ಪ್ರೇಮದ ದೃಷ್ಟಿಕೋನ : ಓಶೋ ವ್ಯಾಖ್ಯಾನ

ಎಲ್ಲಿಯವರೆಗೆ ನಿಮ್ಮ ದರ್ಶನ  ಮತ್ತು ಕಾರುಣ್ಯ ನಿಮ್ಮನ್ನು ವಿರೋಧಿಸುವವರನ್ನೂ ಒಳಗೊಳ್ಳುವಷ್ಟು ವಿಶಾಲವಾಗಿಲ್ಲವೋ ಅಲ್ಲಿಯವರೆಗೆ ನೀವು ವಿನಾಶದ ಮುಂದುವರಿಕೆಗೆ ಸಹಾಯ ಮಾಡುತ್ತಲೇ ಇರುವಿರಿ. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸುಮ್ಮನೇ
ಈ ಅಧ್ಯಾತ್ಮದ ಮಾತುಕತೆಯನ್ನ
ಸಂಕೀರ್ಣ ಮಾಡಿಕೊಳ್ಳೋದು ಬೇಡ
ಆದಷ್ಟು ಸರಳವಾಗಿಡೋಣ.

ಭಗವಂತ,
ನಿನಗೆ ಏನೋ ಮಾರಬೇಕೆಂದು
ಪ್ರಯತ್ನ ಮಾಡುತ್ತಿದ್ದಾನೆ
ಆದರೆ ಕೊಂಡುಕೊಳ್ಳಲು ನಿನಗೆ ಇಷ್ಟವಿಲ್ಲ.
ಅದಕ್ಕೆ ತಾನೇ
ಈ ಅದ್ಭುತ ಜಾಣ ಚೌಕಾಶಿ ?
ಬೆಲೆ ಹೆಚ್ಚು ಎನ್ನುವ ಕಿರುಚಾಟ?
ನಿನ್ನ ದುಃಖಕ್ಕೆ ಕಾರಣ
ಈಗ ಗೊತ್ತಾಯ್ತಾ?

– ಹಾಫಿಜ್

****************

ಒಮ್ಮೆ ಒಬ್ಬ ಯುವಕ ಬುದ್ಧನ ಹತ್ತಿರ ಬಂದ. ಅವನು ಬುದ್ಧನ ಸಾನಿಧ್ಯದಿಂದ ಆಕರ್ಷಿತನಾಗಿದ್ದ. ಅವನು ಬುದ್ಧನ ಮಾರ್ಗದರ್ಶನದಲ್ಲಿ ಧ್ಯಾನ ಕಲಿಯಲು ಶುರು ಮಾಡಿದ. ಆ ಯುವಕನನ್ನು ಒಂದು ಸಮಸ್ಯೆ ಕಾಡುತ್ತಿತ್ತು. ಒಂದು ದಿನ ಅವನು ಬುದ್ಧನ ಬಳಿ ಬಂದು ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡ,

“ನನ್ನನ್ನು ಒಂದು ವಿಚಾರ ತಲೆತಿನ್ನುತ್ತಿದೆ. ಧ್ಯಾನ ಅರಳಿ ಹೂವಾದಾಗ ಅದರಿಂದ ಹೊರಬರುವ ಸುಗಂಧವನ್ನು  ಇಡೀ ಜಗತ್ತಿಗೆ ಹಂಚಬೇಕು ಎಂದು ನೀವು ಹೇಳುತ್ತೀರಿ. ನಾನು ಹೀಗೆ ಮಾಡಬಲ್ಲೆ ಆದರೆ ನನಗೆ ಒಂದೇ ಒಂದು ವಿನಾಯಿತಿ ಬೇಕು. ನನ್ನ ನೆರೆ ಮನೆಯವನೊಬ್ಬನನ್ನು ಬಿಟ್ಟು ನಾನು ಎಲ್ಲರಿಗೂ ಸುಗಂಧವನ್ನು ಹಂಚಬಲ್ಲೆ. ನಾನು ಇಡೀ ಜಗತ್ತನ್ನು ನನ್ನ ಧ್ಯಾನದ ಪರಿಮಳದಿಂದ ಸುಗಂಧಿತವಾಗಿಸಬಲ್ಲೆ ಆದರೆ ನನ್ನ ನೆರೆಮನೆಯವನನ್ನು ಮಾತ್ರ ಹೊರತುಪಡಿಸಿ. ಇದಕ್ಕೆ ನಿಮ್ಮ ಅನುಮತಿ ಬೇಕು”.

