ಯಾವಾಗ ಬದುಕು ನಿಮ್ಮನ್ನು ಅಲ್ಲಾಡಿಸುತ್ತದೆಯೋ (ಖಂಡಿತವಾಗಿ ಒಮ್ಮಿಲ್ಲ ಒಮ್ಮೆ) ಆಗ, ನಿಮ್ಮ ಒಳಗೆ ಏನು ಇದೆಯೋ ಅದು ಹೊರಗೆ ಬರುತ್ತದೆ. ಆದ್ದರಿಂದ ನಾವು ಈಗ ಕೇಳಿಕೊಳ್ಳಬಹುದಾದ ಪ್ರಶ್ನೆ ಏನೆಂದರೆ, “ನಮ್ಮ ಒಳಗೆ ಇರುವುದು ಏನು? । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಜೋಜೋ ಬೆನ್ನಿಂಗ್ಟನ್ ಹೇಳಿದ್ದು…
ನೀವು ಒಂದು ಕಾಫೀ ಕಪ್ ಹಿಡಿದುಕೊಂಡಿದ್ದೀರಿ ಮತ್ತು ಎದುರಿನಿಂದ ಬಂದ ಯಾರೋ ಒಬ್ಬರು ನಿಮಗೆ ಡಿಕ್ಕಿ ಹೊಡೆಯುತ್ತಾರೆ ಆಗ ನಿಮ್ಮ ಕೈಯಲ್ಲಿದ್ದ ಕಾಫೀ ಕೆಳಗೆ ಚೆಲ್ಲುತ್ತದೆ.
ಕಾಫೀ ಯಾಕೆ ಕೆಳಗೆ ಚೆಲ್ಲಲ್ಪಟ್ಟಿತು ?
ಯಾರೋ ಒಬ್ಬರು ಬಂದು ನಿಮಗೆ ಡಿಕ್ಕಿ ಹೊಡೆದದ್ದರಿಂದ.
ತಪ್ಪು ಉತ್ತರ.
ಕಾಫೀ ಯಾಕೆ ಕೆಳಗೆ ಚೆಲ್ಲಿತು ಎಂದರೆ ಕಪ್ ನಲ್ಲಿ ಕಾಫೀ ಇದ್ದುದರಿಂದ. ಅಕಸ್ಮಾತ್ ಆ ಕಪ್ ನಲ್ಲಿ ಚಹಾ ಇದ್ದರೆ, ಚಹಾ ಕೆಳಗೆ ಚೆಲ್ಲಲ್ಪಡುತ್ತಿತ್ತು. ಯಾವುದು ಕಪ್ ನ ಒಳಗೆ ಇದೆಯೋ ಅದು ಚೆಲ್ಲಲ್ಪಡುತ್ತದೆ.
ಹಾಗಾಗಿ, ಯಾವಾಗ ಬದುಕು ನಿಮ್ಮನ್ನು ಅಲ್ಲಾಡಿಸುತ್ತದೆಯೋ (ಖಂಡಿತವಾಗಿ ಒಮ್ಮಿಲ್ಲ ಒಮ್ಮೆ) ಆಗ, ನಿಮ್ಮ ಒಳಗೆ ಏನು ಇದೆಯೋ ಅದು ಹೊರಗೆ ಬರುತ್ತದೆ. ಆದ್ದರಿಂದ ನಾವು ಈಗ ಕೇಳಿಕೊಳ್ಳಬಹುದಾದ ಪ್ರಶ್ನೆ ಏನೆಂದರೆ, “ನಮ್ಮ ಒಳಗೆ ಇರುವುದು ಏನು?”
ಬದುಕು ನಮ್ಮ ಜೊತೆ ಕಠಿಣವಾಗಿ ವರ್ತಿಸಲು ಶುರು ಮಾಡಿದಾಗ, ಯಾವುದು ನಮ್ಮ ಒಳಗಿಂದ ಹೊರಗೆ ಚೆಲ್ಲಲ್ಪಡುತ್ತದೆ?
ಖುಶಿ, ಕೃತಜ್ಞತೆ, ವಿನಮ್ರತೆ?
ಅಥವಾ ಕೋಪ, ಕಹಿ, ಕೆಟ್ಟ ಮಾತು, ಪ್ರತಿಕ್ರಿಯೆ?
ಬದುಕು ನಮಗೆ ಕಪ್ ದಯಪಾಲಿಸಿದೆ, ಅದರೊಳಗೆ ಏನು ತುಂಬಿಟ್ಟುಕೊಳ್ಳಬೇಕು ಎನ್ನುವುದು ನಮಗೆ ಬಿಟ್ಟಿದ್ದು.
ಈ ಕ್ಷಣದಿಂದ ನಾವು ನಮ್ಮ ನಮ್ಮ ಕಪ್ ಒಳಗೆ ಕೃತಜ್ಞತೆ, ಕ್ಷಮೆ, ಖುಶಿ, ಅಂತಃಕರಣ, ವಿನಯ, ಪ್ರೀತಿ ತುಂಬಿಕೊಳ್ಳಲು ಪ್ರಯತ್ನ ಶುರು ಮಾಡೋಣ.
ಜುವಾಂಗ್-ತ್ಸೆ ಹೇಳಿದ ಖಾಲಿ ದೋಣಿಯ ಕಥೆ
ಸಂತನೊಬ್ಬ ನದಿ ದಾಟುತ್ತಿದ್ದ ಶಿಷ್ಯನೊಂದಿಗೆ ತನ್ನ ದೋಣಿಯಲ್ಲಿ .
ನದಿಯ ನಡುವೆ ಬರುತ್ತಿದ್ದಂತೆಯೇ ಇನ್ನೊಂದು ಖಾಲಿ ದೋಣಿ
ಇವರ ದೋಣಿಗೆ ಡಿಕ್ಕಿ ಹೊಡೆಯಿತು
ಶಿಷ್ಯನಿಗೆ ಭಾರಿ ಸಿಟ್ಟು, ಆದರೆ ಯಾರಿಗೆ ಬಯ್ಯುತ್ತಾನೆ?
“ಅಕಸ್ಮಾತ್
ದೋಣಿಯಲ್ಲಿ ಯಾರಾದರೂ ಇದ್ದರೆ, ಏನು ಮಾಡುತ್ತಿದ್ದೆ? “ ಸಂತನ ಪ್ರಶ್ನೆ.
“ಬಾಯಿಗೆ ಬಂದಹಾಗೆ ಬಯ್ಯುತ್ತಿದ್ದೆ
ಒಂದು ಸಾರಿಯಲ್ಲ, ಹತ್ತು ಸಾರಿ . ಶಾಪ ಹಾಕುತ್ತಿದ್ದೆ “ ಶಿಷ್ಯ.
“ನೋಡು ಹಾಗಾದರೆ ಖಾಲಿ ದೋಣಿಯಲ್ಲಿ
ಪ್ರಯಾಣ ಮಾಡೋದು ಎಷ್ಟು ಒಳ್ಳೆಯದು.
ಬಯ್ಯೋರೂ ಇಲ್ಲ, ಹೊಡೆಯೋರೂ ಇಲ್ಲ”
ನಗುತ್ತ ಅಂದಿನ ಪಾಠ ಮುಗಿಸಿದ ಸಂತ.

