ಪ್ರತಿಯೊಂದರಲ್ಲೂ ಆನಂದವನ್ನು ಗುರುತಿಸಿ

ಪ್ರತಿದಿನದ ಕೆಲಸಗಳಲ್ಲಿ ತೃಪ್ತಿಯನ್ನ, ಆನಂದವನ್ನು ಗುರುತಿಸಿಕೊಳ್ಳುವುದು ಝೆನ್ ನ ಅತ್ಯಂತ ಪ್ರಮುಖವಾದ ಕಾನ್ಸೆಪ್ಟ್ ~ ಚಿದಂಬರ ನರೇಂದ್ರ

“Before enlightenment: Chop wood, carry water. After enlightment: Chop wood, carry water.”

– old Zen saying

ಎಂಥ ಅದ್ಭುತವಾದ ಮಾತು ಇದು. ಈ ಮಾತು ಜ್ಞಾನೋದಯದ ಕುರಿತಾಗಿ ಸಾವಿರಾರು ವರ್ಷಗಳಿಂದ ನಾವು ನಮ್ಮ ಮೈಂಡ್ ಗಳಲ್ಲಿ ಸಾಕಿಕೊಂಡು ಬಂದಿರುವ ಭ್ರಮೆಗಳನ್ನೆಲ್ಲ ಒಡೆದು ಚೂರು ಚೂರು ಮಾಡುತ್ತದೆ. ಜ್ಞಾನೋದಯ ಎಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಯಾವುದೆಂದರೆ, ಸಾಧಕನೊಬ್ಬ ಬೆಟ್ಟದ ಮೇಲಿನ ಗುಹೆಯಲ್ಲಿ ಧ್ಯಾನ ಮಗ್ನನಾಗಿರುವುದು. ಈ ಹೇಳಿಕೆಯ ಹಿಂದಿನ ಝೆನ್ ಐಡಿಯಾ ಏನೆಂದರೆ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ಮನೋಮಗ್ನತೆಯನ್ನು (mindfulness) ಸಾಧಿಸುವುದು. ಹೀಗೆ ಮಾಡುವುದು ನಮ್ಮ ಪ್ರಜ್ಞೆ ಮತ್ತು ಅರಿವನ್ನು ಎತ್ತರಕ್ಕೆ ಕರೆದೊಯ್ಯುವುದರ ಜೊತೆ ಜೊತೆಗೆ ನಮ್ಮೊಳಗೆ ಕೃತಜ್ಞತೆಯ ಪರಿಕಲ್ಪನೆಯನ್ನೂ ಮೂಡಿಸುತ್ತದೆ.

ದಿನದ ಯಾವುದೇ ಕ್ರಿಯೆಯನ್ನು ತೆಗೆದುಕೊಳ್ಳಿ ಉದಾಹರಣೆಗೆ, ಮುಂಜಾನೆ ನಿಮ್ಮ ಕೆಲಸದ ಜಾಗಕ್ಕೆ ಹೋಗುವುದು. ಕೇವಲ ತಲೆಬಗ್ಗಿಸಿಕೊಂಡು ಬಾಗಿಲ ಒಳಗೆ ಪ್ರವೇಶ ಮಾಡಬೇಡಿ. ಬದಲಾಗಿ ನಿಮ್ಮ ಸುತ್ತಮುತ್ತಲಿನ ಎಲ್ಲದರ ಬಗ್ಗೆ ಮೈಂಡ್ ಫುಲ್ ಆಗಿ. ಅದು ಪಾರ್ಕಿಂಗ್ ಲಾಟ್ ಆಗಿರಬಹುದು, ರಿಸೆಪ್ಷನ್ ಆಗಿರಬಹುದು, ಮೇಲಿನ ಆಕಾಶ, ಅಲ್ಲಿನ ಮೋಡಗಳು ಎಲ್ಲವನ್ನೂ ನಿಮ್ಮ ಒಳಗೆ ಸೇರಿಸಿಕೊಳ್ಳಿ. ಆಳವಾಗಿ ಉಸಿರಾಡುತ್ತ ಸರಳವಾಗಿ ಕ್ರಿಯೆಗೆ ಇಳಿಯಿರಿ. ನಿಮ್ಮ ಜೊತೆ ಕೆಲಸ ಮಾಡುತ್ತಿರುವ ಪ್ರತಿಯೊಂದನ್ನೂ ಅಪ್ರಿಷಿಯೇಟ್ ಮಾಡಿ. ಪ್ರತಿದಿನದ ಕೆಲಸಗಳಲ್ಲಿ ತೃಪ್ತಿಯನ್ನ, ಆನಂದವನ್ನು ಗುರುತಿಸಿಕೊಳ್ಳುವುದು ಝೆನ್ ನ ಅತ್ಯಂತ ಪ್ರಮುಖವಾದ ಕಾನ್ಸೆಪ್ಟ್.

