“ಸುಲ್ತಾನನ ಮಾತುಗಳಿಗೆ ಶೇಖ ಹೀಗೆ ಉತ್ತರಿಸಿದರು, “ಹೌದು, “ನನಗೆ ಕೊಡಬಹುದಾದ ಸಂಗತಿಯೊಂದು ನಿನ್ನ ಬಳಿ ಇದೆ. ನನಗೆ ಮಾತು ಕೊಡು, ಇನ್ನುಮೇಲೆ ಇಲ್ಲಿಗೆ ನೀನು ಯಾವತ್ತೂ ಬರುವುದಿಲ್ಲವೆಂದು ನನಗೆ ಮಾತು ಕೊಡು” ಅಂದುಬಿಟ್ಟ ಶೇಖ್! ಯಾಕೆ ಗೊತ್ತಾ?… । ಚಿದಂಬರ ನರೇಂದ್ರ
ಬಹಳ ವರ್ಷಗಳ ಹಿಂದೆ ಒಟ್ಟೋಮನ್ ಸಾಮ್ರಾಜ್ಯದ ಚಕ್ರವರ್ತಿ, ಇಸ್ತಾನ್ ಬುಲ್ ನ ಪ್ರಸಿದ್ಧ ಶೇಖ್ ನ ಭೇಟಿಯಾದ. ಚಕ್ರವರ್ತಿಗೆ ಶೇಖ್ ನ ಜ್ಞಾನ, ವಿವೇಕ ಮತ್ತು ಪ್ರಾಮಾಣಿಕತೆಯ ಬಗ್ಗೆ ಅಪಾರ ಗೌರವ. ದೊರೆ ಮತ್ತೆ ಮತ್ತೆ ಶೇಖ್ ನ ಉಪನ್ಯಾಸಗಳನ್ನು ಕೇಳಲು ಬರತೊಡಗಿದ.
ಬಹಳ ದಿನಗಳ ನಂತರ ಒಂದು ದಿನ ಸುಲ್ತಾನ, ಶೇಖ್ ನನ್ನು ಕೇಳಿಕೊಂಡ, “ನನಗೆ ನೀವು ಕಲಿಸುವ ವಿಚಾರಗಳು, ನಿಮ್ಮ ಮಾತುಕತೆ ತುಂಬಾ ಇಷ್ಟ. ನಿಮಗೆ ಏನಾದರೂ ಬೇಕಿದ್ದರೆ ಮತ್ತು ಅದು ನನ್ನಿಂದ ಕೊಡುವುದು ಸಾಧ್ಯವಾಗುವುದಾದರೆ ದಯವಿಟ್ಟು ಯಾವ ಸಂಕೋಚ ಇಲ್ಲದೆ ಕೇಳಿ” ಸುಲ್ತಾನ್ ಮಾತುಗಳೆಂದರೆ ಜಗತ್ತಿನ ಅತ್ಯಂತ ಶಕ್ತಿಯುತ, ಶ್ರೀಮಂತ ಮನುಷ್ಯನೊಬ್ಬ ಸಹಿ ಮಾಡಿಕೊಟ್ಟ ಬ್ಲ್ಯಾಂಕ್ ಚೆಕ್ ನಂತೆ.
ಸುಲ್ತಾನನ ಮಾತುಗಳಿಗೆ ಶೇಖ ಹೀಗೆ ಉತ್ತರಿಸಿದರು, “ಹೌದು, ನನಗೆ ಕೊಡಬಹುದಾದ ಸಂಗತಿಯೊಂದು ನಿನ್ನ ಬಳಿ ಇದೆ. ನನಗೆ ಮಾತು ಕೊಡು, ಇನ್ನುಮೇಲೆ ಇಲ್ಲಿಗೆ ನೀನು ಯಾವತ್ತೂ ಬರುವುದಿಲ್ಲವೆಂದು ನನಗೆ ಮಾತು ಕೊಡು”.
ಶೇಖ್ ನ ಮಾತುಗಳಿಂದ ಆಶ್ಚರ್ಯಚಕಿತನಾದ ಸುಲ್ತಾನ ಮತ್ತೆ ಬೇಡಿಕೊಂಡ, “ನನ್ನಿಂದ ಯಾವುದಾದರೂ ಅಪರಾಧವಾಗಿದೆಯಾ, ನಿಮ್ಮನ್ನು ನೋಯುಸುವಂಥದ್ದೇನಾದರೂ ನನ್ನಿಂದ ಆಗಿದೆಯಾ, ಹಾಗೇನಾದರೂ ಆಗಿದ್ದರೆ ದಯವಿಟ್ಟು ಕ್ಷಮಿಸಿ”.
“ಶೇಖ್ ಸಾಹೇಬರು ಉತ್ತರಿಸಿದರು, “ ಇಲ್ಲ, ಸಮಸ್ಯೆ ನಿನ್ನದಲ್ಲ. ಸಮಸ್ಯೆ ನನ್ನ ದರ್ವೇಶಿಗಳದ್ದು. ನೀನು ಇಲ್ಲಿಗೆ ಬರಲು ಶುರುಮಾಡುವುದಕ್ಕಿಂತ ಮುಂಚೆ, ಅವರು ದೇವರ ಪ್ರಾರ್ಥನೆ ಮಾಡುತ್ತಿದ್ದರು, ಅವನ ಅನುಗ್ರಹ, ಅವನ ಆಶೀರ್ವಾದಗಳನ್ನು ಬೇಡುತ್ತಿದ್ದರು. ಆದರೆ ಈಗ ಅವರ ಮನಸ್ಸು ನಿನ್ನನ್ನು ಮೆಚ್ಚಿಸುವ ಮತ್ತು ನಿನ್ನಿಂದ ಬಹುಮಾನಗಳನ್ನು ನಿರೀಕ್ಷಿಸುವುದರಲ್ಲಿ ನಿರತವಾಗಿದೆ. ನಾನು ಯಾಕೆ ನಿನ್ನನ್ನು ಇಲ್ಲಿಗೆ ಬರಬೇಡ ಎಂದು ಕೇಳಿಕೊಳ್ಳುತ್ತಿದ್ದೇನೆಂದರೆ, ಇಲ್ಲಿ ನಿನ್ನ ಹಾಜರಾತಿಯನ್ನು ನಿರ್ವಹಿಸುವ ಅಧ್ಯಾತ್ಮಿಕ ಪ್ರಬುದ್ಧತೆ ಯಾರಲ್ಲೂ ಇಲ್ಲ”.
Source: Sufi & Zen page

