ಓಶೋ ಹೇಳಿದ ಬಹಾವುದ್ದೀನನ ದೃಷ್ಟಾಂತ ಕತೆ ಇಲ್ಲಿದೆ… । ಚಿದಂಬರ ನರೇಂದ್ರ
ಮಾಸ್ಟರ್ ಕೇವಲ ನಿಮ್ಮ ನಿಜವಾದ ಸೆಲ್ಫ್ ನ ಪ್ರತಿನಿಧಿಸುತ್ತಾನೆ. ಅವನು ನಿಮ್ಮ ಜೊತೆ ಮಾತನಾಡುವುದು ಕೇವಲ ನಿದ್ದೆಯಲ್ಲಿರುವ ನಿಮ್ಮ ಅಸ್ತಿತ್ವದ ಕೇಂದ್ರವನ್ನು ಎಚ್ಚರಿಸಲು. ಒಮ್ಮೆ ಕೇಂದ್ರ ಎಚ್ಚರವಾಯಿತೆಂದರೆ ಮಾಸ್ಟರ್ ಆಮೇಲೆ ಸುಮ್ಮನಾಗಿಬಿಡುತ್ತಾನೆ.
ಮಹಾನ್ ಸೂಫಿ ಅನುಭಾವಿ ಬಹಾಉದ್ದೀನ್ ಕುರಿತಾದ ಕಥೆಯೊಂದಿದೆ. ಅವನು ತನ್ನ ಕೆಲವು ನೂರು ಶಿಷ್ಯರೊಂದಿಗೆ ಮರುಭೂಮಿಯೊಂದರಲ್ಲಿ ವಾಸವಾಗಿದ್ದ. ಒಮ್ಮೆ ಅವನ ಆಶ್ರಮವನ್ನು ದಾಟಿ ಹೋಗುತ್ತಿದ್ದ ಕೆಲ ಪ್ರವಾಸಿಗಳು ಆಶ್ರಮದೊಳಗೆ ಏನು ನಡೆಯುತ್ತಿದೆ ಎನ್ನುವುದನ್ನು ನೋಡಲು ಕುತೂಹಲದಿಂದ ಆಶ್ರಮವನ್ನು ಪ್ರವೇಶಿಸಿದರು.
ಪ್ರವಾಸಿಗರು ಆಶ್ರಮದೊಳಗೆ ಬಂದಾಗ ಅಲ್ಲಿ ನಡೆಯುತ್ತಿರುವುದನ್ನು ನೋಡಿ ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅಲ್ಲಿ ನೂರಾರು ಜನ ಹುಚ್ಚರಂತೆ ವರ್ತಿಸುತ್ತಿದ್ದರು. ಕೆಲವರು ಹಾಡುತ್ತಿದ್ದರು, ಕೆಲವರು ಕುಣಿಯುತ್ತಿದ್ದರು, ಕೆಲವರು ಜೋರು ಜೋರಾಗಿ ಕಿರಿಚುತ್ತಿದ್ದರು. ಕೆಲವರು ಆಕಾಶವನ್ನು ನೋಡುತ್ತ ಸುಮ್ಮನೇ ನಿಂತಿದ್ದರಿ, ಕೆಲವರು ಕೆಳಗೆ ಬಿದ್ದು ಹೊರಳಾಡುತ್ತಿದ್ದರು ಈ ಎಲ್ಲ ಗದ್ದಲದ ನಡುವೆ ಮಾಸ್ಟರ್ ಬಹಾಉದ್ದೀನ್ ಸುಮ್ಮನೇ ತನ್ನ ಆಸನದಲ್ಲಿ ಕುಳಿತಿದ್ದ. ಇಲ್ಲಿ ಆಧ್ಯಾತ್ಮಿಕ ಸಾಧನೆ ಯಾವುದೂ ನಡೆಯುತ್ತಿಲ್ಲ, ಹುಚ್ಚ ಬಹಾಉದ್ದೀನ್ ತನ್ನದೇ ತರದ ಇನ್ನೊಂದಿಷ್ಟು ಹುಚ್ಚರನ್ನು ಜೊತೆಮಾಡಿಕೊಂಡು ಕುಳಿತಿದ್ದಾನೆ ಎಂದುಕೊಂಡು ಪ್ರವಾಸಿಗರು ಮುಂದೆ ತಮ್ಮ ಪ್ರಯಾಣವನ್ನು ಬೆಳೆಸಿದರು.
