ಡಾಕ್ಟರ್ ಗೆ ಹಣ ಜನರ ಆರೋಗ್ಯಕ್ಕಾಗಿ ಸಿಗಬೇಕೇ ಹೊರತು ಅವರ ಅನಾರೋಗ್ಯಕ್ಕಲ್ಲ. ಜನ ಅನಾರೋಗ್ಯದಿಂದ ಇದ್ದಾರೆಂದರೆ ಡಾಕ್ಟರ್ ಸಂಬಳ ಕಟ್ ಆಗಬೇಕು. ಡಾಕ್ಟರ್ ನ ಇಂಟರೆಸ್ಟ್ ಜನರ ಆರೋಗ್ಯ ದಲ್ಲಿರಬೇಕೇ ಹೊರತು ಅವರ ಅನಾರೋಗ್ಯದಲ್ಲಿರಬಾರದು… : ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಚೈನಾ ದೇಶದಲ್ಲಿ ಒಂದು ವಿಚಿತ್ರ ಪ್ರಯೋಗ ಮಾಡಲಾಗಿತ್ತು. ಚೈನಾದ ಚಕ್ರವರ್ತಿ ಲಾವೋತ್ಸೇ, ಜುವಾಂಗ್ ತ್ಸೇ ಮತ್ತು ಲೇಹ್ ತ್ಸೇ ಅವರಿಂದ ಅತೀವವಾಗಿ ಪ್ರಭಾವಿತನಾಗಿದ್ದ. ಅವನು ಬಹುಕಾಲ ಬದುಕಿದ್ದ ಆದ್ದರಿಂದ ಈ ಮೂರೂ ತ್ಸೇ ತ್ರಿವಳಿಗಳ ಸಂಪರ್ಕ ಅವನಿಗೆ ಸಾಧ್ಯವಾಗಿತ್ತು. ಈ ಮೂರು ಜನ ತ್ಸೇ ಗಳ ಪ್ರಭಾವದಲ್ಲಿ ಅವನು ಅತ್ಯಂತ ಒಳ್ಳೆಯ, ಓರಿಜಿನಲ್ ಐಡಿಯಾ ಒಂದನ್ನ ಚೈನಾದಲ್ಲಿ ಜಾರಿಗೆ ತಂದಿದ್ದ. ಆದರೆ ದುರದೃಷ್ಟವಶಾತ್ ಚಕ್ರವರ್ತಿ ತೀರಿಕೊಂಡ ಮೇಲೆ ಹಳೆಯ ಸಂಪ್ರದಾಯದ ಪಟ್ಟಭದ್ರ ಹಿತಾಸಕ್ತಿಗಳು ಮೇಲುಗೈ ಸಾಧಿಸಿ ಈ ಸ್ಥಾಪಿತ ಐಡಿಯನ್ನ ತೆಗೆದು ಹಾಕಿಬಿಟ್ಟರು.
ಲಾವೋತ್ಸೇ, ಜುವಾಂಗ್ ತ್ಸೇ ಮತ್ತು ಲೇಹ್ ತ್ಸೇ ಸ್ಥಾಪಿಸಿದ ವಿಶಿಷ್ಟ ಐಡಿಯಾ ಎಂದರೆ : ಡಾಕ್ಟರ್ ಗೆ ಅವನ ರೋಗಿಗಳಿಂದ ಹಣ ಸಂದಾಯವಾಗಬಾರದು. ರೋಗಿಗಳು ಡಾಕ್ಟರ್ ಗೆ ಹಣ ಕೊಡುವುದಾದರೆ ಎಲ್ಲೋ ಒಂದು ಕಡೆ ಡಾಕ್ಟರ್ ನ ಮನಸ್ಸಿನಲ್ಲಿ ರೋಗಿಗಳಿಗೆ ಗುಣ ಆಗಬಾರದು ಎಂಬ ಭಾವ ಉಳಿದುಕೊಂಡುಬಿಡುತ್ತದೆ. ರೋಗಿಗಳು ಬೇಗ ಗುಣವಾಗಿಬಿಟ್ಟರೆ ಡಾಕ್ಟರ್ ನ ಸಂಪಾದನೆ ನಿಂತುಹೋಗಿಬಿಡುತ್ತದೆ. ಹಾಗಾಗಿ ಡಾಕ್ಟರ್ ತನ್ನ ವೃತ್ತಿಯನ್ನ ವ್ಯಾಪಾರ ಮಾಡಿಕೊಂಡು ಬಿಡುತ್ತಾನೆ.
ಜುವಾಂಗ್ ತ್ಸೇ ಆಗಾಗ ಹೇಳುತ್ತಿದ್ದ ಒಂದು ಪ್ರಸಿದ್ಧ ಕಥೆ ಹೀಗಿದೆ. ಒಬ್ಬ ಡಾಕ್ಟರ್ ಇದ್ದ ಅವನಿಗೆ ಮೂರು ಜನ ಮಕ್ಕಳು. ಮೂವರೂ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದರು.
