ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 6ನೇ ಅಧ್ಯಾಯದ ಎರಡನೇ ಭಾಗ ಇಲ್ಲಿದೆ…
ಅಧ್ಯಾಯ 6.2
ಕ್ರಿಸ್ತಶಕ 1895ರ ಕಾಲದ ತಿರುವಿದಾಂಕೂರು ಸಂಸ್ಥಾನದ ಹಳ್ಳಿಯೊಂದನ್ನು ಕಲ್ಪಿಸಿಕೊಳ್ಳಿ. ಬೇಸಿಗೆ ಬಿಸಿಲಿಗೆ ಕಾದು ಕಾವಲಿಯಂತಾಗಿ ಹೆಜ್ಜೆಯಿಡಲೂ ಅಸಾಧ್ಯವೆನಿಸುವಂಥ ಮರಳು ಹಾಸಿದ ಓಣಿ. ಸುಮಾರು ನೂರು ಗಜಗಳಷ್ಟು ಉದ್ದವಿರುವ ಈ ಓಣಿಯ ಆಚೆಯ ಕೊನೆಯಲ್ಲಿ ದೇಗುಲವೂ ಅದರ ಪುಷ್ಕರಣಿಯೂ ಇದೆ. ಕಷ್ಟಪಟ್ಟು ದುಡಿಯುವ ನವ ವಿವಾಹಿತನಾದ ಬಡ ರೈತನೂ ಆತನ ಪತ್ನಿಯೂ ಆ ಬಿರುಬಿಸಿಲನಲ್ಲೇ ಬಹುದೂರದಿಂದ ನಡೆದು ಓಣಿಯೊಳಗೆ ಪ್ರವೇಶಿಸಿದ್ದಾರೆ. ರೈತನ ಪತ್ನಿಯಂತೂ ಬಹಳ ಆಯಾಸಗೊಂಡಿದ್ದಾಳೆ. ಹೀಗಿರುವಾಗ ಓಣಿಯ ಮತ್ತೊಂದು ಕೊನೆಯಿಂದ ದೇವಸ್ಥಾನದ ಅರ್ಚಕರ ಕೋಪೋದ್ರಿಕ್ತ ಕೂಗು. ಅರ್ಚಕರು ದೇವರ ಪ್ರತಿನಿಧಿಯಲ್ಲವೇ!? ಈ ಬಡಪಾಯಿ ದಂಪತಿ ಮೈಲಿಗೆಯಾಗದಷ್ಟು ದೂರದಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಲು ಅರ್ಚಕರು ಕಿರುಚಿದರು. ಹೆಜ್ಜೆಯೂರಲೂ ಆಗದಷ್ಟು ಬಿಸಿಯಿದ್ದ ದಾರಿಯಲ್ಲಿ ಬಹುತೇಕ ಸಾಗಿದ್ದ ರೈತ ದಂಪತಿ ಅರ್ಚಕರ ಮಡಿಯನ್ನು ಉಳಿಸಲು ಹಿಂದಕ್ಕೆ ಸಾಗಬೇಕಾಯಿತು!
