ಯಾವಾಗ ನಿಮ್ಮ ಪ್ರೀತಿ, ನಿಮ್ಮ ಅವಶ್ಯಕತೆಗಳನ್ನು ದಾಟಿ ಮುಂದಕ್ಕೆ ಹೋಗುತ್ತದೆಯೋ ಆಗ ಸಂಬಂಧದಲ್ಲಿರುವ ಪ್ರತಿ ವ್ಯಕ್ತಿ ಪರಿಪೂರ್ಣರಾಗುತ್ತಾರೆ, ಇಡಿಯಾಗಿ ಅರಳುತ್ತಾರೆ ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಯಾವಾಗ ಪರಸ್ಪರರ ಅವಶ್ಯಕತೆಗಳನ್ನು, ಪರಸ್ಪರರ ಕುರಿತಾದ ಪ್ರೀತಿ ದಾಟಿ ಮುಂದೆ ಹೋಗುತ್ತದೆಯೋ ಅದು ಅತ್ಯುತ್ತಮ ಸಂಬಂಧ ~ ದಲಾಯಿ ಲಾಮಾ XIV
ಆಧ್ಯಾತ್ಮಿಕವಾಗಿ ಹೇಳುವುದಾದರೆ “ಅವಶ್ಯಕತೆಗಳಿಗಿಂತ ಪ್ರೀತಿ ಹೆಚ್ಚಾಗಿರುವ” ಸಂಬಂಧದ ಪರಿಕಲ್ಪನೆ, ಉನ್ನತ ಮಟ್ಟದ ಬಾಂಧವ್ಯಕ್ಕೆ ಒತ್ತು ನೀಡುತ್ತದೆ. ಈ ದೃಷ್ಟಿಕೋನ ಸ್ವ-ಸಮರ್ಪಕತೆ (self-sufficiency) ಮತ್ತು ಕರಾರು ರಹಿತ ಪ್ರೀತಿ (unconditional love) ಯಂಥ ಹಲವು ಅಧ್ಯಾತ್ಮಿಕ ಕಲಿಕೆ ಗಳಿಗೆ ಉತ್ತೇಜನ ನೀಡುತ್ತದೆ.
ಯಾವಾಗ ನಿಮ್ಮ ಪ್ರೀತಿ, ನಿಮ್ಮ ಅವಶ್ಯಕತೆಗಳನ್ನು ದಾಟಿ ಮುಂದಕ್ಕೆ ಹೋಗುತ್ತದೆಯೋ ಆಗ ಸಂಬಂಧದಲ್ಲಿರುವ ಪ್ರತಿ ವ್ಯಕ್ತಿ ಪರಿಪೂರ್ಣರಾಗುತ್ತಾರೆ, ಇಡಿಯಾಗಿ ಅರಳುತ್ತಾರೆ. ಅವರು ತಮ್ಮಲ್ಲಿರುವ ಕೊರತೆಯನ್ನು ತುಂಬಿಕೊಳ್ಳಲು ಅಥವಾ ತಮ್ಮ ಸ್ವ ಮೌಲ್ಯವನ್ನು ನಿರ್ಧರಿಸಿಕೊಳ್ಳಲು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದಿಲ್ಲ. ಬದಲಾಗಿ ಅವರಿಬ್ಬರೂ ಹತ್ತಿರವಾಗೋದು ಪ್ರಾಮಾಣಿಕವಾಗಿ ತಮ್ಮ ಬದುಕುಗಳನ್ನು ಹಂಚಿಕೊಳ್ಳಲು ಮತ್ತು ಜೊತೆಯಾಗಿ ಕೂಡಿ ಬೆಳೆಯಲೇ ಹೊರತು ಪರಸ್ಪರರ ಮೇಲೆ ಅವಲಂಬಿತರಾಗಲು ಅಲ್ಲ.
ಈ ಪರಿಪೇಕ್ಷದಲ್ಲಿ, ಪ್ರೀತಿ ಒಂದು ಸ್ವತಂತ್ರ, ಕರಾರು ರಹಿತ ಸಾಮರ್ಥ್ಯವಾಗಿ ಹೊರಹೊಮ್ಮುತ್ತದೆ. ಇಂಥ ಪ್ರೀತಿಯನ್ನ ಯಾವ ನಿರೀಕ್ಷೆಗಳಿಲ್ಲದೆ ಯಾವ ಕರಾರುಗಳುಲ್ಲದೆ ಪಡೆಯಬಹುದು ಮತ್ತು ಕೊಡಬಹುದು. ಈ ಬಗೆಯ ಸಂಬಂಧ ಪರಸ್ಪರರ ಕುರಿತಾದ ಗೌರವವನ್ನ, ಸಂಬಂಧದ ಆಳವನ್ನ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನ ವೃದ್ಧಿಸುತ್ತದೆ. ಇದು ಯಾಕೆ ಸಾಧ್ಯವಾಗುತ್ತದೆಯೆಂದರೆ ಇಂಥ ಸಂಬಂಧದಲ್ಲಿ ಇಬ್ಬರೂ ಪರಸ್ಪರರನ್ನು ಸಪೋರ್ಟ ಮಾಡುತ್ತಾರಾದರೂ, ಮೇಲೆ ಎತ್ತುತ್ತಾರಾದರೂ ಅವರು ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನ ಕಳೆದುಕೊಳ್ಳುವುದಿಲ್ಲ.
ಇಂಥ ಸಂಬಂಧಗಳು ಯಾವಾಗಲೂ ಗಟ್ಟಿ ಮತ್ತು ತುಂಬಿಕೊಂಡಿರುವಂಥವು, ಅಂತರಂಗದ ಶಾಂತಿ (inner peace) ಮತ್ತು ಸ್ವ ಅರಿವು (self awareness) ಗಳಿಗೆ ಬೆಲೆಕೊಡುವಂಥ ಅಧ್ಯಾತ್ಮಿಕತೆಗೆ ಹೊಂದಿಕೊಂಡಿರುವಂಥವು ಹಾಗು ಪರಸ್ಪರರ ಚೈತನ್ಯವನ್ನು ಪೋಷಿಸುವಂಥವು.
ಕರಾರು ರಹಿತ ಪ್ರೀತಿ ಎನ್ನುವುದು ನೆರಳಿಲ್ಲದ ಬೆಳಕು, ಎಲ್ಲ ಬಂಧನಗಳನ್ನೂ ಮೀರುವ ಸಾಮರ್ಥ್ಯ.

