ಸೆಲ್ಫ್ ಕಂಟ್ರೋಲ್ ನಿಮ್ಮೊಳಗೆ ಸೂಕ್ಷ್ಮವಾದ ಅಹಂ ಅನ್ನು ಹುಟ್ಟುಹಾಕುತ್ತದೆ. ಅದರೊಳಗೆ ಕಂಟ್ರೋಲ್ ಗಿಂತ ಹೆಚ್ಚು ಸೆಲ್ಫ್ ಇದೆ. ಆದರೆ ಸೆಲ್ಫ್ ಮಾಸ್ಟರೀ ಸಂಪೂರ್ಣವಾಗಿ ಬೇರೆಯದೇ ವಿದ್ಯಮಾನ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮುಲ್ಲಾ ನಸ್ರುದ್ದೀನ್ ಇನ್ನೂ ಇಬ್ಬರು ಸಂತರೊಡನೆ ಮೆಕ್ಕಾ ಗೆ ತೀರ್ಥಯಾತ್ರೆ ಹೊರಟಿದ್ದ. ಅದು ಅವರ ಪ್ರವಾಸದ ಕೊನೆಯ ಹಂತವಾಗಿತ್ತು, ಅವರು ಹಳ್ಳಿಯೊಂದನ್ನು ದಾಟಿ ಹೋಗುತ್ತಿದ್ದರು. ಅವರ ಬಳಿ ಇದ್ದ ಹಣ ಬಹುತೇಕ ಖರ್ಚಾಗಿ ಹೋಗಿತ್ತು, ಸ್ವಲ್ಪ ಮಾತ್ರ ಹಣ ಅವರ ಬಳಿ ಉಳಿದಿತ್ತು. ಅವರಿಗೆ ಬಹಳ ಹಸಿವೆಯಾಗುತ್ತಿದ್ದರಿಂದ ಅವರು ತಮ್ಮ ಬಳಿ ಉಳಿದಿದ್ದ ಹಣದಿಂದ ಹಲ್ವಾ ಖರೀದಿ ಮಾಡಿದರು. ಆದರೆ ಆ ಹಲ್ವಾ ಮೂರೂ ಜನರಿಗೆ ಸಾಕಾಗುವಷ್ಟಿರಲಿಲ್ಲ. ಇರುವುದನ್ನೇ ಹಂಚಿಕೊಂಡು ತಿಂದರೆ ಅದು ಯಾರ ಹಸಿವನ್ನೂ ತಣಿಸುತ್ತಿರಲಿಲ್ಲ. ಹೀಗಾಗಿ ಏನು ಮಾಡುವುದು ಎಂದು ಅವರು ಚಿಂತಾಕ್ರಾಂತರಾದರು.
ಆಗ ಮೂರೂ ಜನರಲ್ಲಿ ಯಾರು ಮುಖ್ಯರೋ ಅವರು ಹಲ್ವಾ ತಿನ್ನಬೇಕು ಎಂದು ನಿರ್ಧರಿಸಿ ಅವರು ತಮ್ಮ ತಮ್ಮ ಪ್ರಾಮುಖ್ಯತೆಯನ್ನು ಹೇಳಿಕೊಳ್ಳಲು ಶುರು ಮಾಡಿದರು. ಮೊದಲನೇಯ ಸಂತ ಮಾತನಾಡತೊಡಗಿದ, “ ಮೂವರಲ್ಲಿ ನನ್ನಷ್ಟು ಉಪವಾಸ, ಪ್ರಾರ್ಥನೆ ಮಾಡಿದವರು ಯಾರೂ ಇಲ್ಲ. ಬಾಕಿ ಇಬ್ಬರಿಗಿಂತ ನಾನು ಹೆಚ್ಚು ಧಾರ್ಮಿಕ, ಹೆಚ್ಚು ಪವಿತ್ರ ವ್ಯಕ್ತಿ, ಆದ್ದರಿಂದ ದೇವರು ನನ್ನ ಪ್ರಾಣ ಉಳಿಸಲು ಬಯಸುತ್ತಾನೆ. ಹಾಗಾಗಿ ಹಲ್ವಾದ ಮೇಲೆ ನನ್ನ ಅಧಿಕಾರ ಹೆಚ್ಚು”.
