ನಮ್ಮ ಒಳಗಿನ ಜಗತ್ತಿನ ಮೇಲೆ ನಾವು ಅಧಿಪತ್ಯವನ್ನು ಸಾಧಿಸುವುದು ಮಹತ್ವದ್ದು ಎನ್ನುವುದನ್ನ ವಿಷದೀಕರಿಸುತ್ತದೆ. ಹೀಗೆ ಮಾಡಿದಾಗ ನಾವು ಎಂಥ ಬಿರುಗಾಳಿಯನ್ನೂ ಪ್ರವೇಶಿಸಿ, ಯಶಸ್ವಿಯಾಗಿ ಯಾವ ಹಾನಿಯೂ ಇಲ್ಲದಂತೆ ಅಷ್ಟೇ ಅಲ್ಲ ಇನ್ನೂ ಹೆಚ್ಚು ಸಾಮರ್ಥ್ಯಶಾಲಿಗಳಾಗಿ, ಇನ್ನೂ ಹೆಚ್ಚು ಜ್ಞಾನಿಗಳಾಗಿ ಹೊರಬರುತ್ತೇವೆ… । ಚಿದಂಬರ ನರೇಂದ್ರ
ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.
ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.
ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.
ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.
~ ಲಾವೋತ್ಸೇ
“ಬಿರುಗಾಳಿಯನ್ನು ಸುಮ್ಮನಾಗಿಸುವುದರ ಬದಲು, ನಿಮ್ಮನ್ನು ಸುಮ್ಮನಾಗಿಸಿಕೊಳ್ಳಿ. ಬಿರುಗಾಳಿ ನಿಮ್ಮನ್ನು ದಾಟಿ ಹೋಗುತ್ತದೆ”.
ಈ ಹೇಳಿಕೆ, ಹೊರಗಿನ ಸಂದರ್ಭಗಳನ್ನು ನಿಯಂತ್ರಿಸಲು ಹೋಗುವುದರ ಬದಲಾಗಿ, ನಿಮ್ಮ ಅಂತರಂಗದ ಶಾಂತಿಗೆ ಮತ್ತು ಸಹನೆಗೆ ಮಹತ್ವವನ್ನು ನೀಡುವ ಅಧ್ಯಾತ್ಮಿಕ ತತ್ವವನ್ನು ಆಳವಾಗಿ ಒತ್ತಿ ಹೇಳುತ್ತದೆ.
ಆಗಾಗ್ಗೆ ನಮ್ಮ ಬದುಕಿನಲ್ಲಿ ಕಾಣಿಸಿಕೊಳ್ಳುವ ಪ್ರಕ್ಷುಬ್ಧ ಪರಿಸ್ಥಿತಿಗಳನ್ನು ನಿಯಂತ್ರಿಸುವುದು ನಮಗೆ ಸಾಧ್ಯವಾಗುವುದಿಲ್ಲ. ಈ ಬಿರುಗಾಳಿಗಳು ಅವು ಏನೇ ಆಗಿರಬಹುದು; ವೈಯಕ್ತಿಕ ಸವಾಲುಗಳಿಂದ ಹಿಡಿದು, ವಿಶಾಲ ಅಸ್ತಿತ್ವವಾದಿ ಬಿಕ್ಕಟ್ಟುಗಳ ವರೆಗೆ. ಈ ಹೊರಗಿನ ಘಟನೆಗಳನ್ನು ನಿಯಂತ್ರಿಸಲು ಅಥವಾ ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದು ಬಹುತೇಕ ವ್ಯರ್ಥ ಮತ್ತು ತ್ರಾಸದಾಯಕ, ಏಕೆಂದರೆ ಅವು ನಮ್ಮ ತುರ್ತು ಪ್ರಭಾವದ ಪರಿಧಿಯಿಂದ ಆಚೆ ಇರುವಂಥವು.
ಅಧ್ಯಾತ್ಮಿಕ ಜ್ಞಾನ ನಮ್ಮನ್ನು ಅಂತರಂಗದ ಶಾಂತಿ ಮತ್ತು ಸ್ಥಿರತೆಯ ಕುರಿತು ಫೋಕಸ್ ಮಾಡುವಂತೆ ಉತ್ತೇಜಿಸುತ್ತದೆ.
