ಜನ ಬದುಕುತ್ತಿರುವುದು ಹೀಗೆ, ಸಿಟ್ಟಿನಲ್ಲಿ, ಸೇಡಿನ ಜೊತೆ, ದುಗುಡವನ್ನು ಹೊತ್ತುಕೊಂಡು, ಬದುಕಿನಿಂದ ತಿರಸ್ಕೃತವಾಗಿರುವ ಭಾವನೆಯನ್ನು ತುಂಬಿಕೊಂಡು, ಅಸ್ತಿತ್ವದೊಡನೆ ಹೊರಗಿನವರಂತೆ. ಆದರೆ ಇದು ಕಾರಣವಾಗಿರುವುದು ನೀವು ತಪ್ಪು ಸಂಗತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಕಾರಣವಾಗಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮೈಂಡ್ ಗೆ ಮುಳ್ಳುಗಳ ವಿಷಯದಲ್ಲಿ ಆಸಕ್ತಿಯೇ ಹೊರತು ಹೂವುಗಳ ಬಗ್ಗೆ ಅಲ್ಲ. ಯಾವುದು ನೋವನ್ನು ಕೊಡುತ್ತದೆಯೋ ಅದರ ಬಗ್ಗೆ ಮೈಂಡ್ ಗೆ ಅತೀವ ಕುತೂಹಲ, ಹೂವಿನ ಬಗ್ಗೆ ಯಾರು ಕಾಳಜಿ ಮಾಡುತ್ತಾರೆ? ನೀವು ನಿಮ್ಮ ಗೆಳೆಯರಿಗಿಂತ ಹೆಚ್ಚು ನಿಮ್ಮ ವೈರಿಗಳ ಬಗ್ಗೆ ಹೆಚ್ಚು ಯೋಚಿಸುತ್ತೀರಿ. ನಿಮ್ಮ ಮೈಂಡ್ ನ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ, ನಿಮಗೆ ಆಶ್ಚರ್ಯವಾಗಬಹುದು, ಅದು ನಿಮ್ಮ ವೈರಿಗಳ ಬಗ್ಗೆ ನಿಮ್ಮ ಗೆಳೆಯರಿಗಿಂತ ಹೆಚ್ಚು ಯೋಚನೆ ಮಾಡುತ್ತದೆ. ನೀವು ನಿಮ್ಮ ಗೆಳೆಯರನ್ನ ಮರೆಯಬಹುದು ಆದರೆ ನಿಮ್ಮ ವೈರಿಗಳನ್ನಲ್ಲ. ಇದು ನಿಮ್ಮ ಅಪ್ರಬುದ್ಧ ಮನಸ್ಸು.
ಆದರೆ ನಿಮ್ಮ ಪ್ರಬುದ್ಧ ಮನಸ್ಸು ವಿರುದ್ಧ ದಿಕ್ಕಿನಿಂದ ಯೋಚನೆ ಮಾಡುತ್ತದೆ. ಅದು ನಿಮ್ಮ ಮೇಲಿನ ಅನುಗ್ರಹಗಳನ್ನ ಕೌಂಟ್ ಮಾಡುತ್ತದೆ. ಅದು ಎಲ್ಲ ಸುಂದರ ವಿಷಯಗಳ ಬಗ್ಗೆ ಯೋಚನೆ ಮಾಡುತ್ತದೆ. ಆದು ತಾನು ಕೃತಜ್ಞವಾಗಿರಬೇಕಾದ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಸಹಜವಾಗಿಯೇ ಇಂಥ ಮನಸ್ಸು ಹೊಂದಿರುವ ವ್ಯಕ್ತಿಯ ಬದುಕು ಸುಂದರ ಅನುಭವಗಳಿಂದ ಸುತ್ತುವರೆದಿರುವ ಅನುಗ್ರಹಗಳ ಬದುಕು ಆಗಿರುತ್ತದೆ.
ಪ್ರಶ್ನೆ ನೀವು ನಿಮ್ಮ ಮೈಂಡ್ ನ ಒಂದು ಸಣ್ಣ ರಚನೆಯನ್ನು ಬದಲಾಯಿಸುವುದಷ್ಟೇ. ಒಂದು ಸಣ್ಣ ಬದಲಾವಣೆ ಸಾಕು ಅದು ದೊಡ್ಡ ದೊಡ್ಡ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ನಿಮ್ಮ ಎಲ್ಲ ಸುಂದರ ಅನುಭವಗಳನ್ನು ಕೂಡಿಡಲು ಶುರು ಮಾಡಿ. ಪ್ರತಿಯೊಬ್ಬರಿಗೂ ಇಂಥ ಅನುಭವಗಳು ಆಗುತ್ತಿರುತ್ತವೆ. ಯಾವುದು ಸುಂದರ ಅಲ್ಲವೋ ಅಂಥವುಗಳನ್ನು ನೆನಪಲ್ಲಿಟ್ಟುಕೊಳ್ಳುವುದು, ಕೂಡಿಡುವುದು ಯೋಗ್ಯವಲ್ಲ. ಯಾಕೆ ನಿಮ್ಮ ಹೂದಾನಿಯಲ್ಲಿ ಕಸಕಡ್ಡಿಯನ್ನು ಕೂಡಿಡಬೇಕು, ನಿಮಗೆ ಹೂವುಗಳನ್ನು, ಪರಿಮಳವನ್ನು ಕೂಡಿಡುವ ಅವಕಾಶವಿರುವಾಗ.
