ನಿಮ್ಮ ಕಣ್ಣಿಗೆ ಕಾಣುವ ತೊಂದರೆ ಅದು ಯಾರದೇ ಆಗಿರಬಹುದು, ಯಾವ ಕಾರಣಕ್ಕೇ ಇರಬಹುದು, ಎಷ್ಟೇ ದೊಡ್ಡದಿರಬಹುದು, ಸಣ್ಣದಿರಬಹುದು, ಇನ್ನೊಬ್ಬರ ಕಣ್ಣೀರು ಒರೆಸುವ ಯಾವ ಅವಕಾಶವನ್ನು ಯಾವತ್ತೂ ತಪ್ಪಿಸಿಕೊಳ್ಳಬೇಡಿ. | ಚಿದಂಬರ ನರೇಂದ್ರ
ಒಂದು ದಿನ ಒಬ್ಬ ದೋಣಿಯ ಮಾಲಿಕ, ದೋಣಿಯನ್ನು ಪೇಂಟ್ ಮಾಡುವ ಕೆಲಸವನ್ನು ಒಬ್ಬ ಪೇಂಟರ್ ಗೆ ವಹಿಸಿಕೊಟ್ಟ. ಪೇಂಟರ್ ಪೇಟೆಗೆ ಹೋಗಿ ಪೇಂಟ್ ಖರೀದಿ ಮಾಡಿಕೊಂಡು ಬಂದು ದೋಣಿಯ ಮಾಲಿಕ ಹೇಳಿದಂತೆ ದೋಣಿಯನ್ನು ಕೆಂಪು ಬಣ್ಣದಿಂದ ಪೇಂಟ್ ಮಾಡಿದ.
ಮರುದಿನ ಮಾಲಿಕ ಬಂದು ಪೇಂಟರ್ ಗೆ ಹಣ ಕೊಟ್ಟು ದೋಣಿಯನ್ನು ತೆಗೆದುಕೊಂಡು ಹೋದ.
ಎರಡು ದಿನಗಳ ನಂತರ ದೋಣಿಯ ಮಾಲಿಕ ಮತ್ತೆ ಪೇಂಟರ್ ನ ಮನೆಗೆ ಬಂದು ಅವನ ಮುಂದೆ ಹಣದ ಗಂಟೊಂದನ್ನು ಇಟ್ಟ. ಇಷ್ಟೊಂದು ಹಣ ನೋಡಿ ಪೇಂಟರ್ ಗೆ ಆಶ್ಚರ್ಯವಾಯಿತು. “ದೋಣಿ ಪೇಂಟ್ ಮಾಡಿದ ಹಣ ಮೊನ್ನೆ ಕೊಟ್ಟಿರಿ, ಈ ಹಣ ಮತ್ತೆ ಯಾಕೆ?” ಪೇಂಟರ್ ಪ್ರಶ್ನೆ ಮಾಡಿದ.
“ಈ ಹಣ ಪೇಂಟ್ ಮಾಡಿದ್ದಕ್ಕಲ್ಲ, ನನ್ನ ಮಕ್ಕಳ ಪ್ರಾಣ ಉಳಿಸಿದ್ದಕ್ಕೆ” ದೋಣಿಯ ಮಾಲಿಕ ಅತ್ಯಂತ ಕೃತಜ್ಞತೆಯಿಂದ ಹೇಳಿದ. “ನಾನು ಯಾವಾಗ ನಿಮ್ಮ ಮಕ್ಕಳ ಪ್ರಾಣ ಉಳಿಸಿದೆ?” ಪೇಂಟರ್ ಗೆ ಮಾಲಿಕ ಏನು ಹೇಳುತ್ತಿದ್ದಾನೆ ಎನ್ನುವುದು ಅರ್ಥವಾಗಲಿಲ್ಲ.