ಎರಡನೇಯ ಸಂತ ತನ್ನ ಪ್ರಾಮುಖ್ಯತೆಯನ್ನು ಹೇಳಿಕೊಳ್ಳತೊಡಗಿದ. “ಹೌದು ನೀನು ಬಹಳ ತ್ಯಾಗಗಳನ್ನು ಮಾಡಿದ್ದೀಯ ಒಪ್ಪುತ್ತೇನೆ. ಆದರೆ ನಾವು ಮೂವರಲ್ಲಿ ನಾನು ಶ್ರೇಷ್ಠ ವಿದ್ವಾಂಸ. ನಾನು ಎಲ್ಲ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿದ್ದೇನೆ. ನನ್ನ ಇಡೀ ಜೀವನವನ್ನೇ ಜ್ಞಾನ ಸಂಪಾದನೆಗಾಗಿ ಮುಡಿಪಾಗಿಟ್ಟಿದ್ದೇನೆ. ಜಗತ್ತಿಗೆ ಉಪವಾಸ ಮಾಡುವವರು ಬೇಕಾಗಿಲ್ಲ. ಜಗತ್ತಿಗೆ ಜ್ಞಾನದ ಅವಶ್ಯಕತೆ ಹೆಚ್ಚು. ಹಾಗಾಗಿ ಜಗತ್ತಿನಲ್ಲಿ ನನ್ನ ಮಹತ್ವ ಹೆಚ್ಚು. ಆದ್ದರಿಂದ ಹಲ್ವಾ ದ ಮೇಲೆ ನನಗೆ ಹೆಚ್ಚಿನ ಅಧಿಕಾರ ಇದೆ”.
ಕೊನೆಗೆ ಮುಲ್ಲಾ ನಸ್ರುದ್ದೀನ ಮಾತನಾಡಿದ. “ನಾನೇನು ದೊಡ್ಡ ವಿರಾಗಿ ಅಲ್ಲ, ಹಾಗಾಗಿ ಹೆಚ್ಚಿನ ಸ್ವ-ನಿಯಂತ್ರಣದ ಬಗ್ಗೆ ನಾನು ಹೇಳಿಕೊಳ್ಳುವುದು ಏನೂ ಇಲ್ಲ. ನಾನು ಜ್ಞಾನಿ ವ್ಯಕ್ತಿಯೂ ಅಲ್ಲ. ನಾನೊಬ್ಬ ಸಾಧಾರಣ ಪಾಪಿ ಮನುಷ್ಯ. ಮತ್ತು ಪಾಪಿಗಳ ಬಗ್ಗೆ ದೇವರಿಗೆ ಹೆಚ್ಚು ಕರುಣೆ ಎಂದು ಜನ ಮಾತನಾಡಿಕೊಳ್ಳುವುದನ್ನ ಕೇಳಿದ್ದೇನೆ. ಹಾಗಾಗಿ ಹಲ್ವಾ ನನಗೆ ಸಲ್ಲಬೇಕು”.
ಬಹಳಷ್ಟು ವಾದವಿವಾದಗಳ ನಂತರವೂ ಹಲ್ವಾ ಯಾರಿಗೆ ಸೇರಬೇಕು ಎನ್ನುವ ವಿಷಯದಲ್ಲಿ ಅವರ ನಡುವೆ ಒಪ್ಪಂದ ಸಾಧ್ಯವಾಗಲಿಲ್ಲ. ಕೊನೆಗೆ ಅವರು ಈ ನಿರ್ಧಾರವನ್ನು ದೇವರ ಮೇಲೆ ಬಿಡಲು ತೀರ್ಮಾನಿಸಿ, ಹಾಗೆಯೇ ಹಸಿದ ಹೊಟ್ಟೆಯಲ್ಲಿ ನಿದ್ರೆಗೆ ಇಳಿದರು. ಯಾರಿಗೆ ದೇವರ ಜೊತೆಗಿನ ಒಳ್ಳೆಯ ಕನಸು ಬೀಳುತ್ತದೆಯೋ ಅವರಿಗೆ ಹಲ್ವಾ ಎಂದು ಅವರು ತೀರ್ಮಾನ ಮಾಡಿಕೊಂಡಿದ್ದರು.
