ಕಲ್ಲು ಕುಟಿಕನ ದೃಷ್ಟಾಂತ ಕತೆ

ಇರುವುದರಲ್ಲೇ ಸುಖ ಕಾಣಬೇಕು, ದೂರದ ಬೆಟ್ಟ ನುಣ್ಣಗೆ ಎಂದು ಸಾರುವ ಜಪಾನಿ ಜನಪದ ಕತೆ ಇದು… | ಚಿದಂಬರ ನರೇಂದ್ರ

ನಿಜವಾದ ಸಂತರು
ರಸವಿದ್ಯಾ ಪರಿಣಿತರು.
ಅವರು ಯಾವ ಲೋಹವನ್ನಾದರೂ
ಬೆಳ್ಳಿ ಬಂಗಾರಗಳನ್ನಾಗಿ
ಬದಲಾಯಿಸಬಲ್ಲರು.

ಹಾಗಾಗಿಯೇ ಅವರಿಗೆ
ಹುಚ್ಚು ವ್ಯಾಮೋಹವಿರುವುದಿಲ್ಲ
ಶುದ್ಧ ಬೆಳ್ಳಿ ಬಂಗಾರಗಳ
ಬಗ್ಗೆ.

– ರೂಮಿ

******************

ಒಬ್ಬ ವಿನಯವಂತ ಕಲ್ಲು ಕುಟಿಕನಿಗೆ ತನ್ನ ಬದುಕಿನ ಬಗ್ಗೆ, ತನ್ನ ಸಂಸಾರದ ಬಗ್ಗೆ, ತನ್ನ ಬಳಿ ಇರುವ ಎಲ್ಲ ಒಳ್ಳೆಯ ಸಂಗತಿಗಳ ಬಗ್ಗೆ ಯಾವುದೇ ತೃಪ್ತಿ ಇರಲಿಲ್ಲ.

ಒಂದು ದಿನ ಅವನಿಗೆ ತಾನು ದೇಶದ ಶ್ರೀಮಂತ ರಾಜಕುಮಾರ ಆಗಿರಬೇಕಿತ್ತು ಎಂದು ಅನಿಸಿತು. ಅವನ ಆಶ್ಚರ್ಯಕ್ಕೆ, ತಕ್ಷಣವೇ ಅವನು ಶ್ರೀಮಂತ ರಾಜಕುಮಾರನಾಗಿ ಬದಲಾಗಿ ಹೋದ.

ತನಗೆ ದೊರೆತ ಹೊಸ ಅಧಿಕಾರ ಮತ್ತು ಹೆಮ್ಮೆಯಲ್ಲಿ ಅವನು ಆಕಾಶದಲ್ಲಿ ಅತ್ಯಂತ ವಿಶಾಲ  ಮತ್ತು ಶಕ್ತಿಶಾಲಿ ಸೂರ್ಯನನ್ನು ನೋಡಿ, ತಾನೂ ಅವನ ಹಾಗಿರಬೇಕೆಂದು ಆಸೆಪಟ್ಟ. ಕೂಡಲೇ ಅವನು ಸೂರ್ಯನಾಗಿ ಬದಲಾಗಿ ಹೋದ.

ಒಂದು ಮೋಡ ಭೂಮಿಯನ್ನು ಗಮನಿಸುತ್ತಿದ್ದ ತನ್ನ ನೋಟಕ್ಕೆ ಅಡ್ಡಿಯಾದಾಗ, ತಾನೂ ಬೃಹತ್ ಮೋಡವಾಗಿದ್ದರೆ ಚೆನ್ನಾಗಿತ್ತು ಎಂದು ಅವನಿಗೆ ಅನಿಸಿತು. ಆ ಕೂಡಲೇ ಅವನು ಮೋಡವಾಗಿ ಹೋದ.

