ಸಾಮಾನ್ಯರಂತೆ ಬದುಕಿ ಆದರೆ, ನಿಮ್ಮ ಸಾಧಾರಣ ಬದುಕಿನಲ್ಲಿ ಅರಿವಿನ ಗುಣವನ್ನು ಜೊತೆಯಾಗಿಸಿಕೊಳ್ಳಿ. ಅಷ್ಟೇ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿನ್ನ ಆಧ್ಯಾತ್ಮಿಕ ಶಿಸ್ತು ಯಾವುದು? ಯಾರೋ ಒಬ್ಬರು ಝೆನ್ ಮಾಸ್ಟರ್ ಬೊಕೋಜು ನ ಪ್ರಶ್ನೆ ಮಾಡಿದರು.
“ನನ್ನದು ಸಾಮಾನ್ಯ ಬದುಕು. ಅದೇ ನನ್ನ ಆಧ್ಯಾತ್ಮಿಕ ಶಿಸ್ತು. ನಾನು ಹಸಿವೆಯಾದಾಗ ಊಟ ಮಾಡುತ್ತೇನೆ ಮತ್ತು ನಿದ್ದೆ ಬಂದಾಗ ಮಲಗುತ್ತೇನೆ”. ಮಾಸ್ಟರ್ ಬೊಕೋಜು ಉತ್ತರಿಸಿದ.
“ನನಗೇನೋ ಇದರಲ್ಲಿ ಯಾವ ವಿಶೇಷವೂ ಕಾಣ್ತಾ ಇಲ್ಲ”, ಮಾಸ್ಟರ್ ನ ಉತ್ತರ ಕೇಳಿ ಪ್ರಶ್ನೆ ಮಾಡಿದವನಿಗೆ ಆಶ್ಚರ್ಯವಾಯಿತು.
“ನಾನು ಹೇಳೋದೂ ಅದೇ, ಯಾವ ವಿಶೇಷವೂ ಇಲ್ಲ” ಮಾಸ್ಟರ್ ಪುನರುಚ್ಚರಿಸಿದ.
ವಿಶೇಷಕ್ಕಾಗಿ ಹಾತೊರೆಯುವುದೆಂದರೆ ಆಹಂ ಪೋಷಿಸಿದಂತೆ.
ಪ್ರಶ್ನೆ ಕೇಳಿದವನಿಗೆ ಸಮಾಧಾನ ಆಗಲಿಲ್ಲ, ಅವನು ಮತ್ತೆ ಪ್ರಶ್ನೆ ಮಾಡಿದ, “ಎಲ್ಲರೂ ಹಸಿವೆಯಾದಾಗ ಊಟ ಮಾಡುತ್ತಾರೆ, ನಿದ್ದೆ ಬಂದಾಗ ಮಲಗುತ್ತಾರೆ. ಇದೆಂಥ ಆಧ್ಯಾತ್ಮಿಕ ಶಿಸ್ತು?.”
ಮಾಸ್ಟರ್ ಬೊಕೋಜು ನಗುತ್ತ ಉತ್ತರಿಸಿದ,
“ ಇಲ್ಲ, ಎಲ್ಲರಿಗೂ ಇದು ಸಾಧ್ಯವಿಲ್ಲ. ನೀವು ಊಟ ಮಾಡುವಾಗ, ಕೇವಲ ಊಟ ಮಾಡುವುದಿಲ್ಲ, ಊಟದ ಜೊತೆ ಸಾವಿರಾರು ಸಂಗತಿಗಳ ಯೋಚನೆ ಮಾಡುತ್ತಿರಾ. ನಿಮ್ಮ ಮೈಂಡ್ ಹಿಂದಿನದನ್ನು, ಮುಂದಿನದನ್ನ, ಕಲ್ಪನೆಗಳನ್ನ ಮೆಲುಕುಹಾಕುತ್ತಿರುತ್ತದೆ. ನೀವು ಯೋಚನೆ ಮಾಡುತ್ತಿರುತ್ತೀರಿ, ನೀವು ಕನಸು ಕಾಣುತ್ತಿರುತ್ತೀರಿ, ನೀವು ನಾನು ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿರುತ್ತೀರಿ. ನೀವು ಕೇವಲ ಊಟ ಮಾಡುತ್ತಿಲ್ಲ. ನಿಮ್ಮ ಮೈಂಡ್ ಮತ್ತು ದೇಹ ಒಟ್ಟಾಗಿ ಕೆಲಸ ಮಾಡುತ್ತಿಲ್ಲ. ಆದರೆ ನಾನು ಊಟ ಮಾಡುವಾಗ ಕೇವಲ ಊಟ ಮಾಡುತ್ತೇನೆ, ಬೇರೆ ಏನನ್ನೂ ಮಾಡುವುದಿಲ್ಲ. ನಾನು ಊಟ ಮಾಡುವ ಕ್ರಿಯೆ, ಶುದ್ಧ ಪ್ರಕ್ರಿಯೆ.