ಅರ್ಚಕರಿಗೆ ಹಾದಿಬಿಟ್ಟುಕೊಟ್ಟು ಈ ಓಣಿಯಲ್ಲೇ ಮುಂದಕ್ಕೆ ಸಾಗಿದರೆ ಸಿಗುವ ದೇಗುಲದ ಅಂಗಳ ಒಂದು ರೀತಿಯಲ್ಲಿ ಆ ಹಳ್ಳಿಯ ಬದುಕಿನ ಕೇಂದ್ರ ಸ್ಥಾನ. ಒಂದಾನೊಂದು ಕಾಲದಲ್ಲಿ ತಮ್ಮ ಕಲಾಶ್ರೀಮಂತಿಕೆಯನ್ನು ಅಭಿವ್ಯಕ್ತಿಸುವ ಕಲಾವಿದರಿಗೆ ದೇವಸ್ಥಾನದ ಗೋಡೆಗಳು ಅವಕಾಶ ಒದಗಿಸುತ್ತಿದ್ದವು. ಈಗ ಆ ಗೋಡೆಗಳು ಮಸಿಗೆಡ್ಡೆಗಳಿಂದ ರಚಿತವಾದ ವಿಕಾರಾಕಾರಗಳಿಗೆ ಸೀಮಿತವಾಗಿದೆ. ದೇವಾಲಯದ ಉತ್ಸವವೆಂದರೆ ಕುಡಿದು ತೂರಾಡುವವರಿಗೊಂದು ಅವಕಾಶ ಎಂಬಂತಾಗಿದೆ. ಅಹಂಕಾರದ ಬಲಿನೀಡಿ ಶೌರ್ಯ ಮತ್ತು ತ್ಯಾಗದ ಮೌಲ್ಯವನ್ನು ಎತ್ತಿ ಹಿಡಿಯಬೇಕಾದಲ್ಲಿ ಪ್ರಾಣಿ ಬಲಿಯ ಕ್ರೌರ್ಯವೇ ವಿಜೃಂಭಿಸುತ್ತಿತ್ತು. ದೇಗುಲಗಳ ನಿಜ ಚೈತನ್ಯ ಓಡಿ ಹೋಗಿ ಅಲ್ಲಿ ಉಳಿದ್ದದ್ದು ಸಂಪ್ರದಾಯವೆಂಬ ಕವಚ ಮಾತ್ರ. ಇಡೀ ಹಳ್ಳಿಗೆ ಅಧ್ಯಾತ್ಮದ ಬೆಳಕಿನ ಕಿರಣಗಳನ್ನು ಬೀರುತ್ತಿದ್ದ ಗ್ರಾಮ ದೇಗುಲವೀಗ ಅವನತಿಯೆಂಬ ಅಪವಿತ್ರ ದಂಡದ ಭೀಕರ ಸ್ಪರ್ಶಕ್ಕೆ ಗುರಿಯಾಗಿತ್ತು. ಇಂಥ ನೂರಾರು ಆರಾಧನಾ ಸ್ಥಳಗಳೀಗ ಸಾಮಾಜಿಕ ಅಧಃಪತನವನ್ನು ಸೂಚಿಸುತ್ತಿದ್ದ ಹುಣ್ಣುಗಳಾಗಿಬಿಟ್ಟಿದ್ದವು.

ಈ ದೇವಾಲಯದ ಹತ್ತಿರುವ ಅದರ ಮುಖ್ಯಸ್ಥರ ಮನೆಯೂ ಇತ್ತು. ಮನೆಯೊಡತಿ ದಿನದ ಕೆಲಸವನ್ನೆಲ್ಲಾ ಮುಗಿಸಿದ್ದರು. ಮಕ್ಕಳು ಸಂಜೆಯೂಟ ಮುಗಿಸಿ ನಿದ್ರೆಗೆ ಜಾರುವ ಸಮಯವಾಗಿತ್ತು. ಈ ಹೊತ್ತಿಗೆ ಆ ದಿನದ ಕೊನೆಯ ಅತಿಥಿಯ ಆಗಮನವಾಯಿತು. ನದಿ ದಂಡೆಯ ಆಶ್ರಮದಲ್ಲಿದ್ದ ಯೋಗಿಯೇ ಈ ಅತಿಥಿ. ಯುವ ಶಿಷ್ಯ ಹಿಡಿದಿದ್ದ ದೊಂದಿಯ ಬೆಳಕಿನಲ್ಲಿ ತಾಳೆ ಮರಗಳಡಿಯ ಕಗ್ಗತ್ತಲನ್ನು ಸೀಳು ಬರುತ್ತಿದ್ದ ಈ ಯೋಗಿ ಶಿಷ್ಯನ ಜೊತೆಗೆ ಭಿಕ್ಷೆ ಸ್ವೀಕರಿಸಿ ಆಕಾಶವನ್ನೇ ಸೂರಾಗಿಸಿ ಹೊರಗೆಯೇ ಮಲಗಿದರು. ಭಿಕ್ಷೆ ನೀಡಿದ ಗೃಹಿಣಿ ಬೆಳಗ್ಗೆ ಏಳುವಷ್ಟರಲ್ಲಿ ಗುರು ಮಲಗಿದ್ದಲ್ಲಿ ಎಚ್ಚರಿಕೆಯಿಂದ ಸುತ್ತಿಟ್ಟಿದ್ದ ಚಾಪೆಯಷ್ಟೇ ಇತ್ತು.
