ಶುರುವಾತಿನಿಂದಲೂ ಪ್ರತಿಯೊಬ್ಬರೂ ಬುದ್ದರೇ, ಪ್ರತಿಯೊಬ್ಬರೂ ಪ್ರತಿಫಲನ ಸಾಮರ್ಥ್ಯ ಇರುವ ಕನ್ನಡಿಯೇ! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಎಲ್ಲ ಹುಡುಕಾಟಗಳಂತೆ ಆಧ್ಯಾತ್ಮಿಕ ಹುಡುಕಾಟವೂ ಭ್ರಮಾತ್ಮಕ. ಹುಡುಕಾಟ ಎನ್ನುವುದೇ ಭ್ರಮಾತ್ಮಕ ಏಕೆಂದರೆ, ಅದು ಒಂದು ಸಂಗತಿಯನ್ನು ನೆಚ್ಚಿಕೊಂಡಿರುತ್ತದೆ. ಆ ಸಂಗತಿ ಯಾವುದೆಂದರೆ ನಮ್ಮಲ್ಲಿ ಏನೋ ಮಿಸ್ ಆಗಿದೆ ಎನ್ನುವುದು. ಆದರೆ ವಾಸ್ತವದಲ್ಲಿ ಯಾವುದು ಮಿಸ್ ಆಗಿಲ್ಲ. ನಮ್ಮೊಳಗೆ ಏನೋ ಮಿಸ್ ಆಗಿದೆ ಎನ್ನುವುದನ್ನ ನೀವು ನಂಬಿಬಿಟ್ಟರೆ, ನೀವು ಅದರ ಹುಡುಕಾಟ ಶುರು ಮಾಡುತ್ತೀರಿ. ಎಲ್ಲ ದಿಕ್ಕುಗಳಲ್ಲೂ ಹುಡುಕಾಟ ಮುಂದುವರೆಸುತ್ತೀರಿ. ಆದರೆ ನೀವು ಹೆಚ್ಚು ಹೆಚ್ಚು ಹುಡುಕಾಟ ಮುಂದುವರೆಸಿದಂತೆ ಅದನ್ನು ಹೆಚ್ಚು ಹೆಚ್ಚು ಮಿಸ್ ಮಾಡಿಕೊಳ್ಳುತ್ತ ಹೋಗುತ್ತೀರಿ. ನೀವು ಹೆಚ್ಚು ಹೆಚ್ಚು ಬಯಸುತ್ತಿರುವಾಗ ಹೆಚ್ಚು ಹೆಚ್ಚು ದೂರ ಪ್ರಯಾಣ ಮಾಡುತ್ತೀರಿ. ಆಗ ನಿಮ್ಮ ಬಯಕೆ ನಿಮ್ಮಿಂದ ಇನ್ನೂ ಹೆಚ್ಚು ದೂರ ಹೋಗುತ್ತದೆ. ಆಗ ನೀವು ಹತಾಶರಾಗುತ್ತೀರಿ. ಆಗ ನೀವು ನಿಮ್ಮ ಗುರಿ ತುಂಬ ದೂರ ಇರುವುದರಿಂದ ನಿಮ್ಮಿಂದ ಅದನ್ನು ತಲುಪಲು ಸಾಧ್ಯವಿಲ್ಲ ಎಂದುಕೊಳ್ಳುತ್ತೀರಿ.
ಆದರೆ ವಾಸ್ತವ ಇದಕ್ಕೆ ವಿಪರೀತ. ಅದನ್ನು ನೀವು ಯಾಕೆ ತಲುಪುತ್ತಿಲ್ಲ ಎಂದರೆ ಈಗಾಗಲೇ ನೀವು ಅಲ್ಲಿರುವುದು ನಿಮಗೆ ಗೊತ್ತಿಲ್ಲ. ಅದು ನಿಮ್ಮಿಂದ ದೂರ ಇಲ್ಲ ಹತ್ತಿರವಿದೆ. ಎಷ್ಟು ಹತ್ತಿರವಿದೆಯೆಂದರೆ, ಅದಕ್ಕೆ ಹತ್ತಿರ ಎನ್ನುವ ಪದ ಬಳಸುವುದು ಕೂಡ ಸರಿಯಲ್ಲ. ಏಕೆಂದರೆ ಹತ್ತಿರ ಎನ್ನುವುದೂ ಒಂದು ಅಂತರವನ್ನು ಹೇಳುತ್ತದೆ.