ನೀವು ಮಲಗುವಾಗ, ನಿದ್ದೆಯ ಜೊತೆ ನೂರಾರು ಸಂಗತಿಗಳನ್ನು ಮಾಡುತ್ತೀರಿ, ನೀವು ಕನಸು ಕಾಣುತ್ತೀರಿ, ಹೊರಳಾಡುತ್ತೀರಿ, ದುಸ್ವಪ್ನಗಳ ಜೊತೆ ಹೋರಾಡುತ್ತೀರಿ, ನಗುತ್ತೀರಿ, ಅಳುತ್ತಿರಿ, ಬಡಬಡಿಸುತ್ತೀರಿ, ಚೀರುತ್ತೀರಿ. ಆದರೆ ನಾನು ಮಲಗಿದಾಗ, ನಾನು ಕೇವಲ ನಿದ್ದೆ ಮಾಡುತ್ತೇನೆ, ಆಗ ಬೊಕೋಜು ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಊಟ, ನಿದ್ದೆ ಅಷ್ಟೇ ಅಲ್ಲ ವಾಕ್ ಮಾಡುವಾಗ ಕೂಡ ನಾನು ಕೇವಲ ವಾಕ್ ಮಾಡುತ್ತೇನೆ ಬೇರೆ ಏನನ್ನೂ ಮಾಡುವುದಿಲ್ಲ. ನನ್ನ ದಿವ್ಯ ಅಸ್ತಿತ್ವದ ಹಾಜರಾತಿಯನ್ನು ಅನುಭವಿಸುತ್ತೇನೆ.”
ನಾನು ನಿಮ್ಮಿಂದ ಬಯಸುತ್ತಿರುವುದು ಇದನ್ನೇ. ಸಾಮಾನ್ಯರಂತೆ ಬದುಕಿ ಆದರೆ, ನಿಮ್ಮ ಸಾಧಾರಣ ಬದುಕಿನಲ್ಲಿ ಅರಿವಿನ ಗುಣವನ್ನು ಜೊತೆಯಾಗಿಸಿಕೊಳ್ಳಿ. ನಿದ್ದೆ, ಊಟ, ಪ್ರೇಮ, ಪ್ರಾರ್ಥನೆ, ಧ್ಯಾನ ಅದು ಏನೇ ಆಗಿರಲಿ, ಯಾವುದನ್ನೂ ವಿಶೇಷ ಎಂದು ತಿಳಿದುಕೊಂಡು ಮಾಡಬೇಡಿ. ಆಗ ನೀವು ಸ್ವತಃ ವಿಶೇಷರಾಗುತ್ತೀರ. ಯಾವ ವ್ಯಕ್ತಿ ಸಾಧಾರಣ ಬದುಕನ್ನು ಬದುಕಲು ಸಿದ್ಧನಾಗಿರುತ್ತಾನೋ ಅವನು ಅಸಾಧಾರಣ ವ್ಯಕ್ತಿಯಾಗಿರುತ್ತಾನೆ. ಅಸಾಧಾರಣವಾಗಿರುವುದನ್ನ ಬಯಸುವುದು ಬಹಳ ಸಾಧಾರಣವಾದ ಬಯಕೆ. ಆದರೆ, ನಿಜವಾಗಿಯೂ ಸಾಧಾರಣವಾಗಿ ಬದುಕುವುದು, ಬಹಳ ಅಸಾಧಾರಣವಾದದ್ದು.