ಆ ಯೋಗಿಗೆ ಬಹಳ ಕೆಲಸವಿತ್ತು. ಆಗಲೇ ಅವರು ಸ್ಥಳೀಯ ಪ್ರಮುಖರನ್ನೆಲ್ಲಾ ಕರೆದು ಒಂದೆಡೆ ಸೇರಿಸಿದ್ದರು. ಪ್ರಾಣಿ ಬಲಿ ನಿಲ್ಲಿಸಬೇಕು. ಕುಡಿತವೂ ಕೊನೆಗೊಳ್ಳಬೇಕು. ಪೂಜೆಗೆ ಅನರ್ಹವೆನಿಸುವಷ್ಟು ಗಲೀಜಿನಿಂದ ತುಂಬಿದ ದೇವಾಲಯವನ್ನೂ ಒಡೆದು ಪೂಜಾರ್ಹವಾಗುವಂತೆ ಕಟ್ಟಬೇಕು. ನೈತಿಕವಾಗಿಯೂ ಭೌತಿಕವಾಗಿಯೂ ಶುದ್ಧರಾಗಿರುವ ಎಲ್ಲರೂ ದೇವರೆದುರು ಸಮಾನರು. ಕ್ಷೌರ ಮಾಡಿಕೊಳ್ಳುವುದು ಮತ್ತು ಆಧುನಿಕ ಉಡುಪುಗಳನ್ನು ಧರಿಸುವುದರಿಂದ ಯಾವ ಅಪಾಯವೂ ಇಲ್ಲ ಎಂಬುದನ್ನು ಗ್ರಾಮ ಪ್ರಮುಖರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಗುರು ಆರಂಭಿಸಿದರು. ಸರಳವೆಂದು ತೋರುತ್ತಿದ್ದ ಇವನ್ನು ಅನುಷ್ಠಾನಕ್ಕೆ ತರಲು ಇರುವ ಕಠಿಣ ಸವಾಲುಗಳು ಒಂದೊಂದಾಗಿ ಗೋಚರಿಸ ತೊಡಗಿದವು.
ಮೊದಲಿಗೆ ತಲೆಯೆತ್ತಿದ್ದು ಸಂಪ್ರದಾಯವೆಂಬ ಹಲವು ಹೆಡೆಯ ಹಾವು. ತಲತಲಾಂತರಗಳಿಂದ ನಡೆದು ಬಂದ ಕ್ರಮಗಳನ್ನು ಉಲ್ಲೇಖಿಸಿ ಯಥಾಸ್ಥಿತಿಯನ್ನು ಸಮರ್ಥಿಸುವ ಪ್ರಯತ್ನ ನಡೆಯಿತು. ಇವುಗಳನ್ನು ಮೀರಿದರೆ ನೆತ್ತರು ಹರಿಯಲಿದೆಯೆಂಬ ಬೆದರಿಕೆಯೂ ಕೇಳಿಬಂತು. ದೈವಕೋಪವು ಇಡೀ ಸಮುದಾಯವನ್ನು ಬಾಧಿಸದರೇನು ಮಾಡುವುದೆಂಬ ಪ್ರಶ್ನೆ ಹುಟ್ಟಿತು. ಹಲವು ತಲೆಮಾರುಗಳಿಂದಲೂ ಒಪ್ಪಿ ಮುಂದುವರಿಸಿಕೊಂಡು ಬಂದ ಸಂಪ್ರದಾಯಗಳನ್ನು ಪ್ರಶ್ನಿಸಲು ಯಾರಿಗೆ ಹಕ್ಕಿದೆ ಎಂಬ ಪ್ರಶ್ನೆಯನ್ನು ಆ ಜನರ ಸಾವಿರಾರು ವರ್ಷಗಳ ನಂಬಿಕೆಯೇ ಗುರುಗಳ ಮುಂದಿಟ್ಟಿತು. ಕೆಲವರಂತೂ ಆವೇಶಕ್ಕೊಳಗಾಗಿ ಆರ್ಭಟಿಸಿದರು.
