ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 4ನೇ ಕಂತು ಇಲ್ಲಿದೆ…
3ನೇ ಕಂತು ಇಲ್ಲಿ ನೋಡಿ: https://aralimara.com/2024/06/02/neruda-2/
ತೋಪಿನ ಮರಗಳೆಲ್ಲ ಎಲೆ ಉದುರಿಸಿ ಬತ್ತಲೆ ನಿಂತದ್ದು ಯಾಕೆ?
ಹಿಮ ಸುರೀಲಿ ಅಂತಲಾ?
*
ಈ ನಾಲಕ್ಕು ಮುಳ್ಳಿಗೆ ಜಾಗ ಇದೆಯಾ
ಅಂತ ಗುಲಾಬಿ ಪೊದೇನ ಕೇಳಿದರಂತೆ.
*
ಬೆರಗುಗೊಂಡ ಕನ್ನೆಯ ಪರಿಮಳ- ನಿಜವಾ?
*
ಬಡತನ ಮುಗಿದ ತಕ್ಷಣ
ಬಡವರಿಗೆ ಅರ್ಥ ಆಗೋದು ನಿಂತು ಹೋಗತ್ತೆ, ಯಾಕೆ?

ಕನಸಲ್ಲಿ ಮೊಳಗುವಂಥ ಗಂಟೆ
ಎಲ್ಲಿ ಸಿಕ್ಕಬಹುದು ನಿಮಗೆ?
*
ದುಃಖ ದಪ್ಪ, ಕೊರಗು ಬಡಕಲು—ನಿಜಾನಾ?
*
ಸ್ವರ್ಗದ ಸಂಗೀತಕ್ಕೆ
ಮಿಡತೆ ಥರ ಹಾಡು ಹಾಡತ್ತಾ ಭೂಮಿ?
*
ಬಡವರ ಎಲ್ಲಾ ನೆನಪೂ ಹಳ್ಳಿಯಲ್ಲಿ ಮುದುಡಿ ಕೂತಿರುತ್ತಾವಾ?
ಸಾಹುಕಾರರು ಎಲ್ಲಾ ಕನಸು ಬಂಗಾರದ ಪೆಟ್ಟಗೇಲಿಟ್ಟು ಬೀಗ ಹಾಕತಾರಾ?
**

ಏನು ಮಾಡುವುದಕ್ಕೆ ಈ ಲೋಕದಲ್ಲಿ ಹುಟ್ಟಿದೆ
ಅಂತ ಯಾರನ್ನ ಕೇಳಲಿ ನಾನು?
ಸುಮ್ಮನೆ ಕೂತಿರಕ್ಕೆ ಆಗಲ್ಲ ಯಾಕೆ?
ಇಷ್ಟ ಇಲ್ಲದೆ ಇದ್ದರೂ ಓಡಾಡತೀನಿ ಯಾಕೆ?
ಗಾಲಿ ಇಲ್ಲದೆ ಇದ್ದರೂ ಉರುಳಿಕೊಂಡು
ರೆಕ್ಕೆ ಇಲ್ಲದೆ ಇದ್ದರೂ ಹಾರಿಕೊಂಡು ಎಲ್ಲೆಲ್ಲೋ ಹೋಗತೇನೆ ಯಾಕೆ?
ನನ್ನ ಮೈ ಮೂಳೆಯೆಲ್ಲ ಹುಟ್ಟಿದ ನಾಡಲ್ಲಿದ್ದರೂ
ಇಲ್ಲಿಗೆ ಯಾಕೆ ವಲಸೆ ಬಂದೆ?
*

ಮರುಭೂಮಿಯ ಯಾತ್ರಿಕರಿಗೆ ಸೂರ್ಯ ಕೆಟ್ಟ ಕಂಪನಿ, ಯಾಕೆ?
ಆಸ್ಪತ್ರೆಯ ಗಾರ್ಡನ್ನಿನಲ್ಲಿ ಸೂರ್ಯ ಆಪ್ತ ಮಿತ್ರ, ಯಾಕೆ?
*
ಬೆಳುದಿಂಗಳ ಬಲೆಯಲ್ಲಿ ಸಿಕಿಬಿದ್ದಿರುವುದು
ಮೀನೋ ಹಕ್ಕಿಗಳೋ?
*
ನನ್ನನ್ನ ಅವರು ಎಲ್ಲಿ ಕಳಕೊಂಡರೋ
ಅಲ್ಲೇ ನನ್ನ ನಾನು ಕಂಡುಕೊಂಡೆನೋ?
*
ನಾನು ಮರೆತ ಸದ್ಗುಣಗಳನ್ನು ಬಳಸಿ
ಹೊಸ ಡ್ರೆಸ್ಸು ಹೊಲಿಸಿಕೊಳ್ಳಬಹುದಾ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸಲಿದೆ.
(Illustrations: Chetana Thirthahalli)


[…] 4ನೇ ಕಂತು ಇಲ್ಲಿ ನೋಡಿ: https://aralimara.com/2024/06/08/neruda-3/ […]
LikeLike