ನಾಲ್ಕೈದು ತಿಂಗಳ ನಂತರ ಆ ಪ್ರವಾಸಿಗರು ಮತ್ತೆ ಅದೇ ದಾರಿಯಲ್ಲಿ ವಾಪಸ್ ಬರುವಾಗ, ಆಶ್ರಮದಲ್ಲಿ ಈಗ ಏನು ನಡೆಯುತ್ತಿದೆ ಎನ್ನುವುದನ್ನ ನೋಡಲು ಕುತೂಹಲದಿಂದ ಆಶ್ರಮವನ್ನು ಪ್ರವೇಶಿಸಿದರು. ಬಹಾಉದ್ದೀನ್ ಅದೇ ಜಾಗದಲ್ಲಿ ಕುಳಿತಿದ್ದ. ಹಿಂದೆ ಗದ್ದಲ ಹಾಕುತ್ತಿದ್ದ ಶಿಷ್ಯರೆಲ್ಲ ಅಪಾರ ಮೌನದಲ್ಲಿ ಅವನ ಸುತ್ತ ಕುಳಿತಿದ್ದರು. ಆ ಪ್ರಶಾಂತತೆ ಎಷ್ಟು ದಟ್ಟವಾಗಿತ್ತೆಂದರೆ, ಹೊರಗಿನಿಂದ ನೋಡಿದವರಿಗೆ ಅಲ್ಲಿ ಒಂದು ನರಪಿಳ್ಳೆ ಇರುವುದೂ ಗೊತ್ತಾಗುವಂತಿರಲಿಲ್ಲ. ಈ ದೃಶ್ಯವನ್ನು ನೋಡಿ ಪ್ರವಾಸಿಗರಿಗೆ ಆಶ್ಚರ್ಯವಾಯಿತು. ಹಿಂದೆ ಇಲ್ಲಿ ಕಂಡಿದ್ದ ಹುಚ್ಚುತನ ಎಲ್ಲಿ ಹೋಯಿತು ಎಂದು ಅವರು ಬೆರಗಾದರು. ಶಿಷ್ಯರು ಯಾವ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ, ಬಹಾಉದ್ದೀನ್ ಯಾವ ಪ್ರವಚನವನ್ನೂ ಮಾಡುತ್ತಿರಲಿಲ್ಲ. ಪ್ರವಾಸಿಗರಿಗೆ ಈ ಶಾಂತ ವಾತಾವರಣವನ್ನು ಹಾಳು ಮಾಡುವುದು ಇಷ್ಟವಾಗದೇ ಅವರು ಅಲ್ಲಿಂದ ಹೋರಟು ಹೋದರು.
ಕೆಲವು ವರ್ಷಗಳ ನಂತರ ಪ್ರವಾಸಿಗಳು ಮತ್ತೆ ಅದೇ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆಶ್ರಮದಲ್ಲಿ ಈಗ ಏನು ನಡೆಯುತ್ತಿದೆ ಎನ್ನುವುದನ್ನ ನೋಡಲು ಆಶ್ರಮದ ಒಳಗೆ ಬಂದರು. ಅಲ್ಲಿ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಬಹಾಉದ್ದೀನ್ ಅಲ್ಲಿಯೇ ಕುಳಿತಿದ್ದ. ಅವನ ಹೊರತಾಗಿ ಅಲ್ಲಿ ಬೇರೆ ಯಾರೂ ಇರಲಿಲ್ಲ. ಈ ಸಲ ಪ್ರವಾಸಿಗಳಿಗೆ ತಮ್ಮ ಕುತೂಹಲ ತಡೆದುಕೊಳ್ಳಲಿಕ್ಕಾಗಲಿಲ್ಲ. ಅವರು ಬಹಾಉದ್ದೀನ್ ನ ಪ್ರಶ್ನೆ ಮಾಡಿದರು. “ನಾವು ಕೆಲ ವರ್ಷಗಳ ಹಿಂದೆ ಇಲ್ಲಿಗೆ ಮೊದಲ ಬಾರಿ ಇಲ್ಲಿಗೆ ಬಂದಾಗ ಇಲ್ಲಿ ತುಂಬ ಗದ್ದಲ ನಡೆದಿತ್ತು. ನೀನು ಮತ್ತು ನಿನ್ನ ಹುಚ್ಚ ಶಿಷ್ಯರು ಗದ್ದಲ ಮಾಡುತ್ತಿದ್ದಿರಿ. ಏನು ನಡೆದಿತ್ತು ಅವತ್ತು?”
