ಕಾಲ ಕಳೆಯುವ ನಾವು, ಕಳೆದುಹೋಗಿದ್ದಕ್ಕೆಲ್ಲಾ ಅಳತೆಯ ಲೆಕ್ಕ ಹಚ್ಚಿ, ಹೆಸರಿಟ್ಟು, ಮತ್ತೆ ಮತ್ತೆ ಅದನ್ನು ನೆನೆಯುತ್ತ ನಡೆಯುತ್ತೇವೆ. ಈ ಅಭ್ಯಾಸದಿಂದ ಕಲಿಕೆ ಸಾಧ್ಯವಾಗಿ ಭವಿಷ್ಯ ಹಗುರಾದರೆ ಒಳಿತು. ತಪ್ಪುಗಳೇ ಮೇಲಾಗಿ ಭಾರ ಹೆಗಲೇರಿದರೆ ಕೆಡುಕು. ಇಂದು ಯುಗಾದಿ. ಒಳಿತಿನ ಮಾತನ್ನೇ ಆಡೋಣ. ಕಾಲವನ್ನು ನಾಜೂಕಾಗಿ ನಡೆಸಿಕೊಳ್ಳೋಣ, ಗುರಿಯತ್ತ ನಡೆಯೋಣ. ಹೊಸ ಸಂವತ್ಸರ ಶುಭ ತರಲಿ… | ಅರಳಿ ಬಳಗ
“ಕಾಲೋ ನ ಯಾತೋ ವಯಮೇವ ಯಾತಾ” ಅನ್ನುತ್ತಾನೆ ಭರ್ತೃಹರಿ. ಕಳೆಯೋದು ಕಾಲ ಅಲ್ಲ, ನಾವೇ ಅನ್ನುತ್ತಾನವನು!
ಸರಿಯೇ… ಕಾಲವೊಂದು ಅನಾದಿ ಅನಂತಗಳ ನಡುವಿನ ತಂತು. ಈ ತಂತುವಿನ ಮೇಲೆ ತಂತಿ ನಡಿಗೆ ಮಾಡ್ತಿರೋದು ನಾವು; ಯಾರದೋ ಆಟಕ್ಕೆ ಹುಟ್ಟಿಸಲ್ಪಟ್ಟ ಜೀವರಾಶಿ.
ವಯಮೇವ ಯಾತಾ… ಮುಗಿದುಹೋಗೋರು ನಾವೇ! ನಮ್ಮ ಪಾಲಿಗೆ ಕಾಲ ಚಲಿಸಿಲ್ಲ ಅಂದ ಮಾತ್ರಕ್ಕೆ ಆಯಸ್ಸು ಕರಗದೆ ಉಳಿಯುವುದೇ?
ಕಾಲ ಸಾಪೇಕ್ಷ, ಸರಿ. ಆದರೆ ಪರಿಣಾಮ!? ಒಪ್ಪಿದರೂ ಬಿಟ್ಟರೂ ಅದು ವಾಸ್ತವ. ಮನಸ್ಸಿನ ಮೇಲೆ ಕಾಲದ ಪರಿಣಾಮ ತಡೆಯಬಹುದು. ದೇಹದ ಮೇಲೆ?
ತೃಷ್ಣಾ ನ ಜೀರ್ಣಾ, ವಯಮೇವ ಜೀರ್ಣಾ… ಕಾಲದೊಟ್ಟಿಗೆ ಬಯಕೆಗಳು ಅಳಿಯದಂತೆ ಕಾಪಿಟ್ಟುಕೊಳ್ಳಬಹುದು, ದೇಹವನ್ನ ಕಾಪಿಡೋದು ಹೇಗೆ!?
ವಯಮೇವ ಯಾತಾ… ವಯಮೇವ ಜೀರ್ಣಾ… ಕಳೆಯುತ್ತ ಹೋಗೋರೂ ನಾವೇ ಇಲ್ಲವಾಗೋರೂ ನಾವೇ.
ಕಾಲದುದ್ದಕ್ಕೂ ನಮ್ಮ ನಡಿಗೆ ಅಳೆಯಲು ನೆಟ್ಟುಕೊಂಡ ಮೈಲಿಗಲ್ಲುಗಳಷ್ಟೇ – ಈ ತ್ರುಟಿಯಿಂದ ಕಲ್ಪಗಳವರೆಗಿನ ಅಳತೆ. ದಿನ, ವಾರ, ತಿಂಗಳು, ವರ್ಷಗಳೆಲ್ಲಾ; ಸಾಗುವವು ಯುಗ – ಕಲ್ಪಗಳ ವರೆಗೂ.
ಇಂದಿನಿಂದ ಮತ್ತೊಂದು ಸಂವತ್ಸರ. ಹೆಸರು ‘ಕ್ರೋಧಿ’. 60 ಸಂವತ್ಸರಗಳ ಚಕ್ರದಲ್ಲಿ ಇದು 38ನೆಯದು. ಹನ್ನೆರಡು ಮಾಸಗಳಾದರೆ “ಏತದಪಿ ಗಮಿಷ್ಯತಿ” ಇದು ಕೂಡಾ ಸರಿದುಹೋಗುತ್ತದೆ. ಇರುವಷ್ಟು ಕಾಲ, ಅದು ಸರಿಯುವ ತನಕ ನಾವು ಹೇಗಿರುತ್ತೇವೆ, ಅದನ್ನು ಹೇಗೆ ಬಳಸಿಕೊಳ್ತೇವೆ ಅನ್ನುವುದು ಮುಖ್ಯ.
ವರ್ತಮಾನ ಗತವಾದಾಗ ನಡೆದದ್ದೆಲ್ಲ ಭಾರವಾಗಿ ಭೂತದಂತೆ ಬೆನ್ನೇರಬಾರದು; ಭವಿಷ್ಯದತ್ತ ಹಾರುವ ರೆಕ್ಕೆಯಾಗಬೇಕು, ನೆನಪಿನ ಮೂಟೆ ಅಷ್ಟು ಉಲ್ಲಾಸದಾಯಕವಾಗಿರಬೇಕು. ಇದನ್ನು ನಾವೇ ಸಾಧ್ಯವಾಗಿಸಿಕೊಳ್ಳಬೇಕು. ಅದು ಎಲ್ಲರಿಗೂ ಸಾಧ್ಯವಾಗಲಿ ಅನ್ನೋದೇ ಈ ಯುಗಾದಿಗೆ ನಮ್ಮ ಹಾರೈಕೆ.
ಕ್ರೋಧಿ ನಾಮ ಸಂವತ್ಸರ ಎಲ್ಲರಿಗೂ ಶುಭ ತರಲಿ.


ಕಾಲವನ್ನು ಎಂ ಸರಿಯಾಗಿ ನಡೆಸಿಕೊಳ್ಳೋಣ ಎನ್ನುವ ತುಂಬಾ ಚೆನ್ನಾಗಿದೆ
LikeLike