ಮಾಲಿಕ ನಡೆದ ಘಟನೆಯನ್ನು ಪೇಂಟರ್ ಗೆ ವಿವರಿಸಿ ಹೇಳಿದ, “ ನಿನ್ನೆ ನಾನು ನನ್ನ ಅಂಗಡಿಗೆ ಹೋಗಿದ್ದಾಗ ಮನೆಯಲ್ಲಿದ್ದ ನನ್ನ ಮಕ್ಕಳು ದೋಣಿ ತೆಗಿದುಕೊಂಡು ಮೀನು ಹಿಡಿಯಲು ಸಮುದ್ರಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿ ನನಗೆ ಪ್ರಾಣವೇ ಹೋದಂತಾಯಿತು. ಏಕೆಂದರೆ ಆ ದೋಣಿಯ ಕೆಳಗೆ ಒಂದು ರಂಧ್ರ ಇತ್ತು. ಮಕ್ಕಳಿಗೆ ಈ ವಿಷಯ ಗೊತ್ತಿರಲಿಲ್ಲ. ಮಕ್ಕಳು ಇನ್ನೂ ಮನೆಗೆ ಬಂದಿರಲಿಲ್ಲ. ಬಹುಶಃ ಮಕ್ಕಳು ಸಮುದ್ರದಲ್ಲಿ ಮುಳುಗಿ ಹೋದರು ಎಂದು ನನಗೆ ಗಾಬರಿಯಾಗಿ ಸಮುದ್ರದ ಕಡೆಗೆ ಹೊರಡಲು ಸಿದ್ಧನಾದೆ. ಅಷ್ಟರಲ್ಲಿ ಮಕ್ಕಳು ಮನೆಗೆ ವಾಪಸ್ ಬಂದರು. ನಾನು ದೋಣಿಯನ್ನು ಚೆಕ್ ಮಾಡಿದಾಗ ಮೊದಲು ಇದ್ದ ರಂಧ್ರವನ್ನು ರಿಪೇರ್ ಮಾಡಲಾಗಿತ್ತು. ಮೊನ್ನೆ ನಾನು ದೋಣಿ ಪೇಂಟ್ ಮಾಡಲು ಹೇಳಿದಾಗ ಈ ರಂಧ್ರವನ್ನು ರಿಪೇರ್ ಮಾಡಲು ಹೇಳುವುದನ್ನು ಮರೆತುಬಿಟ್ಟಿದ್ದೆ. ಆದರೆ ನೀನು ಆ ರಂಧ್ರವನ್ನು ಗಮನಿಸಿ ನಾನು ಹೇಳದೇ ಹೋದರೂ ರಿಪೇರ್ ಮಾಡಿರುವೆ. ಇದರಿಂದ ನನ್ನ ಮಕ್ಕಳ ಪ್ರಾಣ ಉಳಿಯಿತು”.
“ಓಹ್ ಹೌದು ಪೇಂಟ್ ಮಾಡುವುದಕ್ಕಿಂತ ಮುಂಚೆ ನಾನು ಆ ರಂದ್ರವನ್ನು ಗಮನಿಸಿ ರಿಪೇರ್ ಮಾಡಿದ್ದೆ. ಆದರೆ ಅದು ಬಹಳ ಸಣ್ಣ ಕೆಲಸ. ಅದಕ್ಕೆ ಇಷ್ಟು ಹಣ ಯಾಕೆ ? ಪೇಂಟರ್ ಗೆ ಸಂಕೋಚವಾಯಿತು”.
“ಹೌದು ಆಗ ನಿನಗೆ ಅದು ನಿನಗೆ ಸಣ್ಣ ಕೆಲಸವೇ, ಆದರೆ ಆ ಸಣ್ಣ ಕೆಲಸ ನನ್ನ ಮಕ್ಕಳ ಪ್ರಾಣ ಉಳಿಸಿತು. ಹಣ ಬೇಡ ಎನ್ನಬೇಡ.” ದೋಣಿಯ ಮಾಲಿಕ ಬಲವಂತ ಮಾಡಿ ಹಣವನ್ನು ಪೇಂಟರ್ ಗೆ ಕೊಟ್ಟು ತನ್ನ ಕೃತಜ್ಞತೆ ತಿಳಿಸಿದ.
ಹಾಗಾಗಿ ಯಾರು, ಏನು, ಏಕೆ ಎಂದೆಲ್ಲ ವಿಚಾರ ಮಾಡುತ್ತ ಕುಳಿತುಕೊಳ್ಳದೆ ಸಹಾಯಕ್ಕೆ ಮುಂದಾಗಿ. ನಿಮ್ಮ ಕಣ್ಣಿಗೆ ಕಾಣುವ ತೊಂದರೆ ಅದು ಯಾರದೇ ಆಗಿರಬಹುದು, ಯಾವ ಕಾರಣಕ್ಕೇ ಇರಬಹುದು, ಎಷ್ಟೇ ದೊಡ್ಡದಿರಬಹುದು, ಸಣ್ಣದಿರಬಹುದು, ಇನ್ನೊಬ್ಬರ ಕಣ್ಣೀರು ಒರೆಸುವ ಯಾವ ಅವಕಾಶವನ್ನು ಯಾವತ್ತೂ ತಪ್ಪಿಸಿಕೊಳ್ಳಬೇಡಿ, ಯಾವ ಕೃತಜ್ಞತೆ, ಯಾವ ಪ್ರತಿ ಸಹಾಯವನ್ನೂ ನಿರೀಕ್ಷಿಸಬೇಡಿ. ಆ ತೊಂದರೆಯನ್ನು ದೇವರು ನಮಗೆ ಕಾಣುವಂತೆ ಮಾಡಿದ್ದಾನೆಂದರೆ ಆ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾನೆ ಎಂದೇ ಅರ್ಥ. ದೇವರ ಯಾವ ಸೂಚನೆಗಳನ್ನೂ ನಿರಾಕರಿಸುವುದು ಅವಜ್ಞೆ ಮಾಡುವುದು ಬೇಡ. ಅವನು ನಮಗೆ ವಹಿಸಿರುವ ರಾಯಭಾರವನ್ನು ನಮ್ಮ ಎಲ್ಲ ಸಾಮರ್ಥ್ಯವನ್ನು ಮೀರಿ ಪೂರ್ಣ ಮಾಡೋಣ.
Source: from Kindspring. org