ಬೆಳಿಗ್ಗೆ ಎದ್ದ ಕೂಡಲೇ ಮೊದಲನೇಯ ಸಂತ ಹೇಳಿದ, “ಈಗ ನನ್ನ ಜೊತೆ ಯಾರಿಗೂ ಸ್ಪರ್ಧೆ ಇಲ್ಲ. ಕನಸಿನಲ್ಲಿ ನಾನು ದೇವರ ಪಾದಕ್ಕೆ ಮುತ್ತು ಕೊಟ್ಟೆ. ಇದಕ್ಕಿಂತ ಅತ್ಯುತ್ತಮ ಕನಸು ಬೇರೆ ಯಾವುದೂ ಇಲ್ಲ. ನನಗೆ ಹಲ್ವಾ ಕೊಡಿ.” ಎರಡನೇಯ ಸಂತ ನಗುತ್ತ ಮಾತನಾಡಿದ, “ನಿನ್ನದೂ ಏನೂ ಅಲ್ಲ. ನನ್ನ ಕನಸಿನಲ್ಲಿ ದೇವರು ನನ್ನನ್ನು ಅಪ್ಪಿಕೊಂಡು ಮುತ್ತುಕೊಟ್ಟ. ನನ್ನದೇ ಶ್ರೇಷ್ಠ ಕನಸು. ಹಲ್ವಾ ನನಗೆ ಸೇರಬೇಕು”. ನಂತರ ಆ ಇಬ್ಬರು ಸಂತರು ಮುಲ್ಲಾ ನಸ್ರುದ್ದೀನ್ ನನ್ನು ಅವನ ಕನಸಿನ ಬಗ್ಗೆ ವಿಚಾರಿಸಿದರು.
ನಸ್ರುದ್ದೀನ್ ತನ್ನ ಅನುಭವವನ್ನು ಹೇಳತೊಡಗಿದ, “ನಾನೊಬ್ಬ ಸಾಧಾರಣ ಮನುಷ್ಯ, ನನ್ನ ಕನಸು ಕೂಡ ಅಷ್ಟೇ ಸಾಧಾರಣವಾಗಿತ್ತು, ಹೇಳಿಕೊಳ್ಳುವಂಥ ವಿಶೇಷ ಏನಿಲ್ಲ. ಆದರೆ ನೀವು ಒತ್ತಾಯ ಮಾಡುತ್ತಿದ್ದೀರಿ ಎಂದು ಹೇಳುತ್ತೇನೆ ಕೇಳಿ. ನನ್ನ ಕನಸಿನಲ್ಲಿ ದೇವರು ಬಂದು, ಮೂರ್ಖ ಯಾಕೆ ಹೊಟ್ಟೆ ಹಸಿದುಕೊಂಡು ಮಲಗಿದ್ದೀಯಾ, ಹಲ್ವಾ ತಿನ್ನು ಎಂದು ಹೇಳಿದ. ದೇವರ ಆಜ್ಞೆ ಮೀರಲಾಗದೆ ನಾನು ಹಲ್ವಾ ತಿಂದುಬಿಟ್ಟೆ. ಈಗ ಯಾವ ಹಲ್ವೂ ಕೂಡ ಉಳಿದಿಲ್ಲ”.
ಸೆಲ್ಫ್ ಕಂಟ್ರೋಲ್ ನಿಮ್ಮೊಳಗೆ ಸೂಕ್ಷ್ಮವಾದ ಅಹಂ ಅನ್ನು ಹುಟ್ಟುಹಾಕುತ್ತದೆ. ಅದರೊಳಗೆ ಕಂಟ್ರೋಲ್ ಗಿಂತ ಹೆಚ್ಚು ಸೆಲ್ಫ್ ಇದೆ. ಆದರೆ ಸೆಲ್ಫ್ ಮಾಸ್ಟರೀ ಸಂಪೂರ್ಣವಾಗಿ ಬೇರೆಯದೇ ವಿದ್ಯಮಾನ. ಇದರೊಳಗೆ ಸೆಲ್ಫ್ ಇಲ್ಲ. ಕಂಟ್ರೋಲ್ ಎನ್ನುವುದನ್ನು ಪೋಷಿಸಿಕೊಂಡು, ಪ್ರ್ಯಾಕ್ಟೀಸ್ ಮಾಡಿಕೊಂಡು ಬರಬೇಕಾಗುತ್ತದೆ. ಅದನ್ನು ನಿರ್ವಹಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಇದೊಂದು ಸುದೀರ್ಘ ಸಂಘರ್ಷ, ನಂತರವಷ್ಟೇ ನೀವು ಅದನ್ನು ಸಾಧಿಸಿಕೊಳ್ಳಬಹುದು. ಆದರೆ ಮಾಸ್ಟರೀ ನ ಪೋಷಿಸಬೇಕಿಲ್ಲ, ಪ್ರಾಕ್ಟೀಸ್ ಮಾಡಬೇಕಿಲ್ಲ. ಮಾಸ್ಟರೀ ಎನ್ನುವುದು ಸಂಪೂರ್ಣ ತಿಳುವಳಿಕೆ, ಇದರಲ್ಲಿ ನಿಯಂತ್ರಣದ ವಿಷಯವೇ ಇಲ್ಲ.
Source: Osho- Dhammapada, The Way of the Buddha