ಯುನಿವರ್ಸಿಟಿಯಿಂದ ಮೆಡಿಸಿನ್ ಕಲಿತು ವಾಪಸ್ ಬಂದ ಮೊದಲ ಮಗ ತನ್ನ ತಂದೆಗೆ ಹೇಳಿದ, “ ಅಪ್ಪಾ ನಿನಗೆ ಈಗ ವಯಸ್ಸಾಯಿತು. ನೀನು ವಿಶ್ರಾಂತಿ ತೆಗೆದುಕೋ. ಇನ್ನು ಮೇಲೆ ನಾನು ನಿನ್ನ ರೋಗಿಗಳನ್ನು ನೋಡಿಕೊಳ್ಳುತ್ತೇನೆ”. ಅಪ್ಪ, ಮಗನ ಮಾತಿಗೆ ಒಪ್ಪಿಗೆ ಸೂಚಿಸಿ ತನ್ನ ರೋಗಿಗಳನ್ನು ಮಗನ ಕೈಗೆ ಒಪ್ಪಿಸಿದ.
ಎರಡು ದಿನಗಳ ನಂತರ ಮಗ, ಅಪ್ಪನ ಹತ್ತಿರ ಬಂದು ಒಂದು ವಿಚಾರ ಹೇಳಿದ, “ ಒಂದು ವಿಚಿತ್ರ ಗಮನಿಸಿದೆ. ಅಪ್ಪ ನೀನು ಸಾಕಷ್ಟು ಅನುಭವಿ ವೈದ್ಯ. ನೀನು ಒಬ್ಬ ಮಹಿಳೆಗೆ ಮೂವತ್ತು ವರ್ಷಗಳಿಂದ ಔಷಧಿ ಕೊಡುತ್ತಿದ್ದೆ. ನಾನು ಅವಳನ್ನು ಕೇವಲ ಎರಡು ದಿನಗಳಲ್ಲಿ ಗುಣ ಮಾಡಿದೆ. ನಾನು ಈಗ ಹೊಸದಾಗಿ ವೈದ್ಯವೃತ್ತಿಗೆ ಇಳಿದವನು, ನಿನಗೆ ಈ ವೃತ್ತಿಯಲ್ಲಿ ಅಪಾರ ಅನುಭವ ಇದೆ”.
ಅಪ್ಪ ಮಾತನಾಡಿದ, “ಮೂರ್ಖ, ಆ ಮಹಿಳೆ ಕೊಡುತ್ತಿದ್ದ ಹಣದಿಂದಲೇ ನಿನ್ನ ವಿದ್ಯಾಭ್ಯಾಸ ಸಾಧ್ಯವಾಗಿದ್ದು. ಅವಳಿಂದ ನಿನ್ನ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸಕ್ಕೂ ನಾನು ಹಣ ನಿರೀಕ್ಷಿಸುತ್ತಿದ್ದೆ. ಅವಳು ಶ್ರೀಮಂತ ಮಹಿಳೆ. ಅವಳು ನನ್ನ ಆದಾಯದ ಮೂಲವಾಗಿದ್ದಳು. ಅವಳನ್ನು ರೋಗಿಯಾಗಿಯೇ ಇಟ್ಟುಕೊಳ್ಳುವುದು ನಮಗೆ ಲಾಭದಾಯಕವಾಗಿತ್ತು”.
ಲಾವೋತ್ಸೇ ಮತ್ತು ಜುವಾಂಗ್ ತ್ಸೇ ಚಕ್ರವರ್ತಿಗೆ ತಿಳಿ ಹೇಳಿದರು. ರೋಗಿ ಡಾಕ್ಟರ್ ಗೆ ಹಣ ಕೊಡುವುದಾದರೆ ನೀನು ಅತ್ಯಂತ ಅಪಾಯಕಾರಿ ವ್ಯವಸ್ಥೆಯೊಂದನ್ನ ಹುಟ್ಟುಹಾಕುತ್ತಿರುವೆ. ಸಾಧ್ಯವಾದಷ್ಟು ಕಾಲ ರೋಗಿಗೆ ಗುಣ ಆಗದಿರುವುದೇ ಡಾಕ್ಟರ್ ನ ಹಿತದಲ್ಲಿದೆ. ರೋಗಿಯನ್ನು ಗುಣ ಮಾಡುವ ಮನಸ್ಸು ಅವನಿಗಿದ್ದರೂ ಎಲ್ಲಿ ತಾನು ಆದಾಯ ಕಳೆದುಕೊಳ್ಳುತ್ತೆನೋ ಎನ್ನುವ ದ್ವಂದ್ವ ಅವನನ್ನು ಕಾಡುತ್ತಿರುತ್ತದೆ.
