ಬದುಕಲು ಅವರ ಬಳಿ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ಈ ಕ್ಷಣದಲ್ಲಿ ನೀವು ಅವರನ್ನು ಈಗ ನಿಮ್ಮ ಅತ್ಯಂತ ಆಳ ಬಯಕೆ ಏನು ಕೇಳಿದರೆ, ನಮ್ಮ ಸುಂದರ ಭೂಮಿಯ ಮೇಲೆ ಮತ್ತೆ ನಡೆದಾಡುವುದು ಎಂದೇ ಉತ್ತರಿಸುತ್ತಾರೆ… ~ Thich Nhat Hanh| ಕನ್ನಡಕ್ಕೆ: ಚಿದಂಬರ ನರೇಂದ್ರ
ನೀರಿನ ಮೇಲೆ ಅಥವಾ
ತೆಳು ಗಾಳಿಯ ಮೇಲೆ ನಡೆಯುವುದು
ಪವಾಡ ಎನ್ನುತ್ತಾರೆ ಜನ.
ಆದರೆ ನನ್ನ ಪ್ರಕಾರ ನಿಜದ ಪವಾಡ,
ನೀರಿನ ಮೇಲೆ
ಗಾಳಿಯ ಮೇಲೆ ನಡೆಯುವುದಲ್ಲ,
ಬದಲಾಗಿ ನೆಲದ ಮೇಲೆ ಕಾಲೂರಿ
ಹೆಜ್ಜೆ ಹಾಕುವುದು.
ಪ್ರತೀದಿನ ನಮಗೆ ಎದುರಾಗುವ
ಪವಾಡಗಳನ್ನು ಗುರುತಿಸುವುದು
ಸಾಧ್ಯವಾದರೆ,
ನೀಲಿ ಆಕಾಶ, ಬೆಳ್ಳಿ ಮೋಡಗಳು
ಹಸಿರು ಕಾಡುಗಳು ಮತ್ತು
ಪುಟ್ಟ ಮಗುವಿನ
ಕುತೂಹಲಭರಿತ ಕಪ್ಪು ಕಣ್ಣುಗಳಿಂತ
ಹೆಚ್ಚಿನ ಬೆರಗು ಸಾಧ್ಯಮಾಡುವ
ಪವಾಡವಿದೆಯೆ ಇನ್ನೊಂದು?
ಕಲ್ಪನೆ ಮಾಡಿಕೊಳ್ಳಿ ಇಬ್ಬರು ಅಂತರಿಕ್ಷ ಯಾನಿಗಳು ಚಂದ್ರನ ಮೇಲೆ ಇಳಿದಿದ್ದಾರೆ ಮತ್ತು ಅವರು ಅಲ್ಲಿರುವಾಗಲೇ, ಒಂದು ಅಪಘಾತವಾಗಿ ಅವರ ಗಗನ ನೌಕೆಗೆ ಹಾನಿಯಾಗಿದೆ ಮತ್ತು ಅದು ಇನ್ನು ಅವರನ್ನು ಮತ್ತೆ ಭೂಮಿಗೆ ಕರೆದುಕೊಂಡು ಬರಲು ಅಸಮರ್ಥವಾಗಿದೆ. ಅವರ ಬಳಿ ಇನ್ನೂ ಎರಡು ದಿನಗಳಿಗೆ ಸಾಕಾಗುವಷ್ಟು ಮಾತ್ರ ಆಕ್ಸಿಜನ್ ಇದೆ. ಅವರನ್ನು ಕಾಪಾಡಲು ಭೂಮಿಯಿಂದ ಯಾವ ಸಹಾಯ ಸಿಗುವ ಭರವಸೆ ಇಲ್ಲ.
ಬದುಕಲು ಅವರ ಬಳಿ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ಈ ಕ್ಷಣದಲ್ಲಿ ನೀವು ಅವರನ್ನು ಈಗ ನಿಮ್ಮ ಅತ್ಯಂತ ಆಳ ಬಯಕೆ ಏನು ಕೇಳಿದರೆ, ನಮ್ಮ ಸುಂದರ ಭೂಮಿಯ ಮೇಲೆ ಮತ್ತೆ ನಡೆದಾಡುವುದು ಎಂದೇ ಉತ್ತರಿಸುತ್ತಾರೆ.
