ಖಾಲೀತನದ ಪರಿಕಲ್ಪನೆ: ಓಶೋ

ಖಾಲೀತನದ ಪರಿಕಲ್ಪನೆಯನ್ನು ಪರಿಪೂರ್ಣವಾಗಿ ಒಪ್ಪಿಕೊಂಡಾಗ, ಜಗತ್ತಿನಲ್ಲಿಯ ನಮ್ಮ ಸ್ಥಾನದ ಕುರಿತಾದ ಇನ್ನೂ ಆಳವಾದ ತಿಳುವಳಿಕೆಗೆ, ಮತ್ತು ನಮ್ಮ ಅನುಭವ ಮತ್ತು ಬದಲಾವಣೆಯ ಕುರಿತಾದ ನಮ್ಮ ಆಂತರ್ಯದ ಸಾಮರ್ಥ್ಯ, ನಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಕಾರಣ ಎನ್ನುವ ನಿಜಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಮೂವತ್ತು ತಂತಿ ಕಡ್ಡಿಗಳು
ಗಾಲಿಯ ಮಧ್ಯದಲ್ಲಿ ಒಂದಾದವು.
ಎಲ್ಲಿ ಗಾಲಿ ಉರುಳುವದಿಲ್ಲವೋ
ಅದೇ ಉರುಳಿಸುತ್ತಿತ್ತು ಗಾಲಿಯನ್ನು.

ಮಣ್ಣಿನ ಮುದ್ದೆಯ ಟೊಳ್ಳು ಮಾಡಿ
ಗಡಿಗೆ ಎಂದರು.
ಎಲ್ಲಿ ಗಡಿಗೆಯಿಲ್ಲವೊ
ಅಲ್ಲಿಯೇ ನೀರು ತುಂಬುವರು.

ಕಿಟಕಿ, ಬಾಗಿಲುಗಳ ಕೊರೆದು
ಕೋಣೆ ಎಂದರು.
ಎಲ್ಲಿ ಕೋಣೆ ಇಲ್ಲವೊ
ಅಲ್ಲಿಯೇ ಮಂದಿ ಮಲಗಿದರು.

ನೋಡಿ
ಇರುವುದು ಇರದ ಜಾಗದಲ್ಲೇ
ಅಡಗಿ ಕೂತಿದೆ ನಮ್ಮ ಲಾಭ.

~ ಲಾವೋತ್ಸೇ


ಆಧ್ಯಾತ್ಮಿಕವಾಗಿ ಮೇಲಿನ ಹೋಲಿಕೆಗಳನ್ನ ಮನುಷ್ಯನ ಅನುಭವ ಮತ್ತು ಪ್ರಜ್ಞೆಗಳಿಗೆ ವಿಸ್ತರಿಸಬಹುದು. ಹೇಗೆ ಗಡಿಗೆ ತನ್ನ ಖಾಲೀತನದಿಂದ ಗುರುತಿಸಲ್ಪಡುತ್ತದೆಯೋ, ಹಾಗೆಯೇ ಮನುಷ್ಯನ ನಿಜವಾದ ತಿರುಳು ಗುರುತಿಸಲ್ಪಡುವುದು ಅವನ ದೈಹಿಕ ಅಥವಾ ಬಹಿರಂಗದ ಗುಣ ವಿಶೇಷಣಗಳಿಂದಲ್ಲ. ಬದಲಾಗಿ ಮನುಷ್ಯ ಗುರುತಿಸಲ್ಪಡುವುದು ಅವನ ಅಸ್ತಿತ್ವದ ಆಂತರ್ಯದ ಮೂಲಕ, ಅವನ ಅರಿವಿನ ಸಾಮರ್ಥ್ಯ ಮೂಲಕ, ಅವನ ಪ್ರಜ್ಞೆಯ ಮೂಲಕ, ಅವನೊಳಗಿರುವ ಅನಂತ ಸಾಧ್ಯತೆಗಳ ಸಾಮರ್ಥ್ಯದ ಮೂಲಕ. ಈ ಒಳಗಿನ ಖಾಲೀತನ, ಬರಡು ಶೂನ್ಯವಲ್ಲ ಬದಲಾಗಿ, ಅದು ಮುಕ್ತತೆಯ ಬಯಲು, ಮತ್ತು ಅನುಭವಗಳ, ಐಡಿಯಾಗಳ ಗ್ರಹಿಕಾ ಸಾಮರ್ಥ್ಯ ಹಾಗು ಸ್ವತಃ ಬದುಕಿನ ಹರಿವು.