ಈ ಎಲ್ಲವೂ ನಡೆಯುತ್ತಿರುವಾಗ ಗುರುಗಳು ಪ್ರಶಾಂತ ಚಿತ್ತರಾಗಿ ಕುಳಿತು ಸಮುದಾಯದ ಪ್ರಮುಖರೊಂದಿಗೆ ಮಾತುಕತೆ ಮುಂದುವರಿಸಿದ್ದರು. ಹಲವು ಗಂಟೆಗಳ ತಾರಸ್ಥಾಯಿಯ ಕಿರುಚಾಟಗಳ ನಂತರ ಒಬ್ಬೊಬ್ಬರಾಗಿ ಗುರುಗಳು ಮುಂದಿಟ್ಟ ತರ್ಕವನ್ನು ಒಪ್ಪತೊಡಗಿದರು. ಸಾವಿರಾರು ವರ್ಷಗಳಿಂದ ಗಟ್ಟಿಯಾಗಿ ನೆಲಯೂರಿದ್ದ ರಾಕ್ಷಸ ಭಾವಗಳು ತಮ್ಮ ಕೊನೆಯ ಕುಣಿತವನ್ನು ಮುಗಿಸಿ ಗುರುಗಳ ಸೌಮ್ಯ ಭಾವದೆದುರು ಶರಣಾದವು. ಅವರ ಮೆಲುದನಿಯ ಮಾತುಗಳು ಪಟ್ಟಭದ್ರ ಹಿತಾಸಕ್ತಿಗಳ ಕಿರುಚಾಟಕ್ಕಿಂತ ಬಹಳ ಎತ್ತರದ ಸ್ಥಾಯಿಯಲ್ಲಿತ್ತು. ಭಿನ್ನಾಭಿಪ್ರಾಯಗಳು ಒಂದೊಂದಾಗಿ ಕರಗಿ ಸಾಮರಸ್ಯವೊಂದು ರೂಪುಗೊಂಡಿತು.
ಮರುದಿನ ಮುಂಜಾನೆಯೇ ಗುರುಗಳು ಹಳೆಯ ದೇಗುಲವನ್ನು ಕೆಡವುವ ಕಾರ್ಯ ಆರಂಭಿಸಿದರು. ಆದರೆ ಹಳೆಯ ದೇಗುಲದ ಕಲ್ಲುಗಳೇ ಹೊಸತರ ನಿರ್ಮಾಣಕ್ಕೂ ಬಳಕೆಯಾಗುವುದಿತ್ತು. ತಲತಲಾಂತರಗಳಿಂದ ಉಳಿದಿದ್ದ ಮೂಢನಂಬಿಕೆಯೇ ಹೇತುವಾಗಿ ಕಳೆಯಂತೆ ಬೆಳೆದು ನಿಂತಿದ್ದ ಬನದ ಮರಗಳಿಗೂ ಕೊಡಲಿಯ ಪೆಟ್ಟು ಬಿತ್ತು. ಅದರಿಂದ ದೊರೆತ ಮರಮುಟ್ಟುಗಳನ್ನು ಬಳಸಿಯೇ ಹಳ್ಳಿಯ ಮಕ್ಕಳಿಗೊಂದು ಶಾಲೆಯೂ ಆ ಬನದಲ್ಲೇ ರೂಪುಗೊಂಡಿತು.
(ಮುಂದುವರಿಯುವುದು…)
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/12/guru-54/


[…] ಹಿಂದಿನ ಭಾಗ ಇಲ್ಲಿದೆ: https://aralimara.com/2024/08/13/guru-55/ […]
LikeLike