ಸಾಮಾನ್ಯ ಓದುವಿಕೆ ಒಂದು ಬಾರಿಯಾದರೆ ಮುಗಿಯಿತು. ಎರಡನೇ ಬಾರಿ ಓದುವುದೆಂದರೆ ಅದು ವ್ಯರ್ಥ ಕೆಲಸ. ಮೂರನೇಯ ಬಾರಿ ಓದುವುದಂತೂ ಶುದ್ಧ ಮೂರ್ಖತನ. ಆದರೆ ಪುಸ್ತಕವನ್ನು ಪಾಠ ಮಾಡುವುದು ಎಂದರೆ ಅದನ್ನ ಪ್ರತಿದಿನ ಪಠಣ ಮಾಡುವುದು ~ ಓಶೋ ರಜನೀಶ್ : ಕನ್ನಡಕ್ಕೆ: ಚಿದಂಬರ ನರೇಂದ್ರ
ಭಾರತದಲ್ಲಿ ಯಾವುದಾದರೊಂದು ಸಾಮಾನ್ಯ ಪುಸ್ತಕ ಓದುವುದನ್ನ “ಓದುವುದು” ಎಂದು ಗುರುತಿಸುತ್ತೇವೆಯಾದರೆ, ಯಾರಾದರೂ ಭಗವದ್ ಗೀತಾದಂಥ ಪುಸ್ತಕ ಓದುತ್ತಿದ್ದರೆ ಅದನ್ನು ನಾವು ಕೇವಲ ಓದುವುದು ಎನ್ನುವುದಿಲ್ಲ, ಅದನ್ನ “ಪಾಠ” ಮಾಡುವುದು ಅಥವಾ “ಪಠಣ” ಮಾಡುವುದು ಎನ್ನುತ್ತೇವೆ. ಇದರ ಅರ್ಥ “ಕಲಿಯುವುದು”. ಓದುವುದು ಕೇವಲ ಯಾಂತ್ರಿಕ ಕ್ರಿಯೆ ಆದರೆ ಪಾಠ ಮಾಡುವುದು ಎಂದರೆ ಪುಸ್ತಕದ ಆಳಕ್ಕಿಳಿದು ಅದರ ತಿರುಳನ್ನು ನಮ್ಮದಾಗಿಸಿಕೊಳ್ಳುವುದು.
ಸಾಮಾನ್ಯ ಓದುವಿಕೆ ಒಂದು ಬಾರಿಯಾದರೆ ಮುಗಿಯಿತು. ಎರಡನೇ ಬಾರಿ ಓದುವುದೆಂದರೆ ಅದು ವ್ಯರ್ಥ ಕೆಲಸ. ಮೂರನೇಯ ಬಾರಿ ಓದುವುದಂತೂ ಶುದ್ಧ ಮೂರ್ಖತನ. ಆದರೆ ಪುಸ್ತಕವನ್ನು ಪಾಠ ಮಾಡುವುದು ಎಂದರೆ ಅದನ್ನ ಪ್ರತಿದಿನ ಪಠಣ ಮಾಡುವುದು. ತಮ್ಮ ಜೀವನದುದ್ದಕ್ಕೂ ಐವತ್ತು ಅರವತ್ತು ವರ್ಷ ಪ್ರತಿದಿನ ಗೀತೆಯ ಪಾಠ ಮಾಡುವ ಜನರಿದ್ದಾರೆ. ಯಾಕೆ ಹೀಗೆ ಪ್ರತಿದಿನ ಕೆಲ ಪುಸ್ತಕಗಳನ್ನ ಪಾಠ ಮಾಡುತ್ತಾರೆ. ಕೇವಲ ಅದರೊಳಗಿನ ವಿಷಯ ತಿಳಿದುಕೊಳ್ಳಲಿಕ್ಕಲ್ಲ. ಅದು ಹಲವಾರು ಬಾರಿಯ ಓದಿನಲ್ಲಿಯೇ ಅವರಿಗೆ ಗೊತ್ತಾಗಿಬಿಟ್ಟಿರುತ್ತದೆ. ಮತ್ತೆ ಮತ್ತೆ ಯಾಕೆ ಓದುತ್ತಾರೆ ಹಾಗಾದರೆ? ಅವರು ಕೃಷ್ಣ ಅಥವಾ ಜೀಸಸ್ ತಮ್ಮ ಎದುರಿಗೆ ಇರುವಂತೆ ತಮ್ಮ ಪ್ರಜ್ಞೆಯನ್ನ ಅವರ ಪ್ರಜ್ಞೆಯೊಂದಿಗೆ ಟ್ಯೂನ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾರೆ. ಅವರು ಕೇವಲ ಓದುತ್ತಿಲ್ಲ ಅವರು ಪಾಠ ಮಾಡುತ್ತ ಮಾಡುತ್ತ ತಮ್ಮನ್ನು ಬೇರೆಯೇ ಆದ ದೇಶ ಕಾಲಗಳಿಗೆ ವರ್ಗಾಯಿಸಿಕೊಂಡುಬಿಟ್ಟಿದ್ದಾರೆ.