ಒಂದು ದಿನ ಝೆನ್ ಮಾಸ್ಟರ್, ತನ್ನ ಐವರು ಶಿಷ್ಯರು ದಾರಿಯಲ್ಲಿ ಸೈಕಲ್ ಮೇಲೆ ಬರುತ್ತಿರುವುದನ್ನ ಗಮನಿಸಿದ. ಅವರು ಸೈಕಲ್ ನಿಂದ ಇಳಿದೊಡನೆ ನೇರವಾಗಿ ಅವರ ಹತ್ತಿರ ಹೋಗಿ ಪ್ರಶ್ನೆ ಮಾಡಿದ. “ ನೀವು ಯಾಕೆ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದೀರಿ? “

ಮೊದಲ ಶಿಷ್ಯ ಉತ್ತರಿಸಿದ. “ ಆಲೂಗಡ್ಡೆ ಮೂಟೆ ಬೆನ್ನ ಮೇಲೆ ಹೊತ್ತು ತರುವುದು ಕಷ್ಟ ಮಾಸ್ಟರ್ ಅದಕ್ಕೇ ಸೈಕಲ್ ಉಪಯೋಗ ಮಾಡುತ್ತಿದ್ದೀನಿ”

“ ಜಾಣ ನೀನು” ಮಾಸ್ಟರ್ ಉತ್ತರಿಸಿದರು. “ವಯಸ್ಸಾದ ಮೇಲೆ ನೀನು, ನನ್ನ ಹಾಗೆ ಬೆನ್ನು ಬಾಗಿಸಿಕೊಂಡು ಓಡಾಡಬೇಕಿಲ್ಲ”

ಎರಡನೇಯ ಶಿಷ್ಯ ಉತ್ತರಿಸಿದ “ ದಾರಿ ಬದಿಯ ಗಿಡ ಮರಗಳು, ಹೊಲ ಗದ್ದೆಗಳನ್ನು ನೋಡುವುದೆಂದರೆ ನನಗೆ ಖುಶಿ ಮಾಸ್ಟರ್, ಅದಕ್ಕೇ ಸೈಕಲ್ ಹತ್ತಿ ವಿಹಾರಕ್ಕೆ ಹೋಗಿದ್ದೆ”
“ ಒಳ್ಳೆಯ ವಿಷಯ, ನಿನಗೆ ಒಳ್ಳೆಯ ಕಣ್ಣಗಳಿವೆ, ತೆರೆದ ಕಣ್ಣುಗಳಿಂದ ಜಗತ್ತನ್ನ ಗಮನಿಸುತ್ತಿದ್ದೀಯಾ” ಮಾಸ್ಟರ್ ಉತ್ತರಿಸಿದರು.

ಮೂರನೇಯ ಶಿಷ್ಯ ಉತ್ತರಿಸಿದ “ ಸೈಕಲ್ ನ ಪೆಡಲ್ ತುಳಿಯುವಾಗಲೆಲ್ಲ ನಾನು ಮಂತ್ರ ಪಠಣ ಮಾಡುತ್ತೇನೆ ಮಾಸ್ಟರ್, ಸೈಕಲ್ ತುಳಿಯುವುದು ನನಗೆ ಮನಸ್ಸನ್ನು ಕೇಂದ್ರಿಕರಿಸುವ ಒಂದು ಸಾಧನ “
“ ಹೌದು, ನಿನ್ನ ಮನಸ್ಸು ಸೈಕಲ್ ನ ಗಾಲಿಯಂತೆ ಸರಾಗವಾಗಿ ಉರುಳುತ್ತದೆ” ಮಾಸ್ಟರ್ ಉತ್ತರಿಸಿದರು.

ನಾಲ್ಕನೇಯ ಶಿಷ್ಯ ಉತ್ತರಿಸಿದ “ ಸೈಕಲ್ ತುಳಿಯುವಾಗ ನಾನು ಸುತ್ತ ಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಒಂದಾಗಿರುತ್ತೇನೆ ಮಾಸ್ಟರ್” ಈ ಉತ್ತರ ಕೇಳಿ ಮಾಸ್ಚರ್ ಗೆ ಖುಶಿಯಾಯಿತು “ ನೀನು ಯಾರೀಗೂ ಕೇಡಾಗದ ಸುವರ್ಣ ಮಾರ್ಗದಲ್ಲಿದ್ದೀಯ” ಮಾಸ್ಟರ್ ಉತ್ತರಿಸಿದರು.

“ ನಾನು ಸೈಕಲ್ ಸವಾರಿ ಮಾಡೋದು ಸೈಕಲ್ ಸವಾರಿ ಮಾಡಲಿಕ್ಕೆ ಮಾಸ್ಟರ್” ಐದನೇಯ ಶಿಷ್ಯ ಉತ್ತರಿಸಿದ.
ತಕ್ಷಣ ಮಾಸ್ಟರ್ ಐದನೇಯ ಶಿಷ್ಯನ ಕಾಲ ಬಳಿ ಕುಳಿತುಕೊಂಡು ಕೇಳಿಕೊಂಡರು “ದಯಮಾಡಿ ನನ್ನನ್ನು ಶಿಷ್ಯನಾಗಿ ಸ್ವೀಕರಿಸು.”

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.