ನಮ್ಮನ್ನು ನಾವು ಸುಮ್ಮನಾಗಿಸಿಕೊಳ್ಳುವುದರ ಮೂಲಕ, ನಾವು ಸಾಮರ್ಥ್ಯ ಮತ್ತು ಸ್ಪಷ್ಟತೆಯ ವಿಶಾಲ ಸಾಗರಕ್ಕೆ ಕೈ ಹಾಕುತ್ತವೆ. ಮತ್ತು ನಮ್ಮ ಈ ಪ್ರಯತ್ನ ನಮ್ಮನ್ನು ಹೆಚ್ಚು ಪರಿಣಾಮಕಾರಿಯಾಗಿ ಸವಾಲುಗಳಿಂದ ದಾಟಿಸಿ ಪಾರುಮಾಡುತ್ತದೆ. ಈ ಅಂತರಂಗದ ಶಾಂತಿ, ನಿಷ್ಕ್ರೀಯ ಸ್ಥಿತಿಯನ್ನು ತಲುಪುವುದಲ್ಲ ಬದಲಾಗಿ ಮನೋಮಗ್ನತೆ (mindfulness), ಸ್ವೀಕಾರ (acceptance) ಮತ್ತು ಅನಾಸಕ್ತಿ (detachment) ಗಳನ್ನು ಕ್ರಿಯಾತ್ಮಕವಾಗಿ ಪ್ರ್ಯಾಕ್ಟೀಸ್ ಮಾಡುವುದು.
ಈ ಹೇಳಿಕೆ ಎಲ್ಲ ಸಂಗತಿಗಳ ಕ್ಷಣಿಕತೆಯ ಬಗ್ಗೆ ತನ್ನ ನಂಬಿಕೆಯನ್ನು ಒತ್ತಿ ಹೇಳುತ್ತದೆ. ಬಿರುಗಾಳಿ ನಮ್ಮನ್ನು ದಾಟಿ ಹೋಗುತ್ತದೆ ಎನ್ನುವುದು ಸಂಗತಿಗಳ ಅಶಾಶ್ವತತೆಯನ್ನು ನಮಗೆ ನೆನಪು ಮಾಡಿಕೊಡುತ್ತದೆ. ಈ ಹೇಳಿಕೆ, ಹೇಗೆ ಬಿರುಗಾಳಿಗೆ ಒಂದು ಶುರುವಾತು ಇದೆಯೋ ಹಾಗೆಯೇ ಅದಕ್ಕೆ ಕೊನೆ ಕೂಡ ಇರುವುದನ್ನು ನಮಗೆ ಹೇಳಿಕೊಡುತ್ತದೆ. ಈ ದೃಷ್ಟಿಕೋನ, ಸಹನೆ ಮತ್ತು ದೂರದರ್ಶಿತ್ವವನ್ನು ಬೆಳೆಸಿಕೊಳ್ಳುವುದರ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ ಹಾಗು ನಮ್ಮ ಸದ್ಯದ ಸಂಘರ್ಷಗಳು, ಸವಾಲುಗಳು ಹೇಗೆ ಅಶಾಶ್ವತವಾದವು ಎನ್ನುವುದನ್ನ ನಿರೂಪಿಸುತ್ತದೆ.
ಸಂಕ್ಷೇಪಿಸಿ ಹೇಳುವುದಾದರೆ ಈ ವಿಸ್ಡಂ, ನಾವು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಅಸಾಧ್ಯಗಳನ್ನು ನಿಯಂತ್ರಿಸುವಲ್ಲಿ ವ್ಯರ್ಥಮಾಡುವುದರ ಬದಲಿಗೆ ನಮ್ಮ ಒಳಗಿನ ಜಗತ್ತಿನ ಮೇಲೆ ನಾವು ಅಧಿಪತ್ಯವನ್ನು ಸಾಧಿಸುವುದು ಮಹತ್ವದ್ದು ಎನ್ನುವುದನ್ನ ವಿಷದೀಕರಿಸುತ್ತದೆ. ಹೀಗೆ ಮಾಡಿದಾಗ ನಾವು ಎಂಥ ಬಿರುಗಾಳಿಯನ್ನೂ ಪ್ರವೇಶಿಸಿ, ಯಶಸ್ವಿಯಾಗಿ ಯಾವ ಹಾನಿಯೂ ಇಲ್ಲದಂತೆ ಅಷ್ಟೇ ಅಲ್ಲ ಇನ್ನೂ ಹೆಚ್ಚು ಸಾಮರ್ಥ್ಯಶಾಲಿಗಳಾಗಿ, ಇನ್ನೂ ಹೆಚ್ಚು ಜ್ಞಾನಿಗಳಾಗಿ ಹೊರಬರುತ್ತೇವೆ.
ಶಾಂತಿ, ಸಮಾಧಾನ ಎನ್ನುವುದು ಯಾವ ಗದ್ದಲ, ಸವಾಲು, ಸಂಘರ್ಷ ಇರದ ಜಾಗದಲ್ಲಿ ಇರುವುದಲ್ಲ ಬದಲಾಗಿ ಅಂಥ ಜಾಗಗಳ ನಡುವೆಯೇ ಇದ್ದು ಹೃದಯದ ಸಮಾಧಾನವನ್ನು ಸಾಧಿಸಿಕೊಳ್ಳುವುದು.
ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.
ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.
ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.
ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.
ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆ ಕಾರಣ ಎಂದು ನಿಜ ಹೇಳಿದಳು.
ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.
ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.
(ಆಕರ: Zen page)

