ಬಂಡೆಯಾಗುವುದೇ ಅರಿವಿನ ದಾರಿಯಾಗಿರಲೂ ಸಾಕು! : ಅಧ್ಯಾತ್ಮ ಡೈರಿ

ಬಂಡೆಗಲ್ಲಿಗೆ ತಿಳಿವು ಮೂಡಿಲ್ಲವೆಂದು ಹೇಳಿದವರು ಯಾರು! ಮನುಷ್ಯ ಜನ್ಮವೇ ದೊಡ್ಡದೆನ್ನುವುದು ಯಾವ ಆಧಾರದ ಮೇಲೆ? – ಜಡ ಚೇತನಗಳ ಮೇಲು ಕೀಳು ಮೌಲ್ಯ ಮಾಪನ ಮಾಡಿದ್ದು ಯಾರು!? ~ ಚೇತನಾ ತೀರ್ಥಹಳ್ಳಿ

“ಸುಮ್ಮನೆ ಕುಳಿತರೆ ಸತ್ಯ ಸೃಷ್ಟಿಯಾಗೋದಿಲ್ಲ, ಧ್ಯಾನ ಕಾಣ್ಕೆ ಉಂಟುಮಾಡೋದಿಲ್ಲ. ಹೂವಿನ ಘಮಲು ಇದ್ದ ಮಾತ್ರಕ್ಕೆ ಅದು ಸುಗಂಧವಾಗೋದಿಲ್ಲ. ಹೂವಿನ ಘಮಲು ಮೊದಲೂ ಇತ್ತು, ಸಾಗುತ್ತ ಬಂದವರು ನಾವು ನಿಲ್ಲಬೇಕಷ್ಟೆ. ಅದನ್ನು ಮುತ್ತಿಕ್ಕಿ ಬಂದ ಗಾಳಿಯುಣ್ಣಬೇಕಷ್ಟೆ. ಆಗಷ್ಟೆ; ನಮ್ಮ ಮೂಗು ಸಹಕರಿಸಿದರೆ ಮಾತ್ರ, ಹೂವಿನ ಘಮಲು ನಮ್ಮ ಪಾಲಿಗೆ!
ಸುಮ್ಮನೆ ಕೂರುವುದು, ಅದೊಂದು ಅವಕಾಶ ಮಾತ್ರ. ಕಲಕದೆ ಬಿಟ್ಟ ಬಿಂದಿಗೆಯಲ್ಲಿ ಚಂದ್ರಬಿಂಬ ನಿಚ್ಚಳ ಕಾಣುವಂತೆ; ಚಂದ್ರ ದಕ್ಕುವುದಿಲ್ಲ!” ಅನ್ನುತ್ತಾರೆ ಬಲ್ಲವರು. ಮತ್ತೂ ಹೇಳುತ್ತಾರೆ, “ಆಲೋಚನೆಗಳೇ ಮೂಡದಂತೆ ಸಾಧನೆ ಮಾಡುವುದೇ ಗುರಿಯಾಗಿದ್ದರೆ ಈ ಹೊತ್ತು ಬಂಡೆಗಲ್ಲುಗಳಿಗೂ ಜ್ಞಾನೋದಯವಾಗಿರುತ್ತಿತ್ತು!” ಎಂದು.

ನನ್ನದೊಂದು ಪ್ರಶ್ನೆ;

“ಬಂಡೆಗಲ್ಲಿಗೆ ತಿಳಿವು ಮೂಡಿಲ್ಲವೆಂದು ಹೇಳಿದವರು ಯಾರು! ಮನುಷ್ಯ ಜನ್ಮವೇ ದೊಡ್ಡದೆನ್ನುವುದು ಯಾವ ಆಧಾರದ ಮೇಲೆ? – ಜಡ ಚೇತನಗಳ ಮೇಲು ಕೀಳು ಮೌಲ್ಯ ಮಾಪನ ಮಾಡಿದ್ದು ಯಾರು!?
ಕ್ಷಣಚಿತ್ತ ಕ್ಷಣಪಿತ್ಥದ ಮನುಕುಲವ ಕಂಡು ಬಂಡೆಗಲ್ಲೂ ನಗುತ್ತಿರಬಹುದು! ಕಾಲಗಟ್ಟಲೆ ಬೇರೂರಿ ನಿಂತ ಮರ ಮಳೆ – ಚಳಿಗೆ ನಡುಗಿ,  ಬಿಸಿಲಲ್ಲಿ ಬಳಲುವ ಮನುಕುಲವ ಕಂಡು ನಗುತ್ತಿರಬಹುದು! ನಾವು ಯಕಶ್ಚಿತವೆನ್ನುವ ಹಲ್ಲಿ, ಬೆಕ್ಕಿನ ಕೈಗೆ ಸಿಕ್ಕೂ ಬಾಲ ಕಳಚಿ ನಯಾಪೈಸೆ ನೋವಿಲ್ಲದೆ ಓಡಿ ಹೋಗುವಾಗ – ಏನನ್ನೂ ಸುಲಭಕ್ಕೆ ಕಳಚಿಕೊಳ್ಳಲಾಗದೆ ತೊಳಲುವ ಮನುಕುಲವ ಕಂಡು ನಗುತ್ತಿರಬಹುದು! ಧ್ಯಾನದ ಉದ್ದೇಶವೇ ಯೋಚನೆಗಳ ತಂತು ಕಡಿಯುವುದು. ಯೋಚನೆಯೇ ಮೂಡದ ಬಂಡೆಗಲ್ಲಿನ ಅಸ್ತಿತ್ವ ಕಡಿಮೆ ಎಂದೇಕೆ ತಿಳಿಯಬೇಕು?”

