ಬುದ್ಧನನ್ನು ಅರಿಯುವುದೆಂದರೆ… | ಓಶೋ

ಬುದ್ಧನನ್ನು ಅರ್ಥಮಾಡಿಕೊಳ್ಳಿ. ಬೌದ್ಧರಾಗಲು ಹೋಗಬೇಡಿ, ಬೌದ್ಧ ಧರ್ಮವನ್ನು ಹಿಂಬಾಲಿಸಲು ಹೋಗಬೇಡಿ. ಬುದ್ಧನ ತಿಳುವಳಿಕೆಯನ್ನು ನಿಮ್ಮ ಪ್ರಜ್ಞೆ ಹೀರಿಕೊಳ್ಳಲಿ. ಅದು ನಿಮ್ಮೊಳಗೆ ಬುದ್ಧ ಪ್ರಜ್ಞೆಯಾಗಿಯೇ ಉಳಿಯದಿರಲಿ, ಇದು ನಿಮ್ಮ ಪ್ರಜ್ಞೆಯಾಗಲಿ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಗೌತಮ ಬುದ್ಧನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಬುದ್ಧ ಈ ಭೂಮಿಯ ಮೇಲೆ ನಡೆದಾಡಿದ ಅತ್ಯಂತ ಸುಂದರ ಮನುಷ್ಯರಲ್ಲಿ ಒಬ್ಬ. H G ವೇಲ್ಸ್ ತನ್ನ World History ಯಲ್ಲಿ ಬುದ್ಧನ ಬಗ್ಗೆ ಬಂಗಾರದಲ್ಲಿ ಬರೆದಿಡಬೇಕಾದಂಥ ಮಾತೊಂದನ್ನ ಬರೆದಿದ್ದಾನೆ. “Gautam Buddha is perhaps the only godless man, and yet, so godly.”

ಬುದ್ಧ ತನ್ನ ನಿರ್ವಾಣದ, ಜ್ಞಾನೋದಯದ ಆ ಕ್ಷಣಗಳಲ್ಲಿ, ಆ ಕಾಂತಿಯಲ್ಲಿ ಯಾವ ದೇವರನ್ನೂ ಕಾಣಲಿಲ್ಲ. ಇಡೀ ಅಸ್ತಿತ್ವವೇ ದೈವಿಕವಾಗಿರುವಂಥದು ; ಪ್ರತ್ಯೇಕವಾದ ಸೃಷ್ಟಿಕರ್ತನೆಂಬುವವನು ಇಲ್ಲ. ಸಂಪೂರ್ಣ ಅಸ್ತಿತ್ವ ಬೆಳಕಿನಿಂದ, ಪ್ರಜ್ಞೆಯಿಂದ ತುಂಬಿಕೊಂಡಿದೆ. ಆದ್ದರಿಂದ ದೇವರು ಎನ್ನುವ ಯಾರೂ ಇಲ್ಲ ಆದರೆ ಎಲ್ಲೆಲ್ಲೂ ದೈವಿಕತೆ ತುಂಬಿಕೊಂಡಿದೆ.

ಬುದ್ಧ, ದೇವರಿಲ್ಲದ ಧರ್ಮವನ್ನು ಕಟ್ಟಿದ್ದು ಜಗತ್ತಿನ ಧರ್ಮಗಳ ಇತಿಹಾಸದಲ್ಲಿ ಅತ್ಯಂತ ಕ್ರಾಂತಿಕಾರಕವಾದದ್ದು. ಮೊಟ್ಟಮೊದಲಬಾರಿಗೆ ಧರ್ಮವೊಂದರ ಕೇಂದ್ರದಲ್ಲಿ ಯಾವ ದೇವರೂ ಇಲ್ಲ. ಮನುಷ್ಯ, ಧರ್ಮದ ಕೇಂದ್ರದಲ್ಲಿದ್ದಾನೆ, ಮತ್ತು ಮನುಷ್ಯನ ಅಂತರಾಳದ ಅಸ್ತಿತ್ವ ದೈವಿಕವಾಗಿದೆ. ಈ ದೈವಿಕತೆಯನ್ನು ಸಾಧಿಸಿಕೊಳ್ಳಲು ಯಾರೂ ಎಲ್ಲೂ ಹೋಗಬೇಕಾಗಿಲ್ಲ. ನಿಮ್ಮ ನಿಮ್ಮ ಒಳಗನ್ನು ಪ್ರವೇಶಿಸಿ ನಿಮ್ಮ ಕೇಂದ್ರದಲ್ಲಿ ಕೆಲ ಹೊತ್ತು ಸ್ಥಿರವಾಗಿದ್ದರೆ ಸಾಕು. ಯಾವತ್ತು ನೀವು ನಿಮ್ಮ ಕೇಂದ್ರದಲ್ಲಿ ಸ್ಥಿರವಾಗಿ ನೆಲೆ ನಿಲ್ಲುವುದನ್ನು ಸಾಧಿಸಿಕೊಳ್ಳುತ್ತೀರೋ ಆಗ ನಿಮ್ಮೊಳಗೊಂದು ವಿಸ್ಫೋಟ ಸಂಭವಿಸುತ್ತದೆ.

ಆದ್ದರಿಂದ ನಾನು ಹೇಳುವುದೆಂದರೆ, ಬುದ್ಧನನ್ನು ಅರ್ಥಮಾಡಿಕೊಳ್ಳಿ. ಬೌದ್ಧರಾಗಲು ಹೋಗಬೇಡಿ, ಬೌದ್ಧ ಧರ್ಮವನ್ನು ಹಿಂಬಾಲಿಸಲು ಹೋಗಬೇಡಿ. ಬುದ್ಧನ ತಿಳುವಳಿಕೆಯನ್ನು ನಿಮ್ಮ ಪ್ರಜ್ಞೆ ಹೀರಿಕೊಳ್ಳಲಿ. ಅದು ನಿಮ್ಮೊಳಗೆ ಬುದ್ಧ ಪ್ರಜ್ಞೆಯಾಗಿಯೇ ಉಳಿಯದಿರಲಿ, ಇದು ನಿಮ್ಮ ಪ್ರಜ್ಞೆಯಾಗಲಿ. ಬುದ್ಧ ನಿಮ್ಮ ಪ್ರಜ್ಞೆಯಲ್ಲಿ ಒಂದಾದ ಕ್ಷಣದಲ್ಲಿಯೇ ನಿಮ್ಮ ಬದಲಾವಣೆ ಆರಂಭವಾಗುತ್ತದೆ. ಆದರೆ ದುರದೃಷ್ಟವಶಾತ್ ಇವತ್ತಿನವರೆಗೂ ಬುದ್ಧ ಪ್ರಜ್ಞೆ ಪ್ರತ್ಯೇಕವಾಗಿಯೇ ಉಳಿದುಕೊಂಡಿದೆ, ಮತ್ತು ನಡುವೆ ಇಪ್ಪತ್ತೈದು ಶತಮಾನಗಳ ಅಂತರ ತೂರಿಕೊಂಡಿದೆ. ನೀವು ಬುದ್ಧನ ಮಾತುಗಳನ್ನ ರಿಪೀಟ್ ಮಾಡುತ್ತ ಹೋಗಬಹುದು – ಬಹಳ ಸುಂದರವಾಗಿವೆ ಈ ಮಾತುಗಳು ಆದರೆ ಈ ಯಾವುದು ಕೂಡ ನಿಮ್ಮ ದೈವಿಕತೆಯನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುವುದಿಲ್ಲ.


Osho, The Sword and the Lotus, Talk #11


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.