ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 11ನೇ ಕಂತು ಇಲ್ಲಿದೆ…
ಜೀವಂತವಾಗಿರುವ ನೆನಪಿನ ಹನಿ
ಸದಾ ಕೆಳಮುಖವಾಗಿ ಹರಿಯುವುದೋ ಅಥವಾ ಸದಾ ಕಾಲಕ್ಕೂ ಹಾಗೇ ಉಳಿಯುವುದೋ?
ನನ್ನ ದುಃಖದ ಕಾವ್ಯ
ಲೋಕವನ್ನು ನನ್ನ ಕಣ್ಣಿಂದಲೇ ನೋಡುವುದೋ?
ನಾನು ನಾಶವಾಗಿ ನಿದ್ದೆಗೆ ಸಂದಾಗಲೂ
ನನ್ನದೇ ವಾಸನೆ, ನನ್ನದೇ ನೋವು ನನ್ನೊಡನೆ ಇರುವುದೋ?
**

ಯಾರಿಗೂ ಗೊತ್ತಾಗದ ಹಾಗೆ ನಾನೇಕೆ ಹುಟ್ಟಲಿಲ್ಲ?
ನಾನೇಕೆ ಜೊತೆಗಾರರಿಲ್ಲದೆ ಬೆಳೆಯಲಿಲ್ಲ?
ನನ್ನದೇ ಅಹಂಕಾರದ ಬಾಗಿಲು ಒಡೆದು
ಮುರಿಯೆಂದು ಆಜ್ಞೆ ಮಾಡಿದವರು ಯಾರು?
ನಾನು ಮಲಗಿರುವಾಗ ನನ್ನ ಬದಲು ಬದುಕಿದ್ದವರು ಯಾರು?
ನನ್ನ ಮರೆಯದಿರುವಾಗ ಅವರು ಹಾರಿಸಿದ್ದು ಯಾವ ಧ್ವಜ?
**
ವಿಸ್ಮೃತಿಯ ನ್ಯಾಯಾಲಯದಲ್ಲಿ
ನನಗೇನಿದೆ ವಿಶೇಷ ಮನ್ನಣೆ?
ಹೇಗೆ ಇರಬಹುದು ಯಾವ ರೂಪದಲ್ಲಿ ನಾಳೆಯ ನಿಜದ ಚಿತ್ರ?
ಹಳದಿ ಎಲೆ ರಾಶಿಯೊಳಗಿನ ಹಸಿರು ಬೀಜವೋ?
ಪೀಚ್ ಹಣ್ಣಿನಾಕಾರದಲ್ಲಿರುವ ಎದೆಗೂಡಿನ ಎಲುಬೋ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.
(Illustrations: Chetana Thirthahalli)

