ಕ್ರಿಯಾತ್ಮಕ ಬುದ್ಧರಾಗುವುದೆಂದರೆ…

ನಿಮ್ಮೊಳಗೆ ತೀವ್ರ ಶಕ್ತಿಶಾಲಿ ಬಯಕೆಯಿರುವುದಾದರೆ, ಪ್ರೇಮ ತುಂಬಿಕೊಂಡ ಮನಸ್ಸು ಇರುವುದಾದರೆ, ಈ ಎರಡು ಕೆಲಸ ಮಾಡಲು ಬೇಕಾದ ಸಾಮರ್ಥ್ಯವನ್ನು ಅದು ಒಟ್ಟುಗೂಡಿಸುತ್ತ ಹೋಗುತ್ತದೆ : ನಿಮ್ಮನ್ನು ಗುಣಪಡಿಸಿಕೊಳ್ಳಲು ಜಗತ್ತಿನ ಚೆಲುವಿಗೆ ಕಣ್ಣಾಗುವುದು ಮತ್ತು ಜಗತ್ತಿನ ಸಂಕಟಗಳನ್ನು ಗೊತ್ತುಮಾಡಿಕೊಂಡು ಅದರ ನಿವಾರಣೆಗೆ ಮುಂದಾಗುವುದು… ~Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ

ನಾವು
ಒಬ್ಬರು, ಇನ್ನೊಬ್ಬರ ಕೈ ಹಿಡಿದುಕೊಂಡು
ನಿರಂತರವಾಗಿ ನಡೆಯುತ್ತಿದ್ದೆವೆ,
ಯಾವ ಮುಟ್ಟುವ, ಯಾವ ಹಿಂತಿರುಗುವ ಒತ್ತಡಗಳೂ ಇಲ್ಲದೆ.
ಸುಮ್ಮನೆ, ಸಮಾಧಾನದಿಂದ ಖುಶಿಯಾಗಿ.
ಇದು ಸಮಾಧಾನದ ನಡೆ, ಇದು ಖುಶಿಯ ಪ್ರಯಾಣ.

ಆಗಲೇ ನಾವು ಕಲಿತಿದ್ದು ;
ಇದು ಸಮಾಧಾನದ ನಡೆ ಅಲ್ಲ, ಸಮಾಧಾನವೇ ನಡೆಯೆಂದು.
ಇದು ಖುಶಿಯ ಪ್ರಯಾಣವಲ್ಲ, ಖುಶಿಯೇ ಒಂದು ಪ್ರಯಾಣ ಎನ್ನುವುದ.

ನಾವು ನಡೆಯುತ್ತಿರುವುದು ನಮಗಾಗಿಯಾದರೂ,
ಅದೇ ವೇಳೆ, ನಾವು ನಡೆಯುತ್ತಿರುವುದು ಸಮಸ್ತರಿಗಾಗಿ ಕೂಡ.

ಸದಾ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,
ಪ್ರತೀ ಕ್ಷಣ ಸಮಾಧಾನವನ್ನು ಮುಟ್ಟುತ್ತ,
ಪ್ರತೀ ಗಳಿಗೆ ಖುಶಿಯನ್ನ ತಲುಪುತ್ತ.

ನಮ್ಮ ಪ್ರತೀ ಹೆಜ್ಜೆಯೊಂದಿಗೆ ಬೀಸುತ್ತಿದೆ ತಾಜಾ ತಂಗಾಳಿ,
ಪ್ರತೀ ಹೆಜ್ಜೆ ನಮ್ಮ ಪಾದಗಳ ಕೆಳಗೆ ಅರಳಿಸುತ್ತಿದೆ ಪರಿಮಳದ ಹೂವುಗಳ.

ನಿಮ್ಮ ಪಾದಗಳಿಂದ ಈ ಪೃಥುವಿಯನ್ನೊಮ್ಮೆ ಚುಂಬಿಸಿ,
ಅವಳ ಮೈಮೇಲೆ ಪ್ರೇಮ ಮತ್ತು ಖುಶಿಯ ಚಿತ್ತಾರಗಳ ಬಿಡಿಸಿ.

ಬದುಕಿನ ಬಗ್ಗೆ ನಮಗೆ ನಂಬಿಕೆ, ಭರವಸೆ ಹೆಚ್ಚಿದಂತೆಲ್ಲ
ಪೃಥುವಿಗೂ ಸಮಾಧಾನ, ಸಂಭ್ರಮ.