“ಅಧ್ಯಾತ್ಮಿಕ ಶುದ್ಧೀಕರಣ” ಉತ್ತರಿಸಿದ ಬಹಾಉದ್ದೀನ್. ಅವರು ಎಷ್ಟು ಜನ್ಮಗಳಿಂದ ತಮ್ಮೊಳಗೆ ತುಂಬಿಕೊಂಡಿದ್ದ ಎಲ್ಲ ಹುಚ್ಚುತನವನ್ನ ಹೊರಗೆ ಎಸೆಯುತ್ತಿದ್ದರು. ಈ ಹುಚ್ಚುತನ ಅವರೊಳಗೆ ದಬ್ಬಾಳಿಕೆಯ ಸಮಾಜದ ಕಾರಣವಾಗಿ, ಕುರುಡು ಸಂಪ್ರದಾಯಗಳ ಕಾರಣವಾಗಿ ತುಂಬಿಕೊಂಡಿತ್ತು. ನಾನು ಅವರಿಗೆ ಅವರು ತಮ್ನೊಳಗೆ ತುಂಬಿಕೊಂಡಿದ್ದ ಈ ಎಲ್ಲವನ್ನೂ ಹೊರಗೆ ಹಾಕಲು ಸಹಾಯ ಮಾಡುತ್ತಿದ್ದೆ. “ಆಮೇಲೆ ಏನಾಯ್ತು ? ನಾವು ವಾಪಸ್ ಬಂದಾಗ ಅವರು ಪ್ರಶಾಂತವಾಗಿ ಕುಳಿತಿದ್ದರು”. ಬಹಾಉದ್ದೀನ್ ಉತ್ತರಿಸಿದ, “ಅವರು ತಮ್ಮೊಳಗಿನ ಎಲ್ಲ ಹುಚ್ಚುತನವನ್ನ ಹೊರಗೆ ಹಾಕಿದ ಮೇಲೆ ಅವರೊಳಗೆ ಅಪಾರ ಪ್ರಶಾಂತತೆ ನೆಲೆಯಾಯಿತು. ಆ ಕಾರಣವಾಗಿಯೇ ಅವರು ಅಷ್ಟು ಶಾಂತವಾಗಿ ಕುಳಿತಿದ್ದರು”.
ಈ ಎರಡನ್ನೂ ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಈಗ ಏನಾಯ್ತು? ಇಲ್ಲಿ ನಿನ್ನ ಹೊರತಾಗಿ ಬೇರೆ ಯಾರೂ ಕಾಣುತ್ತಿಲ್ಲವಲ್ಲ. ಎಲ್ಲಿಗೆ ಹೋದರು ನಿನ್ನ ಎಲ್ಲ ಶಿಷ್ಯರು? “ಈಗ ಅವರುತಾವು ಕಲಿತದ್ದನ್ನ ಎಲ್ಲರಿಗೂ ಹಂಚಲು ಹೋಗಿದ್ದಾರೆ” ಉತ್ತರಿಸಿದ ಬಹಾಉದ್ದೀನ್. “ಈಗಲೇ ಅವರಿಗೆ ಹೆಚ್ಚು ಕೆಲಸ. ಅವರು ಅಮೃತದ ರುಚಿ ನೋಡಿದ್ದಾರೆ. ಅವರು ನನಗಾಗಿ ಇನ್ನಷ್ಟು ಹುಚ್ಚರನ್ನು ತರಲು ಜಗತ್ತಿನ ಮೂಲೆ ಮೂಲೆಗೆ ಹೋಗಿದ್ದಾರೆ. ಮುಂದಿನ ಬಾರಿ ನೀವು ಇಲ್ಲಿಗೆ ಬಂದಾಗ ಆ ಹುಚ್ಚರು ತಮ್ಮ ಹುಚ್ಚುತನ ಹೊರ ಹಾಕುವುದನ್ನ ನೋಡಬಹುದು”.
Source: Osho- Dhammapada, The Way of the Buddha

