ನಿರಾಕರಣೆ ದೂರ ಮಾಡುವುದರ ಬದಲಿಗೆ ಹತ್ತಿರಕ್ಕೆ ಸೆಳೆಯುತ್ತ ಹೋಗುತ್ತದೆ. ಕಿತ್ತಿದ ಹಲ್ಲಿನ ಜಾಗವನ್ನು ಹೇಗೆ ನಾಲಿಗೆ ಮತ್ತೆ ಮತ್ತೆ ಮುಟ್ಟಿ ನೋಡುತ್ತದೆಯೋ ಹಾಗೆ ಮೈಂಡ್, ನಿಷೇಧಿಸಲ್ಪಟ್ಟ ಸಂಗತಿಯ ಸುತ್ತ ತನ್ನ ಆಟ ಆಡುತ್ತದೆ. ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವುದನ್ನ ಹತ್ತಿಕ್ಕಲಾಗುತ್ತದೆಯೋ ಅದು ಆಕರ್ಷಣೀಯವಾಗುತ್ತ ಹೋಗುತ್ತದೆ. ಯಾವುದನ್ನ ನಿರಾಕರಿಸಲಾಗುತ್ತದೆಯೋ ಅದು ನಮ್ಮನ್ನ ಅಮಂತ್ರಿಸುತ್ತ ಹೋಗುತ್ತದೆ. ಕೇವಲ ಮೈಂಡ್ ನ ಆಟಗಳ ಕುರಿತಾದ ಎಚ್ಚರಿಕೆ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ.
ನಿರಾಕರಣೆ ದೂರ ಮಾಡುವುದರ ಬದಲಿಗೆ ಹತ್ತಿರಕ್ಕೆ ಸೆಳೆಯುತ್ತ ಹೋಗುತ್ತದೆ. ಕಿತ್ತಿದ ಹಲ್ಲಿನ ಜಾಗವನ್ನು ಹೇಗೆ ನಾಲಿಗೆ ಮತ್ತೆ ಮತ್ತೆ ಮುಟ್ಟಿ ನೋಡುತ್ತದೆಯೋ ಹಾಗೆ ಮೈಂಡ್, ನಿಷೇಧಿಸಲ್ಪಟ್ಟ ಸಂಗತಿಯ ಸುತ್ತ ತನ್ನ ಆಟ ಆಡುತ್ತದೆ.
ಒಮ್ಮೆ ಲಂಡನ್ ನಲ್ಲಿ ಒಬ್ಬ ಸಣ್ಣ ಅಂಗಡಿಯವ ಒಂದು ಹಂಗಾಮಾ ಸೃಷ್ಟಿ ಮಾಡಿಬಿಟ್ಟಿದ್ದ. ಅವನು ತನ್ನ ಅಂಗಡಿಯ ಶೋ ವಿಂಡೋದ ಮೇಲೆ ಒಂದು ಕಪ್ಪು ಬಟ್ಟೆಯನ್ನು ತೂಗು ಹಾಕಿದ್ದ. ಆ ಕಪ್ಪು ನಟ್ಟ ನಡುವೆ ಒಂದು ರಂಧ್ರವನ್ನು ಮಾಡಲಾಗಿತ್ತು. ಮತ್ತು ಆ ರಂಧ್ರದ ಕೆಳಗೆ, “ ಈ ರಂಧ್ರದ ಮೂಲಕ ನೋಡುವುದನ್ನ ನಿಷೇಧಿಸಲಾಗಿದೆ” ಎಂದು ಬರೆಯಲಾಗಿತ್ತು.
