ನಗು ಕೂಡ ವ್ಯಾಪಾರದ ಸಂಗತಿಯಾಗಿಬಿಟ್ಟಿದೆ. ನಗು ಈಗ ಕೇವಲ ಶುದ್ಧ ನಗುವಾಗಿ ಉಳಿದಿಲ್ಲ ಅದು ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರದ ಕಾರಣವಾಗಿಬಿಟ್ಟಿದೆ. ನಗು ತನ್ನ ಎಲ್ಲ ಶುದ್ಧತೆಯನ್ನು ಕಳೆದುಕೊಂಡುಬಿಟ್ಟಿದೆ. ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ಕಾಫೀ ಹೌಸ್ ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಹೇಳುತ್ತಿದ್ದ ಸುದೀರ್ಘ ಕಥೆಯನ್ನು ನಸ್ರುದ್ದೀನ ತದೇಕಚಿತ್ತದಿಂದ ಕೇಳುತ್ತಿದ್ದ.
ಆದರೆ ಆ ಮನುಷ್ಯ ಎಷ್ಟು ಅಸ್ಪಷ್ಟವಾಗಿ, ಎಷ್ಟು ಬೋರಿಂಗ್ ಆಗಿ ಕತೆ ಹೇಳುತ್ತಿದ್ದನೆಂದರೆ ಕೊನೆಗೆ ಆತ ಕತೆಯ ಪಂಚಲೈನ್ ಕೆಡಿಸಿಬಿಟ್ಟ. ನಸ್ರುದ್ದೀನ್ ನ ಹೊರತಾಗಿ ಬೇರೆ ಯಾರೂ ಕತೆ ಕೇಳಿ ನಗಲಿಲ್ಲ ಆದರೆ ನಸ್ರುದ್ದೀನ್ ಮಾತ್ರ ಮನಸಾರೆ ನಕ್ಕ.
ಆ ಅಪರಿಚಿತ ವ್ಯಕ್ತಿ ಅಲ್ಲಿಂದ ಹೊರಟುಹೋದ ಮೇಲೆ ಅಲ್ಲಿದ್ದ ಎಲ್ಲರೂ ನಸ್ರುದ್ದೀನ್ ನ ಪ್ರಶ್ನೆ ಮಾಡಿದರು, “ಯಾಕೆ ನಸ್ರುದ್ದೀನ್ ಅಷ್ಟು ನಗುವಂಥದ್ದು ಏನಿತ್ತು?”
“ನಾನು ಯಾವಾಗಲೂ ನಕ್ಕು ಬಿಡುತ್ತೇನೆ. ಅಕಸ್ಮಾತ್ ನಗದಿದ್ದರೆ ಅವರು ಇನ್ನೊಮ್ಮೆ ಜೋಕ್ ರಿಪೀಟ್ ಮಾಡುವ ಅಪಾಯವಿರುತ್ತದೆ” ನಸ್ರುದ್ದೀನ್ ಉತ್ತರಿಸಿದ.
ಎಲ್ಲರಿಗೂ ತಮ್ಮದೇ ಆದ ಕಾರಣಗಳಿರುತ್ತವೆ. ನಗು ಕೂಡ ವ್ಯಾಪಾರದ ಸಂಗತಿಯಾಗಿಬಿಟ್ಟಿದೆ. ನಗು ಈಗ ಕೇವಲ ಶುದ್ಧ ನಗುವಾಗಿ ಉಳಿದಿಲ್ಲ ಅದು ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರದ ಕಾರಣವಾಗಿಬಿಟ್ಟಿದೆ. ನಗು ತನ್ನ ಎಲ್ಲ ಶುದ್ಧತೆಯನ್ನು ಕಳೆದುಕೊಂಡುಬಿಟ್ಟಿದೆ.
ನಿಮಗೆ ಪುಟ್ಟ ಹುಡುಗರಂತೆ ಮುಗ್ಧವಾಗಿ ನಗುವುದು ಸಾಧ್ಯವಾಗುವುದೇ ಇಲ್ಲ. ಈಗ ನೀವು ಯಾವುದೋ ಒಂದು ಉದ್ದೇಶಕ್ಕೆ ನಗುತ್ತೀರಿ, ಅದನ್ನು ಒಂದು ವ್ಯಾಪಾರದಂತೆ ಉಪಯೋಗ ಮಾಡುತ್ತೀರಿ. ನಕ್ಕರೆ ನನಗೇನು ಉಪಯೋಗ ಎಂದು ಲೆಕ್ಕ ಹಾಕುತ್ತೀರಿ. ನಕ್ಕರೆ ಎಲ್ಲಿ ಅವರು ತಪ್ಪು ತಿಳಿಯಬಹುದೋ ಎಂದು ಸಂಕೋಚ ಮಾಡಿಕೊಳ್ಳುತ್ತೀರಿ. ಕೆಲವೊಮ್ಮೆ ಅವರು ಹೇಳಿದ ಮೇಲೆ ಅದು ಮಹತ್ತರವಾಗಿರಲೇ ಬೇಕು ಎಂದುಕೊಂಡು ಭಿಡೆಗೆ ಬಿದ್ದು ನಗುತ್ತೀರಿ. ಒಮ್ಮೊಮ್ಮೆ ನಕ್ಕುಬಿಟ್ಟರೆ ಎಲ್ಲಿ ಅವರು ನಮ್ಮನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಬಹುದೋ ಎಂದು ಬಿಗುಮಾನ ಮಾಡುತ್ತೀರಿ.
ಆದರೆ ನಿಮ್ಮ ನಗು ಶುದ್ಧ ಮುಗ್ಧ ನಗುವಾಗಿರದಿದ್ದಾಗ, ನೀವು ಮಹತ್ವವಾದುದ್ದನ್ನ, ಅಮೂಲ್ಯವಾದುದ್ದನ್ನ ಕಳೆದುಕೊಳ್ಳುತ್ತಿದ್ದೀರಿ. ನೀವು ನಿಮ್ಮ ಪವಿತ್ರತೆಯನ್ನ ನಿಮ್ಮ ಮುಗ್ಧತೆಯನ್ನ ಕಳೆದುಕೊಳ್ಳುತ್ತಿದ್ದೀರಿ.
Source: Osho – A Sudden Clash of Thunder

