ಪ್ರತಿಯೊಬ್ಬ ಅನುಭಾವಿ ಬದುಕಿನಲ್ಲೂ ಇಂಥದೊಂದು ಸ್ಥಿತಿ ಬಂದೇ ಬರುತ್ತದೆ. ಆದರೆ ನಿಮ್ಮ ಹೃದಯ ಮಾಧುರ್ಯದಿಂದ, ದಿವ್ಯ ಮೌನದಿಂದ ತುಂಬಿಕೊಂಡಾಗ ಮಾತ್ರ ಇಂಥ ಸ್ಥಿತಿ ನಿಮಗೆ ಪ್ರಾಪ್ತವಾಗುತ್ತದೆ… | ಸಂಗ್ರಹಾನುವಾದ : ಚಿದಂಬರ ನರೇಂದ್ರ
ಸೂಫಿ ಅನುಭಾವಿ ಬಯಾಜಿದ್ ಕುರಿತಾದ ಕತೆಯೊಂದು ನೆನಪಾಗುತ್ತಿದೆ. ಒಮ್ಮೆ ಸೂಫಿ ಎಷ್ಟೋ ವರ್ಷಗಳ ಕಾಲ ಒಂದೇ ಹಳ್ಳಿಯಲ್ಲಿ ಉಳಿದುಬಿಟ್ಟಿದ್ದ.
ಒಂದು ದಿನ ಹಳ್ಳಿಯ ಜನ ಸೂಫಿಯನ್ನ ಪ್ರಶ್ನೆ ಮಾಡಿದರು, “ನಾವು ನಿನ್ನ ಸುಮಾರು ಐದಾರು ವರ್ಷಗಳಿಂದ ಗಮನಿಸಿದ್ದೇವೆ. ನೀನು ಯಾವಾಗಲೂ ಭಗವಂತನ ಪ್ರಾರ್ಥನೆ ಮಾಡುತ್ತ, ಅವನ ಜೊತೆ ಮಾತನಾಡುವುದನ್ನ ನೋಡಿದ್ದೇವೆ. ಆದರೆ ಈಗ ನೀನು ಪ್ರಾರ್ಥನೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೀಯ, ದೇವರ ಜೊತೆ ಮಾತನಾಡುವುದು ಕೂಡ ನಮ್ಮ ಕಣ್ಣಿಗೆ ಬಿದ್ದಿಲ್ಲ. ಏನಿದು ಬದಲಾವಣೆ? ದೇವರ ಮೇಲಿನ ನಂಬಿಕೆ ಕಳೆದುಕೊಂಡೆಯಾ? ನಾಸ್ತಿಕನಾಗಿರುವೆಯಾ?
ಸೂಫಿ ಒಮ್ಮೆ ಜೋರಾಗಿ ನಕ್ಕು ಹಳ್ಳಿಗರಿಗೆ ಉತ್ತರಿಸಿದ, “ಮೊದಲು ನಾನು ಭಗವಂತನ ಪ್ರಾರ್ಥನೆ ಮಾಡುತ್ತಿದ್ದೆ, ಅವನ ಜೊತೆ ಮಾತನಾಡುತ್ತಿದ್ದೆ ನಿಜ. ಆದರೆ ಈಗ ಸ್ವತಃ ಭಗವಂತನ ನನ್ನ ಜೊತೆ ಮಾತಿಗಿಳಿದಿದ್ದಾನೆ. ಹಾಗಾಗಿ ನಾನು ಮೌನವಾಗಿದ್ದುಕೊಂಡು ಅವನ ಮಾತುಗಳನ್ನ ಆಲಿಸಬೇಕಾಗಿದೆ. ದೇವರೊಡನೆಯ ನನ್ನ ಸಂಬಂಧ ಈಗ ಉಲ್ಟಾ ಆಗಿದೆ. ಅವನು ನನ್ನ ಜೊತೆ ಸದಾ ಮಾತನಾಡುತ್ತಲೇ ಇರುತ್ತಾನೆ. ನನಗೆ ಈಗ ಪ್ರಾರ್ಥನೆಯ ಅವಶ್ಯಕತೆ ಇಲ್ಲ. ಅವನ ಮಾತುಗಳನ್ನ ಸುಮ್ಮನೇ ಕುಳಿತು ಕೇಳುವುದೇ ಈಗ ನನ್ನ ಪ್ರಾರ್ಥನೆಯಾಗಿದೆ.”
ಪ್ರತಿಯೊಬ್ಬ ಅನುಭಾವಿ ಬದುಕಿನಲ್ಲೂ ಇಂಥದೊಂದು ಸ್ಥಿತಿ ಬಂದೇ ಬರುತ್ತದೆ. ಆದರೆ ನಿಮ್ಮ ಹೃದಯ ಮಾಧುರ್ಯದಿಂದ, ದಿವ್ಯ ಮೌನದಿಂದ ತುಂಬಿಕೊಂಡಾಗ ಮಾತ್ರ ಇಂಥ ಸ್ಥಿತಿ ನಿಮಗೆ ಪ್ರಾಪ್ತವಾಗುತ್ತದೆ. ಇಲ್ಲಿ ಯಾವ ಗದ್ದಲದ ದನಿಯೂ ಇಲ್ಲ. ನೀವು ಎಲ್ಲಿ ನೋಡಿದರಲ್ಲಿ ಸಂಗೀತ, ನೀವು ಎಲ್ಲಿ ನೋಡಿದರಲ್ಲಿ ಏಕತ್ವ. ಈಗ ನಿಮಗೆ ಸಮುದ್ರದ ಬಗ್ಗೆ ಅರಿವು ಉಂಟಾಗಿದೆ. ಅಲೆಗಳು ಈಗ ಮಾಯವಾಗಿವೆ, ಈಗ ಅಲೆಗಳು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲ. ಈಗ ನಿಮ್ಮ ಕಣ್ಣಿಗೆ ಕಾಣುತ್ತಿರುವುದು ಕೇವಲ ಸಮುದ್ರ ಮಾತ್ರ. ಇಂಥ ಸ್ಥಿತಿಯಲ್ಲಿ ಮಾತ್ರ ದೈವ ನಿಮ್ಮೊಡನೆ ನೇರವಾಗಿ ಮಾತಿಗಿಳಿಯುತ್ತದೆ.
ಇದು ರೂಪಕ ಅಲ್ಲ. ಈಗ ಅಸ್ತಿತ್ವ ನಿಮ್ಮೊಡನೆ ನೇರ ಸಂಪರ್ಕ ಸಾಧಿಸಿದೆ. ಹೀಗೆ ಹೇಳಿದರೆ ಅದು, ರೂಪಕ ಅಲ್ಲ, ಕಾವ್ಯಾತ್ಮಕ ಅಭಿವ್ಯಕ್ತಿ ಅಲ್ಲ. ಖಂಡಿತವಾಗಿ ಈ ಅನುಭವ ನಿಮ್ಮದಾಗುತ್ತದೆ ಆದರೆ ನೀವು ಸಿದ್ಧರಾಗಿರಬೇಕಷ್ಟೇ. ಸಿದ್ಧರಾಗಿರುವುದು ಎಂದರೆ ನಿಮ್ಮ ಹೃದಯವನ್ನು ಮಧುರ ಸಂಗೀತದಿಂದ, ದಿವ್ಯ ಮೌನದಿಂದ ತುಂಬಿಕೊಂಡಿರುವುದು.
source: Sufi & Zen Parables page