ಸಹಜವಾಗಿ ಆ ಅಂಗಡಿಯ ಮುಂದೆ ಜನರ ಜಮಾವಣೆ ಶುರುವಾಗಿ ಟ್ರಾಫಿಕ್ ಬ್ಲಾಕ್ ಆಯಿತು. ಜನರು ಕುತೂಹಲದಿಂದ ಆ ಕಪ್ಪು ಬಟ್ಟೆಯ ಮೇಲಿದ್ದ ರಂಧ್ರದ ಒಳಗೆ ಇಣುಕಿ ನೋಡಲು ಶುರು ಮಾಡಿದರು. ರಂಧ್ರದ ಒಳಗೆ ಇಣುಕಿ ನೋಡಲು ನೂಕು ನುಗ್ಗಲು ಶುರುವಾಯಿತು. ಜನ ಆ ರಂಧ್ರದ ಒಳಗೆ ಇಣುಕಿ ನೋಡಿದಾಗ ಕೆಲ ಟಾವಲ್ ಗಳ ಹೊರತಾಗಿ ಅಲ್ಲಿ ಬೇರೆ ಏನೂ ಇರಲಿಲ್ಲ. ಅಂಗಡಿಗೆ ಗ್ರಾಹಕರನ್ನು ಆಕರ್ಷಿಸಲು ಆ ಅಂಗಡಿಯವ ಮಾಡಿದ ತಂತ್ರ ಯಶಸ್ವಿಯಾಗಿತ್ತು.
ನಮ್ಮ ಮೈಂಡ್ ಥೇಟ್ ಇದೇ ರೀತಿ ಕೆಲಸ ಮಾಡುತ್ತದೆ ಮತ್ತು ನಾವು ಪದೆ ಪದೆ ಮೋಸ ಹೋಗುತ್ತಲೇ ಇರುತ್ತೇವೆ. ಆದ್ದರಿಂದ ನಿಷೇಧ, ನಿರಾಕರಣೆ, ಹತ್ತಿಕ್ಕುವಿಕೆಯ ಬಗ್ಗೆ ಸದಾ ಎಚ್ಚರವಿರಲಿ.
ಒಮ್ಮೆ ನಸ್ರುದ್ದೀನ್ ತನ್ನ ಶಿಷ್ಯರೊಂದಿಗೆ ತೀರ್ಥಯಾತ್ರೆಗೆ ಬಂದಿದ್ದ. ಅವತ್ತು ತಾನು ಬ್ಯುಸಿ ಇದ್ದ ಕಾರಣ ಎಲ್ಲ ಶಿಷ್ಯರನ್ನು ಸೇರಿಸಿ ಸಲಹೆ ಕೊಟ್ಟ,
“ ನೀವು ಈ ಊರಿನಲ್ಲಿ ಪ್ರವಾಸ ಹೋದಾಗ ಜಾಗರೂಕರಾಗಿರಿ. ಈ ಊರಿನಲ್ಲಿ ಚಂದದ ಹುಡುಗಿಯರು ಜಾಸ್ತಿ, ನಿಮ್ಮ ಧ್ಯಾನದ ಸ್ಥಿತಿಗೆ ಭಂಗವಾಗಬಹುದು. ಹುಡುಗಿಯರು ಕಾಣಿಸಿದರೆ “ ಓ ದೇವರೇ ನಮ್ಮನ್ನು ರಕ್ಷಿಸು “ ಎಂದು ಜೋರಾಗಿ ಹೇಳಿಕೊಳ್ಳಿ. “
ಶಿಷ್ಯರು ಊರಿನ ಪ್ರಸಿದ್ಧ ಸ್ಮಾರಕಕ್ಕೆ ಹೋಗುತ್ತಿದ್ದಾಗ, ಒಬ್ಬ ಶಿಷ್ಯ “ ಓ ದೇವರೇ ನಮ್ಮನ್ನು ರಕ್ಷಿಸು “ ಎಂದು ಜೋರಾಗಿ ಹೇಳಿದ.
ಶಿಷ್ಯರೆಲ್ಲ “ ಎಲ್ಲಿ ಎಲ್ಲಿ “ ಎಂದು ಸುತ್ತಮುತ್ತ ನೋಡತೊಡಗಿದರು.
Source: Öshö / A Cup of Tea / letter 141

