ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಒಂದೊಂದು ಕಥೆ ಇದೆ. ಜನರ ಪರಿಸ್ಥಿತಿಯನ್ನ ಪೂರ್ತಿಯಾಗಿ ಅರ್ಥಮಾಡಿಕೊಳ್ಳದೇ ಅವರನ್ನು ಜಡ್ಜ್ ಮಾಡಲು ಹೋಗಬೇಡಿ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
“ಅಪ್ಪಾ ನೋಡು ಮರಗಳು ಹಿಂದೆ ಓಡುತ್ತಿವೆ”
ರೈಲಿನೊಳಗೆ ಪ್ರಯಾಣ ಮಾಡುತ್ತಿದ್ದ 24 ರ ಹರೆಯದ ಯುವಕನೊಬ್ಬ ಕಿಟಕಿಯ ಹೊರಗೆ ಕಾಣುತ್ತಿದ್ದ ದೃಶ್ಯ ನೋಡಿ ಉತ್ಸಾಹದಿಂದ ಕಿರುಚಿದ.
ಅಪ್ಪ, ಆತ್ಮೀಯತೆಯಿಂದ ಮಗನ ತಲೆಯ ಮೇಲೆ ಕೈಯಾಡಿಸಿದ. ಆದರೆ ಪಕ್ಕದಲ್ಲಿ ಕುಳಿತಿದ್ದ ದಂಪತಿಗಳಿಬ್ಬರು ಯುವಕನ ಚೈಲ್ಡಿಶ್ ವರ್ತನೆ ಕಂಡು ಮುಖ ಸಿಂಡರಿಸಿಕೊಂಡರು. ಕಿಟಕಿಯೊಳಗೆ ಮುಖ ತೂರಿಸಿಕೊಂಡು ಕುಳಿತಿದ್ದ ಯುವಕ ಮತ್ತೆ ಕೂಗಿದ,
“ ಅಪ್ಪಾ, ನೋಡು ನೋಡು ಮೋಡಗಳು ನಮ್ಮ ರೈಲಿನ ಜೊತೆ ಓಡುತ್ತಿವೆ”
ಪಕ್ಕದಲ್ಲಿ ಕುಳಿತಿದ್ದ ಗಂಡ ಹೆಂಡತಿಗೆ ಈ ಸಲ ತಡೆದುಕೊಳ್ಳಲಾಗಲಿಲ್ಲ, ಅವರು ಯುವಕನ ಅಪ್ಪನಿಗೆ ಹೇಳಿದರು,
“ಯಾಕೆ ನಿಮ್ಮ ಮಗನನ್ನು ಒಂದು ಒಳ್ಳೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಬಾರದು?”
ಯುವಕನ ಅಪ್ಪ ಮುಗುಳ್ನಗುತ್ತ ಉತ್ತರಿಸಿದ,
“ಈಗ ನಾವು ಆಸ್ಪತ್ರೆಯಿಂದಲೆ ಬರುತ್ತಿದ್ದೇವೆ. ನನ್ನ ಮಗನಿಗೆ ಹುಟ್ಟು ಕುರುಡು. ಅವನಿಗೆ ಕಣ್ಣಿನ ಆಪರೇಶನ್ ಆಯ್ತು. ಮೊದಲಬಾರಿಗೆ ಅವನು ಜಗತ್ತನ್ನು ನೋಡುತ್ತಿದ್ದಾನೆ”.
ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಗಂಡಹೆಂಡತಿಗೆ ನಾಚಿಕೆಯಾಯ್ತು.
ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಒಂದೊಂದು ಕಥೆ ಇದೆ. ಜನರ ಪರಿಸ್ಥಿತಿಯನ್ನ ಪೂರ್ತಿಯಾಗಿ ಅರ್ಥಮಾಡಿಕೊಳ್ಳದೇ ಅವರನ್ನು ಜಡ್ಜ್ ಮಾಡಲು ಹೋಗಬೇಡಿ. ಸತ್ಯ ನಿಮ್ಮನ್ನು ಬೆಚ್ಚಿ ಬೀಳಿಸಬಹುದು.