ಸುಮ್ಮನೆ ಕೂರುವುದೇ ಧ್ಯಾನವಾಗಿದ್ದರೆ, ಅದೇ ಆಗಿರಲಿ, ನಷ್ಟವೇನಿಲ್ಲ.
ಹೂವಿನ ಘಮಲು ಅದರ ಪಾಡಿಗೇ ಇರಲಿ,
ಅದನ್ನು ಮೂಸುವವರು ಇರಲಿ, ಇಲ್ಲದಿರಲಿ;
ಘಮಲು ಹೊತ್ತು ಗಾಳಿ ಸುಳಿದಾಡಲಿ, ಆಡದಿರಲಿ;
ಚಂದ್ರನ್ನ ದಕ್ಕಿಸಿಕೊಳ್ಳುವ ಮಾತೇಕೆ? ಬಿಂಬವೇ ಸಾಕಿರಲಿ ನಮ್ಮ ಪಾಲಿಗೆ!
ನಿಜದ ಚಂದ್ರನ್ನ ಯಾರಾದರೂ ಹಿಡಿದಾರೇ?
ಬಿಂಬವಾದರೋ –
ಕೆನ್ನೆ ಜಾರುವ ಕಣ್ಣ ಹನಿಯಲ್ಲೂ ತುಂಬುವುದು, ವಿಶಾಲ ಸಾಗರದಲ್ಲೂ!
ಕೈಗೆಟುಕದ ಗಗನ ಕುಸುಮವೇ ಆಗಿರಲಿ ಹೂ,
ದಕ್ಕಿದರೆ, ದಕ್ಕಿಸಿಕೊಂಡರಷ್ಟೇ ಮುಖ್ಯವೇ ಯಾವುದಾದರೂ?

ಒಂದಕ್ಕೊಂದು ಜೊತೆಯಾಗಿ ಪ್ರಶ್ನೆಗಳ ಸರಣಿ.

~
ಅವನೊಬ್ಬನಿದ್ದನಂತೆ ಝೆನ್ ಗುರು, ಜ್ಞಾನೋದಯ ಪಡೆದವನು. ಹಗಲಾಗೆದ್ದು ನೀರು ಸೇದಿ, ಅಂಗಳ ಗುಡಿಸಿ, ತರಕಾರಿ ಬೆಳೆದು, ಬೆಳೆದಿದ್ದು ತಿಂದು ಮಲಗುತ್ತಿದ್ದನಂತೆ; ಮತ್ತೆ ಮರುದಿನ ಹಗಲಾಗೆದ್ದು ಅದದೇ ಕೆಲಸ ಪುನರಾವರ್ತಿಸಲು.
ಹಾಗೇ ಹಕ್ಕಿ, ಹಾವು, ಹುಲಿ, ಹುಳು ಹುಪ್ಪಟೆಗಳೂ – ಏಳುತ್ತವೆ, ತಿನ್ನುತ್ತವೆ, ಕೂಡುತ್ತವೆ, ಮಲಗುತ್ತವೆ; ಮತ್ತೆ ಏಳಲಿಕ್ಕೆ, ತಿನ್ನಲಿಕ್ಕೆ, ಕೂಡಲಿಕ್ಕೆ, ಮಲಗಲಿಕ್ಕೆ!
ಝೆನ್ ಗುರುವಿನಂತೆ ಇವೆಲ್ಲವೂ ಜ್ಞಾನೋದಯ ಪಡೆದಿಲ್ಲವೆಂದು ಖಾತ್ರಿಯೇನು?

ನಮ್ಮ ಪಾಡಿಗೆ ನಾವು ಸೃಷ್ಟಿಯ ತೂಕ ಕಾಯುವುದೇ
‘ಅರಿವಿನ ಬದುಕು’.
ವಿಪರೀತ ಬುದ್ಧಿಯ ಮನುಷ್ಯರು,
ಬುದ್ಧಿಯ ಬಾಲ ಕತ್ತರಿಸಿ ಬಂಡೆಯಾಗುವುದೊಂದೇ
ಅರಿವಿನ ದಾರಿಯಾಗಿರಲೂ ಸಾಕು!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.