ಆನೆಗಳನ್ನು ಬಂಧನದಲ್ಲಿ ಇಡಲು ಯಾವ ಸರಪಳಿ, ಯಾವ ಪಂಜರವನ್ನೂ ಬಳಸಲಾಗಿರಲಿಲ್ಲ. ಕಟ್ಟಿದ್ದ ಚಿಕ್ಕ ಹಗ್ಗವನ್ನು ಯಾವುದೇ ಕ್ಷಣದಲ್ಲಿ ಆ ಮಹಾ ಪ್ರಾಣಿ ಕಿತ್ತುಕೊಂಡು ಹೋಗಬಹುದಾಗಿತ್ತು. ಆದರೆ ಒಂದು ಆನೆಗಳು ಹಾಗೆ ಮಾಡುತ್ತಿರಲಿಲ್ಲ… | ಚಿದಂಬರ ನರೇಂದ್ರ
ಒಬ್ಬ ವ್ಯಕ್ತಿ ಆನೆಗಳ ಗುಂಪೊಂದನ್ನು ದಾಟಿ ಹೋಗುತ್ತಿದ್ದ. ಆ ಆನೆಗಳನ್ನು ನೋಡಿ ಅಚಾನಕ್ ಆಗಿ ನೋಡಿ ಅವನಿಗೆ ಆಶ್ಚರ್ಯವಾಯಿತು. ಅಂಥ ಬೃಹತ್ ಪ್ರಾಣಿಗಳ ಮುಂದಿನ ಕಾಲನ್ನ ಒಂದು ಚಿಕ್ಕ ಹಗ್ಗದಿಂದ ಅದು ಎಲ್ಲೂ ಓಡಿ ಹೋಗದಂತೆ ಹಿಡಿದು ಕಟ್ಟಲಾಗಿತ್ತು. ಆನೆಗಳನ್ನು ಬಂಧನದಲ್ಲಿ ಇಡಲು ಯಾವ ಸರಪಳಿ, ಯಾವ ಪಂಜರವನ್ನು ಬಳಸಲಾಗಿರಲಿಲ್ಲ. ಅಂಥ ಚಿಕ್ಕ ಹಗ್ಗವನ್ನು ಯಾವುದೇ ಕ್ಷಣದಲ್ಲಿ ಆ ಮಹಾ ಪ್ರಾಣಿ ಕಿತ್ತುಕೊಂಡು ಹೋಗಬಹುದಾಗಿತ್ತು ಆದರೆ ಯಾವುದೋ ಒಂದು ಕಾರಣದಿಂದ ಆನೆಗಳು ಹಾಗೆ ಮಾಡುತ್ತಿರಲಿಲ್ಲ, ವಿಧೇಯ ಪ್ರಾಣಿಗಳಂತೆ ಅದೇ ಬಂಧನದಲ್ಲಿದ್ದವು.
ಆ ವ್ಯಕ್ತಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆನೆಗಳ ತರಬೇತುದಾರನನ್ನ ಪ್ರಶ್ನೆ ಮಾಡಿದ, “ಆನೆಗಳನ್ನ ಇಷ್ಟು ಚಿಕ್ಕ ಹಗ್ಗದಿಂದ ಕಟ್ಟಿಹಾಕಿದ್ದೀರಲ್ಲ, ಅವು ಯಾವುದೇ ಸಮಯದಲ್ಲಿ ಹಗ್ಗ ಹರಿದುಕೊಂಡು ಇಲ್ಲಿಂದ ಹೊರಟು ಹೋಗಬಹುದಲ್ಲವೆ?”
ಆನೆಗಳ ತರಬೇತುದಾರ ಉತ್ತರಿಸಿದ. “ ಈ ಆನೆಗಳು ಪುಟ್ಟ ಮರಿಗಳಾಗಿದ್ದಾಗ, ಅವನ್ನ ಇದೇ ರೀತಿಯ ಹಗ್ಗದಿಂದ ಕಟ್ಟಿ ಹಾಕುತ್ತಿದ್ದೆವು. ಈ ಹಗ್ಗ ಆನೆಗಳನ್ನು ಹಿಡಿದಿಡಲು ಆಗ ಸಮರ್ಥವಾಗಿತ್ತು. ಮರಿ ಆನೆಗಳು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿ ವಿಫಲವಾಗುತ್ತಿದ್ದವು. ಆನೆಗಳು ಬೆಳೆದಂತೆಲ್ಲ ತಾವು ಈ ಹಗ್ಗ ಹರಿದುಕೊಂಡು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬತೊಡಗಿದವು. ಆನೆಗಳು ಬೆಳೆದಂತೆಲ್ಲ ಈ ನಂಬಿಕೆಯೂ ಬಲವಾಗಿ ಬೆಳೆದು ಅವುಗಳ ಮನಸ್ಸಿನಲ್ಲಿ ಈ ನಂಬಿಕೆ ಈಗ ಗಟ್ಟಿಯಾಗಿ ಕೂತುಬಿಟ್ಟಿದೆ. ಈ ಚಿಕ್ಕ ಹಗ್ಗ ಹರಿಯುವುದು ತಮ್ಮಿಂದ ಅಸಾಧ್ಯ ಎಂದು ಆನೆಗಳು ನಂಬಿಬಿಟ್ಟಿವೆ. ಈಗ ಅವು ತಪ್ಪಿಸಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ”.
ತರಬೇತುದಾರನ ಮಾತು ಕೇಳಿ ಆ ವ್ಯಕ್ತಿಗೆ ಪರಮಾಶ್ಚರ್ಯವಾಯಿತು. ಈ ಪ್ರಾಣಿಗಳಿಗೆ ಯಾವುದೇ ಸಮಯದಲ್ಲಿ ತಮ್ಮ ಬಂಧನದಿಂದ ಪಾರಾಗುವ ಸಾಮರ್ಥ್ಯ ಇದ್ದಾಗ್ಯೂ, ಅವು ತಮ್ಮ ನಂಬಿಕೆಯ ಕಾರಣವಾಗಿ ಬಂಧನದಿಂದ ಪಾರಾಗುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.
Source: Sufi Zen parables