ಅವರಿಗೆ ಅಷ್ಟು ಮಾತ್ರ ಸಾಕು ಬೇರೆ ಏನೂ ಬೇಕಾಗಿಲ್ಲ. ಅವರಿಗೆ ಆಗ ಯಾವ ದೊಡ್ಡ ಕಾರ್ಪೋರೇಷನ್ ನ ಮುಖ್ಯಸ್ಥ ಆಗುವುದು ಬೇಕಿಲ್ಲ, ಪ್ರಸಿದ್ಧ ಸೆಲಿಬ್ರೆಟಿ ಆಗುವುದು ಬೇಕಿಲ್ಲ, ಅಮೇರಿಕೆಯ ಅದ್ಯಕ್ಷ ಆಗುವುದು ಬೇಕಿಲ್ಲ.
ಅವರಿಗೆ ಭೂಮಿಯ ಮೇಲೆ ಹೆಜ್ಜೆ ಊರುವುದರ ಹೊರತಾಗಿ ಬೇರೆ ಏನೂ ಬೇಕಿಲ್ಲ. ಈಗ ಅವರಿಗೆ ಭೂಮಿಯ ಮೆಲೆ ಮತ್ತೆ ನಡೆದಾಡುವುದು, ತಮ್ಮ ಪ್ರತಿ ಹೆಜ್ಜೆಯನ್ನೂ ಆನಂದಿಸುವುದು, ಪ್ರಕೃತಿಯ ಶಬ್ದಗಳನ್ನು ಆಲಿಸುವುದು, ಅಥವಾ ತಮ್ಮ ಪ್ರೇಮಿಯ ಕೈ ಹಿಡಿದುಕೊಂಡು ಹುಣ್ಣಿಮೆಯ ಚಂದಿರನ ಕಣ್ತುಂಬಿಕೊಳ್ಳುವುದು ಬಹಳ ಮುಖ್ಯ. ಚಂದ್ರನ ಮೇಲೆ ಸಾಯುವದರಿಂದ ತಪ್ಪಿಸಿಕೊಂಡು ಭೂಮಿಗೆ ಇಳಿದಿರುವ ಈ ಗಗನಯಾನಿಗಳ ಮನದಾಳದ ಬಯಕೆಯಂತೆ ನಾವು ಪ್ರತಿದಿನ ಬದುಕಬೇಕು.
ಝೆನ್ ಮಾಸ್ಟರ್ ಲಿಂಜಿ ಹೇಳುತ್ತಾನೆ, “ಪವಾಡ ಎಂದರೆ ಬೆಂಕಿಯ ಮೇಲೆ, ನೀರಿನ ಮೇಲೆ ನಡೆಯುವುದಲ್ಲ. ಪವಾಡ ಭೂಮಿಯ ಮೇಲೆ ಕಾಲೂರಿ ನಡೆದಾಡುವುದು” ನನಗೆ ಲಿಂಜಿಯ ಈ ಮಾತುಗಳು ಬಹಳ ಇಷ್ಟ. ನನಗೆ ನಡೆದಾಡುವುದು ಇಷ್ಟ ಅದು ಏರ್ ಪೋರ್ಟ್ ಮತ್ತು ರೇಲ್ವೇ ಸ್ಟೇಷನ್ ನಂಥ ಗದ್ದಲದ ಜಾಗ ಆಗಿದ್ದರೂ ಅಡ್ಡಿ ಇಲ್ಲ, ನಾನು ನಡೆದಾಡಬೇಕು ಮಾತ್ರ. ತಾಯಿಯ ಮೇಲೆ ಹೆಜ್ಜೆ ಊರುತ್ತಾ ಮಗು ಓಡಾಡುವಾಗ ತಾಯಿ ಅನುಭವಿಸುವ ಪುಳಕ, ಮಗು ಅನುಭವಿಸುವ ಆನಂದ ನಮ್ಮದಾಗಬೇಕು. ನಮ್ಮಿಂದ ಉತ್ತೇಜೀತರಾಗಿ ಎಲ್ಲರೂ ಭೂಮಿಯ ಮೇಲಿನ ತಮ್ಮ ಪ್ರತಿ ನಿಮಿಷವನ್ನು ಪ್ರಜ್ಞಾಪೂರ್ವಕವಾಗಿ ಬದುಕಬೇಕು.