ನೀವು ಮಾಡಬೇಕಿರುವುದು ನಿಮ್ಮ ಸ್ವಾಭಾವಿಕ, ಜೈವಿಕ ಮೈಂಡ್ ನ ರಚನೆಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾತ್ರ. ಧ್ಯಾನ ಈ ಬದಲಾವಣೆಯನ್ನು ನಿಮಗೆ ಸುಲಭವಾಗಿ ಸಾಧ್ಯಮಾಡಿಕೊಡಬಹುದು. ಧ್ಯಾನದ ಒಂದು ಅವಶ್ಯಕ ಭಾಗವೆಂದರೆ ಸಂಗತಿಯ ಒಳ್ಳೆಯ ಬದಿಯನ್ನು ಗಮನಿಸುವುದು, ಜನರ ಉತ್ತಮ ಭಾಗವನ್ನು ಗಮನಿಸುವುದು. ನೀವು ಹೀಗೆ ಮಾಡುತ್ತ ನಿಮ್ಮ ಸುತ್ತಲೂ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು. ನೀವು ಸುಂದರ ನೆನಪುಗಳಿಂದ ಸುತ್ತುವರೆದಿರುವಾಗ ನಿಮ್ಮ ಪ್ರಗತಿ ನಿಶ್ಚಿತವಾದದ್ದು.
ಆದರೆ ಜನರು ವಿಚಿತ್ರ….. ನೀವು ಅವರಿಗೆ ಸಾವಿರ ಸಹಾಯ ಮಾಡಿರಬಹುದು ಆದರೆ ತಮ್ಮ ನೆನಪಿನಲ್ಲಿಟ್ಟುಕೊಳ್ಳುವುದು ಒಮ್ಮೆ ಮಾತ್ರ ನೀವು ಅವರಿಗೆ ಸಹಾಯ ಮಾಡಿರದ ಘಟನೆಯನ್ನು. ಈ ಒಂದು ಕಹಿ ನೆನಪನ್ನೇ ತಮ್ಮ ಬದುಕಿನುದ್ದಕ್ಕೂ ಅವರು ಕ್ಯಾರಿ ಮಾಡುತ್ತಾರೆ. ಜನ ಬದುಕುತ್ತಿರುವುದು ಹೀಗೆ, ಸಿಟ್ಟಿನಲ್ಲಿ, ಸೇಡಿನ ಜೊತೆ, ದುಗುಡವನ್ನು ಹೊತ್ತುಕೊಂಡು, ಬದುಕಿನಿಂದ ತಿರಸ್ಕೃತವಾಗಿರುವ ಭಾವನೆಯನ್ನು ತುಂಬಿಕೊಂಡು, ಅಸ್ತಿತ್ವದೊಡನೆ ಹೊರಗಿನವರಂತೆ. ಆದರೆ ಇದು ಕಾರಣವಾಗಿರುವುದು ನೀವು ತಪ್ಪು ಸಂಗತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಕಾರಣವಾಗಿ. ಬದುಕಿನಲ್ಲಿ ನಿಮಗೆ ಎರಡೂ ಸಂಗತಿಗಳು ಯಥೇಚ್ಛವಾಗಿ ಸಿಗುತ್ತವೆ.
ನೀವು ಒಂದು ಬೆಳಗನ್ನ ಎರಡು ಕತ್ತಲೆಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಸಂಗತಿಯಾಗಿ ನೋಡಬಹುದು ಹಾಗು ಒಂದು ಕತ್ತಲನ್ನ ಎರಡು ಬೆಳಗುಗಳಿಂದ ಸುತ್ತವರೆದಿರುವ ಸಂಗತಿಯಾಗಿಯೂ ನೋಡಬಹುದು. ನಿಮ್ಮ ಆಯ್ಕೆಯನ್ನು ನೀವೇ ಮಾಡಿಕೊಳ್ಳಬೇಕಾಗಿದೆ. ನಿಮಗೆ ಬೇಕಾಗಿರುವುದು ಸ್ವರ್ಗವಾ ಅಥವಾ ನರಕ?
ಒಂದು ದಿನ ನಸ್ರುದ್ದೀನ್, ತನ್ನ ಹೆಂಡತಿಯ ಮೆಮರಿಯ ಬಗ್ಗೆ ಗೆಳೆಯನ ಎದುರು ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದ.
“ ಅವಳ ಸಲುವಾಗಿ ಸಾಕಾಗಿ ಹೋಗಿದೆ ನನಗೆ, ಇಷ್ಟು ಕೆಟ್ಟ ನೆನಪಿನ ಶಕ್ತಿ ಇರುವವರನ್ನ ನಾನು ಎಲ್ಲೂ ನೋಡಿಲ್ಲ. “
“ ನಿಜ, ನನ್ನ ಹೆಂಡತಿಯೂ ಹಾಗೆಯೇ, ಒಂದು ಸಂಗತಿಯೂ ನೆನಪಿರುವುದಿಲ್ಲ, ಎಲ್ಲೆಂದರಲ್ಲಿ ಪರ್ಸ್, ಫೋನ್, ಕೀಲಿ ಕೈ ಮರೆತು ಬಂದುಬಿಡುತ್ತಾಳೆ. “
ಗೆಳೆಯ, ನಸ್ರುದ್ದೀನ್ ನ ದುಃಖದಲ್ಲಿ ತಾನೂ ಭಾಗಿಯಾದ.
“ ನನ್ನ ಹೆಂಡತಿ ಏನೂ ಮರೆಯುವುದಿಲ್ಲ, ಅವಳ ನೆನಪಿನ ಶಕ್ತಿಯಿಂದಾಗಿ ನನ್ನ ಬಾಳು ನರಕವಾಗಿದೆ”
ನಸ್ರುದ್ದೀನ್ ತನ್ನ ಸಮಸ್ಯೆಯನ್ನು ಬಿಡಿಸಿ ಹೇಳಿದ

