ಮನುಷ್ಯ ಒಂದು ಯೋಚನೆ ಮಾಡುವ ಕೊಳಲಿನ ಹಾಗೆ. ಆದರೆ ಅವನ ಮಹತ್ಕಾರ್ಯಗಳು ಅವನು ಯೋಚಿಸುವುದನ್ನ, ಲೆಕ್ಕಹಾಕುವುದನ್ನ ಬಿಟ್ಟಾಗ ಮಾತ್ರ…: Thich Nhat Hanh; ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.
ಧ್ಯಾನ
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.
Thich Nhat Hanh
********************
ಮನುಷ್ಯ ಒಂದು ಯೋಚನೆ ಮಾಡುವ ಕೊಳಲಿನ ಹಾಗೆ. ಆದರೆ ಅವನ ಮಹತ್ಕಾರ್ಯಗಳು ಅವನು ಯೋಚಿಸುವುದನ್ನ, ಲೆಕ್ಕಹಾಕುವುದನ್ನ ಬಿಟ್ಟಾಗ ಮಾತ್ರ. ಹಲವಾರು ವರ್ಷಗಳ ಸಾಧನೆ, ಸ್ವ ಮರೆಯುವಿಕೆಯ ಕಲೆಯ ಮೂಲಕ ಅವನಲ್ಲಿ ಮಗುತನ ವನ್ನು ಮತ್ತೆ ಪ್ರತಿಷ್ಠಾಪಿಸಬಹುದು.
ಈ ಸ್ಥಿತಿಯನ್ನು ತಲುಪಿದಾಗ ಮನುಷ್ಯ ಯೋಚನೆ ಮಾಡುತ್ತಾನೇನೋ ಹೌದು ಆದರೆ ಯೋಚಿಸುತ್ತಿಲ್ಲ ಕೂಡ. ಅವನು ಆಕಾಶದಿಂದ ಕೆಳಗೆ ಬೀಳುತ್ತಿರುವ ಮಳೆಯಂತೆ ಯೋಚಿಸುತ್ತಾನೆ, ಸಮುದ್ರದ ನೀರಿನ ಮೇಲಿನ ಅಲೆಗಳಂತೆ ಯೋಚಿಸುತ್ತಾನೆ, ಅವನು ರಾತ್ರಿಯನ್ನು ಸುಂದರಗೊಳಿಸುವ ನಕ್ಷತ್ರಗಳಂತೆ ಯೋಚಿಸುತ್ತಾನೆ, ಅವನು ಸಮಾಧಾನದಿಂದ ವಸಂತದ ತಂಗಾಳಿಯಲ್ಲಿ ಚಿಗುತ್ತಿರುವ ಹಸಿರು ಎಲೆಗಳಂತೆ ಯೋಚಿಸುತ್ತಾನೆ. ಹೌದು ಈಗ ಅವನು ಸ್ವತಃ ತಾನೆ ಮಳೆ, ಸಮುದ್ರ, ನಕ್ಷತ್ರ, ಹಸಿರು ಎಲೆಯಾಗಿದ್ದಾನೆ.
ಯಾವಾಗ ಮನುಷ್ಯ ಈ ಹಂತದ ಅಧ್ಯಾತ್ಮಿಕ ಸ್ಥಿತಿಯನ್ನು ತಲುಪುತ್ತಾನೋ ಆಗ ಅವನು ಬದುಕಿನ ಝೆನ್ ಕಲಾವಿದನಾಗುತ್ತಾನೆ. ಪೇಂಟರ್ ಗಳಂತೆ ಅವನಿಗೆ ಕ್ಯಾನವಾಸ್, ಬ್ರಶ್ ಮತ್ತು ಬಣ್ಣಗಳ ಅವಶ್ಯಕತೆಯಿಲ್ಲ, ಮತ್ತು ಬಿಲ್ಲುಗಾರನಂತೆ ಅವನಿಗೆ ಬಿಲ್ಲು, ಬಾಣ ಮತ್ತು ಗುರಿಗಳು ಬೇಕಾಗಿಲ್ಲ.
ಈಗ ಅವನ ದೇಹದ ಅವಯವಗಳೇ ಅವನ ಸಲಕರಣೆಗಳು. ಅವನ ಝೆನ್ ಬದುಕು ಈ ಸಲಕರಣೆಗಳ ಮೂಲಕವೇ ಅಭಿವ್ಯಕ್ತಿಗೊಳ್ಳುತ್ತ ಹೋಗುತ್ತದೆ. ಅವನ ಕೈ ಕಾಲುಗಳೇ ಅವನ ಬ್ರಶ್ ಗಳು, ಇವುಗಳ ಮೂಲಕವೇ ಅವನು ಬ್ರಹ್ಮಾಂಡದ ಕ್ಯಾನವಾಸಿನ ಮೇಲೆ ತನ್ನ ಬದುಕನ್ನ ಚಿತ್ರಿಸುತ್ತ ಹೋಗುತ್ತಾನೆ. ಈ ಚಿತ್ರವನ್ನೇ ಇತಿಹಾಸ ಎನ್ನುತ್ತಾರೆ.
ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ.
ಅವನ ಪ್ರೀತಿ ಪಾತ್ರ ಮತ್ತು ಅವನ ವಾರಸುದಾರ ಶಿಷ್ಯ, ಪ್ರಶ್ನೆ ಮಾಡಿದ.
ಮಾಸ್ಟರ್, ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ ಉಳಿದಿದ್ದರೆ ಸಾವಿಗೂ ಮುಂಚೆ ಆದಷ್ಟು ಬೇಗ ಹೇಳಿಕೊಡಿ.
ಮಾಸ್ಟರ್, ಒಂದು ಕ್ಷಣ ಧ್ಯಾನ ಮಗ್ನನಾಗಿ ಚಿಂತಿಸಿ ಮಾತನಾಡಿದ.
ನಿನ್ನ ಒಳನೋಟ ಅದ್ಭುತ, ನಿನ್ನ ಕಲಿಕೆ ಮತ್ತು ತರಬೇತಿ ಪರಿಪೂರ್ಣ, ಆದರೂ…
ಹೇಳಿ ಮಾಸ್ಟರ್, ಅದೇನಿದ್ದರೂ ನಾನು ಪರಿಹರಿಸಿಕೊಳ್ಳುವೆ.
ಏನಿಲ್ಲ, ನಿನ್ನ ಮೈ ಝೆನ್ ನಿಂದ ನಾರುತ್ತಿದೆ.
~D.T. Suzuki