ಅದು ನಿಮ್ಮಿಂದ ಬೇರೆಯಾಗಿಯೇ ಇಲ್ಲ. ಅದು ನಿಮ್ಮೊಂದಿಗೆ ಉಸಿರಾಡುತ್ತಿದೆ.
ಅದು ಅಲ್ಲಿ ಇಲ್ಲ ; ಅದು ಇರುವುದು ಇಲ್ಲಿಯೇ.
ಅದು ಆಮೇಲೆ ಸಿಗುವಂಥದಲ್ಲ ; ಅದು ಈಗ ನಿಮಗೆ ಲಭ್ಯ.
ಅದು ಸದಾ ನಿಮ್ಮೊಂದಿಗೆಯೇ ಇದೆ.
ಶುರುವಾತಿನಿಂದಲೂ ಪ್ರತಿಯೊಬ್ಬರೂ ಬುದ್ದರೇ, ಪ್ರತಿಯೊಬ್ಬರೂ ಪ್ರತಿಫಲನ ಸಾಮರ್ಥ್ಯ ಇರುವ ಕನ್ನಡಿಯೇ.
ಇದು ಝೆನ್ ನ ಮೂಲಭೂತ ತಿಳುವಳಿಕೆ ಮತ್ತು ಮನುಷ್ಯನಿಗೆ ಕೊಡಮಾಡಲಾಗಿರುವ ಅತ್ಯಂತ ಮಹಾ ತಿಳುವಳಿಕೆ ಹಾಗು, ಈ ಭೂಮಿಯ ಮೇಲೆ ಕಾಣಸಿಗುವ ಅತ್ಯಂತ ದೊಡ್ಡ ಲಿಬರೇಟಿಂಗ್ ಫೋರ್ಸ್. ಆದರೆ ಇದನ್ನ ನೀವು ಸಂಪೂರ್ಣ ಹೊಸ ದೃಷ್ಟಿಕೋನದಿಂದ ಗಮನಿಸಬೇಕು. ಯಾವ ಹುಡುಕಾಟವೂ ಬೇಕಾಗಿಲ್ಲ, ಬೇಕಾಗಿರುವುದು ಸಂಗತಿಗಳನ್ನು ಹೊಸ ದೃಷ್ಟಿಯಿಂದ ನೋಡುವ ಆಸಕ್ತಿ. ಸಾಮಾನ್ಯ ನೋಡುವಿಕೆಯನ್ನ ಕಳಚಿಕೊಂಡು ಹೊಸ ದೃಷ್ಟಿಯಿಂದ ನೋಡುವ ಪ್ರ್ಯಾಕ್ಟೀಸ್.
ಆದ್ದರಿಂದಲೇ ನಾನು ಹೇಳುವುದು ಸೂರ್ಯ ಸಂಜೆ ಉದಯಿಸುತ್ತಾನೆಂದು.
ನೀವು ಅದನ್ನ ಯಾವ ಹೆಸರಿನಿಂದ ಕರೆಯುತ್ತೀರಿ ಎನ್ನುವುದು ಅಷ್ಟು ಮ್ಯಾಟರ್ ಆಗುವುದಿಲ್ಲ. ಏಕೆಂದರೆ ಅದು ಶಬ್ದಾತೀತ, ಶಬ್ದದಿಂದ ಹೊರತಾದದ್ದು. ಅದು ಸಂಪೂರ್ಣ ಮೌನಕ್ಕೆ ಸಂಬಂಧಿಸಿದ್ದು. ಅದು ಬದಲಾಗುವುದಿಲ್ಲ, ಅದಕ್ಕೆ ಚಲನೆಯಿಲ್ಲ, ಅದು ಸನಾತನವಾದದ್ದು, ಕಾಲಾತೀತವಾದದ್ದು.
Source :Öshö / The Sun Rises in the Evening / Ch 1

