ್ಯಗಳ ಪರಿಚಯವಾಗಿದೆಯೋ ಅವರಿಗೆ, ನೀವು ಏನೇ ಮಾಡಿದರೂ ಅದನ್ನು ಮೈದುಂಬಿ ಮಾಡಬೇಕು ಎನ್ನುವ ವಿಷಯದಲ್ಲಿ ಯಾವ ಗೊಂದಲವೂ ಇರುವುದಿಲ್ಲ.
ಯಾವಾಗ ನಿಮ್ಮ ಕ್ರಿಯೆಯಲ್ಲಿ ಪರಿಪೂರ್ಣತೆ ಇರುತ್ತದೆಯೋ, ಯಾವಾಗ ನಿಮ್ಮ ಸಾಕ್ಷಿಪ್ರಜ್ಞೆ ಮೌನವಾಗಿ ಅದನ್ನು ಗಮನಸುತ್ತಿರುತ್ತದೆಯೋ ಆಗ ನಿಮಗೆ ಸುಖದ ರಾಗ ಅಷ್ಟೇ ಅಲ್ಲ ಯಾವುದು ಅದಕ್ಕಿಂತ ಬಹಳ ದೊಡ್ಡದೋ, ಯಾವುದನ್ನ ನಾವು ಆನಂದಯಮಯ ಎನ್ನುತ್ತೇವೆಯೋ ಈ ಸ್ಥಿತಿಯ ರಹಸ್ಯ ನಿಮ್ಮದಾಗುವುದು.
ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.
ಉದ್ಯಾನವನದ ಬಾಗಿಲಲ್ಲೇ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?
“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.