ಬುದ್ಧ ನಕ್ಕು ಉತ್ತರಿಸಿದ, “ಹುಚ್ಚಪ್ಪಾ, ವಿಷಯ ಇರೋದು ಅಲ್ಲಿ. ನೀನು ಇಡೀ ಜಗತ್ತಿಗೆ ಧ್ಯಾನದ ಪರಿಮಳವನ್ನು ಹಂಚಬಲ್ಲೆ ಏಕೆಂದರೆ ಜಗತ್ತಿನ ಜೊತೆ ನಿನಗೆ ಯಾವ ಅನಾಸಕ್ತಿ ಅನಾದರ ಇಲ್ಲ. ಆದರೆ ನಿನ್ನ ನೆರೆಮನೆಯವನನ್ನು ಮಾತ್ರ ಈ ಪರಿಮಳದಿಂದ ಹೊರತಾಗಿಸಲು ಬಯಸುತ್ತಿದ್ದೀಯ ಏಕೆಂದರೆ ಅವನ ಜೊತೆ ನಿನಗೆ ವೈರತ್ವ ಇದೆ. ಪ್ರೀತಿಯ ಪರಿಮಳಕ್ಕೆ ಯಾವ ವೈರತ್ವದ ಬಗ್ಗೆಯೂ ಗೊತ್ತಿಲ್ಲ. ಮೊದಲು ನಿನ್ನ ನೆರೆಮನೆಯವನಿಗೆ ನಿನ್ನ ಪ್ರೀತಿಯನ್ನು ಹಂಚು ಆಗ ಮಾತ್ರ ಇಡೀ ಜಗತ್ತು ನಿನ್ನ ಪ್ರೀತಿಯನ್ನು ಸ್ವೀಕರಿಸುವ ಮನಸ್ಸು ಮಾಡುತ್ತದೆ. ಇದರ ಹೊರತಾಗಿ ಬೇರೆ ದಾರಿ ಇಲ್ಲ. ಮೊದಲು ನಿನ್ನ ವೈರಿಯನ್ನು ನಿನ್ನ ಗೆಳೆತನದ ತೆಕ್ಕೆಗೆ ತೆಗೆದುಕೋ ಆಗ ಇಡೀ ಜಗತ್ತು ತಾನೇ ತಾನಾಗಿ ನಿನ್ನ ಗೆಳೆತನದ ಬಂಧನದಲ್ಲಿ ಬಂಧಿಯಾಗುವುದು”.

ಪ್ರೇಮದ ದೃಷ್ಟಿಕೋನ ಯಾರನ್ನೂ ಹೊರತಾಗಿಸುವುದಿಲ್ಲ. ಎಲ್ಲಿಯವರೆಗೆ ನಿಮ್ಮ ದರ್ಶನ  ಮತ್ತು ಕಾರುಣ್ಯ ನಿಮ್ಮನ್ನು ವಿರೋಧಿಸುವವರನ್ನೂ ಒಳಗೊಳ್ಳುವಷ್ಟು ವಿಶಾಲವಾಗಿಲ್ಲವೋ ಅಲ್ಲಿಯವರೆಗೆ ನೀವು ವಿನಾಶದ ಮುಂದುವರಿಕೆಗೆ ಸಹಾಯ ಮಾಡುತ್ತಲೇ ಇರುವಿರಿ. ಪ್ರತ್ಯೇಕತೆಯನ್ನು ಕೊನೆಗೊಳಿಸುವುದೇ ಎಲ್ಲರ ನಿರ್ವಾಣಕ್ಕೆ ಸುಲಭದ ದಾರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.