ಇಂಥ ಗ್ರಂಥಗಳನ್ನ ಓದುವುದು, ಹಾಡುವುದು, ನೃತ್ಯ ಮಾಡುವುದು ಎಂದರೆ, ಅದನ್ನು ಸಾಧ್ಯವಾದಷ್ಟು ತಮ್ಮ ಆಳಕ್ಕೆ ಇಳಿಸಿಕೊಳ್ಳುವುದು. ಆಗ ಶಬ್ದಗಳು ಮರೆಯಾಗಿಬಿಟ್ಟು ಕೇವಲ ಶಬ್ದಗಳ ಸಂಗೀತ ಮಾತ್ರ ಉಳಿದುಕೊಂಡಿರುತ್ತದೆ. ಮುಂದೆ ಸಂಗೀತವೂ ಮರೆಯಾಗಿ ಕೇವಲ ಶಬ್ದಗಳ ರಿದಂ ಮಾತ್ರ ನಮ್ಮೊಂದಿಗೆ ಉಳಿದುಕೊಂಡಿರುತ್ತದೆ. ಕೊನೆಗೊಮ್ಮೆ ರಿದಂ ಕೂಡ ಮರೆಯಾದಾಗ ಎಲ್ಲ ಅನವಶ್ಯಕ ಸಂಗತಿಗಳೂ ಮರೆಯಾಗಿ ಕೇವಲ ಅವಶ್ಯಕವಾದದ್ದು ಯಾವುದನ್ನು ಅಭಿವ್ಯಕ್ತಿಸುವುದು ಅಸಾಧ್ಯವೋ, ಯಾವುದನ್ನ ಕೇವಲ ಅನುಭವಿಸಬಹುದೋ ಅದು ಮಾತ್ರ ಉಳಿದುಕೊಳ್ಳುತ್ತದೆ.