ಭೂಮಿಯ ಮೇಲೆ ಮಳೆ ಸುರಿಸುವ ತನ್ನ ಸಾಮರ್ಥ್ಯವನ್ನು ಅವನು ಆನಂದಿಸುತ್ತಿದ್ದಾಗ, ಅವನಿಗೆ ಯಾರೋ ತನ್ನನ್ನು ನೂಕುತ್ತಿರುವುದು, ಅವನ ಅನುಭವಕ್ಕೆ ಬಂತು. ಅದು ಗಾಳಿಯಾಗಿತ್ತು. ತಾನೂ ಶಕ್ತಿಶಾಲಿ ಗಾಳಿಯಾಗಬೇಕಿತ್ತು ಎಂದು ಅವನಿಗೆ ಅನಿಸಿತು. ತಕ್ಷಣವೇ ಅವನು ಗಾಳಿಯಾಗಿ ಹೋದ.

ತಾನು ಎಷ್ಟೇ ಜೋರಾಗಿ ಬೀಸಿದರೂ, ಭೂಮಿಯ ಮೇಲಿನ ಒಂದು ಬೃಹತ್ ಬಂಡೆ ಯನ್ನು ಅಲುಗಾಡಿಸಲು ಸಾಧ್ಯವಾಗದಿರುವುದನ್ನು ಗಮನಿಸಿ ಅವನಿಗೆ ತಾನು ಬಂಡೆಯಾಗಿದ್ದರೆ ಶ್ರೇಷ್ಠ ಅನಿಸಿತು. ಹಾಗೆ ಅನಿಸಿದ್ದೇ ತಡ ಅವನು ಬಂಡೆಯಾಗಿ ಬದಲಾಗಿ ಹೋದ.

ಈಗ ಅವನಿಗೆ ತನ್ನ ಹಿಂದಿನ ಸೂರ್ಯ, ಮೋಡ, ಗಾಳಿಯ ಅವತಾರಗಳಿಗಿಂತ ಈಗಿನ ಬಂಡೆಯ ಅವತಾರ ಬಹಳ ಶಕ್ತಿಶಾಲಿ ಅನಿಸತೊಡಗಿತು. ಇನ್ನು ತನ್ನನ್ನು ಅಲುಗಾಡಿಸುವವರು ಯಾರೂ ಇಲ್ಲವೆಂದು ಅವನಿಗೆ ಹೆಮ್ಮೆಯಾಯಿತು.

ಅಷ್ಟರಲ್ಲಿಯೇ ಅವನಿಗೆ ಅಷ್ಟೇನು ದೊಡ್ಡದಲ್ಲದ ನಿರಂತರ ಸದ್ದು ಕೇಳಲಾರಂಭಿಸಿತು. ತಾನು ಬದಲಾಗುತ್ತಿರುವುದು ಅವನ ಅನುಭವಕ್ಕೆ ಬರತೊಡಗಿತು. ತಾನು ಸರ್ವಶಕ್ತಿಶಾಲಿ ಬೃಹತ್  ಬಂಡೆ , ತಾನು ಬದಲಾಗುವುದು ಹೇಗೆ ಸಾಧ್ಯ ಎಂದು ಅವನಿಗೆ ಆಶ್ಚರ್ಯವಾಗತೊಡಗಿತು.

ಕೂಡಲೇ ಅವನು ಕೆಳಗೆ ಬಗ್ಗೆ ನೋಡಿದಾಗ ಅಲ್ಲಿ ಒಬ್ಬ ವಿನೀತ ಕಲ್ಲು ಕುಟಿಗ ಉಳಿ ಮತ್ತು ಸುತ್ತಿಗೆಯಿಂದ ತನ್ನ ಮೇಲೆ ಚಿಕ್ಕದಾಗಿ ಪ್ರಹಾರ ಮಾಡುತ್ತ ತನ್ನನ್ನು ಬದಲಾಯಿಸುತ್ತಿರುವುದು ಅವನ ಅನುಭವಕ್ಕೆ ಬಂತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.