“ಹಾಗಾದರೆ ನೀನೇ ಒಂದು ಉಪಾಯ ಹೇಳು” ಎಂದು ಚಕ್ರವರ್ತಿ ಲಾವೋತ್ಸೇಯನ್ನು ಕೇಳಿಕೊಂಡ.
ಲಾವೋತ್ಸೆ ತನ್ನ ಅಭಿಪ್ರಾಯ ಹೇಳಿದ, “ಉಪಾಯ ಬಹಳ ಸರಳವಾಗಿದೆ. ಡಾಕ್ಟರ್ ಗೆ ಹಣ ಸರ್ಕಾರದಿಂದ ಸಂದಾಯವಾಗಬೇಕು. ಮತ್ತು ಎಲ್ಲ ಜನ ಸರ್ಕಾರಕ್ಕೆ ಇಂತಿಷ್ಟು ಹಣ ಅಂತ ಸಂದಾಯಮಾಡಬೇಕು. ಡಾಕ್ಟರ್ ಗೆ ರೋಗಿಯನ್ನ ಗುಣ ಮಾಡಿದರೆ ಮಾತ್ರ ಹಣ ಸಿಗುವಂತಾಗಬಾರದು. ಜನ ಆರೋಗ್ಯವಾಗಿದ್ದರೆ ಮಾತ್ರ ಡಾಕ್ಟರ್ ಗೆ ಹಣ ಸಿಗುವಂತಾಗಬೇಕು. ಪ್ರತಿ ತಿಂಗಳು ಜನ ಸರ್ಕಾರಕ್ಕೆ ರಿಪೋರ್ಟ ಮಾಡಬೇಕು ನಾನು ಆರೋಗ್ಯವಾಗಿರುವೆ ನೀವು ಡಾಕ್ಟರ್ ಗೆ ಹಣ ಕೊಡಬಹುದು ಅಂತ. ಆಕಸ್ಮಾತ್ ಯಾರಾದರೂ ರೋಗಗ್ರಸ್ತ ರಾದರೆ ಡಾಕ್ಟರ್ ತನ್ನ ಹಣ ಕಳೆದುಕೊಳ್ಳುತ್ತಾನೆ. ಹಣ ಜನರ ಆರೋಗ್ಯಕ್ಕೆ ಖರ್ಚು ಮಾಡಬೇಕೇ ಹೊರತು ಅವರ ರೋಗಕ್ಕಲ್ಲ. ಜನ ರೋಗಿಗಳಾಗಿ ಉಳಿಯುವುದಾದರೆ ಡಾಕ್ಟರ್ ನ ಕಲಿಕೆ, ಅನುಭವ ಯಾವ ಉಪಯೋಗಕ್ಕೆ?”
ನನ್ನ ಪ್ರಕಾರ ಜಗತ್ತಿನಲ್ಲಿ ಒಮ್ಮಿಲ್ಲ ಒಮ್ಮೆ ಇಂಥದೊಂದು ವ್ಯವಸ್ಥೆ ಜಾರಿಗೆ ಬರುತ್ತದೆ. ಏಕೆಂದರೆ ಈ ವ್ಯವಸ್ಥೆಯ ಹಿಂದಿರುವ ತರ್ಕ ಬಹಳ ಸ್ಪಷ್ಟವಾಗಿದೆ. ಡಾಕ್ಟರ್ ಗೆ ಹಣ ಜನರ ಆರೋಗ್ಯಕ್ಕಾಗಿ ಸಿಗಬೇಕೇ ಹೊರತು ಅವರ ಅನಾರೋಗ್ಯಕ್ಕಲ್ಲ. ಜನ ಅನಾರೋಗ್ಯದಿಂದ ಇದ್ದಾರೆಂದರೆ ಡಾಕ್ಟರ್ ಸಂಬಳ ಕಟ್ ಆಗಬೇಕು. ಡಾಕ್ಟರ್ ನ ಇಂಟರೆಸ್ಟ್ ಜನರ ಆರೋಗ್ಯ ದಲ್ಲಿರಬೇಕೇ ಹೊರತು ಅವರ ಅನಾರೋಗ್ಯದಲ್ಲಿರಬಾರದು. ಹಾಗು ಸಮುದಾಯದ ಆರೋಗ್ಯಕ್ಕೆಂದು ಜನ ಸರಕಾರಕ್ಕೆ ಇಂತಿಷ್ಟು ಎಂದು ಹಣಕಟ್ಟಬೇಕು. ಜನ ಆರೋಗ್ಯವಾಗಿದ್ದರೆ ಮಾತ್ರ ಸರ್ಕಾರ ಡಾಕ್ಟರ್ ಗೆ ಹಣ ಕೊಡಬೇಕು, ಜನ ಅನಾರೋಗ್ಯದಲ್ಲಿದ್ದರೆ ಡಾಕ್ಟರ್ ಗೆ ಸಿಗುವ ಹಣದಲ್ಲಿ ಕಡಿತ ಮಾಡಬೇಕು.
~ ಓಶೋ
****************************