ನಾವು ಬಹುತೇಕರು ನಿದ್ದೆಗಣ್ಣಿನಲ್ಲಿಯೇ ಇರುವವರು. ನಾನು ಈ ಜಗತ್ತಿನಲ್ಲಿ ಬದುಕುತ್ತಿದ್ದೆವೆಯಾದರೂ ಈ ಜಗತ್ತನ್ನ ನೋಡುವುದು ನಮಗೆ ಸಾಧ್ಯವಾಗುತ್ತಿಲ್ಲ, ಬಹುತೇಕ ನಾವು ನಿದ್ರಾ ಸಂಚಾರಿಗಳು.

ಮೊದಲನೇಯದಾಗಿ ಎಚ್ಚರವಾಗುವುದೆಂದರೆ ಮೊದಲು ಈ ನೆಲದ ಚೆಲುವಿಗೆ ಸಾಕ್ಷಿಯಾಗುವುದು. ಎಚ್ಚರವಾಗುವುದೆಂದರೆ, ನಿಮಗೊಂದು ದೇಹವಿದೆ ಮತ್ತು ಅದು ಭೂಮಿ, ಸೂರ್ಯ ಮತ್ತು ನಕ್ಷತ್ರಗಳಿಂದ ಮಾಡಲ್ಪಟ್ಟಿದೆ ಎನ್ನುವುದನ್ನ ಗುರುತು ಮಾಡಿಕೊಳ್ಳುವುದು. ಎಚ್ಚರವಾಗುವುದೆಂದರೆ ಈ ಆಕಾಶ ಸುಂದರವಾಗಿದೆ ಮತ್ತು ನಮ್ಮ ಭೂಮಿ ಈ ಬ್ರಹ್ಮಾಂಡದ ಶ್ರೇಷ್ಠ ರತ್ನ ಎನ್ನುವುದನ್ನ ಮನಗಾಣುವುದು. ಈ ಭೂಮಿಯ ಮಗುವಾಗುವಾಗ ಮತ್ತು ಈ ಅಸಾಧಾರಣ ಗ್ರಹದ ಮೇಲೆ ಕಾಲೂರುವ ಅವಕಾಶ ನಿಮಗೆ ಸಿಕ್ಕಿದೆ .

ಎರಡನೇಯದಾಗಿ ಎಚ್ಚರವಾಗುವುದೆಂದರೆ, ಈ ಜಗತ್ತಿನ ಸಂಕಟಗಳಿಗೆ ಎಚ್ಚರವಾಗುವುದು. ಈ ಜಗತ್ತು ಅಪಾಯದಲ್ಲಿದೆ ಮತ್ತು ಈ ಜಗತ್ತಿನ ಜೀವ ಪ್ರಬೇಧ ಅಪಾಯದಲ್ಲಿದೆ ಎನ್ನುವುದನ್ನ ಅರಿತುಕೊಳ್ಳುವುದು. ಈ ಸಂಕಟಗಳಿಗೆ ಪರಿಹಾರ, ಉಪಶಮನ ಕಂಡುಕೊಳ್ಳಲು ಪ್ರಯತ್ನಿಸುವುದು. ಇದಕ್ಕಾಗಿ ನಿಮಗೆ ಅಪಾರ ಸಾಮರ್ಥ್ಯದ ಅವಶ್ಯಕತೆಯಿದೆ.

ನಿಮ್ಮೊಳಗೆ ತೀವ್ರ ಶಕ್ತಿಶಾಲಿ ಬಯಕೆಯಿರುವುದಾದರೆ, ಪ್ರೇಮ ತುಂಬಿಕೊಂಡ ಮನಸ್ಸು ಇರುವುದಾದರೆ, ಈ ಎರಡು ಕೆಲಸ ಮಾಡಲು ಬೇಕಾದ ಸಾಮರ್ಥ್ಯವನ್ನು ಅದು ಒಟ್ಟುಗೂಡಿಸುತ್ತ ಹೋಗುತ್ತದೆ : ನಿಮ್ಮನ್ನು ಗುಣಪಡಿಸಿಕೊಳ್ಳಲು ಜಗತ್ತಿನ ಚೆಲುವಿಗೆ ಕಣ್ಣಾಗುವುದು ಮತ್ತು ಜಗತ್ತಿನ ಸಂಕಟಗಳನ್ನು ಗೊತ್ತುಮಾಡಿಕೊಂಡು ಅದರ ನಿವಾರಣೆಗೆ ಮುಂದಾಗುವುದು.

ಇಂಥ ಸಾಮರ್ಥ್ಯದ ಸ್ರೋತ ನಿಮ್ಮೊಳಗೆ ಇರುವುದಾದರೆ, ನಿಮಲ್ಲಿ ಅಂಥ ಪ್ರೇಮ ತುಂಬಿದ ಮನಸ್ಸು ಇರುವುದಾದರೆ, ಆಗ ನೀವು ಒಬ್ಬ ಕ್ರಿಯಾತ್ಮಕ ಬುದ್ಧ, buddha in action.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.