ನೀವು ಕುರಾನ್ ನ ಕೇವಲ ಓದಬೇಡಿ ಅದನ್ನು ಹಾಡಿ. ಕೇವಲ ಓದಿದರೆ ನೀವು ಸಂಗೀತವನ್ನು ಮಿಸ್ ಮಾಡಿಕೊಳ್ಳುತ್ತೀರಿ. ಎಲ್ಲ ನಿಮಗೆ ಅರ್ಥವಾಗಂತೆ ಅನಿಸುತ್ತದೆ ಆದರೆ ನಿಮಗೆ ಏನೂ ಅರ್ಥವಾಗಿರುವುದಿಲ್ಲ. ಏಕೆಂದರೆ ಅದರ ತಿರುಳು ಅಡಗಿಕೊಂಡಿರುವುದೇ ಸಂಗೀತದಲ್ಲಿ. ಬೈಬಲ್, ಕುರಾನ್, ಗೀತಾದ ಸಂಗೀತ ನಿಮ್ಮನ್ನು ಆವರಿಸಿಕೊಂಡಾಗ ಅದು ನಿಮ್ಮನ್ನು ಕುಣಿಯಲು ಪ್ರಚೋದಿಸುತ್ತದೆ. ನಿಮ್ಮ ಎನರ್ಜೀ ಉಕ್ಕಿ ಹರಿಯಲು ಶುರು ಮಾಡುತ್ತದೆ. ನಿಮ್ಮ ಕಣ್ಣುಗಳಿಂದ ಅಶ್ರುಧಾರೆ, ನಿಮ್ಮ ಮೈಯಿಂದ ಆನಂದ ತುಂಬಿಕೊಂಡು ಹರಿಯಲು ಶುರುವಾಗುತ್ತದೆ. ಆಗ ನಿಮ್ಮ ಅಸ್ತಿತ್ವವನ್ನು ಯಾವುದೋ ಹೊಸ ಗಾಳಿ ಪ್ರವೇಶಿಸಿದ ಅನುಭವ ನಿಮ್ಮದಾಗುತ್ತದೆ. ಆಗ ಯಾವ ಧೂಳಿಗೂ ನಿಮ್ಮೊಳಗೆ ಪ್ರವೇಶವಿಲ್ಲ.
ಓದುವುದೆಂದರೆ ಒಂದು ಕಲೆಯ ಬಗ್ಗೆ ತಿಳಿದುಕೊಳ್ಳುವುದು. ಅನುಕಂಪ, ಕಾರುಣ್ಯಗಳನ್ನು ಆಳಕ್ಕಿಸಿಕೊಳ್ಳುವುದು. ಇದು ಒಂದು ಬಗೆಯ ಭಾಗವಹಿಸುವಿಕೆ. ಆದರೆ ನೀವು ಗೀತೆಯನ್ನು ಕಾದಂಬರಿ ಓದಿದಂತೆ ಓದಿದರೆ ನೀವು ಮಿಸ್ ಮಾಡಿಕೊಳ್ಳುತ್ತೀರಿ. ಅಲ್ಲಿ ಆಳದ ತನಕ ಹಲವಾರು ಪದರುಗಳಿವೆ. ಹಾಗಾಗಿ ಪ್ರತಿದಿನ ಇಂಥ ಪುಸ್ತಕಗಳನ್ನು ಪಾಠ ಮಾಡಿ. ಇದು ರಿಪಿಟೇಶನ್ ಅಲ್ಲ. ಪ್ರತಿ ಓದು ಕೂಡ ಹೊಸದಾಗಿರುತ್ತದೆ. ಹೊಸ ಹೊಸ ಲೇಯರ್ ಗಳು ನಿಮ್ಮ ಅರಿವಿಗೆ ಬರಲು ಶುರುವಾಗಿರುತ್ತದೆ.
ಕೇವಲ ಮೂರು ತಿಂಗಳು ಈ ಪ್ರಯತ್ನ ಮಾಡಿ. ಯಾವುದಾದರೊಂದು ಸಣ್ಣ ಪುಸ್ತಕವನ್ನು ಆಯ್ಕೆ ಮಾಡಿಕೊಂಡು ಪ್ರತಿದಿನ ಪಾಠ ಮಾಡಿ. ನಿಮ್ಮ ನಿನ್ನೆಯ ಓದಿನ ಅನುಭವವನ್ನ ಇಂದಿನ ಓದಿಗೆ ಸೇರಿಸಲು ಹೋಗಬೇಡಿ. ಪ್ರತಿ ಮುಂಜಾನೆ ಹೊಸ ಪುಸ್ತಕ ಓದುವಂತೆ ಓದಿ. ಆಗ ನೋಡಿ ಹೇಗೆ ಹೊಸ ಹೊಸ ಅರ್ಥಗಳು ನಿಮ್ಮನ್ನು ಕೂಡಿಕೊಳ್ಳಲು ಶುರು ಮಾಡುತ್ತವೆ.