ಖಾಲೀತನದ ಪರಿಕಲ್ಪನೆಯನ್ನು ಪರಿಪೂರ್ಣವಾಗಿ ಒಪ್ಪಿಕೊಂಡಾಗ, ಜಗತ್ತಿನಲ್ಲಿಯ ನಮ್ಮ ಸ್ಥಾನದ ಕುರಿತಾದ ಇನ್ನೂ ಆಳವಾದ ತಿಳುವಳಿಕೆಗೆ, ಮತ್ತು ನಮ್ಮ ಅನುಭವ ಮತ್ತು ಬದಲಾವಣೆಯ ಕುರಿತಾದ ನಮ್ಮ ಆಂತರ್ಯದ ಸಾಮರ್ಥ್ಯ, ನಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಕಾರಣ ಎನ್ನುವ ನಿಜಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ.

ಈ ಎಲ್ಲವೂ ನಮ್ಮ ಒಳಗಿನ ಖಾಲೀತನದೊಂದಿಗೆ ಸಹಯೋಗವನ್ನು ಸಾಧಿಸುವುದಕ್ಕೆ, ಅದನ್ನು ಗುರುತಿಸುವುದಕ್ಕೆ ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಅಲ್ಲ, ಅದನ್ನು ಬದುಕುವುದಕ್ಕೆ ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಅಲ್ಲ. ಈ ಸಹಯೋಗ ಸಾಧ್ಯವಾದಾಗ ಮಾತ್ರ ಈ ಖಾಲೀತನ ಥಟ್ಟನೇ ಬದುಕಿನ ಪೂರ್ಣತ್ವವಾಗಿ ಬದಲಾವಣೆ ಹೊಂದುತ್ತದೆ.

ಮಾಸ್ಟರ್ ಜೋಶು ಝೆನ್ ಕಲಿಯಲು ಶುರು ಮಾಡಿದ್ದು ಅರವತ್ತನೇ ವಯಸ್ಸಿನಲ್ಲಿ. ಜ್ಞಾನೋದಯವಾದಾಗ ಅವನಿಗೆ ಬರೊಬ್ಬರಿ ಎಂಭತ್ತು ವರ್ಷ ವಯಸ್ಸು. ತನ್ನ ನೂರಾ ಇಪ್ಪತ್ತನೇ ವಯಸ್ಸಿನವರೆಗೆ ಆತ ಝೆನ್ ಪಾಠ ಮಾಡಿದ.


ಒಮ್ಮೆ ಒಬ್ಬ ಶಿಷ್ಯ, ಜೋಶುನಿಗೆ ಪ್ರಶ್ನೆ ಮಾಡಿದ.
“ ನನ್ನ ಮನಸ್ಸು ಖಾಲಿಯಾಗಿದೆಯಲ್ಲ, ಏನು ತಾನೇ ಮಾಡಲಿ ಇನ್ನು? “

“ಮನಸ್ಸಲ್ಲಿರೋದನ್ನ ಹೊರ ಹಾಕು “
ಜೋಶು ಉತ್ತರಿಸಿದ.

“ ಆದರೆ ನನ್ನ ಮನಸ್ಸು ಖಾಲಿ, ಏನನ್ನ ಹೊರ ಹಾಕಲಿ? “ ಶಿಷ್ಯ ಮತ್ತೆ ಪ್ರಶ್ನೆ ಮಾಡಿದ.

“ ಹೌದಾ, ಹಾಗಾದರೆ ಅದನ್ನೇ ಹೊತ್ತು ನಡೆ “
ಜೋಶು ಕಣ್ಣು ಮಿಟುಕಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.